Penny Stock; ಶೇಕಡ 10 ಏರಿಕೆ ದಾಖಲಿಸಿದ 81 ಪೈಸೆ ಷೇರು ಖರೀದಿಸಲು ಮುಗಿಬಿದ್ದ ಹೂಡಿಕೆದಾರರು, ಜಿವಿ ಫಿಲಮ್ಸ್ ಷೇರು ಮೌಲ್ಯ ಏರಲು 5 ಕಾರಣ
Multibagger stock: ಭಾರತದ ಷೇರುಪೇಟೆ ಸೂಚ್ಯಂಕಗಳು ಗುರುವಾರ ದಾಖಲೆ ಬರೆದು ಹೊಸ ಮೈಲಿಗಲ್ಲು ಸ್ಥಾಪಿಸಿದವು. ಈ ನಡುವೆ, ಮಲ್ಟಿಬ್ಯಾಗರ್ ಹೂಡಿಕೆದಾರರ ಗಮನ ಜಿವಿ ಫಿಲಮ್ಸ್ ಲಿಮಿಟೆಡ್ ಷೇರುಗಳ ಮೇಲಿತ್ತು. ಇದಕ್ಕೆ ಕಾರಣ ಆ ಕಂಪನಿ ಮಾಡಿಕೊಂಡ ಒಪ್ಪಂದ ಮತ್ತು ಆ ನಂತರದ ವಿದ್ಯಮಾನ. 81 ಪೈಸೆಯ ಷೇರು ಖರೀದಿ ಭರಾಟೆ ಜೋರಾಗಿತ್ತು. ಇದಕ್ಕೆ 5 ಕಾರಣ.
ಮುಂಬಯಿ: ಭಾರತೀಯ ಷೇರುಪೇಟೆಯ ಸೂಚ್ಯಂಕಗಳಾದ ನಿಫ್ಟಿ50 ಮತ್ತು ಸೆನ್ಸೆಕ್ಸ್‌ಗಳು ಹೊಸದೊಂದು ದಾಖಲೆ ಬರೆದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿವೆ. ಈ ಐತಿಹಾಸಿಕ ದಾಖಲೆಯ ವಾತಾವರಣದ ನಡುವೆ ಹೂಡಿಕೆದಾರರು ಜಿವಿ ಫಿಲಮ್ಸ್ ಲಿಮಿಟೆಡ್‌ನ ಷೇರು (GV Films Ltd share) ಗಳಿಗೆ ಮುಗಿಬಿದ್ದರು. ಹಾಗೆ ಮಲ್ಟಿಬ್ಯಾಗರ್ ಷೇರುಗಳ ಮೇಲಿನ ಹೂಡಿಕೆದಾರರ ಗಮನ ಜಿವಿ ಫಿಲಮ್ಸ್ ಷೇರುಗಳ ಕಡೆಗೆ ಹರಿದಿರುವುದು ಕಂಡುಬಂತು.
ಹೀಗಾಗಿ, ಚಲನಚಿತ್ರ ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದ ಜಿವಿ ಫಿಲ್ಮ್ಸ್ ಲಿಮಿಟೆಡ್ ಕಂಪನಿಯ ಷೇರು ಮೌಲ್ಯ ಗುರುವಾರ (ಆಗಸ್ಟ್ 1) ಮೇಲ್ಮುಖವಾಗಿ ಮುನ್ನುಗ್ಗಿ ಶೇಕಡ 10 ಏರಿಕೆ ದಾಖಲಿಸಿತು.
81 ಪೈಸೆಯ ಜಿವಿ ಫಿಲಮ್ಸ್ ಲಿಮಿಟೆಡ್‌ನ ಷೇರು ಖರೀದಿಗೆ ಹೂಡಿಕೆದಾರರು ಮುಗಿಬೀಳಲು 5 ಕಾರಣ
1) ಜಿವಿ ಫಿಲ್ಮ್ಸ್ ಲಿಮಿಟೆಡ್ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ಕಂಪನಿಯು ಓಂಕಾರ್ ಫಿಲ್ಮ್ಸ್ ಮತ್ತು ರಾಜ್ ಟೆಲಿವಿಷನ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಜುಲೈ 31 ರಂದು ಹೇಳಿತ್ತು.
2) ಈ ಕಾರಣಕ್ಕೆ ಆಗಸ್ಟ್ 1 ರಂದು 81 ಪೈಸೆಯ ಜಿವಿ ಫಿಲಮ್ಸ್ ಲಿಮಿಟೆಡ್‌ನ ಷೇರು ಮೌಲ್ಯ 89 ಪೈಸೆಗೆ ಏರಿತು. ಶೇಕಡ 10 ಏರಿಕೆ ದಾಖಲಿಸಿ ಉತ್ತಮ ಲಾಭಾಂಶವನ್ನು ಪೆನ್ನಿ ಷೇರುಗಳ ಹೂಡಿಕೆದಾರರಿಗೆ ಒದಗಿಸಿತು.
3) ಈ ವರ್ಷ ಫೆಬ್ರವರಿಯಲ್ಲಿ ಜಿವಿ ಫಿಲಮ್ಸ್ ಲಿಮಿಟೆಡ್‌ನ ಷೇರು ಮೌಲ್ಯ 52 ವಾರಗಳ ಗರಿಷ್ಠ ಮಟ್ಟಕ್ಕೆ ಅಂದರೆ 1.20 ರೂಪಾಯಿಗೆ ಹೋಗಿತ್ತು. 52 ವಾರಗಳ ಕನಿಷ್ಠ ಮಟ್ಟ ಎಂದರೆ 40 ಪೈಸೆ.
4) ಕಂಪನಿಯ ಷೇರುದಾರರ ಮಾದರಿಯ ಬಗ್ಗೆ ಮಾತನಾಡುವುದಾದರೆ, 100 ಪ್ರತಿಶತದಷ್ಟು ಪಾಲನ್ನು ಸಾರ್ವಜನಿಕ ಷೇರುದಾರರೇ ಹೊಂದಿದ್ದಾರೆ.
5) ಕಂಪನಿಯು ತಲಾ 1 ರೂಪಾಯಿ ಮುಖಬೆಲೆಯ 95,00,00,000 ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಲು ಅನುಮೋದನೆ ನೀಡಿದೆ. ಈ ಮೂಲಕ, ಕಂಪನಿಯು ಹಣವನ್ನು ಸಂಗ್ರಹಿಸಲು ಯೋಜಿಸುತ್ತಿದೆ.
ಜಿವಿ ಫಿಲಮ್ಸ್ ಲಿಮಿಟೆಡ್ ಮಾಡಿಕೊಂಡ ಡೀಲ್ ಏನು
ಸಣ್ಣ ಬಂಡವಾಳದ ಜಿವಿ ಫಿಲಮ್ಸ್ ಲಿಮಿಟೆಡ್ ಕಂಪನಿ ತಾನು, ಓಂಕಾರ್ ಫಿಲ್ಮ್ಸ್ ಮತ್ತು ರಾಜ್ ಟೆಲಿವಿಷನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸ್ಟಾಕ್ ಎಕ್ಸ್‌ಚೇಂಜ್‌ಗೆ ಜುಲೈ 31ರಂದು ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿದೆ. ಇದರಂತೆ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳ 5,710 ಚಲನಚಿತ್ರಗಳ ಮೌಲ್ಯಯುತ ಗ್ರಂಥಾಲಯವನ್ನು ಪುನಃಸ್ಥಾಪಿಸುವ ಮತ್ತು ಸಂಕಲಿಸುವ ಉದ್ದೇಶದ ಸಹಯೋಗ ಇದು. ಈ ವಿಚಾರವಾಗಿ ಜಿ.ವಿ.ಫಿಲಮ್ಸ್ ಬಳಿ ವಿಶೇಷ ಡಿಜಿಟಲ್ ಹಕ್ಕುಗಳಿವೆ ಎಂದು ಸ್ಪಷ್ಟಪಡಿಸಿದೆ.
50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯೊಂದಿಗೆ, ಈ ಡಿಜಿಟಲ್ ಹಕ್ಕುಗಳನ್ನು ಸಮಕಾಲೀನ ಒಟಿಟಿ ಮಾನದಂಡಗಳಿಗೆ ನವೀಕರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಪೂರ್ಣಗೊಂಡ ನಂತರ, ಡಿಜಿಟಲ್ ಲೈಬ್ರರಿ ಜಿವಿ ಫಿಲಮ್ಸ್‌ನ ಸ್ವಂತ ಎಂಡ್-ಟು-ಎಂಡ್ ಒಟಿಟಿ / ಐಪಿಟಿವಿ ಪ್ಲಾಟ್‌ಫಾರಮ್ ಬಿಡುಗಡೆಗಳು ಅಥವಾ ಸ್ಥಾಪಿತ ಒಟಿಟಿ ಪ್ಲಾಟ್‌ಫಾರಂಗಳ ಹೊರಗುತ್ತಿಗೆ / ಪರವಾನಗಿಗೆ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.
"ಕಂಪನಿಯ ನಿರ್ದೇಶಕರ ಮಂಡಳಿಯ ಜುಲೈ 31ರ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಕಂಪನಿಯು ತಿಳಿಸಿದೆ.
ಗಮನಿಸಿ: ಪೆನ್ನಿ ಷೇರುಗಳ ಮೇಲೆ ಹೂಡಿಕೆ ಮಾಡುವವರು ಅದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಪಡೆದುಕೊಂಡು ಮುಂದುವರಿಯುವುದು ಒಳಿತು. ಇಲ್ಲಿ ಷೇರುಪೇಟೆಯ ವಿದ್ಯಮಾನಗಳನ್ನು ಮಾಹಿತಿ ದೃಷ್ಟಿಯಿಂದ ಹಂಚಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಷೇರುಗಳ ಮೇಲೆ ಹೂಡಿಕೆ ಮಾಡಬೇಕು ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ತಾಣ ಸಲಹೆ ನೀಡುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂಬುದು ಹೂಡಿಕೆದಾರರಿಗೆ ನಮ್ಮ ಸಲಹೆ.