ಕನ್ನಡ ಸುದ್ದಿ  /  Nation And-world  /  Marriage May Help Individuals In Keeping Their Blood Sugar Levels Low: Research

Blood Sugar levels: ಅವಿವಾಹಿತರೇ ಕೇಳ್ರಪ್ಪೋ ಕೇಳಿ, ವಿವಾಹವಾದ್ರೆ ಬ್ಲಡ್‌ ಶುಗರ್‌ ಕಡಿಮೆಯಾಗುತ್ತೆ, ಬೇಕಿಲ್ಲ ಮಧುಮೇಹ ಚಿಂತೆ: ಅಧ್ಯಯನ

Blood Sugar levels: ಸಂಗಾತಿಯ ಜತೆಗೆ ಇರುವುದರಿಂದ ಆಕೆ/ಆತನಿಂದ ದೊರಕುವ ಸಾಮಾಜಿಕ ಬೆಂಬಲ, ಒತ್ತಡ ಮುಕ್ತವಾಗಿ ಬದುಕಲು ನೆರವಾಗುವುದು, ಆರೋಗ್ಯಕಾರಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ನಡು ವಯಸ್ಸಿನಿಂದ ಜೀವನದ ಇಳಿಗಾಲದವರೆಗೆ ಆರೋಗ್ಯವಾಗಿರಲು ಸಂಗಾತಿಯ ಸಖ್ಯವು ನೆರವಾಗುತ್ತದೆ ಎಂದು ಈ ಅಧ್ಯಯನ ವರದಿ ಕಂಡುಕೊಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Unsplash)

Blood Sugar levels: ಮದುವೆಯಾದ ಬಳಿಕ ದಪ್ಪಗಾದೆ, ಮದುವೆಯಾಗಿ ಮಕ್ಕಳಾದ ಬಳಿಕ ಈ ಬಿಪಿ, ಶುಗರ್‌ ಎಲ್ಲಾ ಆರಂಭವಾಯ್ತು ಎಂದು ಬಹುತೇಕರು ಹೇಳ್ತಾ ಇರೋದು ಮಾಮೂಲು. ಆದರೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸುವಲ್ಲಿ ಮದುವೆ ಅಥವಾ ಸಹಬಾಳ್ವೆ ನೆರವಾಗಬಹುದು ಎಂದಿದೆ ನೂತನ ಅಧ್ಯಯನ. ಅವಿವಾಹಿತರು ಸಕ್ಕರೆ ಕಾಯಿಲೆಯ ಭಯದಲ್ಲಿದ್ದರೆ ಭಯಪಡದೆ ಮದುವೆಯಾಗಬಹುದು!

ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನ ವರದಿಯೊಂದು ಬಿಎಂಜೆ ಓಪನ್ ಡಯಾಬಿಟಿಸ್ ರಿಸರ್ಚ್ & ಕೇರ್ ಜರ್ನಲ್‌ ಆನ್‌ಲೈನ್‌ನಲ್ಲಿ ಪ್ರಕಟವಾಗಿದೆ. ನೀವು ಮದುವೆಯಾದ ಬಳಿಕ ಸಂಗಾತಿಯ ಜತೆ ಅನ್ಯೋನ್ಯವಾಗಿದ್ದೀರೋ, ದಿನಾ ಜಗಳ ಇರುತ್ತೋ ಮುಖ್ಯವಲ್ಲ, ನಿಮ್ಮ ಹೊಂದಾಣಿಕೆ, ಬಾಳ್ವೆ ಹೇಗಿದ್ದರೂ ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಮತ್ತು ಆರೋಗ್ಯವಾಗಿರಲು ಒಬ್ಬಳು/ಒಬ್ಬ ಸಂಗಾತಿಯ ಜತೆ ಇರುವುದು ನೆರವಾಗಬಹುದು ಎಂದು ಈ ಅಧ್ಯಯನ ಹೇಳಿದೆ. ಯಾರು ತಮ್ಮ ಸಂಗಾತಿಯ ಜತೆ ಜೀವಿಸುವವರೋ ಅವರಲ್ಲಿ ರಕ್ತದ ಸಕ್ಕರೆ ಮಟ್ಟದ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಅಧ್ಯಯನ ಹೇಳಿದೆ.

ಸಂಗಾತಿಯ ಜತೆಗೆ ಇರುವುದರಿಂದ ಆಕೆ/ಆತನಿಂದ ದೊರಕುವ ಸಾಮಾಜಿಕ ಬೆಂಬಲ, ಒತ್ತಡ ಮುಕ್ತವಾಗಿ ಬದುಕಲು ನೆರವಾಗುವುದು, ಆರೋಗ್ಯಕಾರಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ನಡು ವಯಸ್ಸಿನಿಂದ ಜೀವನದ ಇಳಿಗಾಲದವರೆಗೆ ಆರೋಗ್ಯವಾಗಿರಲು ಸಂಗಾತಿಯ ಸಖ್ಯವು ನೆರವಾಗುತ್ತದೆ ಎಂದು ಈ ಅಧ್ಯಯನ ವರದಿ ಕಂಡುಕೊಂಡಿದೆ.

ಈ ಹಿಂದಿನ ಅಧ್ಯಯನಗಳು ಕೂಡ ಮಧುವೆ ಅಥವಾ ಸಹಬಾಳ್ವೆಯಿಂದ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿಸಿದ್ದವು. ವಿಶೇಷವಾಗಿ ವಯಸ್ಸಾದ ಬಳಿಕ ಟೈಪ್‌ 2 ಮಧುಮೇಹದ ಆರೋಗ್ಯ ತೊಂದರೆಗಳು ಕಡಿಮೆಯಾಗಬಹುದು. ಮದುವೆಯಾಗದೆ ಇರುವವರಿಗೆ ಜೀವನದಲ್ಲಿ ಒಂಟಿತನ ಕಾಡಬಹುದು, ಸಾಮಾಜಿಕ ಬೆಂಬಲ ಕಡಿಮೆಯಾಗಬಹುದು, ದಿನನಿತ್ಯ ತಮ್ಮ ನೋವು ನಲಿವು ಹಂಚಿಕೊಳ್ಳಲು ತೊಂದರೆಯಾಗಬಹುದು, ಖಿನ್ನತೆ, ಒಂಟಿತನ, ದುಃಖ ಕಾಡಬಹುದು. ಟೈಪ್‌ 2 ಡಯಾಬಿಟೀಸ್‌ ಇಂತಹ ವಿಷಯಗಳ ಜತೆ ಸಂಬಂಧ ಹೊಂದಿದೆ ಎಂದು ಅಧ್ಯಯನಗಳು ತಿಳಿಸಿವೆ.

ಮದುವೆಯಾದ ತಕ್ಷಣ ಸುಖವಾಗಿರಬಹುದು ಎಂದಲ್ಲ. ಸಾಕಷ್ಟು ಜನರು ಮದುವೆಯಾದ ಬಳಿಕವೇ ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕರು ಅನ್ಯೋನ್ಯವಾಗಿರದೆ ಇರರಬಹುದು. ಇಂತಹ ವಿಷಯ ಗಮನದಲ್ಲಿಟ್ಟುಕೊಂಡು ಲುಕ್ಸೆಂಬರ್ಗ್‌ ಮತ್ತು ಕೆನಡಾದ ಸಂಶೋಧಕರ ತಂಡವು ಹಿರಿಯರಲ್ಲಿ ಸರಾಸರಿ ಗ್ಲೈಸೆಮಿಕ್ ಮಟ್ಟಗಳೊಂದಿಗೆ ವೈವಾಹಿಕ ಸ್ಥಿತಿ ಮತ್ತು ವೈವಾಹಿಕ ಗುಣಮಟ್ಟದ ನಡುವೆ ಸಂಬಂಧವಿದೆಯೇ ಎಂದು ಕಂಡುಕೊಳ್ಳಲು ಹೊರಟಿತು. ಇದಕ್ಕಾಗಿ ಅವರು ಇಂಗ್ಲಿಷ್ ಲಾಂಗಿಟ್ಯೂಡಿನಲ್ ಸ್ಟಡಿ ಆಫ್ ಏಜಿಂಗ್ (ELSA) ಎಂಬ ಬಯೋಮಾರ್ಕರ್‌ ಡೇಟಾವನ್ನು ಬಳಸಿದ್ದರು.

2004 ರಿಂದ 2013 ರ ಅವಧಿಯಲ್ಲಿ ಈ ಹಿಂದೆ ರೋಗನಿರ್ಣಯ ಮಾಡಲಾದ ಮಧುಮೇಹವನ್ನು ಹೊಂದಿರದ 50 ರಿಂದ 89 ವರ್ಷ ವಯಸ್ಸಿನ 3,335 ವಯಸ್ಕರ ಡೇಟಾವನ್ನು ಅಧ್ಯಯನಕ್ಕಾಗಿ ಬಳಸಲಾಗಿದೆ. ಇದರೊಂದಿಗೆ ಮಧುಮೇಹ ಹೊಂದಿರುವವರ ಡೇಟಾವನ್ನೂ ಅಧ್ಯಯನದಲ್ಲಿ ಹೋಲಿಕೆ ಮಾಡಲಾಗಿದೆ. ವಿವಿಧ ಜನರ ವೈವಾಹಿಕ/ಸಹಬಾಳ್ವೆಯ ಸಂಬಂಧ ಹೇಗಿದೆ? ಸಾಮಾಜಿಕ ಒತ್ತಡ, ಸಾಮಾಜಿಕ ಬೆಂಬಲ ಇತ್ಯಾದಿಗಳನ್ನು ಕಂಡುಕೊಳ್ಳುವ ಪ್ರಶ್ನಾವಳಿಯನ್ನೂ ಇವರಿಗೆ ನೀಡಲಾಗಿತ್ತು.

ಇದರೊಂದಿಗೆ ಅವರ ವಯಸ್ಸು, ಆದಾಯ, ಉದ್ಯೋಗ, ಧೂಮಪಾನ, ದೈಹಿಕ ಚಟುವಟಿಕೆ, ಒತ್ತಡ, ಖಿನ್ನತೆ, ಬಿಎಂಐ, ಇತರೆ ಸಂಬಂಧ, ಮಕ್ಕಳು ಇತ್ಯಾದಿ ಹಲವು ವಿವರಗಳನ್ನು ಸಂವಾದಿಗಳಿಂದ ಪಡೆಯಲಾಗಿತ್ತು. ಇಂತಹ ಹಲವು ವಿಧಾನಗಳ ಮೂಲಕ ಅಧ್ಯಯನ ನಡೆಸಲಾಗಿದೆ. ಅಂತಿಮವಾಗಿ ಮದುವೆ/ಸಹಬಾಳ್ವೆಯು ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಇರಲು ನೆರವಾಗುತ್ತದೆ ಎಂದು ಕಂಡುಕೊಂಡಿದ್ದಾರೆ. ವಿಶೇಷವೆಂದರೆ, ಮದುವೆಯಾದ ಬಳಿಕ ಡಿವೋರ್ಸ್‌ ಆಗಿದ್ದರೂ ಅವರ ರಕ್ತದಲ್ಲಿ ಸಕ್ಕರೆ ಮಟ್ಟವು ಸಹಜ ಸ್ಥಿತಿಯಲ್ಲಿತ್ತು. ಇದೇ ಸಮಯದಲ್ಲಿ ವಿವಾಹ/ಸಹಬಾಳ್ವೆಯಲ್ಲಿ ಇಲ್ಲದೆ ಇರುವವರು ಅಂದರೆ, ಅವಿವಾಹಿತರಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟ ಸರಾಸರಿ ಹೆಚ್ಚಾಗಿರುವುದನ್ನೂ ಈ ಅಧ್ಯಯನ ಕಂಡುಕೊಂಡಿದೆ.