Manipur CM Quits: ಸತತ ಎರಡು ವರ್ಷಗಳ ಹಿಂಸಾಚಾರ ಬಳಿಕ ಮಣಿಪುರ ಸಿಎಂ ಬೀರೇನ್‌ ಸಿಂಗ್‌ ರಾಜೀನಾಮೆ; ಬಿಜೆಪಿ ಹೈಕಮಾಂಡ್‌ ಆದೇಶ ಪಾಲಿಸಿದ ನಾಯಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Manipur Cm Quits: ಸತತ ಎರಡು ವರ್ಷಗಳ ಹಿಂಸಾಚಾರ ಬಳಿಕ ಮಣಿಪುರ ಸಿಎಂ ಬೀರೇನ್‌ ಸಿಂಗ್‌ ರಾಜೀನಾಮೆ; ಬಿಜೆಪಿ ಹೈಕಮಾಂಡ್‌ ಆದೇಶ ಪಾಲಿಸಿದ ನಾಯಕ

Manipur CM Quits: ಸತತ ಎರಡು ವರ್ಷಗಳ ಹಿಂಸಾಚಾರ ಬಳಿಕ ಮಣಿಪುರ ಸಿಎಂ ಬೀರೇನ್‌ ಸಿಂಗ್‌ ರಾಜೀನಾಮೆ; ಬಿಜೆಪಿ ಹೈಕಮಾಂಡ್‌ ಆದೇಶ ಪಾಲಿಸಿದ ನಾಯಕ

Manipur CM Quits: ಮಣಿಪುರ ಹಿಂಸಾಚಾರಕ್ಕೆ ಅಲ್ಲಿನ ಸಿಎಂ ತಲೆದಂಡ ಆಗಿದೆ. ಬಿಜೆಪಿ ಹಿರಿಯ ನಾಯಕರ ಸೂಚನೆ ಮೇರೆಗೆ ಮಣಿಪುರ ಸಿಎಂ ಬಿರೇನ್‌ಸಿಂಗ್‌ ರಾಜೀನಾಮೆ ನೀಡಿದ್ದಾರೆ.

ಮಣಿಪುರ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ
ಮಣಿಪುರ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ

Manipur CM Quits: ಬಿಜೆಪಿ ಹಿರಿಯ ನಾಯಕ ಹಾಗೂ ಮಣಿಪುರ ರಾಜ್ಯದ ಮುಖ್ಯಮಂತ್ರಿ ಎನ್‌. ಬೀರೇನ್‌ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸತತವಾಗಿ ಎರಡು ವರ್ಷದಿಂದ ಹಿಂಸಾಚಾರಕ್ಕೆ ಒಳಗಾಗಿ ನೂರಾರು ಜನರು ಪ್ರಾಣ ಕಳೆದುಕೊಂಡು ಇಡೀ ಮಣಿಪುರ ರಾಜ್ಯ ಸಾಮಾಜಿಕ ಸ್ಥಿತಿ ಏರುಪೇರು ಆಗಿರುವ ನಡುವೆಯೇ ಬೀರೇನ್‌ಸಿಂಗ್‌ ಅವರು ಪದತ್ಯಾಗ ಮಾಡಿದ್ದಾರೆ. ಬಿಜೆಪಿ ಹಿರಿಯ ನಾಯಕರ ಸೂಚನೆ ಮೇರೆಗೆ ಅವರು ಭಾನುವಾರ ತಮ್ಮ ರಾಜೀನಾಮೆ ಪತ್ರವನ್ನು ಮಣಿಪುರ ರಾಜ್ಯಪಾಲ ಅಜಯಕುಮಾರ್‌ ಭಲ್ಲಾ ಅವರಗೆ ಸಲ್ಲಿಸಿದ್ದಾರೆ. ಬೀರೇನ್‌ ಸಿಂಗ್‌ ಅವರನ್ನು ಬದಲಿಸುವಂತೆ ಬಿಜೆಪಿಯಲ್ಲಿಯೇ ಒತ್ತಡ ಹೆಚ್ಚಿತ್ತು. ಎನ್‌ಡಿಎ ಮಿತ್ರ ಪಕ್ಷಗಳೂ ಒತ್ತಡ ಹೇರಿದ್ದರಿಂದ ಅವರ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ ಎನ್ನಲಾಗುತ್ತಿದೆ.

ಮೂರು ವರ್ಷದ ಹಿಂದೆ ನಡೆದಿದ್ದ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಎನ್‌.ಬಿರೇನ್‌ ಸಿಂಗ್‌ ಎರಡನೇ ಬಾರಿ ಸಿಎಂ ಆಗಿದ್ದರು. 2022 ರಲ್ಲಿ ಅಧಿಕಾರಕ್ಕೆ ಬಂದ ಮರು ವರ್ಷದಲ್ಲೇ ಮಣಿಪುರದಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು. ಅಲ್ಲಿನ ಕುಕಿ ಸಮುದಾಯದ ಮೀಸಲು ಬೇಡಿಕೆ ಪರ ವಿರೋಧದ ಹೋರಾಟ ಹಿಂಸಾಚಾರಕ್ಕೆ ತಿರುಗಿ ಈವರೆಗೂ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದು. ಹಲವರು ಗಾಯಗೊಂಡಿದ್ದಾರೆ. ಈಗಲೂ ಮಣಿಪುರದಲ್ಲಿ ಹಿಂಸಾಚಾರ ನಿಗ್ರಹದ ಪ್ರಯತ್ನಗಳು ನಡೆದಿವೆ.

ಕೇಂದ್ರ ಸರ್ಕಾರವೂ ಅಲ್ಲಿನ ಸಮುದಾಯದ ಪ್ರಮುಖದೊಂದಿಗೆ ಮಾತುಕತೆ ನಡೆಸಿದ್ದರೂ ಆಕ್ರೋಶ ತಣಿದಿರಲಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಮಣಿಪುರಕ್ಕೆ ಭೇಟಿ ನೀಡಿದ್ದರು. ಪರಿಸ್ಥಿತಿ ಸುಧಾರಿಸಲಿಲ್ಲ. ಇದರ ನಡುವೆ ಮಣಿಪುರದ ರಾಜಕೀಯ ವಲಯದಲ್ಲೂ ಬಿರೇನ್‌ ಸಿಂಗ್‌ ವಿರುದ್ದ ಅಸಮಾಧಾನ ಭುಗಿಲೆದ್ದಿತ್ತು. ಹಿಂಸಾಚಾರಕ್ಕೆ ಸಿಎಂ ಅವರೇ ಪಿತೂರಿ ನೀಡಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಅವರನ್ನು ಬದಲಿಸಬೇಕು. ಸಿಎಂ ರಾಜೀನಾಮೆ ಪಡೆಯಬೇಕು ಎಂದು ಮಿತ್ರ ಪಕ್ಷಗಳೂ ಒತ್ತಾಯಿಸಿದ್ದವು. ಬಿಜೆಪಿಯಲ್ಲೇ ಕೆಲವು ಶಾಸಕರು ಅಸಮಾಧಾನ ಹೊರ ಹಾಕಿದ್ದರು. ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೂ ಮಣಿಪುರ ಬಿಜೆಪಿ ಶಾಸಕರು ದೂರು ನೀಡಿ ಬಂದಿದ್ದರು. ಮಣಿಪುರದಲ್ಲಿ ಬಿಜೆಪಿ ಬಹುಮತವಿದ್ದರೂ ಬಿರೇನ್‌ಸಿಂಗ್‌ ವಿರುದ್ದ ಅಸಮಾಧಾನ ಹೆಚ್ಚಿದ್ದ ಪರಿಣಾಮವಾಗಿ ರಾಜೀನಾಮೆ ಪಡೆಯಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಹರಿಯಾಣ, ಮಹಾರಾಷ್ಟ್ರ ಬಳಿಕ ದೆಹಲಿಯಲ್ಲಿ ಗೆದ್ದಿರುವ ಬಿಜೆಪಿಯು ಪಕ್ಷ ಅಧಿಕಾರದಲ್ಲಿರುವ ಕಡೆಗೆ ಸರ್ಕಾರದ ಆಡಳಿತ ವೈಖರಿ ಕಡೆಗೂ ಗಮನ ನೀಡುತ್ತಿದೆ. ಮಣಿಪುರದಲ್ಲಿ ಎರಡು ವರ್ಷದಿಂದ ಆಡಳಿತ ಯಂತ್ರ ಕುಸಿದು ಬಿದ್ದಿತ್ತು. ಇನ್ನು ಎರಡು ವರ್ಷಕ್ಕೆ ಚುನಾವಣೆಯೂ ಇರುವುದರಿಂದ ಅಲ್ಲಿ ನಾಯಕತ್ವ ಬದಲಾವಣೆಗೆ ಯೋಚಿಸಿತ್ತು. ದೆಹಲಿ ಚುನಾವಣೆ ಫಲಿತಾಂಶ ಹೊರ ಬರುತ್ತಲೇ ಈ ತೀರ್ಮಾನ ಹೊರ ಬಿದ್ದಿದೆ.

ದೆಹಲಿ ಚುನಾವಣೆ ಫಲಿತಾಂಶ ಹೊರಬಿದ್ದ ಮರು ದಿನವೇ ದೆಹಲಿಗೆ ಬಿರೇನ್‌ ಸಿಂಗ್‌ ಅವರನ್ನು ಕರೆಯಿಸಿಕೊಂಡ ಬಿಜೆಪಿ ನಾಯಕರು ರಾಜೀನಾಮೆಗೆ ಸೂಚನೆ ನೀಡಿದ್ದರು. ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಬಂದ ನಂತರ ಅವರು ಇಂಫಾಲದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಒಂದೆರಡು ದಿನದಲ್ಲಿ ಹಿರಿಯ ಬಿಜೆಪಿ ನಾಯಕರು ಮಣಿಪುರಕ್ಕೆ ಬರಲಿದ್ದು, ಶಾಸಕಾಂಗ ಪಕ್ಷದ ಸಭೆ ನಡೆಸಿ ನೂತನ ನಾಯಕನನ್ನು ಆರಿಸಲಿದ್ದಾರೆ. ಬಿಜೆಪಿಯವರೇ ಸಿಎಂ ಆಗುವ ಸೂಚನೆಗಳಿವೆ.

ಈಗಾಗಲೇ ಮಣಿಪುರ ಹಿಂಸಾಚಾರಕ್ಕೆ ಬಿರೇನ್‌ ಸಿಂಗ್‌ ಅವರ ಕುಮ್ಮಕ್ಕು ಇದೆ ಎಂದು ಅವರ ಧ್ವನಿ ಸಾಕ್ಷಿಯೊಂದಿಗೆ ಸುಪ್ರೀಂಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಇದರ ವಿಚಾರಣೆಯೂ ನಡೆದಿದೆ. ತೀರ್ಪು ಯಾವುದೇ ಕ್ಷಣದಲ್ಲಾದರೂ ಹೊರ ಬರಬಹುದು ಎನ್ನಲಾಗುತ್ತಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.