Andhra Rail accident: ಆಂಧ್ರ ರೈಲು ದುರಂತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ, ಲೋಕೋ ಪೈಲಟ್ ಗೊಂದಲದಿಂದ ಅಪಘಾತ
Andhra Rail Accident ಆಂಧ್ರಪ್ರದೇಶದಲ್ಲಿ( Andhra Pradesh) ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ( Passenger Rail Accident) ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, 32 ಪ್ರಯಾಣಿಕರು ಗಾಯಗೊಂಡಿದ್ದಾರೆ.
ವಿಜಯನಗರಂ: ಆಂಧ್ರಪ್ರದೇಶದಲ್ಲಿ ಸಂಭವಿಸಿದ ಎರಡು ಪ್ಯಾಸೆಂಜರ್ ರೈಲುಗಳ ಡಿಕ್ಕಿ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆ 32 ಆಗಿದ್ದು. ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ವಿಶಾಖಪಟ್ಟಣದಿಂದ ಪಾಲಸ ಕಡೆಗೆ ಹೊರಟಿದ್ದ ವಿಶೇಷ ಪ್ಯಾಸೆಂಜರ್ ರೈಲು ನಿಲ್ದಾಣದಲ್ಲಿ ನಿಂತಿದ್ದಾಗ ವಿಜಾಗ್ ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದ್ದರಿಂದ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿತ್ತು. ವಿಜಯನಗರಂನ ಅಲಮಂಡ ಹಾಗೂ ಕಂಟಕಪಲ್ಲೆ ನಡುವಿನ ರೈಲು ನಿಲ್ದಾಣದ ಕೊತ್ತಸವತ್ಸಲ ಎಂಬಲ್ಲಿ ಸಿಗ್ನಲ್ ಸಿಗದೇ ವಿಶೇಷ ಪ್ಯಾಸೆಂಜರ್ ನಿಂತಿದ್ದಾಗ ಎದುರಿನಿಂದ ಬಂದ ರೈಲು ಡಿಕ್ಕಿಯಾಗಿ 3 ಕೋಚ್‌ಗಳು ಉರುಳಿ ಬಿದ್ದಿದ್ದವು.
ಅಪಘಾತ ಸಂಭವಿಸಿದಾಗ ಇಬ್ಬರು ಮೃತಪಟ್ಟಿದ್ದರು. ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂತರ ಸಾವಿನ ಸಂಖ್ಯೆ ಏರಿಕೆಯಾಗಿದ್ದು. ಈಗ 9 ಪ್ರಯಾಣಿಕರು ಮೃತಪಟ್ಟಿದ್ಧಾರೆ ಎಂದು ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಸ್ವಜಿತ್ ಸಾಹು ಎಎನ್‌ಐಗೆ ತಿಳಿಸಿದ್ದಾರೆ.
ಇದು ಸಿಬ್ಬಂದಿ ಗೊಂದಲದಿಂದ ಆಗಿರುವ ದುರಂತ. ನಿಂತಿದ್ದ ರೈಲಿನ ಸಿಗ್ನಲ್ ಅನ್ನು ಲೋಕೋ ಪೈಲಟ್ ಗಮನಿಸದೇ ಇದ್ದುದರಿಂದಲೇ ಈ ದುರಂತ ಆಗಿದೆ ಎನ್ನುತ್ತವೆ ರೈಲ್ವೆ ಮೂಲಗಳು. ದೆಹಲಿಯಿಂದಲೇ ರೈಲ್ವೆ ಸಚಿವಾಲಯವೂ ಅಲ್ಲಿನ ಪರಿಸ್ಥಿತಿ ನಿಭಾವಣೆ ಮಾಡುತ್ತಿದೆ. ಇಡೀ ಘಟನೆ ಕುರಿತು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿ ದುರಂತ ಸ್ಥಳದ ಪರಿಸ್ಥಿತಿಯ ವಿವರಗಳನ್ನು ಪಡೆದುಕೊಂಡಿದ್ಧಾರೆ. ಅಲ್ಲದೇ ರೈಲ್ವೆ ಸಚಿವರೂ ಕೂಡ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50,000 ರೂ. ಪರಿಹಾರ ವಿತರಣೆಯೂ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಲಾ 2 ಲಕ್ಷ ರೂ.ಗಳ ನೆರವನ್ನು ಮೃತರ ಕುಟುಂಬಕ್ಕೆ ಪ್ರಕಟಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯ ಸರ್ಕಾರವೂ ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದೆ. ಸಿಎಂ ಜಗನ್ಮೋಹನ ರೆಡ್ಡಿ ಸೂಚನೆ ಮೇರೆಗೆ ಸಚಿವ ಸತ್ಯನಾರಾಯಣ, ಸ್ಥಳೀಯ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡು ಬಿಟ್ಟು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾರೆ. ಸಮೀಪದ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಿದ್ದತೆ ಮಾಡಿಕೊಳ್ಳುವಂತೆಯೂ, ವಿಶಾಖಪಟ್ಟಣಂ ಹಾಗೂ ಅನಕಪಲ್ಲಿ ಜಿಲ್ಲೆಗಳಿಂದ ಆಂಬುಲೆನ್ಸ್‌ಗಳನ್ನು ರವಾನಿಸುವಂತೆಯೂ ಸೂಚಿಸಿರುವುದಾಗಿ ಜಗನ್ಮೋಹನ ರೆಡ್ಡಿ ಅವರು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಐದು ತಿಂಗಳ ಹಿಂದೆಯಷ್ಟೇ ಒಡಿಶಾದಲ್ಲಿ ಸಂಭವಿಸಿದ್ದ ಮೂರು ರೈಲುಗಳ ಡಿಕ್ಕಿ ಪ್ರಕರಣದಲ್ಲಿ290 ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿದ್ದರು. ಇದೇ ತಿಂಗಳಲಿನಲ್ಲಿ ಬಿಹಾರದಲ್ಲಿ ರೈಲು ದುರಂತದಲ್ಲಿ ಐವರು ಮೃತಪಟ್ಟಿದ್ದರು.
ಇದನ್ನೂ ಓದಿರಿ