ನೆಹರೂ ದಾಖಲೆ ಸಮಗಟ್ಟಿದ ನರೇಂದ್ರ ಮೋದಿ, 3ನೇ ಬಾರಿ ಪ್ರಧಾನಿಯಾದ ನಾಯಕನ ರಾಜಕೀಯ ಬದುಕಿನ ಚಿತ್ರಣ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನೆಹರೂ ದಾಖಲೆ ಸಮಗಟ್ಟಿದ ನರೇಂದ್ರ ಮೋದಿ, 3ನೇ ಬಾರಿ ಪ್ರಧಾನಿಯಾದ ನಾಯಕನ ರಾಜಕೀಯ ಬದುಕಿನ ಚಿತ್ರಣ ಹೀಗಿದೆ

ನೆಹರೂ ದಾಖಲೆ ಸಮಗಟ್ಟಿದ ನರೇಂದ್ರ ಮೋದಿ, 3ನೇ ಬಾರಿ ಪ್ರಧಾನಿಯಾದ ನಾಯಕನ ರಾಜಕೀಯ ಬದುಕಿನ ಚಿತ್ರಣ ಹೀಗಿದೆ

ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ನೆಹರೂ ದಾಖಲೆ ಸಮಗಟ್ಟಿದ ನರೇಂದ್ರ ಮೋದಿ. ಸತತ 3ನೇ ಬಾರಿ ಪ್ರಧಾನಿಯಾದ ನಾಯಕನ ರಾಜಕೀಯ ಬದುಕಿನ ಚಿತ್ರಣ ಹೀಗಿದೆ ನೋಡಿ.

ನೆಹರೂ ದಾಖಲೆ ಸಮಗಟ್ಟಿದ ನರೇಂದ್ರ ಮೋದಿ, 3ನೇ ಬಾರಿ ಪ್ರಧಾನಿಯಾದ ನಾಯಕನ ರಾಜಕೀಯ ಬದುಕಿನ ಚಿತ್ರಣ
ನೆಹರೂ ದಾಖಲೆ ಸಮಗಟ್ಟಿದ ನರೇಂದ್ರ ಮೋದಿ, 3ನೇ ಬಾರಿ ಪ್ರಧಾನಿಯಾದ ನಾಯಕನ ರಾಜಕೀಯ ಬದುಕಿನ ಚಿತ್ರಣ

ನವದೆಹಲಿ: ಸತತ ಮೂರನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನರೇಂದ್ರ ಮೋದಿ ಅವರು ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ದಾಖಲೆ ಸಮಗಟ್ಟಿದರು. ಆದಾಗ್ಯೂ, ಅವರ ಈ ದಾಖಲೆಯಲ್ಲಿ ಪಕ್ಷದ ಬಹುಮತದ ದಾಖಲೆ ತಪ್ಪಿ ಹೋಗಿದೆ.

ಎನ್‌ಡಿಎ ಸಂಬಂಧಿಸಿ ಇದು ಎರಡನೇ ಅವಧಿಯ ಮೈತ್ರಿ ಸರ್ಕಾರ. ಈ ಹಿಂದೆ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 1999 ರಿಂದ 2004 ರ ತನಕ ಭಾರತವನ್ನು ಆಳಿತ್ತು. ಸತತ ಎರಡು ಅವಧಿಗೆ ಸ್ಪಷ್ಟ ಬಹುಮತ ಪಡೆದು ಆಡಳಿತ ನಡೆಸಿ ಜಾಗತಿಕ ರಾಜಕೀಯದಲ್ಲಿ ಭಾರತದ ಪ್ರಭಾವಿ ಛಾಪು ಮೂಡಿಸಿದ ಈ ನಾಯಕನ ಆಡಳಿತದ ಪ್ರಯಾಣದಲ್ಲಿ ದೇಶವನ್ನು ಮುನ್ನಡೆಸುವುದಷ್ಟೇ ಅಲ್ಲ, ಈಗ ಮೈತ್ರಿ ಸರ್ಕಾರ ಮುನ್ನಡೆಸುವ ಸವಾಲು ಕೂಡ ಎದುರಾಗಿದೆ.

ದೇಶದ ಪ್ರಧಾನಮಂತ್ರಿ ಆಗುವುದಕ್ಕೂ ಮೊದಲು ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಅವರ ಬದುಕಿನ ಕಡೆಗೊಂದು ಇಣುಕುನೋಟ ಬೀರಿ, ಅವರ ಸಾಧನೆ, ಬದುಕಿನ ಕಿರುನೋಟ ಹೊಂದಲು ಈ ಸಂದರ್ಭ ಒಂದು ನಿಮಿತ್ತ.

ನರೇಂದ್ರ ಮೋದಿ ಬದುಕಿನ ಪಥ

ಜನನ - 1950 ಸೆಪ್ಟೆಂಬರ್‌ 17. ಹುಟ್ಟೂರು - ಗುಜರಾತ್‌ನ ವಡ್‌ನಗರ. ತಂದೆ - ದಾಮೋದರದಾಸ್‌ ಮೋದಿ. ತಾಯಿ- ಹೀರಾಬೆನ್‌. ಒಡಹುಟ್ಟಿದವರು -ನರೇಂದ್ರ ಮೋದಿ ಸೇರಿ 6 ಜನ. ಶಿಕ್ಷಣ - ರಾಜಕೀಯ ಶಾಸ್ತ್ರ ಎಂ.ಎ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ.

1987 ರಲ್ಲಿ ಬಿಜೆಪಿ ಸೇರ್ಪಡೆ

1988-89ರಲ್ಲಿ ಬಿಜೆಪಿ ಗುಜರಾತ್‌ನ ಸಂಘಟನಾ ಕಾರ್ಯದರ್ಶಿ

1995ರಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ

2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿ

2002ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಭರ್ಜರಿ ಗೆಲುವು (182 ಸ್ಥಾನಗಳ ಪೈಕಿ 127ರಲ್ಲಿ ಗೆಲುವು), ಮುಖ್ಯಮಂತ್ರಿಯಾಗಿ ಪುನರಾಯ್ಕೆ

2007ರ ಚುನಾವಣೆ - 117 ಸ್ಥಾನಗಳಲ್ಲಿ ಗೆಲುವು, ಮುಖ್ಯಮಂತ್ರಿಯಾಗಿ ಮುಂದುವರಿಕೆ

2012ರ ಚುನಾವಣೆ - 115 ಸ್ಥಾನಗಳಲ್ಲಿ ಗೆಲುವು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಕೆ

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, ಬಿಜೆಪಿ ಮತ್ತು ಮಿತ್ರಪಕ್ಷಗಳ ಸರ್ಕಾರ ರಚನೆ, ಬಿಜೆಪಿಗೆ ಸಿಕ್ಕಿತ್ತು ಸ್ಪಷ್ಟಬಹುಮತ

2019ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದ ಮೋದಿ, ಬಿಜೆಪಿಗೆ ಭರ್ಜರಿ ಬಹುಮತ

2024 ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಎನ್‌ಡಿಎ ಮೈತ್ರಿ ಸರ್ಕಾರದ ನಾಯಕ

ನರೇಂದ್ರ ಮೋದಿ ರಾಜಕೀಯ ಬದುಕು

ನರೇಂದ್ರ ಮೋದಿ ಅವರ ರಾಜಕೀಯ ಬದುಕು ಗಮನಾರ್ಹವಾಗಿ ಬೆಳವಣಿಗೆ ಕಾಣಲು ಶುರುವಾಗಿದ್ದು 1990ರ ದಶಕದಿಂದ. ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಿತ್ತು. ಜನರಲ್ಲಿ ಸರ್ಕಾರ ವಿರೋಧಿ ಧೋರಣೆ ಜಾಗೃತವಾಗಿತ್ತು. ಪಕ್ಷದ ರಾಜಕೀಯ ನಾಯಕತ್ವಕ್ಕೆ ಪೂರಕವಾದ ಪ್ರಬಲ ಸಂಘಟನೆಯನ್ನು ನಿರ್ಮಿಸುವುದು ಅಂದು ನರೇಂದ್ರ ಮೋದಿ ಅವರ ಎದುರಿಗಿದ್ದ ಪ್ರಮುಖ ಸವಾಲು. ದಶಕದ ಕಾಂಗ್ರೆಸ್‌ ಆಳ್ವಿಕೆ ಕೊನೆಗೊಳಿಸಿದ ಜನ, ಜನತಾದಳಕ್ಕೆ 70 ಸ್ಥಾನಗಳಲ್ಲಿ, ಬಿಜೆಪಿಗೆ 67 ಸ್ಥಾನಗಳಲ್ಲಿ ಗೆಲುವು ನೀಡಿದ್ದರು. ಹಾಗೆ ಪಕ್ಷ ಅಲ್ಲಿ ಪ್ರವರ್ಧಮಾನಕ್ಕೆ ಬಂತು. ಮುಂದಿನ ಚುನಾವಣೆ 1995ರಲ್ಲಿ ಬಿಜೆಪಿಗೆ 182 ಸ್ಥಾನಗಳ ಪೈಕಿ 121ರಲ್ಲಿ ಗೆಲುವು ಸಿಕ್ಕಿತ್ತು. ನರೇಂದ್ರ ಮೋದಿ ಅವರು 2001ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾದರು. ಅಲ್ಲಿಂದಾಚೆಗೆ ಬಿಜೆಪಿ ಒಮ್ಮೆಯೂ ಅಲ್ಲಿ ಅಧಿಕಾರ ಕಳೆದುಕೊಂಡಿಲ್ಲ.

ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಗುಜರಾತ್‌ ಅನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಬಿಂಬಿಸಿತ್ತು. ಅಷ್ಟೇ ಅಲ್ಲ, ಮೊದಲ ಸಲ ಪ್ರಧಾನಮಂತ್ರಿ ಅಭ್ಯರ್ಥಿಯ ಹೆಸರನ್ನೂ ಅದು ಘೋಷಿಸಿತ್ತು. ನರೇಂದ್ರ ಮೋದಿ ನಾಯಕತ್ವವನ್ನು ಪಕ್ಷ ಸೃಷ್ಟಿಸಿತ್ತು. ಮೋದಿ ಹವಾ ಮೂಲಕ ಶುರುವಾದ ಬಿಜೆಪಿ ಅಧಿಕಾರ ಪ್ರಯಾಣ ಅನೇಕ ರಾಜ್ಯಗಳಲ್ಲೂ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿತು.

ಜಾಗತಿಕ ಮಟ್ಟದಲ್ಲೂ ನರೇಂದ್ರ ಮೋದಿ ನಾಯಕತ್ವ ತನ್ನದೇ ಛಾಪು ಮೂಡಿಸಿ ಮನ್ನಣೆ ಪಡೆಯಿತು. ಎರಡನೇ ಅವಧಿಯಲ್ಲಿ ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳು ನಡೆದಾಗ, ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರು ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ನರೇಂದ್ರ ಮೋದಿ, ಪ್ರಮುಖ ವಿಚಾರಗಳಲ್ಲಿ ಭಾರತವನ್ನು ನಿರ್ಣಾಯಕ ಸ್ಥಾನದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ.

ಸ್ವಾತಂತ್ರ್ಯಾನಂತರ ಜನಿಸಿ ಪ್ರಧಾನಿಯಾದ ಮೊದಲಿಗ

ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಸಲ ಪ್ರಧಾನ ಮಂತ್ರಿಯಾದರು. 2019ರ ಮೇ 30 ರಂದು 2ನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈಗ ಎನ್‌ಡಿಎ ಮೈತ್ರಿ ಸರ್ಕಾರದ ನಾಯಕನಾಗಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಇಂದು (ಜೂನ್ 9, 2024) ಪ್ರಮಾಣ ವಚನ ಸ್ವೀಕರಿಸಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾದವರು ಮೋದಿ. ಇದಕ್ಕೂ ಮೊದಲು 2001ರ ಅಕ್ಟೋಬರ್‌ನಿಂದ 2014ರ ಮೇ ತಿಂಗಳ ತನಕ ಗುಜರಾತ್‌ನ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಅವರು ಪ್ರಧಾನಮಂತ್ರಿಯಾದಲ್ಲಿಂದೀಚೆಗೆ ಅವರ ರಾಜಕೀಯ ಬದುಕಷ್ಟೇ ಅಲ್ಲ, ಜಾಗತಿಕವಾಗಿ ಬದಲಾದ ಭಾರತದ ಚಿತ್ರಣ ಎಲ್ಲವೂ ಭಾರತದ ರಾಜಕೀಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದು ಅಧ್ಯಯನದ ದೃಷ್ಟಿಯಿಂದ, ವಿಪಕ್ಷಗಳ ಟೀಕೆಗಳ ಕಾರಣಕ್ಕೆ ಪದೇಪದೆ ಚರ್ಚೆಗೆ ಬರುವಂಥದ್ದು. ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳ ನಾಯಕರಿಂದ ನಾನಾ ಕಾರಣಗಳಿಗೆ ಸದಾ ಟೀಕೆಗೆ ಗುರಿಯಾದವರು ಪ್ರಧಾನಿ ನರೇಂದ್ರ ಮೋದಿ. ಎರಡೂ ಅವಧಿಯಲ್ಲಿ ಬಿಜೆಪಿಗೆ ಬಹುಮತ ಇತ್ತು. ಎಲ್ಲ ಟೀಕೆಗಳನ್ನು ಸಮರ್ಥವಾಗಿ ಎದುರಿಸಿದರು.

ಆದರೆ ಈ ಸಲ ಹಾದಿ ಹೂಹಾಸಿನಷ್ಟು ಸುಲಭದ್ದಲ್ಲ. ಮಿತ್ರಪಕ್ಷಗಳ ನಾಯಕರ ಸಲಹೆ, ಬೇಡಿಕೆಗಳಿಗೂ ಸ್ಪಂದಿಸಬೇಕು. ತಪ್ಪಿದರೆ ಅವರಿಂದಲೂ ಟೀಕೆ ಎದುರಿಸಬೇಕಾದ ಅನಿವಾರ್ಯತೆ ಇದೆ. ಸ್ಥಿರ ಸರ್ಕಾರ ನೀಡಬೇಕಾದರೆ ಸಮತೋಲನದ ನಡಿಗೆ ಈ ಬಾರಿ ಅನಿವಾರ್ಯ. ಅದು ನರೇಂದ್ರ ಮೋದ ಅವರ ಸಾಮರ್ಥ್ಯಕ್ಕೆ ಒಡ್ಡಿರುವ ಸವಾಲು.

ಸಂಸತ್ತಿನ 2014 ಮತ್ತು 2019 ರ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ದಾಖಲೆಯ ಗೆಲುವಿನತ್ತ ಮುನ್ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ. ಮೋದಿ ಹವಾ ಜೋರಾಗಿಯೇ ನಡೆದಿತ್ತು. 1984ರ ಚುನಾವಣೆಯಲ್ಲಿ ಕೊನೆಯ ಬಾರಿಗೆ ರಾಜಕೀಯ ಪಕ್ಷವೊಂದು ಸಂಪೂರ್ಣ ಬಹುಮತ ಪಡೆದಿತ್ತು ಎಂಬುದನ್ನು ಇಲ್ಲಿ ನೆನಪಿಸಬಹುದು. ಆದರೆ ಮೂರನೆ ಅವಧಿಗೆ ಅಂದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ಕಾರ್ಯಕರ್ತರನ್ನು ಮರೆತರು. ಮೋದಿ ಹವಾದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿದ್ದರು. ಅಷ್ಟೇ ಏಕೆ, ಪ್ರಧಾನಿ ಮೋದಿ ಕೂಡ ಪ್ರಚಾರದ ವೇಳೆ, ಬಿಜೆಪಿ 340ಕ್ಕೂ ಹೆಚ್ಚು ಸ್ಥಾನ ಗೆದ್ದು ಬಹುಮತ ಪಡೆಯಲಿದೆ, ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಅತಿಯಾದ ಆತ್ಮವಿಶ್ವಾಸ ತೋರಿದರು. ದೇವರು ನನ್ನನ್ನು ದೇಶದ ಕೆಲಸ ಮಾಡಲು ಕಳುಹಿಸಿದ್ದಾನೆ ಎಂಬಿತ್ಯಾದಿ ಮಾತುಗಳನ್ನಾಡಿದರು. ಆ ಮೂಲಕ ಪಕ್ಷವನ್ನು ಗೆಲ್ಲಿಸಬಲ್ಲೆ ಎಂಬ ಭಾವ ವ್ಯಕ್ತಪಡಿಸಿದರು. ಅದೇನೇ ಇರಲಿ, ಎನ್‌ಡಿಎ ಮೈತ್ರಿಗೆ ಮತದಾರರು ಬಹುಮತ ನೀಡಿ, ಬಿಜೆಪಿಯನ್ನೇ ಅತಿದೊಡ್ಡ ಪಕ್ಷವನ್ನಾಗಿ ಮಾಡಿ ಮತ್ತೊಂದು ಅವಕಾಶವನ್ನು ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ. ಅದನ್ನು ಅವರು ಹೇಗೆ ಬಳಸುತ್ತಾರೆ ಎಂಬುದು ಸದ್ಯದ ಕುತೂಹಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.