ಆಪರೇಷನ್ ಸಿಂದೂರ ಟ್ರೇಡ್‌ಮಾರ್ಕ್ ಅರ್ಜಿ ಹಿಂತೆಗೆದುಕೊಂಡ ರಿಲಯೆನ್ಸ್ ಇಂಡಸ್ಟ್ರೀಸ್, ಹೀಗಿದೆ ನೋಡಿ ಕಂಪನಿಯ ಸ್ಪಷ್ಟನೆ
ಭಾರತದ ಸೇನೆಯು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ ಕೈಗೊಂಡ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ ಎಂದು ಹೆಸರಿಟ್ಟಿದೆ. ಈ ಹೆಸರಿನ ಟ್ರೇಡ್‌ಮಾರ್ಕ್‌ಗಾಗಿ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ರಿಲಯೆನ್ಸ್ ಇಂಡಸ್ಟ್ರೀಸ್ ಕೂಡ ಸೇರಿತ್ತು. ಇದೀಗ ರಿಲಯೆನ್ಸ್ ತನ್ನ ಅರ್ಜಿ ಹಿಂತೆಗೆದುಕೊಂಡಿದೆ.

ಭಾರತದ ಸೇನೆಯು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ ಕೈಗೊಂಡ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ ಎಂದು ಹೆಸರಿಟ್ಟಿದೆ. ಈ ಹೆಸರಿನ ಟ್ರೇಡ್‌ಮಾರ್ಕ್‌ಗಾಗಿ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ರಿಲಯೆನ್ಸ್ ಇಂಡಸ್ಟ್ರೀಸ್ ಕೂಡ ಸೇರಿತ್ತು. ಇದೀಗ ರಿಲಯೆನ್ಸ್ ತನ್ನ ಅರ್ಜಿ ಹಿಂತೆಗೆದುಕೊಂಡಿದೆ. ಟ್ರೇಡ್ ಮಾರ್ಕ್ ನೋಂದಣಿ ವಿಚಾರವಾಗಿ ದೇಶದ ಪ್ರತಿಷ್ಠಿತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ಪ್ರಕಟಣೆಯೊಂದನ್ನು ಗುರುವಾರ ನೀಡಿದೆ. ಭಾರತೀಯರ ಶೌರ್ಯದ ಸಂಕೇತವಾಗಿ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿ ಇರುವ “ಆಪರೇಷನ್ ಸಿಂದೂರ್” ಅನ್ನು ಟ್ರೇಡ್‌ಮಾರ್ಕ್ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಕಂಪನಿ ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಘಟಕವಾದ ಜಿಯೋ ಸ್ಟುಡಿಯೋಸ್ ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದ್ದು, ಇದನ್ನು ಕಂಪನಿಯ ಕಿರಿಯ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರು ಅನುಮತಿಯಿಲ್ಲದೆ, ಅಜಾಗರೂಕತೆಯಿಂದ ಟ್ರೇಡ್ ಮಾರ್ಕ್‌ಗೆ ಅರ್ಜಿ ಸಲ್ಲಿಸಿದ್ದರು.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ್ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಎಲ್ಲ ಪಾಲುದಾರರು ಬಹಳ ಹೆಮ್ಮೆಪಡುತ್ತಾರೆ. ಭಯೋತ್ಪಾದನೆಯ ಹೀನಕೃತ್ಯದ ವಿರುದ್ಧ ಭಾರತದ ರಾಜೀ ಆಗದ ಹೋರಾಟದಲ್ಲಿ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಹೆಮ್ಮೆಯ ಸಾಧನೆ ಆಪರೇಷನ್ ಸಿಂಧೂರ್ ಆಗಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ಸಮೂಹವು ನಮ್ಮ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. 'ಭಾರತ ಮೊದಲು' ಎಂಬ ಧ್ಯೇಯವಾಕ್ಯಕ್ಕೆ ನಮ್ಮ ಬದ್ಧತೆ ಅಚಲವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಟ್ರೇಡ್ ಮಾರ್ಕ್‌ಗಾಗಿ 4 ಅರ್ಜಿ
ಪಾಕಿಸ್ತಾನದ ಮೇಲೆ ಭಾರತದ ಮಿಲಿಟರಿ ದಾಳಿಗೆ ಆಪರೇಷನ್ ಸಿಂದೂರ ಎಂದು ಹೆಸರಿಡಲಾಗಿತ್ತು. ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್‌ಮಾರ್ಕ್ ಕಚೇರಿಗೆ ಈ ಹೆಸರಿನ ಟ್ರೇಡ್‌ಮಾರ್ಕ್‌ಗಾಗಿ ಒಟ್ಟು ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದವು. ಶಿಕ್ಷಣ ಮತ್ತು ತರಬೇತಿ ಸೇವೆಗಳು, ಚಲನಚಿತ್ರ ಮತ್ತು ಮಾಧ್ಯಮ ನಿರ್ಮಾಣ, ನೇರ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳು, ಡಿಜಿಟಲ್ ವಿಷಯ ವಿತರಣೆ ಮತ್ತು ಪ್ರಕಟಣೆ ಮತ್ತು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುವ ನೈಸ್ ವರ್ಗೀಕರಣದ 41ನೇ ತರಗತಿಯ ವಿಭಾಗದಲ್ಲಿ ಟ್ರೇಡ್ ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಭವಿಷ್ಯದಲ್ಲಿ ಆಪರೇಷನ್ ಸಿಂದೂರ ಹೆಸರಿನ ಒಟಿಟಿ ಸಿನಿಮಾ, ವೆಬ್‌ಸರಣಿ, ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಉದ್ದೇಶದಿಂದ ಟ್ರೇಡ್ ಮಾರ್ಕ್‌ಗೆ ಅರ್ಜಿ ಸಲ್ಲಿಸಿರಬಹುದು. ಈಗ ರಿಲಯೆನ್ಸ್ ಕಂಪನಿಯು ಜಿಯೋಹಾಟ್‌ಸ್ಟಾರ್‌ನಲ್ಲಿ ಪಾಲು ಹೊಂದಿದೆ.
ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್ ಮಾರ್ಕ್‌ಗಳ ನಿಯಂತ್ರಕ ಜನರಲ್‌ಗೆ ಮೊದಲು ರಿಲಯೆನ್ಸ್ ಅರ್ಜಿ ಸಲ್ಲಿಸಿತ್ತು. ಮನರಂಜನೆ, ಪ್ರಕಟಣೆ ಮತ್ತು ಭಾಷಾ ತರಬೇತಿಗಾಗಿ "ಆಪರೇಷನ್ ಸಿಂದೂರ" ಹೆಸರಿನ ಟ್ರೇಡ್ ಮಾರ್ಕ್‌ಗಾಗಿ ರಿಲಯನ್ಸ್ ಅರ್ಜಿಯನ್ನು ಸಲ್ಲಿಸಿತ್ತು. ಇದಾದ ಬಳಿಕ ಮುಂಬೈ ನಿವಾಸಿಯೊಬ್ಬರು ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದರು. ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ದೆಹಲಿ ಮೂಲದ ವಕೀಲರು ಕೂಡ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದರು.