ಕನ್ನಡ ಸುದ್ದಿ  /  Nation And-world  /  Many Dead After Flash Flood Hits During West Bengal Idol Immersion

Flash Flood In Jalpaiguri: ಬಂಗಾಳದಲ್ಲಿ ದುರ್ಗಾ ಮಾತಾ ಮೂರ್ತಿ ವಿಸರ್ಜನೆ ವೇಳೆ ದುರಂತ: ಹಠಾತ್‌ ಪ್ರವಾಹಕ್ಕೆ 8 ಬಲಿ!

ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ದುರ್ಗಾ ಮಾತಾ ಮೂರ್ತಿ ವಿಸರ್ಜನೆ ವೇಳೆ ಭಾರೀ ಅನಾಹುತ ಸಂಭವಿಸಿದ್ದು, ಹಠಾತ್‌ ಪ್ರವಾಹಕ್ಕೆ ಎಂಟು ಜನರು ಬಲಿಯಾಗಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ. ಮೃತಪಟ್ಟವರ ಪೈಕಿ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಹಾ ದುರಂತಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿದ್ದರೆ.

ಪ್ರವಾಹದಲ್ಲಿ ಕೊಚ್ಚಿ ಹೋದ ಜನ
ಪ್ರವಾಹದಲ್ಲಿ ಕೊಚ್ಚಿ ಹೋದ ಜನ (ANI)

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ದುರ್ಗಾ ಮಾತಾ ಮೂರ್ತಿ ವಿಸರ್ಜನೆ ವೇಳೆ ಭಾರೀ ಅನಾಹುತ ಸಂಭವಿಸಿದ್ದು, ಹಠಾತ್‌ ಪ್ರವಾಹಕ್ಕೆ ಎಂಟು ಜನರು ಬಲಿಯಾಗಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ. ಮೃತಪಟ್ಟವರ ಪೈಕಿ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿನ್ನೆ(ಅ.5-ಬುಧವಾರ) ರಾತ್ರಿ ಜಲ್ಪೈಗುರಿಯಲ್ಲಿ ದುರ್ಗಾ ಮಾತೆಯ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಲ್ ನದಿಗೆ ಹಠಾತ್ ಪ್ರವಾಹ ಅಪ್ಪಳಿಸಿದ್ದು, ಪ್ರವಾಹಾದಲ್ಲಿ ನೂರಾರು ಜನರು ಕೊಚ್ಚಿ ಹೋಗಿದ್ದಾರೆ. ಪರಿಣಾಮವಾಗಿ ದುರಂತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ಮೃತಪಟ್ಟಿದ್ದು, ಹಲವರು ಇನ್ನೂ ನಾಪತ್ತೆಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋದಾರ್‌, ಇದುವರೆಗೂ ಎಂಟು ಶವಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಸಣ್ಣಪುಟ್ಟ ಗಾಯಗಳಾಗಿರುವ 13 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮೌಮಿತಾ ಗೋದಾರ್‌ ತಿಳಿಸಿದ್ದಾರೆ.

ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ತಂಡಗಳು ಶೋಧ ಕಾರ್ಯ ನಡೆಸಿವೆ ಎಂದು ಮೌಮಿತಾ ಗೋದಾರ್‌ ಹೇಳಿದ್ದಾರೆ. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹಲವರು, ಮತ್ತೊಬ್ಬರನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದರಿಂದ ಅವರೂ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಆತಂಕವಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋದಾರ್‌ ಹೇಳಿದ್ದಾರೆ.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರು ಮತ್ತೊಬ್ಬರನ್ನು ಹಿಡಿದು ಮೇಲಕ್ಕೆ ಬರುವ ಪ್ರಯತ್ನ ನಡೆಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯಗಳು ಎದೆ ನಡುಗಿಸುತ್ತವೆ. ಪಶ್ಚಿಮ ಬಂಗಾಳದ ಅತ್ಯಂತ ಸುಪ್ರಸಿದ್ಧ ದುರ್ಗಾ ಮಾತೆ ಮೂರ್ತಿ ವಿಸರ್ಜನೆ ವೇಳೆಯೇ ಈ ದುರಂತ ಸಂಭವಿಸಿದ್ದು, ರಾಜ್ಯದ ಜನತೆಯನ್ನು ದು:ಖದ ಮಡುವಿನಲ್ಲಿ ತಳ್ಳಿದೆ.

ಮಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬುಲು ಚಿಕ್ ಬರೈಕ್ ಕೂಡ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಸಂಭವಿಸಿದಾಗ ನಾನು ಸ್ಥಳದಲ್ಲಿಯೇ ಇದ್ದೆ. ಹಲವಾರು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರಿನ ಪ್ರವಾಹವು ತುಂಬಾ ಪ್ರಬಲವಾಗಿತ್ತು. ಘಟನೆ ಸಂಭವಿಸಿದಾಗ ಮಾಲ್‌ ನದಿ ದಡದಲ್ಲಿ ನೂರಾರು ಜನರು ಜಮಾಯಿಸಿದ್ದರು. ಹಲವರು ಇನ್ನೂ ಕಾಣೆಯಾಗಿದ್ದಾರೆ ಎಂದು ಬುಲು ಚಿಕ್ ಬರೈಕ್ ಮಾಹಿತಿ ನೀಡಿದ್ದಾರೆ.

ಇನ್ನು ಜಲ್ಪೈಗುರಿ ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, "ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಿಂದ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುವುದಾಗಿ ಟ್ವೀಟ್‌ ಮಾಡಿದ್ದಾರೆ.

ಅದರಂತೆ ಘಟನೆಗೆ ತೀವ್ರ ದು:ಖ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ, ರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಆಡಳಿತಾರೂಢ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಘಟನೆಯ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಪ್ರವಾಹದಲ್ಲಿ ಕೊಚ್ಚಿ ಹೋದವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬ ವರ್ಗಕ್ಕೆ ಸೂಕ್ತ ಪರಿಹಾರಚನ್ನು ನೀಡುವುದಾಗಿಯೂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.

IPL_Entry_Point

ವಿಭಾಗ