Tibet Earthquake: ಟಿಬೆಟ್‌ನಲ್ಲಿ ತೀವ್ರ ಭೂಕಂಪಕ್ಕೆ 53 ಮಂದಿ ಬಲಿ, ಭಾರತದ ಹಲವು ಭಾಗದಲ್ಲಿ ಕಂಪಿಸಿದ ಭೂಮಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tibet Earthquake: ಟಿಬೆಟ್‌ನಲ್ಲಿ ತೀವ್ರ ಭೂಕಂಪಕ್ಕೆ 53 ಮಂದಿ ಬಲಿ, ಭಾರತದ ಹಲವು ಭಾಗದಲ್ಲಿ ಕಂಪಿಸಿದ ಭೂಮಿ

Tibet Earthquake: ಟಿಬೆಟ್‌ನಲ್ಲಿ ತೀವ್ರ ಭೂಕಂಪಕ್ಕೆ 53 ಮಂದಿ ಬಲಿ, ಭಾರತದ ಹಲವು ಭಾಗದಲ್ಲಿ ಕಂಪಿಸಿದ ಭೂಮಿ

ನೇಪಾಳದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನಲ್ಲಿ ಮಂಗಳವಾರ ತೀವ್ರ ಪ್ರಮಾಣದಲ್ಲಿಯೇ ಭೂಕಂಪ ಸಂಭವಿಸಿ 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚುವ ಆತಂಕವಿದೆ.

ಟಿಬೆಟ್‌ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಮನೆಗಳು ಉರುಳಿ ಬಿದ್ದಿವೆ.
ಟಿಬೆಟ್‌ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಮನೆಗಳು ಉರುಳಿ ಬಿದ್ದಿವೆ.

ದೆಹಲಿ: ಹೊಸ ವರ್ಷ 2025 ಅನ್ನು ಸ್ವಾಗತಿಸುವ ಸಂಭ್ರಮ ಮಾಸುವ ಮುನ್ನವೇ ಟಿಬೆಟ್‌ನಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಹಲವರು ಜೀವ ಕಳೆದುಕೊಂಡಿದ್ದಾರೆ. ನೇಪಾಳದ ಗಡಿ ಬಳಿ ಟಿಬೆಟ್‌ನಲ್ಲಿ ಮಂಗಳವಾರ ಸಂಭವಿಸಿದ 7.1 ತೀವ್ರತೆಯ ಭೂಕಂಪದ ನಂತರ ಕನಿಷ್ಠ53 ಜನರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಧ್ಯಮ ಕ್ಸಿನ್ಹುವಾವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ. ಸದ್ಯದ ಮಾಹಿತಿ ಪ್ರಕಾರ ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದ್ದು, ಹಲವರು ನೆಲೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ತಿಳಿಸಲಾಗಿದೆ. ಭಾರತದ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಆದರೆ ಭಾರತದಲ್ಲಿ ಯಾವುದೇ ಜೀವ ಹಾನಿಯಾದ ವರದಿಯಾಗಿಲ್ಲ. ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕಂಪಶಾಸ್ತ್ರಜ್ಞರು ಮತ್ತು ಸ್ಥಳೀಯ ಅಧಿಕಾರಿಗಳ ಪ್ರಕಾರ, ಪ್ರಬಲ 7.1-ತೀವ್ರ ಭೂಕಂಪವು ದಕ್ಷಿಣ ಚೀನಾದಲ್ಲಿ ಟಿಬೆಟ್‌ನಲ್ಲಿ ಸಂಭವಿಸಿದೆ, ಭೂಕಂಪನದ ಕೇಂದ್ರದ ಬಳಿ ಕಟ್ಟಡಗಳು ಕುಸಿದು ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬಹಳಷ್ಟು ಕಡೆ ಕಟ್ಟಡಗಳು ಕುಸಿದು ಹಲವರು ಅದರಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು,ರಕ್ಷಣಾ ಕಾರ್ಯ ನಡೆದಿದೆ.

ಮಂಗಳವಾರ ಟಿಬೆಟ್ ಸಮಯ 9:05 ಅಥವಾ ನೇಪಾಳ ಕಾಲಮಾನ 6:50 ಕ್ಕೆ ಸಂಭವಿಸಿದ ಭೂಕಂಪವು ಶಿಗಾಟ್ಸೆಯಲ್ಲಿ ಪ್ರಬಲವಾಗಿತ್ತು. ಟಿಬೆಟ್‌ನಿಂದ ನೈಋತ್ಯಕ್ಕೆ 177 ಕಿಲೋಮೀಟರ್ ಅಥವಾ ಕಠ್ಮಂಡುವಿನ ಈಶಾನ್ಯಕ್ಕೆ 201 ಕಿಲೋಮೀಟರ್ ದೂರದಲ್ಲಿರುವ ಗಡಿಯ ಚೀನಾದ ಭಾಗದಲ್ಲಿ ಕೇಂದ್ರೀಕೃತವಾಗಿತ್ತು.

ಭೂಕಂಪವು 7.1 ರ ಪ್ರಾಥಮಿಕ ತೀವ್ರತೆಯನ್ನು ಹೊಂದಿತ್ತು ಮತ್ತು ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಕೆಳಗೆ ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಹೇಳಿದೆ, ಇದು ಅತ್ಯಂತ ತೀವ್ರವಾದ ಭೂಕಂಪವಾಗಿದೆ. ಚೀನಾದ ಭೂಕಂಪದ ಕೇಂದ್ರವು 6.8 ರ ತೀವ್ರತೆಯನ್ನು ಹೊಂದಿದೆ.

ಮಂಗಳವಾರದ ಭೂಕಂಪವು ಟಿಬೆಟ್‌ ಪ್ರದೇಶದಾದ್ಯಂತ ವ್ಯಾಪಕವಾಗಿ ಅನುಭವಕ್ಕೆ ಬಂದಿತು. ಹಲವರು ಸಾಮಾಜಿಕ ಮಾಧ್ಯಮದಲ್ಲಿ ಬಲವಾದ ಕಂಪನದ ಹಲವಾರು ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಟಿಬೆಟ್‌ಗೆ ಹೊಂದಿಕೊಂಡಿರುವ ನೇಪಾಳವು ಭೌಗೋಳಿಕವಾಗಿ ಭೂಕಂಪನ ಸಕ್ರಿಯವಾಗಿರುವ ಪ್ರದೇಶದಲ್ಲಿ ನೆಲೆಸಿದೆ, ಅಲ್ಲಿ ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಯಾಗಿ ಹಿಮಾಲಯವನ್ನು ರೂಪಿಸುತ್ತವೆ. ಈ ಕಾರಣದಿಂದಲೇ ಅಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ. 2015 ರಲ್ಲಿ, ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗ ಸುಮಾರು 9,000 ಜನರು ಸಾವನ್ನಪ್ಪಿದರು.22,000 ಕ್ಕೂ ಹೆಚ್ಚು ಜನರು ಗಾಯಗೊಂಡರು, ಐದು ಲಕ್ಷಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದವು.

ಈಗಲೂ ಟಿಬೆಟ್‌ನಲ್ಲಿ ಸಂಭವಿಸಿರುವ ಭೂಕಂಪವು ಹೆಚ್ಚು ತೀವ್ರತೆಯಿಂದ ಕೂಡಿದೆ. ಯುಎಸ್‌ಜಿಎಸ್‌ನ ಕಂಪ್ಯೂಟರ್ ಮಾದರಿಗಳು ಮಂಗಳವಾರದ ಭೂಕಂಪವನ್ನು ಸುಮಾರು 10 ಕೋಟಿ ಜನರು ಅನುಭವಿಸಿರಬಹುದು ಎಂದು ಅಂದಾಜಿಸಲಾಗಿದೆ, ಇದರಲ್ಲಿ ಭೂಕಂಪನ ತೀವ್ರವಾಗಿದ್ದ ಪ್ರದೇಶದ ಬಳಿ 76,000 ಜನರು ಬಲವಾದ ಮತ್ತು ತೀವ್ರ ಕಂಪನ ಅನುಭವಿಸಿ ತೊಂದರೆಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.

ಬೆಳಿಗ್ಗೆ ಭೂಕಂಪನವಾಗುವ ಅನುಭವ ಆಗುತ್ತಲೇ ಸಹಸ್ರಾರು ಮಂದಿ ಮನೆಯಿಂದ ಹೊರಗೆ ಓಡಿಬರುತ್ತಿರುವ ವಿಡಿಯೋಗಳೂ ವೈರಲ್‌ ಆಗಿವೆ. ಅಲ್ಲದೇ ಹಲವು ಕಡೆಗಳಲ್ಲಿ ಕಟ್ಟಡಗಳಲ್ಲಿ ಆಗುತ್ತಿರುವ ಸಂಚಲನದ ವಿಡಿಯೋ ಕೂಡ ಹಂಚಿಕೆಯಾಗಿವೆ. ಚೀನಾದಿಂದ ಬಾಧಿತವಾಗಿರುವ ಟಿಬೆಟ್‌ ಗೆ ಭಾರತ ಅರ್ಧ ಶತಮಾನದಿಂದಲೂ ಸಹಕಾರ ನೀಡುತ್ತಾ ಬಂದಿದೆ. ಈಗಲೂ ಭೂಕಂಪದಿಂದ ಆಗಿರುವ ನಷ್ಟ ಹಾಗೂ ಅನಾಹುತದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೆರವಿಗೆ ಬರುವ ನಿರೀಕ್ಷೆಯಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.