ಕನ್ನಡ ಸುದ್ದಿ  /  Nation And-world  /  Mobile Phone Inventor Martin Cooper Says Devastated To See People Looking At Phone While Crossing Streets

Martin Cooper: ಮೊಬೈಲ್‌ ಆವಿಷ್ಕರಿಸಿದಾತನ ಮನದಾಳದ ಮಾತುಗಳು..ಮಾರ್ಟಿನ್‌ ಕೂಪರ್‌ ಬೇಸರಕ್ಕೆ ಕಾರಣ ನಾವು, ನೀವು..

"ಸೆಲ್‌ಫೋನ್‌ ಪಿತಾಮಹ" ಎಂದು ಕರೆಯಲ್ಪಡುವ ಅಮೆರಿಕನ್ ಎಂಜಿನಿಯರ್ ಮಾರ್ಟಿನ್ ಕೂಪರ್, ಮೊಬೈಲ್‌ ಬಳಕೆದಾರರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ ಗೀಳು ಜನರನ್ನು ಸಮಾಜದಿಂದ ದೂರವಾಗುವಂತೆ ಮಾಡುತ್ತಿದೆ ಎಂಬುದು ಕೂಪರ್‌ ಅವರ ಅಳಲಾಗಿದೆ. ರಸ್ತೆ ದಾಟುತ್ತಿರುವ ವ್ಯಕ್ತಿ ಮೊಬೈಲ್‌ ಫೋನ್‌ ನೋಡುವುದನ್ನು ಗಮನಿಸಿದಾಗ, ನಾನು ಬೇಸರಗೊಳ್ಳುತ್ತೇನೆ ಎಂದಿದ್ದಾರೆ ಕೂಪರ್.

ಮಾರ್ಟಿನ್‌ ಕೂಪರ್
ಮಾರ್ಟಿನ್‌ ಕೂಪರ್ (AFP)

ವಾಷಿಂಗ್ಟನ್:‌ ಸರಿಸುಮಾರು ಎರಡು ದಶಕಗಳ ಹಿಂದೆ ಮೊಬೈಲ್‌ ಫೋನ್‌ ಹೊಂದಿರುವಾತ ಸಮಾಜದ ಪ್ರತಿಷ್ಠಿತ ವ್ಯಕ್ತಿ ಎಂದೆನಿಸಿಕೊಳ್ಳುತ್ತಿದ್ದ. ಒಂದು ಕಾಲದಲ್ಲಿ ರೇಡಿಯೋ, ಟೆಲಿಫೋನ್‌, ಟಿವಿ ಹೊಂದಿದ್ದ ವ್ಯಕ್ತಿಗೆ ಸಿಗುತ್ತಿದ್ದ ಮರ್ಯಾದೆಯೇ, ಮೊಬೈಲ್‌ ಫೋನ್‌ ಹೊಂದಿರುವ ವ್ಯಕ್ತಿಗೂ ಸಿಗುತ್ತಿತ್ತು.

ಆದರೆ ಕಾಲಕಳೆದಂತೆ ಹೇಗೆ ರೇಡಿಯೋ, ಟೆಲಿಫೋನ್‌ ಮತ್ತು ಟಿವಿ ಸಾಮಾನ್ಯರಲ್ಲಿ ಸಾಮಾನ್ಯರನ್ನೂ ತಲುಪಿತೋ, ಹಾಗೆಯೇ ಮೊಬೈಲ್‌ ಫೋನ್‌ ಕೂಡ ಸಮಾಜದ ಎಲ್ಲ ವರ್ಗದ ಜನರನ್ನು ಇಂದು ತಲುಪಿದೆ. ಇದೇ ಕಾರಣಕ್ಕೆ ಮೊಬೈಲ್‌ ಫೋನ್‌ ಹೊಂದಿರುವುದು ಇದೀಗ ಸಾಮಾನ್ಯ ಸಂಗತಿ. ಈಗೆನಿದ್ದರೂ ವ್ಯಕ್ತಿಯೊಬ್ಬ ಹೊಂದಿರುವ ಸ್ಮಾರ್ಟ್‌ಫೋನ್‌ ಬೆಲೆ ಮೇಲೆ, ಆತನ ಗೌರವವನ್ನು ಅಳೆಯಲಾಗುತ್ತದೆ.

ಅದಿರಲಿ, ಮೊಬೈಲ್‌ ಫೋನ್‌ಗಳೆಂದರೆ ಆಟಿಕೆ ವಸ್ತುಗಳಂತಾಗಿರುವ ಈ ಜಮಾನಾದಲ್ಲಿ, ಮೊಬೈಲ್‌ ಫೋನ್‌ ಆವಿಷ್ಕರಿಸಿದ ವ್ಯಕ್ತಿ ಏನು ಹೇಳುತ್ತಾರೆ ಎಂದು ಕೇಳಿದರೆ ನಿಜಕ್ಕೂ ನೀವೆಲ್ಲರೂ ಆಶ್ವರ್ಯಚಕಿತರಾಗುತ್ತೀರಿ.

"ಸೆಲ್‌ಫೋನ್‌ ಪಿತಾಮಹ" ಎಂದು ಕರೆಯಲ್ಪಡುವ ಅಮೆರಿಕನ್ ಎಂಜಿನಿಯರ್ ಮಾರ್ಟಿನ್ ಕೂಪರ್, ಮೊಬೈಲ್‌ ಬಳಕೆದಾರರ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ ಗೀಳು ಜನರನ್ನು ಸಮಾಜದಿಂದ ದೂರವಾಗುವಂತೆ ಮಾಡುತ್ತಿದೆ ಎಂಬುದು ಮಾರ್ಟಿನ್‌ ಕೂಪರ್‌ ಅವರ ಅಳಲಾಗಿದೆ.

"ರಸ್ತೆ ದಾಟುತ್ತಿರುವ ವ್ಯಕ್ತಿ ರಸ್ತೆ ಮೇಲೆ ಗಮನಹರಿಸದೇ ತನ್ನ ಮೊಬೈಲ್‌ ಫೋನ್‌ ನೋಡುತ್ತಿರುವುದನ್ನು ಗಮನಿಸಿದಾಗ, ನಾನು ನಿಜಕ್ಕೂ ಬೇಸರಗೊಳ್ಳುತ್ತೇನೆ. ನನ್ನ ಆವಿಷ್ಕಾರವೊಂದು ಜನರ ಸಾಮಾನ್ಯ ಜ್ಞಾನವನ್ನೇ ಕಿತ್ತುಕೊಳ್ಳುತ್ತಿದೆ ಎಂದು ನನಗೆ ಭಾಸವಾಗುತ್ತದೆ.." ಎಂದು 94 ವರ್ಷದ ಕ್ಯಾಲಿಫೋರ್ನಿಯಾದ ಡೆಲ್ ಮರ್‌ ನಿವಾಸಿ ಮಾರ್ಟಿನ್‌ ಕೂಪರ್‌ ಖೇದ ವ್ಯಕ್ತಪಡಿಸುತ್ತಾರೆ..

"ಜನ ಈಗ ರಸ್ತೆಯಲ್ಲಿ ನಡೆದಾಡುವಾಗ, ಕಾರು ಮತ್ತು ಇತರೆ ವಾಹನ ಚಲಾಯಿಸುತ್ತಿರುವಾಗ, ತಮ್ಮವರೊಡನೆ ಇದ್ದಾಗ, ಹೀಗೆ ಎಲ್ಲ ಸಮಯದಲ್ಲೂ ಮೊಬೈಲ್‌ ಬಳಸುತ್ತಿದ್ದಾರೆ. ಜನರು ಸಾಮಾಜಿಕವಾಗಿ ಬೆರೆಯುವುದನ್ನು ಮರೆತಿದ್ದಾರೆ. ತಮ್ಮವರೊಂದಿಗೆ ಕೂಡಿ ಕಾಲ ಕಳೆಯುವ ಜೀವನ ಪ್ರೀತಿ ಈ ಪೀಳಿಗೆಯ ಜನರಲ್ಲಿ ಕಂಡುಬರುತ್ತಿಲ್ಲ.." ಎಂದು ಮಾರ್ಟಿನ್‌ ಕೂಪರ್‌ ಹೇಳುತ್ತಾರೆ.

"ಮೊಬೈಲ್‌ ನಿಜಕ್ಕೂ ಒಂದು ಅದ್ಭುತ ಆವಿಷ್ಕಾರ, ಜನರ ಸಂವಹನ ವ್ಯವಸ್ಥೆಯನ್ನೇ ಬದಲಿಸಿದ ಈ ಆವಿಷ್ಕಾರ, ಜನರನ್ನು ಸಮಾಜದಿಂದ ದೂರ ಮಾಡಬಾರದು ಎಂಬುದು ನನ್ನ ಒತ್ತಾಸೆ.." ಈ ನಿಟ್ಟಿನಲ್ಲಿ ಸಮಾಜ ನಿಜಕ್ಕೂ ಚಿಂತನೆ ಮಾಡುವ ಕಾಲ ಬಂದಿದೆ ಎಂದು ಹಿರಿಯರಾದ ಮಾರ್ಟಿನ್‌ ಕೂಪರ್‌ ಸಲಹೆ ನೀಡುತ್ತಾರೆ.

ಮಾರ್ಟಿನ್‌ ಕೂಪರ್ ಆ್ಯಪಲ್‌ ಸ್ಮಾರ್ಟ್‌ವಾಚ್‌ನ್ನು ಬಳಸುತ್ತಾರೆ. ಅಲ್ಲದೇ ಉನ್ನತ-ಮಟ್ಟದ ಐಫೋನ್ ಅವರ ಬಳಿ ಇದೆ. ಆದರೆ ಸುಧಾರಿತ ತಂತ್ರಜ್ಞಾನದ ಪೂರ್ಣ ತಿಳುವಳಿಕೆ ತಮಗಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಆದರೆ ಆಧುನಿಕ ಯುಗದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿದುಕೊಳ್ಳಲು ನನಗೆ ತುಂಬ ಕುತೂಹಲವಿದೆ ಎನ್ನುತ್ತಾರೆ 94 ವರ್ಷದ ಮಾರ್ಟಿನ್‌ ಕೂಪರ್.

ಮೊಟೊರೊಲಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಾರ್ಟಿನ್‌ ಕೂಪರ್. ಏಪ್ರಿಲ್ 3, 1973ರಂದು ಮೊಟ್ಟಮೊದಲ ಮೊಬೈಲ್ ಫೋನ್ ಕರೆ‌ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಮೊಬೈಲ್‌ ಫೋನ್‌ ಆವಿಷ್ಕಾರಕ್ಕಾಗಿ 1972ರಲ್ಲಿ ಆರಂಭವಾದ ಅವರ ಪ್ರಯತ್ನವು, DynaTAC- ಡೈನಾಮಿಕ್ ಅಡಾಪ್ಟಿವ್ ಟೋಟಲ್ ಏರಿಯಾ ಕವರೇಜ್ ಫೋನ್ ಆವಿಷ್ಕಾರದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು.

ಮಾರ್ಟಿನ್‌ ಕೂಪರ್‌ ಆವಿಷ್ಕರಿಸಿ ಈ ಮೊಟ್ಟ ಮೊದಲ ಮೊಬೈಲ್‌ ಫೋನ್‌ ಬರೋಬ್ಬರಿ ಒಂದು ಕಿಲೋಗಿಂತ ಹೆಚ್ಚು ತೂಕವಿತ್ತು. ಸುಮಾರು 25 ನಿಮಿಷಗಳ ಮಾತನಾಡುವ ಬ್ಯಾಟರಿ ಅವಧಿಯನ್ನು ಹೊಂದಿದ್ದ ಈ ಫೋನ್‌, ಆ ಕಾಲದ ಅತ್ಯಂತ ಕ್ರಾಂತಿಕಾರಿ ಆವಿಷ್ಯಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

"ಈ ಜಗತ್ತಿನ ಪ್ರತಿ ವ್ಯಕ್ತಿ ಬಳಿ ಒಂದು ದಿನ ಸೆಲ್‌ಫೋನ್ ಇರಬೇಕು ಎಂದು ನಾವು ಕನಸು ಕಂಡಿದ್ದೇವು. ಈಗಿನ ವಾಸ್ತವ ಸ್ಥಿತಿಯನ್ನು ನೋಡಿದರೆ ನಮ್ಮ ಆ ಕನಸು ಈಡೇರಿದೆ ಎಂಬ ತೃಪ್ತಿ ಸಿಗುತ್ತದೆ. ಆದರೆ ಜನರು ಮೊಬೈಲ್‌ ಬಳಕೆಯ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಿದೆ. ನಮ್ಮ ಆವಿಷ್ಕಾರ ಮಾನವ ಕುಲದ ಏಳಿಗೆಗೆ ಮೀಸಲು ಎಂಬುದನ್ನು ಸಾಬೀತುಪಡಿಸುವುದು ಭವಿಷ್ಯದ ಪೀಳಿಗೆಯ ಜವಾಬ್ದಾರಿ.." ಎಂದು ಮಾರ್ಮಿಕವಾಗಿ ಹೇಳುತ್ತಾರೆ ಮಾರ್ಟಿನ್‌ ಕೂಪರ್.

ವಿಭಾಗ