Baba Ramdev: ಬಾಬಾ ರಾಮ್‌ದೇವ್ ಮೇಲಿನ ಎಫ್‌ಐಆರ್ ಹಿಂಪಡೆಯಿರಿ, ವಕೀಲರು ಮೋಸದಿಂದ ನನ್ನ ಹೆಸರಿನಲ್ಲಿ ದೂರು ನೀಡಿದ್ದಾರೆ ಎಂದ ದೂರುದಾರ
FIR against Baba Ramdev: ನನಗೆ ವಿಷಯವೇ ಗೊತ್ತಿರಲಿಲ್ಲ, ಈ ದೂರನ್ನು ನನ್ನ ಹೆಸರಲ್ಲಿ ನೀಡಿ ವಕೀಲರು ನನ್ನನ್ನು ವಂಚಿಸಿದ್ದಾರೆ. ಈ ದೂರನ್ನು ರದ್ದುಪಡಿಸಿ ಎಂದು ದೂರುದಾರ ಪಥಾಯಿ ಖಾನ್ ವಿನಂತಿಸಿಕೊಂಡಿದ್ದಾರೆ.
ಪಟನಾ: ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ನೀಡಿರುವ ದೂರನ್ನು ವಾಪಸ್ ಪಡೆಯಲು ಬಯಸಿರುವುದಾಗಿ ದೂರುದಾರರು ಹೇಳಿದ್ದಾರೆ. ನನಗೆ ವಿಷಯವೇ ಗೊತ್ತಿರಲಿಲ್ಲ, ಈ ದೂರನ್ನು ನನ್ನ ಹೆಸರಲ್ಲಿ ನೀಡಿ ವಕೀಲರು ನನ್ನನ್ನು ವಂಚಿಸಿದ್ದಾರೆ. ಈ ದೂರನ್ನು ರದ್ದುಪಡಿಸಿ ಎಂದು ದೂರುದಾರ ಪಥಾಯಿ ಖಾನ್ ವಿನಂತಿಸಿಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಶುಕ್ರವಾರ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಧರ್ಮಗುರುಗಳ ಸಭೆಯಲ್ಲಿ ಯೋಗ ಗುರು ರಾಮ್ ದೇವ್ ಅವರು ಇಸ್ಲಾಂ ಮತ್ತು ಕ್ರಿಶ್ನಿಯನ್ ಧರ್ಮಗಳ ಅಜೆಂಡಾ ಒಂದೇ ಎಂದಿದ್ದರು. ಈ ಎರಡೂ ಧರ್ಮಗಳು ಮತಾಂತರ ಮಾಡುವ ಅಜೆಂಡಾ ಹೊಂದಿದ್ದಾರೆ ಎಂದಿದ್ದರು.
ಖಾನ್ ಅವರು ದೂರು ನೀಡಿದ ಬಳಿಕ, ರಾಮ್‌ದೇವ್ ವಿರುದ್ಧ ಸೆಕ್ಷನ್ 153ಎಯಡಿ (ಧರ್ಮ, ಜನಾಂಗ ಮತ್ತು ವಾಸಸ್ಥಳದ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಎಫ್‌ಐಆರ್ ದಾಖಲಿಸಲಾಗಿದೆ. ಜತೆಗೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) 295ಎಯಡಿ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 298 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಹೇಳಿಕೆಗಳನ್ನು ನೀಡುವುದು) ಗಳಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಯೋಗ ಗುರು ರಾಮ್ ದೇವ್ ಹಿಂದೂ ಧರ್ಮವನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಹೋಲಿಕೆ ಮಾಡಿ ಮಾತನಾಡುವ ಸಮಯದಲ್ಲಿ "ಮುಸ್ಲಿಮರು ಭಯೋತ್ಪಾದನೆ ಮತ್ತು ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ" ಎಂದು ಹೇಳಿದ್ದರು. ಎರಡೂ ಧರ್ಮಗಳ ಉದ್ದೇಶ ಒಂದೇ, ಎರಡೂ ಧರ್ಮಗಳೂ ಮತಾಂತರ ಮಾಡುತ್ತವೆ ಎಂದಿದ್ದರು.
ಇಂದು ಮಥಾಯಿ ಖಾನ್ ಅವರು ಮಾಧ್ಯಮದ ಮುಂದೆ "ನನಗೆ ದೂರಿನ ಕುರಿತು ಗೊತ್ತಿಲ್ಲ" ಎಂದು ಮಾಹಿತಿ ನೀಡಿದ್ದಾರೆ." ನನಗೆ ದೂರಿನ ಕುರಿತು ತಿಳಿದಿಲ್ಲ. ವಕೀಲರು ನನಗೆ ವಂಚಿಸಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಪಟ್ಟ ಪ್ರಕರಣಕ್ಕೆ ವಕೀಲರು ನನಗೆ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ನನ್ನಿಂದ ಅರ್ಜಿಯೊಂದಕ್ಕೆ ಸಹಿ ಪಡೆದರು. ಅದು ರಾಮ್‌ದೇವ್ ವಿರುದ್ಧದ ದೂರಿನ ಪ್ರತಿಯೆಂದು ನನಗೆ ಆಗ ತಿಳಿದಿರಲಿಲ್ಲ" ಎಂದು ಖಾನ್ ಹೇಳಿಕೆ ನೀಡಿದ್ದಾರೆ.
ನನಗೆ ತಿಳಿಯದೆ ವಕೀಲರು ಮೋಸದಿಂದ ನೀಡಿರುವ ದೂರಿನ ಕುರಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರಿಗೆ ಜ್ಞಾಪಕ ಪತ್ರ (ಮೆಮೊರೊಡಮ್ ) ಬರೆದಿದ್ದೇನೆ ಎಂದು ಖಾನ್ ತಿಳಿಸಿದ್ದಾರೆ. ಆದರೆ, ಬಾರ್ಮರ್ ಜಿಲ್ಲಾಧಿಕಾರಿ ಮತ್ತು ಎಸ್ಪಿ ನಮಗೆ ಅಂತಹ ಜ್ಞಾಪಕ ಪತ್ರ ದೊರಕಿಲ್ಲ ಎಂದಿದ್ದಾರೆ.
"ಒಮ್ಮೆ ಎಫ್‌ಐಆರ್ ದಾಖಲಾದ ಬಳಿಕ ಹಿಂಪಡೆಯಲು ಸಾಧ್ಯವಿಲ್ಲ. ದೂರಿನ ಪ್ರಕಾರ ಪೊಲೀಸರು ಕ್ರಮಕೈಗೊಳ್ಳುತ್ತಾರೆ" ಎಂದು ಎಸ್‌ಪಿ ದೀಪಕ್ ಭಾರ್ಗವ್ ಹೇಳಿದ್ದಾರೆ.
ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ವಿರುದ್ಧ ರಾಮ್‌ದೇವ್ ಅವರ ಹೇಳಿಕೆ ಆಕ್ಷೇಪಾರ್ಹವಾಗಿದೆ ಮತ್ತು ಇದು ಅವರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರು ನೀಡಲಾಗಿತ್ತು. ಆದರೆ, ಇದೀಗ ತನಗೆ ತಿಳಿಯದೆ ತನ್ನ ಹೆಸರಿನಲ್ಲಿ ದೂರು ದಾಖಲಾಗಿದೆ ಎಂದು ಖಾನ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.