Adivasi MLA: ಸಾಲ ಮಾಡಿ ಶಾಸಕನಾದ ಮಧ್ಯಪ್ರದೇಶದ ಆದಿವಾಸಿ ಯುವಕ: ಬೈಕ್‌ನಲ್ಲಿಯೇ ಸುತ್ತುವ ನಾಯಕ
Adivasi Youth MLA ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆದಿವಾಸಿ ಯುವಕ ಕಮಲೇಶ್ವರ್ ಹಠಬಿಡದೇ ಗೆದ್ದು ಇತಿಹಾಸ ನಿರ್ಮಿಸಿಯಾಗಿದೆ. ಅದರ ವಿಶೇಷತೆ ಇಲ್ಲಿದೆ.
ಈಗ ಚುನಾವಣೆಗೆ ಸ್ಪರ್ಧಿಸಲು ಕೋಟಿ ಕೋಟಿ ಬೇಕು. ಶಾಸಕನಾಗಬೇಕೆಂದರೆ ಕೋಟಿ ಹಣವಿಲ್ಲದೇ ಆಗುವುದಿಲ್ಲ ಎನ್ನುವ ಮಾತು ಸಾಮಾನ್ಯ. ಇದು ನಿಜವೂ ಕೂಡ. ಆದರೆ ಈಗಷ್ಟೇ ಮುಗಿದ ಮಧ್ಯಪ್ರದೇಶದ ಚುನಾವಣೆಯಲ್ಲಿ ಅಲ್ಪಸ್ವಲ್ಪ ಸಾಲ ಮಾಡಿಕೊಂಡು ಆದಿವಾಸಿ ಯುವಕ ವಿಧಾನಸಭೆ ಪ್ರವೇಶಿಸಿದ್ದಾರೆ
ಈತನ ಹೆಸರು ಕಮಲೇಶ್ವರ್ ದೊಡಿಯಾರ್. ಆಯ್ಕೆಯಾದ ಕ್ಷೇತ್ರ ಸೈಲಾನ. ಪಕ್ಷ ಭಾರತೀಯ ಆದಿವಾಸಿ ಪಾರ್ಟಿ.
ಕಮಲೇಶ್ವರ್ ದೊಡಿಯಾರ್‌ಗೆ ಶಾಸಕನಾಗಬೇಕು ಎಂದು ಹಂಬಲ. ಮನೆಯಲ್ಲಿ ಎಲ್ಲರೂ ದಿನಗೂಲಿ ನೌಕರರು. ತಾನೂ ಇದೇ ಕೆಲಸ ಮಾಡಿಕೊಂಡು ಇದ್ದವನೇ. ಆದರೆ ಶಾಸಕನಾಗಬೇಕು ಎಂಬ ಹಂಬಲ. 2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಗೆ ಸಾಲ ಮಾಡಿಕೊಂಡೇ ಸ್ಪರ್ಧೆ ಮಾಡಿದ್ದ ಕಮಲೇಶ್ವರ್ ಗೆಲ್ಲಲು ಆಗಲಿಲ್ಲ. ಇದಾದ ಬಳಿಕ 2019 ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೂ ಜನ ಗೆಲ್ಲಿಸಲಿಲ್ಲ. ಹಾಗೆಂದು ಕಮಲೇಶ್ವರ್ ಜನಪ್ರತಿನಿಧಿಯಾಗಬೇಕು ಎಂಬ ಹಠ ಬಿಡಲಿಲ್ಲ.
ಹಠದಿಂದಲೇ ಗೆದ್ದ ಯುವಕ
ಸತತ ಐದು ವರ್ಷ ಕ್ಷೇತ್ರ ಸೈಲಾನ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಬೈಕ್‌ನಲ್ಲಿ ಸುತ್ತಿದ್ದೇ ಸುತ್ತಿದ್ದು.ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕಮಲೇಶ್ ಪರಿಚಯವಾಗಿತ್ತು. ಹಣ, ಹೆಂಡ ಹಂಚುವವರು ನಿಮ್ಮ ಕೈಗೆ ಚುನಾವಣೆ ಮುಗಿದ ಮೇಲೆ ಸಿಗುವುದಿಲ್ಲ. ನಾನು ನಿಮ್ಮೊಂದಿಗೆ ಸದಾ ಇರುವೆ. ನಿಮ್ಮೆ ಕಷ್ಟಕ್ಕೆ ಸ್ಪಂದಿಸುವೆ ಎಂದು ಕಮಲೇಶ್ ಪ್ರಚಾರ ಮಾಡಿದ್ದು ಫಲ ನೀಡಿತ್ತು. ಅಲ್ಲದೇ ಪಕ್ಷೇತರ ಬದಲು ಭಾರತೀಯ ಆದಿವಾಸಿ ಪಾರ್ಟಿ ಬೆಂಬಲವೂ ಸಿಕ್ಕಿದ್ದು ಬಲ ತಂದಿತು.
ಈ ಬಾರಿ ಚುನಾವಣೆ ನಡೆದಾಗ ಜನ ಉತ್ತಮ ಮತ ನೀಡಿರುವ ವಿಶ್ವಾಸ ಕಮಲೇಶ್ವರ್‌ಗೆ ಇತ್ತು. ಫಲಿತಾಂಶದ ದಿನ ನೋಡಿದರೆ ಕಮಲೇಶ್ವರ್ ಕಾಂಗ್ರೆಸ್‌ನ ವಿಜಯ ಗೆಹ್ಲೋಟ್ ರನ್ನು ಹಿಂದಿಕ್ಕಿ ಗೆದ್ದಾಗಿತ್ತು.
ಬೈಕ್‌ನಲ್ಲಿ ಭೋಪಾಲ್‌ಗೆ
ಗೆದ್ದ ಮರುದಿನವೇ ಕಮಲೇಶ್ವರ್ ಬೈಕ್‌ನಲ್ಲಿ ಸುತ್ತಾಡಿ ಜನರಿಗೆ ಕೃತಜ್ಞತೆ ಹೇಳಿದ್ದೂ ಆಗಿತ್ತು. ನಂತರ ತನ್ನ ಕ್ಷೇತ್ರದಿಂದ 350 ಕಿ.ಮಿ ದೂರದಲ್ಲಿರುವ ಭೋಪಾಲ್‌ಗೆ ಅದೇ ಬೈಕ್‌ನಲ್ಲಿ ಕಮಲೇಶ್ವರ್ ತಲುಪಿಯಾಗಿತ್ತು.
ದಿನಗೂಲಿ ಕುಟುಂಬ
ನನ್ನ ಕುಟುಂಬ ದಿನಗೂಲಿ ಮೇಲೆಯೇ ಬದುಕು ನಡೆಸುತ್ತದೆ. ಪ್ರತಿ ದಿನದ ಊಟಕ್ಕೂ ಕಷ್ಟ ಪಡುವ ಸನ್ನಿವೇಶವಿದೆ. ಚುನಾವಣೆಗೆ ಸ್ಪರ್ಧಿಸಲು ಹಣ ಎಲ್ಲಿಂದ ಬರಬೇಕು. ಸ್ನೇಹಿತರ ಬಳಿ ಸಾಲ ಮಾಡಿಕೊಂಡು ಸ್ಪರ್ಧಿಸಿದೆ. ಕೆಲವರು ಹಣ ಸಂಗ್ರಹಿಸಿ ಚುನಾವಣೆ ವೆಚ್ಚಕ್ಕೆ ನೀಡಿದರು. ಈ ಬಾರಿ 2.38 ಲಕ್ಷ ರೂ.ಗಳನ್ನು ಚುನಾವಣೆಯನ್ನು ವೆಚ್ಚ ಮಾಡಿ ಚುನಾವಣೆ ಗೆದ್ದಿದ್ದೇನೆ ಎನ್ನುವುದು ಕಮಲೇಶ್ವರ್ ಇಂಡಿಯಾ ಟುಡೆಗೆ ನೀಡಿರುವ ಹೇಳಿಕೆ.
ಒಬಾಮ ಮಾದರಿ
ಅಮೆರಿಕಾದ ಮಾಜಿ ಬರಾಕ್ ಒಬಾಮ ಅವರೇ ಕಮಲೇಶ್ವರ್‌ಗೆ ಮಾದರಿ ಹಾಗೂ ಸ್ಪೂರ್ತಿ. ಬರಾಕ್ ಒಬಾಮ ಇದೇ ರೀತಿ ಹೋರಾಟ ಮಾಡಿಕೊಂಡು ಬಂದೇ ಅಮೆರಿಕಾ ಅಧ್ಯಕ್ಷರಾಗಿದ್ದು ಇತಿಹಾಸ. ಅವರದ್ದೇ ಮಾದರಿಯಲ್ಲಿ ಜನರೊಂದಿಗೆ ನಾನು ಇರುತ್ತೇನೆ. ಅವರ ಕೆಲಸ ಮಾಡಿಕೊಡುತ್ತೇನೆ ಎನ್ನುವುದು ಕಮಲೇಶ್ವರ್ ನುಡಿ.
ಈಗಾಗಲೇ ಬೈಕ್ ಮೇಲೆ ಎಂಎಲ್‌ಎ ಎನ್ನುವ ಫಲಕವೂ ಬಂದಿದೆ. ಅದೇ ಅವರ ಕ್ಷೇತ್ರದ ಸಂಚಾರದ ವಾಹನ. ಸಚಿವ ಸ್ಥಾನವೇನಾದರೂ ಸಿಕ್ಕರೆ ಇನ್ನಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದಿ ಕಮಲೇಶ್ವರ್ ಹೇಳುತ್ತಾರೆ.