ಕಾಲೇಜಿಗೆ ಅನುಕೂಲಕರ ರೇಟಿಂಗ್ ನೀಡಿದ ನ್ಯಾಕ್ ತಂಡ, ದಾವಣಗೆರೆ ಪ್ರಾಧ್ಯಾಪಕಿ ಸೇರಿ ಹಲವರ ಬಂಧನ: ಆಂಧ್ರದಲ್ಲಿ ಸಿಬಿಐ ಕಾರ್ಯಾಚರಣೆ
ಕಾಲೇಜೊಂದಕ್ಕೆ ಅನುಕೂಲಕರವಾದ ರೇಟಿಂಗ್ ನೀಡಲು ಭಾರೀ ಪ್ರಮಾಣದ ಹಣ ಹಾಗೂ ಉಡುಗೊರೆ ಕೊಟ್ಟ ಪ್ರಕರಣವನ್ನು ಬೇಧಿಸಿರುವ ಸಿಬಿಐ ತಂಡ ಆಂಧ್ರಪ್ರದೇಶದ ಗುಂಟೂರಿನಲ್ಲಿ 10 ಮಂದಿಯನ್ನು ಬಂಧಿಸಿದೆ. ಇದರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರೊ.ಗಾಯತ್ರಿ ದೇವರಾಜ್ ಕೂಡ ಸೇರಿದ್ದಾರೆ.

ಹೈದ್ರಾಬಾದ್: ಕಾಲೇಜುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲಕರವಾಗಿ ರೇಟಿಂಗ್ ನೀಡುವ ವಿಚಾರ ಆಗಾಗ ಚರ್ಚೆಗೆ ಬರುತ್ತವೆ. ಆಂಧ್ರಪ್ರದೇಶದಲ್ಲೂ ಇಂತಹದೇ ಪ್ರಕರಣ ವರದಿಯಾಗಿದ್ದು, ಈ ಬಾರಿ ಸಿಬಿಐ ದಾಳಿ ನಡೆಸಿದೆ. ಗುಂಟೂರಿನಲ್ಲಿ ಈ ರೀತಿ ಶಿಕ್ಷಣ ಸಂಸ್ಥೆಯೊಂದಕ್ಕೆ ಅನುಕೂಲಕರವಾಗಿ ವರದಿ ನೀಡಿ ಹಣ ಹಾಗೂ ಭಾರೀ ಪ್ರಮಾಣದ ಉಡುಗೊರೆಗಳನ್ನು ಪಡೆದಿದ್ದ ಪ್ರಕರಣನ್ನು ಸಿಬಿಐ ಬೇಧಿಸಿದೆ. ಅಲ್ಲದೇ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ( ಯುಜಿಸಿ)ದಡಿ ಬರುವ ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿ( ನ್ಯಾಕ್) ತಂಡದ ಸದಸ್ಯರು ಹಾಗೂ ಗುಂಟೂರಿನ ಶೈಕ್ಷಣಿಕ ಸಂಸ್ಥೆಯ ಪ್ರಮುಖರನ್ನು ಸಿಬಿಐ ಬಂಧಿಸಿದೆ. ಇದರಲ್ಲಿ ನ್ಯಾಕ್ ಸಮಿತಿ ಮುಖ್ಯಸ್ಥರಲ್ಲದೇ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ.ಗಾಯತ್ರಿ ದೇವರಾಜ್ ಕೂಡ ಸೇರಿದ್ದಾರೆ. ಅವರಿಂದ ಭಾರೀ ಪ್ರಮಾಣದ ಹಣ, ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಿಬಿಐ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರತಿ ವರ್ಷ ಯುಜಿಸಿ ನಿಯಮಾವಳಿಗಳ ಪ್ರಕಾರ ನ್ಯಾಕ್ ಸಮಿತಿಯು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಸ್ಥಿತಿಗತಿ, ಮೂಲಸೌಕರ್ಯ ಸಹಿತ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸುತ್ತದೆ. ಇದಕ್ಕಾಗಿಯೇ ಕುಲಪತಿಗಳು, ಶೈಕ್ಷಣಿಕ ತಜ್ಞರು, ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಯುಜಿಸಿ ನ್ಯಾಕ್ ಅಡಿ ನೇಮಿಸುತ್ತದೆ. ಆ ಸಮಿತಿಗಳು ಕಡ್ಡಾಯವಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿ ರೇಟಿಂಗ್ ನೀಡಬೇಕು. ಈ ರೇಟಿಂಗ್ ಆಧರಿಸಿಯೇ ಕಾಲೇಜು ಇಲ್ಲವೇ ಶಿಕ್ಷಣ ಸಂಸ್ಥೆಯ ಮಾನ್ಯತೆ ಹಾಗೂ ಇತರೆ ತೀರ್ಮಾನಗಳು ಆಗಲಿವೆ. ಅದರಲ್ಲೂ ನ್ಯಾಕ್ ಮಾನ್ಯತೆ ದೊರತೆರೆ ಅದು ಕಾಲೇಜುಗಳ ಪ್ರಗತಿಗೆ ಪೂರಕ. ಆ ವರದಿ ಆಧರಿಸಿಯೇ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಅಳೆಯಲಾಗುತ್ತದೆ. ಈ ಕಾರಣದಿಂದ ನ್ಯಾಕ್ ಭೇಟಿಗೆ ಮಹತ್ವವಿದೆ. ಆದರೆ ನ್ಯಾಕ್ ಸಮಿತಿಗಳಿಗೆ ಆಮಿಷವೊಡ್ಡಿ ಅನುಕೂಲಕರ ರೇಟಿಂಗ್ ಪಡೆಯುವ ಆರೋಪಗಳೂ ಕೇಳಿ ಬರುತ್ತವೆ. ಆಂಧ್ರಪ್ರದೇಶದ ಗುಂಟೂರಿನಲ್ಲೂಅನುಕೂಲಕರ ನ್ಯಾಕ್ ರೇಟಿಂಗ್‌ಗಾಗಿ ಲಂಚ ಪಡೆದ ಪ್ರಕರಣ ಬಯಲಾಗಿದೆ. ನ್ಯಾಕ್ ತಂಡದ ಸದಸ್ಯರು ಮತ್ತು ಗುಂಟೂರು ಮೂಲದ ಶೈಕ್ಷಣಿಕ ಪ್ರತಿಷ್ಠಾನದ ಪದಾಧಿಕಾರಿಗಳು ಸೇರಿದಂತೆ 10 ಆರೋಪಿಗಳನ್ನು ಸಿಬಿಐ ಬಂಧಿಸಿದೆ.
ಅನುಕೂಲಕರ ನ್ಯಾಕ್ ರೇಟಿಂಗ್‌ಗಾಗಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ ನ್ಯಾಕ್ ತಂಡದ ಸದಸ್ಯರು ಮತ್ತು , ಗುಂಟೂರಿನ ವಡ್ಡೇಶ್ವರಂ ಮೂಲದ ಶೈಕ್ಷಣಿಕ ಪ್ರತಿಷ್ಠಾನದ ಪದಾಧಿಕಾರಿಗಳು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದೆ. ಇನ್ನೂ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ. ಗುಂಟೂರು ಕೆಎಲ್‌ಇಎಫ್ ಉಪಕುಲಪತಿ ಜಿ ಪಿ ಸಾರಧಿ ವರ್ಮ, ಕೆಎಲ್‌ಇಎಫ್ ಉಪಾಧ್ಯಕ್ಷ ಕೊನೇರು ರಾಜಾ ಹರೇನ್ ಮತ್ತು ಹೈದರಾಬಾದ್ ಕ್ಯಾಂಪಸ್‌ನ ಕೆಎಲ್ ವಿಶ್ವವಿದ್ಯಾಲಯದ ನಿರ್ದೇಶಕ ಎ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ.
ವಡ್ಡೇಶ್ವರಂ, ಗುಂಟೂರು ಮೂಲದ ಶೈಕ್ಷಣಿಕ ಪ್ರತಿಷ್ಠಾನದ ಪದಾಧಿಕಾರಿಗಳು ಮತ್ತು ನ್ಯಾಕ್ ತಪಾಸಣಾ ತಂಡದ ಸದಸ್ಯರ ವಿರುದ್ಧ ಸಿಬಿಐಗೆ ದೂರು ನೀಡಲಾಗಿತ್ತು. ಎ++ ಮಾನ್ಯತೆಗಾಗಿ ಅನುಕೂಲಕರವಾದ ನ್ಯಾಕ್ ರೇಟಿಂಗ್‌ಗಳಿಗಾಗಿ ಹಣ ಹಾಗೂ ಭಾರೀ ಉಡುಗೊರೆ ನೀಡಿದ ಪ್ರಕರಣ ಖಚಿತವಾದ ನಂತರ ನ್ಯಾಕ್ ಸದಸ್ಯರು ಹಾಗೂ ಆಡಳಿತ ಮಂಡಳಿಯವರ ಮೇಲೆ ಪ್ರಕರಣ ದಾಖಲಿಸಿದೆ.
ಪ್ರಕರಣದ ದಾಖಲಾದ ನಂತರ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿತು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಿತು ಮತ್ತು ನ್ಯಾಕ್ ತಪಾಸಣಾ ತಂಡದ ಸದಸ್ಯರಿಗೆ ಶಿಕ್ಷಣ ಪ್ರತಿಷ್ಠಾನದ ಪದಾಧಿಕಾರಿಗಳು ನಗದು, ಚಿನ್ನದ ರೂಪದಲ್ಲಿ ಪಾವತಿಸಿದ ಉಡುಗೊರೆಗಳು , ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳುಗಳನ್ನು ವಶಪಡಿಸಿಕೊಂಡಿದೆ.
ಇದಲ್ಲದೇ ನಾನಾ ಭಾಗಗಳಿಂದ ನ್ಯಾಕ್ ಸಮಿತಿಯ ಸದಸ್ಯರು ತಂಡದಲ್ಲಿದ್ದುದರಿಂದ ಭಾರತದ ಹಲವು ಭಾಗಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ್, ಭೋಪಾಲ್, ಬಿಲಾಸ್‌ಪುರ್, ಗೌತಮ್ ಬುಧ್ ನಗರ ಮತ್ತು ದೆಹಲಿಯಲ್ಲಿ 20 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಅಂದಾಜು ಮೊತ್ತ ರೂ. 37 ಲಕ್ಷ ನಗದು, 6 ಲ್ಯಾಪ್‌ಟಾಪ್‌ಗಳು, ಒಂದು ಐಫೋನ್, 16 ಪ್ರೊ ಮೊಬೈಲ್ ಫೋನ್, ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
