ಮಹಾರಾಷ್ಟ್ರದ ಸೋಲಾಪುರದ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 8 ಮಂದಿ ಮೃತ್ಯು
ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತರಲ್ಲಿ ಕಾರ್ಖಾನೆಯ ಮಾಲೀಕ ಹಾಜಿ ಉಸ್ಮಾನ್ ಹಸನ್ ಭಾಯ್ ಮನ್ಸೂರಿ ಮತ್ತು ಅವರ ಕುಟುಂಬದ ಮೂವರು ಸದಸ್ಯರು ಕೂಡ ಸೇರಿದ್ದಾರೆ.

ನವದೆಹಲಿ: ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಸೋಲಾಪುರ ಎಂಐಡಿಸಿಯ ಅಕ್ಕಲ್ಕೋಟ್ ರಸ್ತೆಯಲ್ಲಿರುವ ಸೆಂಟ್ರಲ್ ಟೆಕ್ಸ್‌ಟೈಲ್ ಮಿಲ್ಸ್‌ನಲ್ಲಿ ಮುಂಜಾನೆ 3: 45 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ.
ಮೃತರಲ್ಲಿ ಕಾರ್ಖಾನೆ ಮಾಲೀಕ ಹಾಜಿ ಉಸ್ಮಾನ್ ಹಸನ್ ಭಾಯ್ ಮನ್ಸೂರಿ, ಅವರ ಒಂದೂವರೆ ವರ್ಷದ ಮೊಮ್ಮಗ ಸೇರಿದಂತೆ ಕುಟುಂಬದ ಮೂವರು ಸದಸ್ಯರು ಮತ್ತು ನಾಲ್ವರು ಕಾರ್ಮಿಕರು ಸೇರಿದ್ದಾರೆ. ಜತೆಗೆ ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಐದರಿಂದ ಆರು ಗಂಟೆಗಳು ಬೇಕಾಯಿತು. ಸ್ಥಳದಲ್ಲಿ ಅಗ್ನಿಶಾಮಕ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.