ವಾರಕ್ಕೆ 60 ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ, ಆರ್ಥಿಕ ಸಮೀಕ್ಷೆ ನೀಡಿದೆ ಎಚ್ಚರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಾರಕ್ಕೆ 60 ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ, ಆರ್ಥಿಕ ಸಮೀಕ್ಷೆ ನೀಡಿದೆ ಎಚ್ಚರಿಕೆ

ವಾರಕ್ಕೆ 60 ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ, ಆರ್ಥಿಕ ಸಮೀಕ್ಷೆ ನೀಡಿದೆ ಎಚ್ಚರಿಕೆ

ಕೆಲಸದ ಅವಧಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆ ಹೆಚ್ಚಾಗುತ್ತಿದೆ. ಎಲ್ & ಟಿ ಕಂಪನಿಯ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣ್ಯನ್ ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಆರ್ಥಿಕ ಸಮೀಕ್ಷೆಯ ವರದಿಯೊಂದು ಅಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಈ ವರದಿ ಹೇಳುವುದೇನು ನೋಡಿ.

ವಾರಕ್ಕೆ 60 ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ, ಆರ್ಥಿಕ ಸಮೀಕ್ಷೆ ನೀಡಿದೆ ಎಚ್ಚರಿಕೆ
ವಾರಕ್ಕೆ 60 ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ, ಆರ್ಥಿಕ ಸಮೀಕ್ಷೆ ನೀಡಿದೆ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಅತಿಯಾದ ಒತ್ತಡವು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಇದರೊಂದಿಗೆ ಕೆಲಸದ ಅವಧಿ ಹೆಚ್ಚಿಸುವ ಬಗ್ಗೆಯೂ ಕೆಲವು ಪ್ರಸಿದ್ಧ ಕಂಪನಿಯ ಮುಖ್ಯಸ್ಥರು ಮಾತನಾಡುತ್ತಿದ್ದಾರೆ. ಈ ನಡುವೆ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ವಾರಕ್ಕೆ 60 ಗಂಟೆಗಿಂತ ಹೆಚ್ಚು ಕೆಲಸ ಮಾಡುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಬಹುದು ಎಂದು ಅಧ್ಯಯನಗಳನ್ನು ಹೇಳಿದ್ದನ್ನು ಉಲ್ಲೇಖಿಸಿದೆ.

ಲಾರ್ಸೆನ್ & ಟೂಬ್ರೊ (ಎಲ್ &ಟಿ) ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್ ಎನ್ ಸುಬ್ರಹ್ಮಣ್ಯನ್ ನೌಕರರು ಭಾನುವಾರ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಆ ದಿನವೂ ಸೇರಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಾಗಿ ಕೆಲವು ವಾರಗಳ ಬಳಿಕ ಆರ್ಥಿಕ ಸಮೀಕ್ಷೆಯ ಕೆಲಸದ ಸಮಯದ ಬಗ್ಗೆ ನಿಲುವು ಸ್ಪಷ್ಟಪಡಿಸಿದೆ.

ಎನ್‌&ಟಿ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ್ದ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಆದರೆ ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಅವಧಿಗಿಂತ ಹೆಚ್ಚು ಕೆಲಸ ಮಾಡಿದ್ರೆ ಹೆಂಡತಿ ಮನೆ ಬಿಟ್ಟು ಹೋಗ್ತಾಳೆ ಎಂದು ಟಾಂಗ್ ನೀಡಿದ್ದರು.

ಆರ್ಥಿಕ ಸಮೀಕ್ಷೆ ಹೇಳಿದ್ದೇನು?

ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ಒಬ್ಬ ವ್ಯಕ್ತಿ ದೀರ್ಘಕಾಲ ಡೆಸ್ಕ್‌ ಮುಂದೆ ಕುಳಿತು ಕೆಲಸ ಮಾಡುವುದು ಆತನ ಮಾನಸಿಕ ಯೋಗಕ್ಷೇಮಕ್ಕೆ ಅಪಾಯಕಾರಿ. ದಿನಕ್ಕೆ 12 ಅಥವಾ ಅದಕ್ಕಿಂತ ಹೆಚ್ಚು ಕಾಲ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುವ ವ್ಯಕ್ತಿಯು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾನೆ, ಅವನ ಮಾನಸಿಕ ಯೋಗಕ್ಷೇಮವು ಹದಗೆಡುತ್ತದೆ ಎಂದು ಸಮೀಕ್ಷೆಯನ್ನು ಉಲ್ಲೇಖಿಸಿ ಪಿಟಿಐ ಹೇಳಿದೆ.

‘ಕೆಲಸದಲ್ಲಿ ಕಳೆಯುವ ಸಮಯವನ್ನು ಅನೌಪಚಾರಿಕವಾಗಿ ಉತ್ಪಾದಕತೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಆದರೆ ಹಿಂದಿನ ಅಧ್ಯಯನವು ವಾರಕ್ಕೆ 55-60 ಗಂಟೆಗಳನ್ನು ಮೀರಿದಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ‘ ಎಂದು ಅಧ್ಯಯನಕಾರರು ಹೇಳಿದ್ದಾರೆ.

‘ಅತಿಯಾಗಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಮಾನಸಿಕ ಆರೋಗ್ಯಕ್ಕೆ ಭಾರಿ ಹಾನಿ ಉಂಟು ಮಾಡುತ್ತದೆ. 12 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮೇಜಿನ ಬಳಿ ಕಳೆಯುವ ವ್ಯಕ್ತಿಗಳು ಸಾಕಷ್ಟು ಮಾನಸಿಕ ಸಮಸ್ಯೆಗಳು ಸೇರಿದಂತೆ ದೈಹಿಕ ಸಮಸ್ಯೆಗಳನ್ನೂ ಎದುರಿಸುತ್ತಾರೆ‘ ಎಂಬ ಸೇಪಿಯನ್ ಲ್ಯಾಬ್ಸ್ ಸೆಂಟರ್ ಫಾರ್ ಹ್ಯೂಮನ್ ಬ್ರೈನ್ ಅಂಡ್ ಮೈಂಡ್ ನಡೆಸಿದ ಅಧ್ಯಯನದ ಡೇಟಾವನ್ನು ಉಲ್ಲೇಖಿಸಲಾಗಿದೆ.

‘ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವುದು, ಕೆಲಸದ ಸ್ಥಳದ ಸಂಸ್ಕೃತಿಗಳು ಮತ್ತು ಕುಟುಂಬದವರ ಜೊತೆ ಉತ್ತಮ ಸಮಯ ಕಳೆಯುವುದರ ಜೊತೆ ತಿಂಗಳಲ್ಲಿ ಮೂರ್ನ್ಕಾಲು ದಿನ ರಜೆ ಹಾಕುವುದು ಕೂಡ ಅವಶ್ಯ‘ ಎಂದು ಸಲಹೆ ನೀಡಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ, ಈ ಸಮೀಕ್ಷೆಯು ಜಾಗತಿಕವಾಗಿ, ಖಿನ್ನತೆ ಮತ್ತು ಆತಂಕದ ಕಾರಣದಿಂದಾಗಿ ವಾರ್ಷಿಕವಾಗಿ ಸುಮಾರು 12 ಶತಕೋಟಿ ದಿನಗಳು ಕಳೆದುಹೋಗುತ್ತವೆ ಎಂದು ಹೇಳಿದೆ, ಇದು 1 ಟ್ರಿಲಿಯನ್ USD ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ದಿನಕ್ಕೆ ಸುಮಾರು 7,000ರೂ ನಷ್ಟವಾಗುತ್ತದೆ.

ಮುಖ್ಯ ಆರ್ಥಿಕ ಸಲಹೆಗಾರ, ಡಾ.ವಿ.ಅನಂತ ನಾಗೇಶ್ವರನ್ ಅವರು ಹೇಳುವಂತೆ "ಸಾಮಾನ್ಯವಾಗಿ, ನೌಕರರು ದಿನನಿತ್ಯ ಮತ್ತು ವಾರಕ್ಕೊಮ್ಮೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬಹುದು ಎಂಬುದನ್ನು ನಾವು ನಿರ್ದಿಷ್ಟಪಡಿಸುತ್ತೇವೆ. ಪ್ರತಿಯೊಂದು ದೇಶವೂ ಇಂತಹ ನಿಯಮಗಳನ್ನು ಹೊಂದಿರುತ್ತದೆ. ಆದರೆ ಸಮಸ್ಯೆಯೆಂದರೆ, ಭಾರತದಲ್ಲಿ ವಾರದಿಂದ ವಾರಕ್ಕೆ ನಿಯಮಗಳ, ನಿಬಂಧನೆಗಳು ಬದಲಾಗುತ್ತವೆ. ಆದರೆ ಇತರ ದೇಶಗಳು ಮೂರು ತಿಂಗಳು ಅಥವಾ ಆರು ತಿಂಗಳ ದೀರ್ಘಾವಧಿಯಲ್ಲಿ ಇದನ್ನು ಸಾಧಿಸಲು ಉದ್ಯಮಗಳಿಗೆ ತಾಕೀತು ಮಾಡುತ್ತವೆ‘ ಎಂದು ಅವರು ಹೇಳುತ್ತಾರೆ.

"ನಿಮ್ಮ ಒಟ್ಟಾರೆ ಕೆಲಸದ ಸಮಯವು ಇದನ್ನು ಮೀರಬಾರದು, ಆದರೆ ಒಂದು ನಿರ್ದಿಷ್ಟ ವಾರದಲ್ಲಿ ಬೇಡಿಕೆಯ ಏರಿಕೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಕೆಲಸವಿರಬಹುದು, ಆ ನಮ್ಯತೆ ಕಾಣೆಯಾಗಿದೆ" ಎಂದು ನಾಗೇಶ್ವರನ್ ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.