ಕನ್ನಡ ಸುದ್ದಿ  /  Nation And-world  /  Mangalagiri Narasimha Swamy Temple Facts And Information

Panakala narasimha swamy: ಮಂಗಳಗಿರಿಯ ಪನಕಲ ನರಸಿಂಹ ಸ್ವಾಮಿ ದೇಗುಲದ ಪರಿಚಯ, ತೆರೆದ ಬಾಯಿಯ ವಿಗ್ರಹದಲ್ಲಿದೆ ಹಲವು ಕೌತುಕ

ದೇಶದಲ್ಲಿ ಹಲವು ದೇವಾಲಯಗಳು, ಆರಾಧನಾ ಸ್ಥಳಗಳು ಇವೆ. ಕೆಲವೊಂದು ವಿನೂತನ, ವಿಶೇಷವಾಗಿದ್ದು ಗಮನ ಸೆಳೆಯುತ್ತವೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ತೋಥಾದ್ರಿಯು ದೇಶದ ಎಂಟು ಪ್ರಮುಖ ವಿಷ್ಣುಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Panakala narasimha swamy: ಮಂಗಳಗಿರಿಯ ಪನಕಲ ನರಸಿಂಹ ಸ್ವಾಮಿ ದೇಗುಲದ ಪರಿಚಯ
Panakala narasimha swamy: ಮಂಗಳಗಿರಿಯ ಪನಕಲ ನರಸಿಂಹ ಸ್ವಾಮಿ ದೇಗುಲದ ಪರಿಚಯ (Image Source: miraclesinindia.blogspot.com)

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ತೋಥಾದ್ರಿಯು ದೇಶದ ಎಂಟು ಪ್ರಮುಖ ವಿಷ್ಣುಕ್ಷೇತ್ರಗಳಲ್ಲಿ ಒಂದಾಗಿದೆ. ಲಕ್ಷ್ಮಿ ದೇವಿಯು ಈ ಗಿರಿಯಲ್ಲಿ ತಪಸ್ಸು ಮಾಡಿರುವ ಕಾರಣ ಇಲ್ಲಿಗೆ ಮಂಗಳಗಿರಿ ಎಂಬ ಹೆಸರು ಬಂದಿದೆ. ಮಂಗಳಗಿರಿಯಲ್ಲಿ ಮೂರು ನರಸಿಂಹ ದೇಗುಲಗಳಿವೆ. ಅವುಗಳಲ್ಲಿ ಪನಕಲ ನರಸಿಂಹ ದೇಗುಲವೂ ಒಂದಾಗಿದೆ. ಇಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲವು ಮಂಗಳಗಿರಿಯ ಆರಂಭದಲ್ಲಿದ್ದರೆ, ಗಾಂದಾಳ ನರಸಿಂಹ ದೇಗುಲವು ಗಿರಿಯ ತುದಿಯಲ್ಲಿದೆ.

ವಿಶೇಷ -1

ಈ ಗಿರಿಯು ಯಾವುದೇ ದಿಕ್ಕಿನಿಂದ ನೋಡಿದರೂ ಆನೆಯ ಆಕಾರದಂತೆ ಕಾಣಿಸುತ್ತದೆ. ಪುರಾಣ ಕತೆಯ ಪ್ರಕಾರ ಪರಿಯಾತ್ರ ಎಂಬ ರಾಜನಿಗೆ ಹೃಶ್ವಶೃಂಗಿ ಎಂಬ ಪುತ್ರನಿರುತ್ತಾನೆ. ಶೃಂಗಿಯು ತೀರ್ಥಯಾತ್ರೆ ಕೈಗೊಂಡ ಸಮಯದಲ್ಲಿ ಈ ಬೆಟ್ಟದಲ್ಲಿ ವಿಷ್ಣುವನ್ನು ನೆನೆಯುತ್ತ ತಪಸ್ಸು ಕೈಗೊಂಡನು. ಇವನನ್ನು ಮತ್ತೆ ರಾಜ್ಯಕ್ಕೆ ಕರೆದೊಯ್ಯಲು ಪರಿಯಾತ್ರನು ಬಂದಾಗ ಶೃಂಗಿಯು ಆನೆಯ ಆಕಾರ ತಳೆದು ಇಲ್ಲಿಯೇ ಉಳಿದನು. ಇದೇ ಸ್ಥಳವು ಮುಂದೆ ಪನಕಲ ಲಕ್ಷ್ಮಿ ನರಸಿಂಹ ದೇಗುಲವಾಗಿ ಜನಪ್ರಿಯವಾಯಿತು.

ವಿಶೇಷ 2

ಈ ದೇಗುಲದ ಮೂರ್ತಿ ವಿಶೇಷವಾಗಿದೆ. ಮೂರ್ತಿಗೆ ಭೌತಿಕ ರೂಪವಿಲ್ಲ, ಕಣ್ಣುಗಳು ಇಲ್ಲ, ಕೈಗಳಿಲ್ಲ, ಕಾಲುಗಳಿಲ್ಲ, ತೆರೆದು ಬಾಯಿ ಮಾತ್ರ ಈ ಮೂರ್ತಿಯ ವಿಶೇಷ.

ವಿಶೇಷ 3

ಮಧ್ಯಾಹ್ನ ಮೂರು ಗಂಟೆಯವರೆಗೆ ದೇವರಿಗೆ ವಿವಿಧ ಪೂಜೆ ಸಲ್ಲಿಸಲು ಅವಕಾಶವಿದೆ. ಪೂಜೆಯಾದ ಬಳಿಕ ದೇವರ ತೆರೆದ ಬಾಯಿಯನ್ನು ಲೋಹದ ಕವಚದ ಮೂಲಕ ಮುಚ್ಚಲಾಗುತ್ತದೆ. ಮೂರು ಗಂಟೆಯ ಬಳಿಕ ಯಾವುದೇ ಪೂಜೆಗೆ ಅವಕಾಶವಿಲ್ಲ. ಸಾಧು ಸನ್ಯಾಸಿಗಳಿಗೆ ಇಲ್ಲಿ ಧ್ಯಾನ ಮಾಡಲು, ವಿಷ್ಣುವನ್ನು ಆರಾಧಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅಪರಾಹ್ನ ಮೂರು ಗಂಟೆಯ ಬಳಿಕ ಸಾರ್ವಜನಿಕರಿಗೆ ಪೂಜೆಗೆ ಅವಕಾಶ ನೀಡುವುದಿಲ್ಲವಂತೆ.

ವಿಶೇಷ 4

ಈ ದೇವರ ಮೂರ್ತಿಯ ಬಾಯಿಗೆ ಬೆಲ್ಲದ ನೀರನ್ನು ಹಾಕಲಾಗುತ್ತದೆ. ಬಾಯಿಗೆ ಬೆಲ್ಲದ ನೀರು ಹಾಕಿದಾಗ ದೇವರು ಕುಡಿದಂತೆ ಸದ್ದು ಕೇಳಿಸುತ್ತದೆಯಂತೆ. ಭಕ್ತರಿಗೂ ಇದೇ ಬೆಲ್ಲದ ನೀರನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಬಾಯಿಗೆ ಬೆಲ್ಲದ ನೀರು ಹಾಕಿದಾಗ ಅರ್ಧದಷ್ಟು ಬೆಲ್ಲದ ನೀರು ಹೊರಕ್ಕೆ ಬಂದರೆ ದೇವರಿಗೆ ತೃಪ್ತಿಯಾಗಿದೆ ಎನ್ನುವ ಅರ್ಥವೆಂದು ಭಕ್ತರು ನಂಬುತ್ತಾರೆ.

ವಿಶೇಷ 5

ಸಿಹಿ ಇದ್ದಲ್ಲಿ ಇರುವೆಗಳು ಮುತ್ತಿಕೊಳ್ಳುವುದು ಸಾಮಾನ್ಯ. ಆಶ್ಚರ್ಯವೆಂದರೆ ಈ ಮೂರ್ತಿಯ ಬಳಿ ಅಥವಾ ದೇಗುಲದಲ್ಲಿ ಬೆಲ್ಲದ ನೀರು ಅಥವಾ ಪಾನಕ ಚೆಲ್ಲಿದ್ದರೂ ಒಂದೇ ಒಂದು ಇರುವೆಗಳು, ನೊಣಗಳು, ಸೊಳ್ಳೆಗಳು ಕಾಣಿಸುವುದಿಲ್ಲವಂತೆ.

ವಿಶೇಷ 6

ಈ ಬೆಟ್ಟವು ಜ್ವಾಲಾಮುಖಿ ಬೆಟ್ಟವಾಗಿದ್ದಿರಬಹುದು. ಬೆಲ್ಲದ ನೀರಿನಲ್ಲಿರುವ ಅಂಶಗಳು ಜ್ವಾಲಾಮುಖಿಯ ಸಲಧಿರ್‌ಗೆ ಪ್ರತಿಕ್ರಿಯೆ ನೀಡುತ್ತದೆ. ಇದಕ್ಕೆ ಪುರಾತನ ಕಾಲದಿಂದ ಬೆಲ್ಲದ ನೀರನ್ನು ಸುರಿಯುತ್ತ ಗಿರಿಯೊಳಗಿರುವ ಜ್ವಾಲಾಮುಖಿಯನ್ನು ತಟಸ್ಥಗೊಳಿಸಲಾಗುತ್ತದೆ ಎಂದೂ ಹೇಳಲಾಗುತ್ತದೆ. ಪುರಾತನ ಕಾಲದಲ್ಲಿ ಇದು ಜ್ವಾಲಾಮುಖಿ ಬೆಟ್ಟವಾಗಿದ್ದಿರಬಹುದು ಎನ್ನುವುದಕ್ಕೆ ಪುರಾತತ್ವ ಇಲಾಖೆಯ ಅಧ್ಯಯನಗಳೂ ಸಾಕ್ಷ್ಯ ನುಡಿದಿವೆ. ಪೂರ್ಣ ಸತ್ಯ ಇನ್ನೂ ಹೊರಬಿದ್ದಿಲ್ಲ. ಆದರೆ, ಭಕ್ತರು ಭಕ್ತಿಯಿಂದ ಬೆಲ್ಲದ ನೀರು ಸುರಿಯುತ್ತಲೇ ಇದ್ದಾರೆ.

IPL_Entry_Point