ಇಂಡಿಗೋ ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡ ಪ್ರಯಾಣಿಕ; ತುರ್ತು ಭೂಸ್ಪರ್ಶಿಸಿದರೂ ಉಳಿಯದ ಜೀವ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂಡಿಗೋ ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡ ಪ್ರಯಾಣಿಕ; ತುರ್ತು ಭೂಸ್ಪರ್ಶಿಸಿದರೂ ಉಳಿಯದ ಜೀವ

ಇಂಡಿಗೋ ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡ ಪ್ರಯಾಣಿಕ; ತುರ್ತು ಭೂಸ್ಪರ್ಶಿಸಿದರೂ ಉಳಿಯದ ಜೀವ

ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕ ರಕ್ತದ ವಾಂತಿ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ವಿಮಾನವು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕನನ್ನು ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ತಿವಾರಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.

ಇಂಡಿಗೋ ವಿಮಾನ (ಸಂಗ್ರಹ ಚಿತ್ರ)
ಇಂಡಿಗೋ ವಿಮಾನ (ಸಂಗ್ರಹ ಚಿತ್ರ)

ನಾಗ್ಪುರ (ಮಹಾರಾಷ್ಟ್ರ): ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ ವಿಮಾನವು ಪ್ರಯಾಣಿಕನ ಅನಾರೋಗ್ಯ ಪರಿಸ್ಥಿತಿಯಿಂದಾಗಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತಾದರೂ ಆತನ ಜೀವ ಉಳಿಸಲು ಸಾಧ್ಯವಾಗಿಲ್ಲ.

ಸೋಮವಾರ (ಆಗಸ್ಟ್ 21) ರಾತ್ರಿ 8 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿದ್ದ (6E 5093) 62 ವರ್ಷದ ಡಿ ತಿವಾರಿ ಎಂಬ ಪ್ರಯಾಣಿಕ ರಕ್ತದ ವಾಂತಿ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ವಿಮಾನವು ನಾಗ್ಪುರದ ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕನನ್ನು ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಅಷ್ಟರಲ್ಲಾಗಲೇ ತಿವಾರಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಪ್ರಯಾಣಿಕನು ಕಿಡ್ನಿ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದು, ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದಾರೆ ಎಂದು ನಾಗ್ಪುರದ ಕಿಮ್ಸ್ ಆಸ್ಪತ್ರೆಯ ಬ್ರ್ಯಾಂಡಿಂಗ್ ಮತ್ತು ಕಮ್ಯುನಿಕೇಷನ್ಸ್ ಡಿಜಿಎಂ ಏಜಾಜ್ ಶಮಿ ಹೇಳಿದ್ದಾರೆ.

ನಾಗ್ಪುರದಲ್ಲಿ ಇಂಡಿಗೋ ಪೈಲಟ್ ಸಾವು

ಕಳೆದ ವಾರವಷ್ಟೇ ನಾಗ್ಪುರದಲ್ಲಿ ಇಂಡಿಗೋ ಪೈಲಟ್ ಸಾವನ್ನಪ್ಪಿದ್ದರು. ವಿಮಾನ ಟೇಕ್​ ಆಫ್ ಆಗಲು 55 ನಿಮಿಷಗಳು ಬಾಕಿ ಇತ್ತು. ಅಷ್ಟರಲ್ಲಿ ಬೋರ್ಡಿಂಗ್​ ಗೇಟ್​ ಬಳಿ ಕ್ಯಾಪ್ಟನ್ ಮನೋಜ್ ಸುಬ್ರಹ್ಮಣ್ಯಂ (40) ಎಂದು ಗುರುತಿಸಲಾದ ಪೈಲಟ್ ಕುಸಿದು ಬಿದ್ದಿದ್ದರು. ಹಠಾತ್ ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದ್ದರು. 6E135 ಸಂಖ್ಯೆಯ ಇಂಡಿಗೋ ವಿಮಾನವು ನಾಗ್ಪುರದಿಂದ ಪುಣೆಗೆ ಹೊರಡಬೇಕಾಗಿತ್ತು. ಒಂದು ವೇಳೆ ವಿಮಾನ ಹಾರಾಟದ ವೇಳೆ ಪೈಲಟ್​ಗೆ ಹೃದಯಾಘಾತವಾಗಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು.

ಈ ಘಟನೆ ನಡೆಯುವ ಹಿಂದಿನ ದಿನವಷ್ಟೇ ಕತಾರ್ ಏರ್‌ವೇಸ್‌ನ ಪೈಲಟ್ ಮೃತಪಟ್ಟಿದ್ದರು. ಇವರು ಪ್ರಯಾಣಿಕನಾಗಿ ದೆಹಲಿ-ದೋಹಾ ವಿಮಾನದಲ್ಲಿ ಸಂಚರಿಸುತ್ತಿದ್ದಾಗ ಹೃದಯಾಘಾತವಾಗಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.