Lok Sabha Session: ಮೋದಿ 3.0 ಲೋಕಸಭೆಯ ಅಧಿವೇಶನ ಶುರು, ಪ್ರಮುಖರ ಪ್ರಮಾಣ ವಚನ, 2047ರ ಗುರಿ ಕುರಿತು ಪ್ರಧಾನಿ ಹೇಳಿದ್ದೇನು?
Delhi Politics ದೆಹಲಿಯ ಲೋಕಸಭೆಯಲ್ಲಿ ಸೋಮವಾರದಿಂದ ಹೊಸ ಅಧ್ಯಾಯ ಆರಂಭ. 18ನೇ ಲೋಕಸಭೆಯ ಮೊದಲ ದಿನ ಪ್ರಮಾಣ ವಚನ ಸ್ವೀಕಾರ, ಪ್ರಧಾನಿ ಮೋದಿ ಅವರ ಭಾಷಣ ಗಮನ ಸೆಳೆಯಿತು.
ದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸೋಮವಾರ ಆರಂಭಗೊಂಡಿರುವ ಲೋಕಸಭೆಯ ಮೊದಲ ಅಧಿವೇಶನ ಗಮನ ಸೆಳೆಯಿತು. ಪ್ರಧಾನಿ ನರೇಂದ್ರ ಮೋದಿ ಸಹಿತ ಹಿರಿಯ ಸದಸ್ಯರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು ಹಂಗಾಮಿ ಸಭಾಧ್ಯಕ್ಷರಾಗಿ ನಿಯೋಜನೆಗೊಂಡಿರು ಭರ್ತೃಹರಿ ಮಹತಾಬ್ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಮೊದಲನೇ ದಿನವೇ ಹೊಸ ಲೋಕಸಭೆ ಕಟ್ಟಡದಲ್ಲಿನ ಅಧಿವೇಶನದಲ್ಲಿ ನಾನಾ ಪಕ್ಷಗಳ ಸದಸ್ಯರು ಪಾಲ್ಗೊಂಡರು. ಹಳೆಯ ನೆನಪುಗಳು, ಮುಂದಿನ ಐದು ವರ್ಷದ ಹಾದಿಯ ಕುರಿತು ಸದಸ್ಯರ ನಡುವೆ ಚರ್ಚೆಗಳು ನಡೆದವು.
ಮೊದಲು 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನಿಯೋಜನೆಗೊಂಡಿರುವ ಒಡಿಶಾದ ಹಿರಿಯ ಸಂಸದ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹತಾಬ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದಾದ ಬಳಿಕ ಮಹತಾಬ್ ಅವರೇ ಪ್ರತಿಯೊಬ್ಬರಿಗೂ ಪ್ರಮಾಣ ವಚನ ಬೋಧಿಸಿದರು.
ಉತ್ತರ ಪ್ರದೇಶದ ವಾರಣಾಸಿಯಿಂದ ಸತತ ಮೂರನೇ ಬಾರಿಗೆ ಸಂಸದರಾಗಿರುವ ನರೇಂದ್ರಮೋದಿ, ಲಕ್ನೋದ ಸಂಸದರಾಗಿರುವ ಹಿರಿಯ ಸದಸ್ಯ ರಾಜನಾಥಸಿಂಗ್, ಮಹಾರಾಷ್ಟ್ರದ ನಾಗಪುರದಿಂದ ಗೆದ್ದಿರುವ ಹಿರಿಯ ನಾಯಕ ನಿತಿನ್ ಗಡ್ಕರಿ, ಮಧ್ಯಪ್ರದೇಶದ ಹಿರಿಯ ನಾಯಕ ಶಿವರಾಜಸಿಂಗ್ ಚೌಹಾಣ್, ಹರಿಯಾಣದ ಹಿರಿಯ ನಾಯಕ ಮನೋಹರ ಲಾಲ್ ಖಟ್ಟರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಿರಿಯ ಸದಸ್ಯರಾಗಿರುವ ಕರ್ನಾಟಕದ ಪ್ರಲ್ಹಾದ ಜೋಶಿ, ಪಿಯುಸ್ ಚಾವ್ಲಾ ಅವರು ಸದಸ್ಯರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.
ಮೊದಲನೇ ದಿನವೇ 280 ಸಂಸದರು ಪ್ರಮಾಣವಚನವನ್ನು ಸ್ವೀಕರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಎರಡನೇ ದಿನವಾದ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉಳಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವರು.
ಪ್ರಧಾನಿ ಹೇಳಿದ್ದೇನು
ಪ್ರಮಾಣ ವಚನ ಸ್ವೀಕರಿಸಿ ಸದಸ್ಯರನ್ನುದ್ದೇಶಿಸಿ ಇಪ್ಪತ್ತು ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. 18ನೇ ಲೋಕಸಭಾ ಅಧಿವೇಶನ ಹಲವಾರು ಮಹತ್ವಗಳೊಂದಿಗೆ ಆರಂಭವಾಗುತ್ತಿದೆ. ಭಾರತದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ 50 ವರ್ಷ ಮಂಗಳವಾರಕ್ಕೆ ಆಗಲಿದೆ. ಆಗ ಸಂವಿಧಾನವನ್ನೇ ತಿರಸ್ಕರಿಸಿ ತುರ್ತು ಪರಿಸ್ಥಿತಿ ಘೋಷಿಸಿದ್ದು ನಮ್ಮ ಕಣ್ಣ ಮುಂದೆಯಿದೆ. ಆ ದಿನ ನಿಜಕ್ಕೂ ಭಾರತದ ಪ್ರಜಾಪ್ವಭುತ್ವಕ್ಕೆ ಆಗ ಕಪ್ಪುಚುಕ್ಕೆ. ಇದನ್ನು ನೆನಪಿನಲ್ಲಿಟ್ಟುಕೊಂಡು ನಾವು ಆಡಳಿತ ನಡೆಸುವ ಅನಿವಾರ್ಯವಿದೆ ಎಂದರು ಮೋದಿ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಕನಸಿನೊಂದಿಗೆ ನಾವು ಸಾಕಷ್ಟು ಹೆಜ್ಜೆಗಳನ್ನು ಇರಿಸಿದ್ದೇವೆ. ಭಾರತವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಪ್ರತಿಯೊಬ್ಬ ಸದಸ್ಯರು ಇದೇ ಜವಾಬ್ದಾರಿಯಿಂದ ಕೆಲಸ ಮಾಡಿದ ದೇಶದ ನೂರನೇ ವರ್ಷದಲ್ಲಿ ಭಾರತ ಇನ್ನಷ್ಟು ಸಶಕ್ತವಾಗಿ ಬೆಳೆಯಲಿದೆ ಎಂದು ಮೋದಿ ನುಡಿದರು.
ದೇಶಕ್ಕೆ ಆಡಳಿತ ಪಕ್ಷ ಎಷ್ಟು ಮುಖ್ಯವೋ. ಪ್ರತಿಪಕ್ಷವೂ ಅಷ್ಟೇ ಮುಖ್ಯ. ವಿರೋಧ ಪಕ್ಷ ಉತ್ತಮ ಮಾತ್ರವಲ್ಲದೇ ಜವಾಬ್ದಾರಿಯುತವೂ ಆಗಿರಬೇಕು. ಆದರೆ ಭಾರತದಲ್ಲಿ ವಿರೋಧ ಪಕ್ಷಗಳು ಜನರ ನಿರೀಕ್ಷೆಗಳಿಗೆ ತಕ್ಕಂತೆ ವರ್ತನೆಯನ್ನೇ ಮಾಡುತ್ತಿಲ್ಲ. ಪ್ರತಿಪಕ್ಷಗಳು ಎಚ್ಚರಿಕೆಯಿಂದ ಇದ್ದು ಆಡಳಿತ ಪಕ್ಷವನ್ನು ಎಚ್ಚರಿಸುತ್ತಲೇ ಇರಬೇಕು ಎಂದು ಜನರು ಬಯಸುತ್ತಾರೆ. ಅಂತಹ ನಡೆಯನ್ನು ಈ ಅವಧಿಯಲ್ಲಾದರೂ ಪ್ರತಿಪಕ್ಷಗಳು ತೋರಿಸಲಿ. ಜನರು ಸಂಸತ್ತಿನಲ್ಲಿ ಬರೀಯ ಘೋಷಣೆಗಳು, ಧಿಕ್ಕಾರಗಳನ್ನು ಸದಸ್ಯರಿಂದ ಬಯಸುವುದಿಲ್ಲ. ರಚನಾತ್ಮಕವಾಗಿ ನಡೆದುಕೊಳ್ಳಲಿ ಎಂದು ಇಚ್ಚಿಸುತ್ತಾರೆ. ಜನರ ಬಯಕೆಯಂತೆ ಕೆಲಸ ಮಾಡಲಿ ಎಂದು ಪ್ರತಿಪಕ್ಷಗಳಿಗೆ ಮೋದಿ ಕಿವಿಮಾತು ಹೇಳಿದರು.
ಸ್ವಾತಂತ್ರ್ಯಾ ನಂತರ ಸಾಕಷ್ಟು ಅಭಿವೃದ್ದಿಗಳು ಭಾರತದಲ್ಲಿ ಆಗಿವೆ. ಅದರಲ್ಲೂ ಮೊದಲ ಬಾರಿಗೆ ಹೊಸ ಸಂಸತ್ ಭವನದಲ್ಲಿ ಪ್ರಮಾಣ ವಚನ ಸಮಾರಂಭ ಆಯೋಜನೆಗೊಂಡಿರುವುದು ಅವಿಸ್ಮರಣೀಯ. ನಾವು ನಡೆದು ಬಂದ ಹಾದಿಯನ್ನು ಇದು ತೋರಲಿದೆ. ನಮ್ಮ ಈ ಅಧಿವೇಶನವು ವಿಕಸಿತ ಭಾರತ ಹಾಗೂ ಶ್ರೇಷ್ಠ ಭಾರತದ ನಿರ್ಮಾಣ ಸಂಕಲ್ಪ ತೊಡುವುದರೊಂದಿಗೆ ಆರಂಭಗೊಂಡಿದ್ದು. ಇದನ್ನು ಎಲ್ಲಾ ಸದಸ್ಯರು ಗಮನಿಸಬೇಕು. ಜನರ ಆಶೋತ್ತರಗಳನ್ನು ಈಡೇರಿಸುವುದೇ ನಮ್ಮ ಕರ್ತವ್ಯ. ಸರ್ಕಾರವೂ ಈ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಮುಂದಿನ ಐದು ವರ್ಷದಲ್ಲಿ ಜನಮುಖಿಯಾಗಿ ಇಡಲಿದೆ ಎಂದು ತಿಳಿಸಿದರು.