ಕನ್ನಡ ಸುದ್ದಿ  /  Nation And-world  /  Morbi Bridge Collapse: Chargesheet Filed, Oreva Md Jaysukh Patel Named As Accused

Morbi bridge collapse: ಮೊರ್ಬಿ ಸೇತುವೆ ಕುಸಿತ ಪ್ರಕರಣ: ಚಾರ್ಜ್​ಶೀಟ್​ ಸಲ್ಲಿಕೆ.. ಒರೆವಾ ಗ್ರೂಪ್​ ಎಂಡಿ ಆರೋಪಿ

141 ಮಂದಿಯನ್ನು ಬಲಿ ಪಡೆದ 2022ರ ಮೊರ್ಬಿ ಸೇತುವೆ ಕುಸಿತ ಪ್ರಕರಣ ಸಂಬಂಧ ಪೊಲೀಸರು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ 1,262 ಪುಟಗಳ ಆರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ಒರೆವಾ ಗ್ರೂಪ್​​ನ ಎಂಡಿ ಜಯಸುಖ್ ಪಟೇಲ್ ಅವರನ್ನು ಆರೋಪಪಟ್ಟಿಯಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಮೊರ್ಬಿ ಸೇತುವೆ ಕುಸಿತ
ಮೊರ್ಬಿ ಸೇತುವೆ ಕುಸಿತ

ಮೊರ್ಬಿ (ಗುಜರಾತ್​): 141 ಮಂದಿಯನ್ನು ಬಲಿ ಪಡೆದ 2022ರ ಮೊರ್ಬಿ ಸೇತುವೆ ಕುಸಿತ ಪ್ರಕರಣ ಸಂಬಂಧ ಪೊಲೀಸರು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ 1,262 ಪುಟಗಳ ಆರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ಒರೆವಾ ಗ್ರೂಪ್​​ನ ಎಂಡಿ ಜಯಸುಖ್ ಪಟೇಲ್ ಅವರನ್ನು ಆರೋಪಪಟ್ಟಿಯಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಮೊರ್ಬಿ ಸೇತುವೆ ಕುಸಿತ ಪ್ರಕರಣ ಸಂಬಂಧಿಸಿದಂತೆ ಒರೆವಾ ಗ್ರೂಪ್​​ನ ಜಯಸುಖ್ ಪಟೇಲ್ ಅವರನ್ನು ಬಂಧಿಸಲು ಜನವರಿ 24 ರಂದು ಗುಜರಾತ್ ನ್ಯಾಯಾಲಯವು ಅರೆಸ್ಟ್ ವಾರಂಟ್ ಹೊರಡಿಸಿತ್ತು. ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ (ಒರೆವಾ ಗ್ರೂಪ್) ಮೊರ್ಬಿಯಲ್ಲಿನ ಮಚ್ಚು ನದಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯನ್ನು ನವೀಕರಿಸುವ, ದುರಸ್ತಿ ಮಾಡುವ ಮತ್ತು ನಿರ್ವಹಿಸುವ ಗುತ್ತಿಗೆಯನ್ನು ಪಡೆದುಕೊಂಡಿತ್ತು.

ಮೊರ್ಬಿಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂಜೆ ಖಾನ್ ಅವರು ಜಯಸುಖ್ ಪಟೇಲ್ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 70 ರ ಅಡಿಯಲ್ಲಿ ಅರೆಸ್ಟ್ ವಾರಂಟ್ ಹೊರಡಿಸಿದ್ದರು. "ಇನ್ನೂ ಲುಕ್‌ಔಟ್ ನೋಟಿಸ್ ಜಾರಿ ಮಾಡಿಲ್ಲ" ಎಂದು ಸರ್ಕಾರಿ ವಕೀಲ ಸಂಜಯ್ ವೋರಾ ನಿನ್ನೆ ಎಎನ್‌ಐಗೆ ತಿಳಿಸಿದ್ದರು.

ಜಯಸುಖ್ ಪಟೇಲ್ ನಿರೀಕ್ಷಣಾ ಜಾಮೀನಿಗಾಗಿ ಜನವರಿ 20 ರಂದು ಮೊರ್ಬಿ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿದ್ದರು, ಆದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಾಗದ ಕಾರಣ ವಿಚಾರಣೆಯನ್ನು ಫೆಬ್ರವರಿ 1ಕ್ಕೆ ಮುಂದೂಡಲಾಗಿತ್ತು. ಇದೀಗ ಪ್ರಕರಣದ ತನಿಖಾಧಿಕಾರಿಯಾಗಿರುವ ಉಪ ಪೊಲೀಸ್​ ವರಿಷ್ಠಾಧಿಕಾರಿ ಪಿ ಎಸ್ ಝಲಾ ಅವರು ಮೊರ್ಬಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಈಗಾಗಲೇ ಒರೆವಾ ಗ್ರೂಪ್​ನ ನಾಲ್ವರು ಸಿಬ್ಬಂದಿ ಸೇರಿ 9 ಆರೋಪಿಗಳು ಜೈಲಿನಲ್ಲಿದ್ದು, ಇದೀಗ ಜಯಸುಖ್ ಪಟೇಲ್ ಅವರನ್ನು 10ನೇ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಏನಿದು ಘಟನೆ?

ಅಕ್ಟೋಬರ್ 30 ರಂದು ಗುಜರಾತ್​ನ ಮೊರ್ಬಿ ಸೇತುವೆ ಕುಸಿದು 45 ಮಕ್ಕಳು ಸೇರಿದಂತೆ 141 ಮಂದಿ ಬಲಿಯಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇಷ್ಟೊಂದು ಜನರನ್ನು ಬಲಿ ಪಡೆದ ಮೊರ್ಬಿ ತೂಗು ಸೇತುವೆಗೆ ಸುರಕ್ಷತಾ ಪ್ರಮಾಣ ಪತ್ರವೇ ಇರಲಿಲ್ಲ. ಅಲ್ಲದೇ ನಿಗದಿತ ಅವಧಿಗೂ ಮೊದಲೇ ತೂಗು ಸೇತುವೆಯನ್ನು ಪುನಃ ಸಾರ್ವಜನಿಕ ಬಳಕೆಗೆ ತೆರೆಯಲಾಗಿತ್ತು.

ಮೊರ್ಬಿ ಸ್ಥಳೀಯ ಆಡಳಿತ ನೀಡಿರುವ ಮಾಹಿತಿ ಪ್ರಕಾರ, ದುರಸ್ತಿ ಕಾರ್ಯಕ್ಕಾಗಿ ಏಳು ತಿಂಗಳಿಂದ ಮುಚ್ಚಲ್ಪಟ್ಟಿದ್ದ ತೂಗು ಸೇತುವೆಯನ್ನು ಘಟನೆ ನಡೆಯು ನಾಲ್ಕು ದಿನಗಳ ಹಿಂದಷ್ಟೇ (ಅ.26 ರಂದು) ಸಾರ್ವಜನಿಕರ ಬಳಕೆಗೆ ಪುನಃ ತೆರೆಯಲಾಗಿತ್ತು. 143 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಈ ತೂಗು ಸೇತುವೆಯ ಸುರಕ್ಷತಾ ಪ್ರಮಾಣ ಪತ್ರವನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಅಷ್ಟರಲ್ಲೇ ಇದರ ಪುನಃ ಬಳಕೆಗೆ ಅವಕಾಶ ನೀಡಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.

ಸೇತುವೆ ಕುಸಿತದ ಘಟನೆಯ ತನಿಖೆಗೆ ಗುಜರಾತ್ ಸರ್ಕಾರ ಐದು ಸದಸ್ಯರ ಸಮಿತಿಯನ್ನು ರಚಿಸಿತ್ತು. ಅಲ್ಲದೇ ಘಟನೆಯ ಗಂಭೀರತೆಯನ್ನು ನೋಡಿ ಗುಜರಾತ್ ಹೈಕೋರ್ಟ್ ನವೆಂಬರ್ 7 ರಂದು ಸುಮೋಟೋ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ರಾಜ್ಯದ ಎಲ್ಲಾ ಸೇತುವೆಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿತ್ತು. ಎಲ್ಲಾ ಸೇತುವೆಗಳ ಸಮೀಕ್ಷೆ ನಡೆಸಿ ಮತ್ತು ಅವು ಸರಿಯಾದ ಸ್ಥಿತಿಯಲ್ಲಿ ಇವೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಿತ್ತು. ಸಂತ್ರಸ್ತರ ಕುಟುಂಬಗಳಿಗೆ ನೀಡುವ ಪರಿಹಾರವು ಸೂಕ್ತವಾಗಿರಬೇಕು ಎಂದೂ ನ್ಯಾಯಾಲಯ ಹೇಳಿದೆ.

IPL_Entry_Point

ವಿಭಾಗ