ಭಾರತ ಪಾಕ್ ಸಂಘರ್ಷ: ಲಾಹೋರ್‌ನ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ ಬಳಿ ಸ್ಫೋಟ
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆಯ ಬಳಿ ಮತ್ತು ಲಾಹೋರ್ ಹಲವು ತಾಣಗಳಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ನವದೆಹಲಿ: ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಬಳಿ ಮತ್ತು ಲಾಹೋರ್‌ನ ವಿವಿಧ ಸ್ಥಳಗಳಲ್ಲಿ ಅನೇಕ ಸ್ಫೋಟಗಳು ಕೇಳಿಬಂದಿವೆ ಎಂದು ಪಾಕಿಸ್ತಾನದ ಮಾಧ್ಯಮ ಚಾನೆಲ್ ಸಮಾ ಟಿವಿ ಶುಕ್ರವಾರ ರಾತ್ರಿ ವರದಿ ಮಾಡಿದೆ. ವರದಿಯು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸ್ಫೋಟಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಪಾಕಿಸ್ತಾನ ವಾಯುಪಡೆಯ ನೆಲೆ, ನೂರ್ ಖಾನ್ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿಯ ಚಕ್ಲಾಲಾದಲ್ಲಿದೆ.
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಉಗ್ರರ ನಿಗ್ರಹಕ್ಕೆ ಭಾರತೀಯ ಸೇನೆ ಕ್ರಮ ಕೈಗೊಂಡಿದೆ. ಭಾರತವು ಮಂಗಳವಾರ ರಾತ್ರಿ ತನ್ನ ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದ್ದು, ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಮೇ 7 ರಂದು ಮುಂಜಾನೆ 1:05 ರಿಂದ 1:30 ರವರೆಗೆ ಭಾರತೀಯ ಸೇನೆ ಮತ್ತು ವಾಯುಪಡೆ ಜಂಟಿಯಾಗಿ ಈ ದಾಳಿಯನ್ನು ನಡೆಸಿವೆ.
26 ಜನರ ಸಾವಿಗೆ ಕಾರಣವಾದ ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಉಗ್ರರ ಕುಕೃತ್ಯಕ್ಕೆ ಪ್ರತಿಯಾಗಿ ಭಾರತ ಭಯೋತ್ಪಾದಕರ ಅಡಗು ತಾಣ ಮತ್ತು ತರಬೇತಿ ಶಿಬಿರಗಳ ಮೇಲೆ ವಾಯುದಾಳಿ ನಡೆಸಿದೆ. ಅದರ ಬೆನ್ನಲ್ಲೇ ಪಂಜಾಬ್‌ನ ಫಿರೋಜ್‌ಪುರ, ಪಠಾಣ್‌ಕೋಟ್, ಫಾಜಿಲ್ಕಾ ಮತ್ತು ಅಮೃತಸರದಲ್ಲಿ ಪಾಕಿಸ್ತಾನದ ಡ್ರೋಣ್‌ಗಳ ಅನೇಕ ದಾಳಿಗಳನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಅಧಿಕಾರಿಗಳು ಶುಕ್ರವಾರ ಸಂಜೆ ದೃಢಪಡಿಸಿದ್ದಾರೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನ ಗಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತಕ್ಕೆ ಸ್ಥಳೀಯ ಅಧಿಕಾರಿಗಳು ಆದೇಶಿಸಿದ್ದಾರೆ.