Mahakumbh 2025: ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ 15 ಮಂದಿ ಸಾವು; ಕರ್ನಾಟಕದ ಪ್ರತ್ಯಕ್ಷದರ್ಶಿ ಕೊಟ್ಟ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mahakumbh 2025: ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ 15 ಮಂದಿ ಸಾವು; ಕರ್ನಾಟಕದ ಪ್ರತ್ಯಕ್ಷದರ್ಶಿ ಕೊಟ್ಟ ವಿವರ ಇಲ್ಲಿದೆ

Mahakumbh 2025: ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ 15 ಮಂದಿ ಸಾವು; ಕರ್ನಾಟಕದ ಪ್ರತ್ಯಕ್ಷದರ್ಶಿ ಕೊಟ್ಟ ವಿವರ ಇಲ್ಲಿದೆ

ಪ್ರಯಾಗ್​ರಾಜ್​ನಲ್ಲಿ ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಕಾಲ್ತುಳಿತ ಉಂಟಾದ ಹಿನ್ನೆಲೆ 15ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೌನಿ ಅಮವಾಸ್ಯೆ; ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ, ದುರಂತದಲ್ಲಿ 15 ಭಕ್ತರು ಸಾವು, ಹಲವರಿಗೆ ಗಾಯ
ಮೌನಿ ಅಮವಾಸ್ಯೆ; ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ, ದುರಂತದಲ್ಲಿ 15 ಭಕ್ತರು ಸಾವು, ಹಲವರಿಗೆ ಗಾಯ (AFT)

ಉತ್ತರಪ್ರದೇಶ: ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಮಹಾ ಕುಂಭ ಮೇಳದಲ್ಲಿ ಇಂದು ಮುಂಜಾನೆ (ಜನವರಿ 29, ಬುಧವಾರ) ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 15ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನ ಮಾಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಕಾಲ್ತುಳಿತ ಉಂಟಾದ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ಸಂಗಮ್‌ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನು ಮುರಿದು ಪುಣ್ಯ ಸ್ನಾನಕ್ಕೆ ಭಕ್ತರು ನುಗ್ಗಿದ ಪರಿಣಾಮ ಅಪಾರ ಸಾವು-ನೋವುಗಳಿಗೆ ಕಾರಣವಾಗಿದೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ಅಧಿಕಾರಿ ಆಕಾಂಕ್ಷಾ ರಾಣಾ ಅವರು ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಕಾಲ್ತುಳಿತದಲ್ಲಿ ಇಲ್ಲಿಯವರೆಗೆ 15 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

70ಕ್ಕೂ ಹೆಚ್ಚು ಮಂದಿ ಗಾಯ

ಕನಿಷ್ಠ 14 ಮೃತದೇಹಗಳನ್ನು ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜಿಗೆ ತರಲಾಗಿದೆ ಎಂದು ಸ್ಥಳೀಯ ವರದಿಗಳು ಸೂಚಿಸಿವೆ. ಸುಮಾರು 70 ಮಂದಿ ಗಾಯಗೊಂಡಿರುವ ಶಂಕೆ ಇದೆ ಎಂದು ಅವರು ತಿಳಿಸಿದ್ದಾರೆ. ಯುಪಿ ಸರ್ಕಾರವು ಮಹಾಕುಂಭ ಪ್ರದೇಶದಲ್ಲಿ 1,000 ಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರನ್ನು ನಿಯೋಜಿಸಿದೆ. ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಿದೆ. ಇದಲ್ಲದೆ, ಯಾವುದೇ ತುರ್ತು ಪರಿಸ್ಥಿತಿ ನಿಭಾಯಿಸಲು ಮಹಾಕುಂಭ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ತಜ್ಞ ವೈದ್ಯರನ್ನು ಸಹ ನಿಯೋಜಿಸಲಾಗಿದೆ.

ಮಹಾ ಕುಂಭಕ್ಕಾಗಿ 12 ಕಿಮೀ ಉದ್ದದ ನದಿ ದಡದ ಉದ್ದಕ್ಕೂ ರಚಿಸಲಾದ ಸಂಗಮ ಮತ್ತು ಇತರ ಎಲ್ಲಾ ಘಾಟ್‌ಗಳಲ್ಲಿ ಜನಸಂದಣಿಯ ಸಮುದ್ರದ ನಡುವೆ ಬುಧವಾರ ಮುಂಜಾನೆ ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಮಾತನಾಡಿ, ಭಕ್ತರು ಏಕಾಏಕಿ ನುಗ್ಗಿದ್ದು, ಎಲ್ಲರೂ ಕೆಳಗೆ ಬಿದ್ದರು. ಆದರೂ ಭಕ್ತರು ಅವರನ್ನು ತುಳಿದುಕೊಂಡೇ ಪುಣ್ಯ ಸ್ನಾನಕ್ಕೆ ತೆರಳಿದರು ಎಂದು ಹೇಳಿದ್ದಾರೆ.

ಕರ್ನಾಟಕದ ಪ್ರತ್ಯಕ್ಷದರ್ಶಿ ಹೇಳಿದ್ದೇನು?

'ನಾವು ಎರಡು ಬಸ್‌ಗಳಲ್ಲಿ 60 ಜನರ ಬ್ಯಾಚ್‌ನಲ್ಲಿ ಬಂದಿದ್ದೇವೆ. ಗುಂಪಿನ 9 ಮಂದಿ ಒಂದೆಡೆ ಇದ್ದೆವು. ಇದ್ದಕ್ಕಿದ್ದಂತೆ ಜನರು ನುಗ್ಗಿದರು. ನೂಕು-ನುಗ್ಗಲು ಆಯಿತು. ಹೀಗಾಗಿ ನಾವು ಸಿಕ್ಕಿಬಿದ್ದೆವು. ಜನಸಂದಣಿ ಹೆಚ್ಚಾದ ಕಾರಣ ನಿಯಂತ್ರಣ ಸಿಗದೆ ಕೆಳಗೆ ಬಿದ್ದೆವು ಎಂದು ಕರ್ನಾಟಕದ ಸರೋಜಿನಿ ಎಂಬವರು ಆಸ್ಪತ್ರೆಯ ಹೊರಗೆ ಅಳುತ್ತಾ ಹೇಳಿದ್ದಾರೆ. ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಎಲ್ಲಾ ಕಡೆಯಿಂದ ತಳ್ಳಾಟ ಇತ್ತು ಎಂದು ಮಹಿಳೆ ಪಿಟಿಐಗೆ ತಿಳಿಸಿದ್ದಾರೆ.

ಜನವರಿ 28ರ ಮಂಗಳವಾರವೇ ಯಾತ್ರಿಕರ ನಿರೀಕ್ಷಿತ ಒಳಹರಿವಿನ ದೃಷ್ಟಿಯಿಂದ ಕುಂಭ ಮೇಳದ ಅಧಿಕಾರಿಗಳು ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಜನಸಂದಣಿ ನಿರ್ವಹಣಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದರು. ಇದರ ನಡುವೆಯೂ ಭಕ್ತರು, ಮನವಿಯನ್ನು ಬದಿಗೊತ್ತಿ ಬ್ಯಾರಿಕೇಡ್​ಗಳನ್ನು ಮುರಿದು ನುಗ್ಗಿದ್ದಾರೆ. ಹೀಗಾಗಿ ಇದು ದುರಂತಕ್ಕೆ ಕಾರಣವಾಯಿತು.

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮವು ಹಿಂದೂ ಧರ್ಮದಲ್ಲಿ ಅಪಾರ ಆಧ್ಯಾತ್ಮಿಕ ಮಹತ್ವ ಹೊಂದಿದೆ. ಹಿಂದೂಗಳು ವಿಶೇಷವಾಗಿ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಮೌನಿ ಅಮಾವಾಸ್ಯೆಯಂತಹ ಮಂಗಳಕರ ದಿನಾಂಕಗಳಲ್ಲಿ ಅದರ ನೀರಿನಲ್ಲಿ ಸ್ನಾನ ಮಾಡುವುದರಿಂದ ಅವರ ಪಾಪಗಳು ತೊಳೆದು ಹೋಗುತ್ತವೆ ಮತ್ತು ‘ಮೋಕ್ಷ’ ಅಥವಾ ಪುನರ್ಜನ್ಮದ ಚಕ್ರದಿಂದ ವಿಮೋಚನೆ ಪಡೆಯಬಹುದು ಎಂದು ನಂಬುತ್ತಾರೆ. ಹೀಗಾಗಿ ದೇಶ-ವಿದೇಶಗಳಿಂದ ಇಲ್ಲಿಗೆ ಬಂದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.