Meghalaya Govt vs BJP: ಪ್ರಧಾನಿ ಮೋದಿ ಚುನಾವಣಾ ರ್‍ಯಾಲಿಗೆ ಅನುಮತಿ ನಿರಾಕರಿಸಿದ ಮೇಘಾಲಯ ಸರ್ಕಾರ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Meghalaya Govt Vs Bjp: ಪ್ರಧಾನಿ ಮೋದಿ ಚುನಾವಣಾ ರ್‍ಯಾಲಿಗೆ ಅನುಮತಿ ನಿರಾಕರಿಸಿದ ಮೇಘಾಲಯ ಸರ್ಕಾರ!

Meghalaya Govt vs BJP: ಪ್ರಧಾನಿ ಮೋದಿ ಚುನಾವಣಾ ರ್‍ಯಾಲಿಗೆ ಅನುಮತಿ ನಿರಾಕರಿಸಿದ ಮೇಘಾಲಯ ಸರ್ಕಾರ!

ವಿಧಾನಸಭೆ ಚುನಾವಣೆ ನಡೆಯಲಿರುವ ಮೇಘಾಲಯದಲ್ಲಿ ಅಲ್ಲಿನ ಸರ್ಕಾರ ಹಾಗೂ ಬಿಜೆಪಿ ನಡುವೆ ಭಾರಿ ಸಮರ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್‍ಯಾಲಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ (ಫೋಟೋ-ANI)
ಪ್ರಧಾನಿ ನರೇಂದ್ರ ಮೋದಿ (ಫೋಟೋ-ANI)

Meghalaya Govt Denied Permission For Pm Modi Rally: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್‍ಯಾಲಿಗೆ ಅನುಮತಿ ನೀಡಲು ಮೇಘಾಲಯ ಸರ್ಕಾರ ನಿರಾಕರಿಸಿದೆ. ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ತುರಾದಲ್ಲಿರುವ ಪಿಎ ಸಂಗ್ಮಾ ಕ್ರೀಡಾಂಗಣವನ್ನು ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಅಲ್ಲಿನ ಅನುಮತಿ ನಿರಾಕರಿಸಿದೆ.

ಈ ಚುನಾವಣಾ ರ‍್ಯಾಲಿ ಫೆಬ್ರವರಿ 24 ರಂದು ನಡೆಯಬೇಕಿತ್ತು. ಬಿಜೆಪಿ ರ‍್ಯಾಲಿಗೆ ಅನುಮತಿ ಕೋರುವ ಜಾಗದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಮೇಘಾಲಯ ಸರ್ಕಾರ ಅನುಮತಿ ನೀಡದಿರುವುದಕ್ಕೆ ಕಾರಣ ನೀಡಿದೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ತುರಾ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ರ‍್ಯಾಲಿ ಮತ್ತು ಬೃಹತ್ ಸಾರ್ವಜನಿಕ ಸಭೆ ಆಯೋಜಿಸಲು ಬಿಜೆಪಿ ಯೋಜಿಸಿದ್ದರೂ, ಸರ್ಕಾರ ಅನುಮತಿ ನೀಡುತ್ತಿಲ್ಲ.

ಪಿಎ ಸಂಗ್ಮಾ ಸ್ಟೇಡಿಯಂನಲ್ಲಿ ಕೆಲಸ ನಡೆಯುತ್ತಿದೆ ಎಂಬ ಸ್ಪಷ್ಟನೆಯನ್ನು ನೀಡಿ ಮೇಘಾಲಯದ ಕ್ರೀಡಾ ಇಲಾಖೆ ಬಿಜೆಪಿ ನಾಯಕರ ಮನವಿಯನ್ನು ತಿರಸ್ಕರಿಸಿದೆ.

ಪ್ರಧಾನಿ ಮೋದಿಯವರ ರ‍್ಯಾಲಿ ಮತ್ತು ಸಭೆಗೆ ಅನುಮತಿ ನೀಡದ ಮೇಘಾಲಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 16ರಂದು ಮುಖ್ಯಮಂತ್ರಿ ಈ ಕ್ರೀಡಾಂಗಣವನ್ನು ಉದ್ಘಾಟಿಸಿದ್ದರು.

ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮೇಘಾಲಯದ ಜನರೊಂದಿಗೆ ಮಾತನಾಡಲು ಬಯಸಿದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಈಶಾನ್ಯ ರಾಜ್ಯಗಳ ಜಂಟಿ ಉಸ್ತುವಾರಿ ರಿತುರಾಜ್ ಸಿನ್ಹಾ ಅವರು ನಿಗದಿತ ವೇಳಾಪಟ್ಟಿಯಂತೆ ರ‍್ಯಾಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‍್ಯಾಲಿಗೆ ಭಾರಿ ಜನ ಸೇರುವ ಭೀತಿ ಮೇಘಾಲಯ ಸರ್ಕಾರಕ್ಕೆ ಇದೆ ಎಂದು ಸಿನ್ಹಾ ಹೇಳಿದ್ದಾರೆ.

ಮೇಘಾಲಯ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿವೆ. ಫೆಬ್ರವರಿ 27 ರಂದು ಮತದಾನ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸುತ್ತಿವೆ. ಅದರಲ್ಲೂ ಎನ್‌ಸಿಪಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಹೋರಾಟವಿದೆ. ಅದೇ ರೀತಿ ತೃಣಮೂಲ ಕಾಂಗ್ರೆಸ್, ಯುಡಿಪಿ ಮತ್ತಿತರ ಪಕ್ಷಗಳೂ ಅದೃಷ್ಟ ಪರೀಕ್ಷೆ ನಡೆಸಲಿವೆ.

2018ರ ಚುನಾವಣೆಯಲ್ಲಿ ಮೇಘಾಲಯದ ಜನರು ಬಿಜೆಪಿಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ತಿರಸ್ಕರಿಸಿದ್ದರು. ಪಕ್ಷಕ್ಕೆ ಸಿಕ್ಕಿದ್ದು ಕೇವಲ ಎರಡು ಸ್ಥಾನಗಳು. ಈ ಬಾರಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಆ ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾರ್ಚ್ 2 ರಂದು ಹೊರಬೀಳಲಿರುವ ಫಲಿತಾಂಶದ ಬಳಿಕ ಯಾವ ಪಕ್ಷ ಅಧಿಕಾರಿಕ್ಕೆ ಬರುತ್ತದೆ ಎಂಬುದು ತಿಳಿಯಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.