ಸುದೀರ್ಘ ಪರಂಪರೆ ಬಿಟ್ಟುಹೋದ ಭಾರತದ ಆರ್ಥಿಕ ಸುಧಾರಣೆಗಳ ಹರಿಕಾರ; ಇದು ಮನಮೋಹನ್ ಸಿಂಗ್ ಶೈಕ್ಷಣಿಕ, ರಾಜಕೀಯ, ಆರ್ಥಿಕ ಸಾಧನೆಗಳ ನೋಟ
Manmohan Singh: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಮ್ಮನ್ನು ಅಗಲಿದ್ದಾರೆ. ಆದರೆ, ಅವರ ಸಾಧನೆಗಳು ನಮ್ಮೊಂದಿಗಿವೆ. ಮಹಾನ್ ನಾಯಕನ ಶೈಕ್ಷಣಿಕ ಹಾಗೂ ರಾಜಕೀಯ ಸಾಧನೆಗಳ ಗುಚ್ಛ ಇಲ್ಲಿದೆ ನೋಡಿ.
ನವದೆಹಲಿ: ಭಾರತದ ಮಾಜಿ ಪ್ರಧಾನಿ, ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಡಾ. ಮನಮೋಹನ್ ಸಿಂಗ್ ಅವರು ಗುರುವಾರ (ಡಿಸೆಂಬರ್ 27 ರಾತ್ರಿ 9.50) ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಆರಂಭಿಕ ರಾಜಕೀಯ ದಿನಗಳಲ್ಲಿ ಹಣಕಾಸು ಖಾತೆಯನ್ನು ಹೊಂದಿದ್ದ ಸಿಂಗ್, 1990ರ ದಶಕದಲ್ಲಿ ಆರ್ಥಿಕ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1991ರಲ್ಲಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉತ್ತುಂಗದಲ್ಲಿದ್ದ ಅವಧಿಯಲ್ಲಿ ದಿವಂಗತ ಪ್ರಧಾನಿ ಪಿವಿ ನರಸಿಂಹರಾವ್ ಅವರು ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರಾಗಿ ನೇಮಿಸಿದ್ದರು. ಅಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮ ದೇಶದ ಆರ್ಥಿಕತೆ ಬೆಳೆಯಲು ಭದ್ರ ಬುನಾದಿ ಹಾಕಿದ್ದವರು ಸಿಂಗ್. ಇಬ್ಬರೂ ನಾಯಕರು ಒಟ್ಟಾಗಿ, ದೇಶದ ಆರ್ಥಿಕ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿ ಬಿಕ್ಕಟ್ಟಿನಿಂದ ಹೊರತಂದರು. ಅವರ ಶೈಕ್ಷಣಿಕ ಹಾಗೂ ರಾಜಕೀಯ ಸಾಧನೆಗಳ ಗುಚ್ಛ ಇಲ್ಲಿದೆ ನೋಡಿ.
ಮಹಾನ್ ವಿದ್ವಾಂಸ: ಮನಮೋಹನ್ ಸಿಂಗ್ ಅವರ ಶೈಕ್ಷಣಿಕ ಸಾಧನೆಗಳು
- ಮನಮೋಹನ್ ಸಿಂಗ್ 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಅಂದರೆ 10ನೇ ತರಗತಿ ಪೂರ್ಣಗೊಳಿಸಿದರು.
- ಅವರ ಶೈಕ್ಷಣಿಕ ವೃತ್ತಿಜೀವನವು ಅವರನ್ನು ಪಂಜಾಬ್ನಿಂದ ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ತನಕ ಕರೆದೊಯ್ದಿತು. ಅಲ್ಲಿ ಅವರು 1957ರಲ್ಲಿ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯ ಗೌರವ ಪದವಿಯನ್ನು ಪಡೆದರು.
- ಸಿಂಗ್ 1962 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ನುಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಪಡೆದರು.
- ಅವರ ಪುಸ್ತಕದ ಹೆಸರು ‘ಭಾರತದ ರಫ್ತು ಪ್ರವೃತ್ತಿಗಳು ಮತ್ತು ಸ್ವಾವಲಂಬಿ ಬೆಳವಣಿಗೆಗೆ ನಿರೀಕ್ಷೆಗಳು’. (ಕ್ಲಾರೆಂಡನ್ ಪ್ರೆಸ್, ಆಕ್ಸ್ಫರ್ಡ್, 1964) ಭಾರತದ ಆಂತರಿಕ-ಆಧಾರಿತ ವ್ಯಾಪಾರ ನೀತಿಯ ಆರಂಭಿಕ ವಿಮರ್ಶೆ ಇದಾಗಿದೆ.
- ಅವರು 1957 ರಿಂದ 1959 ರವರೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದರು.
- 1959 ಮತ್ತು 1963ರ ಅವಧಿಯಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದ್ದರು. 1963 ರಿಂದ 1965 ರವರೆಗೆ ಅವರು ಅಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.
- 1966 ರಿಂದ 1969 ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಸಚಿವಾಲಯದಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಇದು 1987 ಮತ್ತು 1990ರ ನಡುವೆ ಜಿನೀವಾದಲ್ಲಿನ ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು.
- 1969 ರಿಂದ 1971ರ ತನಕ ಪ್ರತಿಷ್ಠಿತ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪ್ರಾಧ್ಯಾಪಕರಾಗಿದ್ದರು.
- 1972ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಅರ್ಥಶಾಸ್ತ್ರದಲ್ಲಿ ಸಿಂಗ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಲಲಿತ್ ನಾರಾಯಣ್ ಮಿಶ್ರಾ ಅವರು. ಹೀಗಾಗಿ ಅವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದ್ದರು.
ಇದನ್ನೂ ಓದಿ: ನಾನೀಗ ಒಬ್ಬ ಗುರು ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡೆ; ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಗಾಂಧಿ ಭಾವುಕ
- 1973ರಲ್ಲಿ ಮತ್ತು 1976 ರಲ್ಲಿ ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. 1980-1982ರಲ್ಲಿ ಅವರು ಯೋಜನಾ ಆಯೋಗದಲ್ಲಿದ್ದರು.
- 1982ರಲ್ಲಿ ಅವರನ್ನು ಆಗಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ನೇಮಿಸಲಾಗಿತ್ತು. 1985ರವರೆಗೆ ಈ ಹುದ್ದೆಯಲ್ಲಿದ್ದರು.
- 1985 ರಿಂದ 1987ರವರೆಗೆ ಯೋಜನಾ ಆಯೋಗದ (ಭಾರತ) ಉಪಾಧ್ಯಕ್ಷರಾಗಿದ್ದರು.
- ನಂತರ ಅವರು 1987 ರಿಂದ ನವೆಂಬರ್ 1990 ರವರೆಗೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಮನಮೋಹನ್ ಸಿಂಗ್ ಅವರ ರಾಜಕೀಯ ಸಾಧನೆಗಳು
- ರಾಜಕೀಯದ ಮೇಲೆ ಕಣ್ಣಿಟ್ಟಿದ್ದ ತಂತ್ರಜ್ಞ, ರಿಸರ್ವ್ ಬ್ಯಾಂಕ್ ಗವರ್ನರ್ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಯಿತು. ಅಂದು ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆ ತ್ಯಜಿಸಲು ನಿರ್ಧಾರಿಸಿದ್ದ ಸಂದರ್ಭ ಅದು.
- 2002ರ ಗೋಧ್ರಾ ಗಲಭೆಗಳ ನಂತರ ಕೋಮು ಅಸಮತೋಲನದ ವಾತಾವರಣದಿಂದ ಭಾರತ ತತ್ತರಿಸುತ್ತಿತ್ತು. ಆ ಸಮಯದಲ್ಲಿ ಡಾ.ಸಿಂಗ್ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ: ಭಾರತ ಅತ್ಯಂತ ಗೌರವಾನ್ವಿತ ನಾಯಕನನ್ನು ಕಳೆದುಕೊಂಡು ದುಃಖಿಸುತ್ತಿದೆ; ಮನಮೋಹನ್ ಸಿಂಗ್ ಬಣ್ಣಿಸಿದ ಪ್ರಧಾನಿ ಮೋದಿ
- ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದ ಸಿಂಗ್ ಅವರ ಆಡಳಿತದ ಅತಿದೊಡ್ಡ ಮುಖ್ಯಾಂಶವಾಗಿದೆ. ಇದು ನಾಗರಿಕ ಪರಮಾಣು ಸಹಕಾರಕ್ಕೆ ನಾಂದಿ ಹಾಡಿತು. ಭಾರತದ ವಿದೇಶಾಂಗ ಸಂಬಂಧಗಳಲ್ಲಿ ಒಂದು ಹೆಗ್ಗುರುತಾಯಿತು.
- ಅವರ ಸರ್ಕಾರದ ಅಡಿಯಲ್ಲಿಯೇ ಭಾರತವು 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಸೇರಿದಂತೆ ಹಲವಾರು ಸಾಮಾಜಿಕ ಯೋಜನೆಗಳು ಜಾರಿಗೆ ಬಂದವು. ಇದು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ನೆರವಾಯಿತು.
ಡಾ.ಮನಮೋಹನ್ ಸಿಂಗ್ ಅವರ ಆರ್ಥಿಕ ಸಾಧನೆಗಳು
- ಡಾ.ಸಿಂಗ್ ಅವರ ಅಧಿಕಾರಾವಧಿಯ ಶೇಕಡಾ 8.5 ರಷ್ಟು ಜಿಡಿಪಿ ಬೆಳವಣಿಗೆ ನೀಡಿತು. ಆದರೆ ಹಗರಣಗಳು - 2 ಜಿ, ಸಿಡಬ್ಲ್ಯೂಜಿ ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಸೇರಿ ಹಲವು ಸರ್ಕಾರದ ನೀತಿ ಮತ್ತು ಅವರ ಕಾರ್ಯಕ್ಷಮತೆ ಕುಂಠಿತಗೊಳಿಸಿತು.
- ಹಣಕಾಸು ಸಚಿವರಾಗಿ ಅವರು 1991ರಲ್ಲಿ ಭಾರತದ ಆರ್ಥಿಕ ಉದಾರೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದರಲ್ಲಿ ರೂಪಾಯಿಯನ್ನು ಅಪಮೌಲ್ಯಗೊಳಿಸುವುದು, ಆಮದು ಸುಂಕವನ್ನು ಕಡಿಮೆ ಮಾಡುವುದು ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದು ಸೇರಿವೆ.
- ವಿಶೇಷವೆಂದರೆ, ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ತರಲು ಸಿಂಗ್ ನೇರವಾಗಿ ಜವಾಬ್ದಾರರಲ್ಲದಿದ್ದರೂ, ಈ ತೆರಿಗೆ ಸುಧಾರಣೆಗಳಿಗೆ ಅಡಿಪಾಯವನ್ನು ಅವರ ಸರ್ಕಾರದ ಅಡಿಯಲ್ಲಿ ಹಾಕಲಾಯಿತು.
ಇದನ್ನೂ ಓದಿ: Manmohan Singh: ಭಾರತವನ್ನು ಉದಾರೀಕರಣ, ಜಾಗತೀಕರಣಕ್ಕೆ ತೆರೆದು ಬಿಟ್ಟ ಡಾ ಮನಮೋಹನ್ ಸಿಂಗ್ ಅವರ 4 ಮುಖ್ಯ ಸುಧಾರಣಾ ಕ್ರಮಗಳಿವು