iNCOVACC nasal vaccine: ಗಣರಾಜ್ಯೋತ್ಸವದಂದು ಮೂಗಿನ ಮೂಲಕ ಹಾಕುವ ಲಸಿಕೆ ಬಿಡುಗಡೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Incovacc Nasal Vaccine: ಗಣರಾಜ್ಯೋತ್ಸವದಂದು ಮೂಗಿನ ಮೂಲಕ ಹಾಕುವ ಲಸಿಕೆ ಬಿಡುಗಡೆ

iNCOVACC nasal vaccine: ಗಣರಾಜ್ಯೋತ್ಸವದಂದು ಮೂಗಿನ ಮೂಲಕ ಹಾಕುವ ಲಸಿಕೆ ಬಿಡುಗಡೆ

ಲಸಿಕೆಯು ಖಾಸಗಿ ಲಸಿಕಾ ಕೇಂದ್ರಗಳಲ್ಲಿ 800 ರೂಪಾಯಿಗೆ ಲಭ್ಯವಿರುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ಮೂಗಿನ ಮೂಲಕ ಹಾಕುವ ಲಸಿಕೆ ಶೀಘ್ರದಲ್ಲೇ ಲಭ್ಯ
ಮೂಗಿನ ಮೂಲಕ ಹಾಕುವ ಲಸಿಕೆ ಶೀಘ್ರದಲ್ಲೇ ಲಭ್ಯ

ಭೋಪಾಲ್: ದೇಶದಲ್ಲಿ ಕೋವಿಡ್‌ಗೆ ಈಗಾಗಲೇ ಲಸಿಕೆ ಕಂಡುಹಿಡಿದು, ದೇಶದ ಬಹುತೇಕ ಎಲ್ಲಾ ಜನರಿಗೆ ಲಸಿಕಾಕರಣ ಪೂರ್ಣಗೊಂದಿದೆ. ಆದರೆ, ದೇಶದ ಮೊದಲ ಮೂಗಿನ ಮೂಲಕ(nasal Covid-19 vaccine) ಹಾಕಲಾಗುವ ಲಸಿಕೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.

ಭಾರತ್ ಬಯೋಟೆಕ್‌(Bharat Biotech)ನ ಮೂಗಿನ ಮೂಲಕ ಹಾಕಲಾಗುವ ಕೋವಿಡ್ -19 ಲಸಿಕೆ ' ಇನ್ಕೋವ್ಯಾಕ್‌ (iNCOVACC)' ಅನ್ನು ಜನವರಿ 26ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಕೃಷ್ಣ ಎಲ್ಲ(Krishna Ella) ತಿಳಿಸಿದ್ದಾರೆ. ಪ್ರಾಥಮಿಕ ಎರಡು-ಡೋಸ್ ಆಗಿ ಮತ್ತು ಭಿನ್ನರೂಪದ ಬೂಸ್ಟರ್ ಡೋಸ್‌ ಆಗಿ iNCOVACC ಅನುಮೋದನೆ ಪಡೆದುಕೊಂಡಿದೆ.

“ನಮ್ಮ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಜನವರಿ 26ರ ಗಣರಾಜ್ಯ ದಿನದಂದು ಅಧಿಕೃತವಾಗಿ ಪ್ರಾರಂಭಿಸಲಾಗುವುದು” ಎಂದು ಎಲ್ಲ ಹೇಳಿದ್ದಾರೆ. ಭೋಪಾಲ್‌ನ ಮೌಲಾನಾ ಆಜಾದ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ 2022ರ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ(India International Science Festival)ದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜಾನುವಾರುಗಳಲ್ಲಿನ ಚರ್ಮದ ಗಂಟು ಕಾಯಿಲೆಗೆ ಸ್ಥಳೀಯ ಲಸಿಕೆಯಾದ ಲಂಪಿ-ಪ್ರೊವಾಕ್‌ಇಂಡ್(Lumpi-ProVacInd) ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಇಂಟ್ರಾಮಸ್ಕುಲರ್ ಕೊರೊನಾ ವೈರಸ್ ಇನಾಕ್ಯುಲೇಶನ್ ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ ಔಷಧೀಯ ಕಂಪನಿಯು, ಮೂಗಿನ ಲಸಿಕೆಯನ್ನು ಜನವರಿ ನಾಲ್ಕನೇ ವಾರದೊಳಗೆ ಬಿಡುಗಡೆ ಮಾಡುವುದಾಗಿ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿತ್ತು.

ವ್ಯಾಕ್ಸಿನ್‌ ಬೆಲೆ ಎಷ್ಟು?

iNCOVACC ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಪ್ರಮಾಣದ ಖರೀದಿಗಾಗಿ ಪ್ರತಿ ಡೋಸ್‌ಗೆ 325 ರೂಪಾಯಿಗಳಂತೆ ನೀಡಲಾಗುತ್ತದೆ. ಇದೇ ಲಸಿಕೆಯು ಖಾಸಗಿ ಲಸಿಕಾ ಕೇಂದ್ರಗಳಲ್ಲಿ 800 ರೂಪಾಯಿಗೆ ಲಭ್ಯವಿರುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ವ್ಯಾಕ್ಸಿನೇಷನ್‌ ಡೋಸ್‌ ಎಷ್ಟು?

ಈ ಲಸಿಕೆ ಹಾಕಿಸಬೇಕೆಂದರೆ, ಪ್ರಾಥಮಿಕ ವ್ಯಾಕ್ಸಿನೇಷನ್ ಡೋಸ್ ಲೆಕ್ಕಕ್ಕಿಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಲಸಿಕೆಯನ್ನು ಬೂಸ್ಟರ್ ಡೋಸ್‌ ಆಗಿ ಹಾಕಲಾಗುತ್ತದೆ. ಇದನ್ನು 28 ದಿನಗಳ ಅಂತರದಲ್ಲಿ ಎರಡು ಬಾರಿ ಜನರಿಗೆ ನೀಡಲಾಗುತ್ತದೆ.

ಮೂಗಿನ ಮೂಲಕ ಹಾಕಲಾಗುವ ಈ ಲಸಿಕೆಯನ್ನು ಕಳೆದ ಡಿಸೆಂಬರ್‌ನಲ್ಲಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(Central Drugs Standard Control Organization) ಅನುಮೋದಿಸಿದೆ. ಆ ಬಳಿಕ, ಪ್ರತಿರಕ್ಷಣೆ ಕುರಿತಾದ ಭಾರತದ ತಾಂತ್ರಿಕ ತಜ್ಞರ ಸಮಿತಿ, ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು, ವಯಸ್ಕರು ಬೂಸ್ಟರ್‌ ಡೋಸ್‌ ಆಗಿ ತೆಗೆದುಕೊಳ್ಳಬಹುದಾದ "ಮುನ್ನೆಚ್ಚರಿಕೆಯ ಡೋಸ್"ಗಳಲ್ಲಿ ಒಂದಾಗಿ ಇದನ್ನು ಸೇರಿಸಲು ಶಿಫಾರಸು ಮಾಡಿತು.

ಸುಮಾರು 875 ಜನರೊಂದಿಗೆ ದೇಶದಾದ್ಯಂತ ಒಂಬತ್ತು ಸ್ಥಳಗಳಲ್ಲಿ ಮೂಗಿನ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಯಿತು. ಲಸಿಕೆಯನ್ನು ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಅಭಿವೃದ್ಧಿಪಡಿಸಿದ ಲಂಪಿ-ಪ್ರೊವಾಸಿಂಡ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಇದೇ ವೇಳೆ ಕೃಷ್ಣ ಎಲ್ಲ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಲಸಿಕೆಯ ವಾಣಿಜ್ಯ ಉತ್ಪಾದನೆಗೆ ಮಂಡಳಿಯು ಭಾರತ್ ಬಯೋಟೆಕ್‌ನ ಸಹವರ್ತಿ ಸಂಸ್ಥೆಯಾದ ಬೆಂಗಳೂರು ಮೂಲದ ಬಯೋವೆಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. Lumpi-ProVacInd ಅನ್ನು ರಾಷ್ಟ್ರೀಯ ಸಂಶೋಧನಾ ಕೇಂದ್ರದ ಈಕ್ವಿನ್ಸ್ ಮತ್ತು ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.