Delhi Earthquake: ದೆಹಲಿಯಲ್ಲಿ ಮತ್ತೆ ಭೂಕಂಪ: 24 ಗಂಟೆಯೊಳಗೆ 2 ಬಾರಿ ಕಂಪನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Earthquake: ದೆಹಲಿಯಲ್ಲಿ ಮತ್ತೆ ಭೂಕಂಪ: 24 ಗಂಟೆಯೊಳಗೆ 2 ಬಾರಿ ಕಂಪನ

Delhi Earthquake: ದೆಹಲಿಯಲ್ಲಿ ಮತ್ತೆ ಭೂಕಂಪ: 24 ಗಂಟೆಯೊಳಗೆ 2 ಬಾರಿ ಕಂಪನ

ಮಂಗಳವಾರ ರಾತ್ರಿಯಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಮಿ ಕಂಪಿಸಿತ್ತು. 24 ಗಂಟೆಯೊಳಗೆ ಮತ್ತೊಮ್ಮೆ ಲಘು ಭೂಕಂಪನ ಸಂಭವಿಸಿದೆ. ಬುಧವಾರ ಸಂಜೆ 4.42 ರ ಸುಮಾರಿಗೆ ಭೂಕಂಪವಾಗಿದ್ದು, ರಿಕ್ಟರ್​ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್​) ತಿಳಿಸಿದೆ.

ಮಂಗಳವಾರ ರಾತ್ರಿ ನೋಯ್ಡಾದಲ್ಲಿ ಮನೆಗಳಿಂದ ಹೊರ ಓಡಿಬಂದಿದ್ದ ಜನರು
ಮಂಗಳವಾರ ರಾತ್ರಿ ನೋಯ್ಡಾದಲ್ಲಿ ಮನೆಗಳಿಂದ ಹೊರ ಓಡಿಬಂದಿದ್ದ ಜನರು

ನವದೆಹಲಿ: ಮಂಗಳವಾರ ರಾತ್ರಿಯಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಮಿ ಕಂಪಿಸಿತ್ತು. 24 ಗಂಟೆಯೊಳಗೆ ಮತ್ತೊಮ್ಮೆ ಲಘು ಭೂಕಂಪನ ಸಂಭವಿಸಿದೆ. ಬುಧವಾರ ಸಂಜೆ 4.42 ರ ಸುಮಾರಿಗೆ ಭೂಕಂಪವಾಗಿದ್ದು, ರಿಕ್ಟರ್​ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್​) ತಿಳಿಸಿದೆ.

ದೆಹಲಿಯ ಪಶ್ಚಿಮ ಮತ್ತು ವಾಯವ್ಯದ ಮಧ್ಯದ ಪ್ರದೇಶದಿಂದ 17 ಕಿ. ಮೀ ದೂರ ಹಾಗೂ 5 ಕಿಲೋ ಮೀಟರ್​ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎನ್​ಸಿಎಸ್ ಮಾಹಿತಿ ನೀಡಿದೆ. 24 ಗಂಟೆಯೊಳಗೆ ಎರಡು ಬಾರಿ ಭೂಮಿ ಕಂಪಿಸಿದ್ದನ್ನು ಕಂಡು ಜನರು ಭಯಭೀತರಾಗಿದ್ದಾರೆ.

ಇನ್ನು ದೆಹಲಿಯ ಕೆಲವು ಪ್ರದೇಶಗಳಲ್ಲಿ ಗುರುವಾರ ಸಂಜೆ ಅಥವಾ ರಾತ್ರಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದ್ದು,, ಯೆಲ್ಲೋ ಅಲರ್ಟ್​ ನೀಡಿದೆ. ಹಾಗೆಯೇ ಶುಕ್ರವಾರ ಮಳೆ ಜೊತೆ ಜೋರಾಗಿ ಗಾಳಿ ಬೀಸಲಿದೆ ಎಂದು ಅದು ಹೇಳಿದೆ.

ಮಂಗಳವಾರ ಸಂಜೆ ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಅದೇ ದಿನ ರಾತ್ರಿ 10.20ರ ವೇಳೆಗೆ ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿತ್ತು. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದರು.

ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿನ ಪ್ರಬಲ ಭೂಕಂಪದ ನಂತರ ತುರ್ಕಮೆನಿಸ್ತಾನ್, ಭಾರತ, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಮತ್ತು ಕಿರ್ಗಿಸ್ತಾನ್ ದೇಶಗಳಲ್ಲಿ ಭೂಕಂಪದ ಅನುಭವವಾಗಿದೆ. ಭಾರತದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶ, ಉತ್ತರ ಪ್ರದೇಶ. ಪಂಜಾಬ್​, ಹರಿಯಾಣ, ಚಂಡೀಗಢ, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ಕೆಲವೆಡೆ ದಲ್ಲಿ ಭೂಮಿ ಕಂಪಿಸಿದೆ. ದೆಹಲಿಯಲ್ಲಿ 4.4ರ ತೀವ್ರತೆಯಲ್ಲಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.

ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಕಲಾಫ್ಗಾನ್​​ನಿಂದ 90 ಕಿ.ಮೀ ದೂರದಲ್ಲಿತ್ತು. ಪಾಕಿಸ್ತಾನದಲ್ಲಿ 6.8 ತೀವ್ರತೆಯ ಭೂಕಂಪಕ್ಕೆ ಮತ್ತು ಅಫ್ಘಾನಿಸ್ತಾನದಲ್ಲಿ 6.6 ರಷ್ಟು ತೀವ್ರತೆಯ ಭೂಕಂಪಕ್ಕೆ 11 ಮಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ತಿಳಿಸಿದ್ದಾರೆ.

ಟಿವಿ, ಸೋಫಾ, ಕುರ್ಚಿ, ಡೈನಿಂಗ್ ಟೇಬಲ್ , ಫ್ಯಾನ್ ಅಲುಗಾಡುವುದನ್ನು ನೋಡಿರುವುದಾಗಿ ಜನರು ಅನುಭವ ಹಂಚಿಕೊಂಡಿದ್ದಾರೆ. ಶಕರ್‌ಪುರ ಪ್ರದೇಶದಲ್ಲಿ ಕಟ್ಟಡವೊಂದು ವಾಲುತ್ತಿರುವ ಬಗ್ಗೆ ತಮಗೆ ಕರೆ ಬಂದಿತ್ತು. ಆದರೆ ಹಾಗೆನೂ ಆಗಿರಲಿಲ್ಲ, ಕಟ್ಟಡ ವಾಲಿರುವ ಶಂಕೆಯಿಂದ ಅವರು ಕರೆ ಮಾಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ.

ಕಳೆದ ತಿಂಗಳು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ್ದ ಸರಣಿ ಭೀಕರ ಭೂಕಂಪಗಳಿಗೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. 46,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಲಕ್ಷಾಂತರ ಜನರು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದರು, ಸಾವಿರಾರು ಬೃಹತ್​ ಕಟ್ಟಡಗಳು ಧರೆಗುರುಳಿದ್ದವು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.