Tamilnadu Rains: ತಮಿಳುನಾಡಿನಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ: ದಾಖಲೆ ಮಳೆಗೆ ತತ್ತರಿಸಿದ ದಕ್ಷಿಣದ ಜಿಲ್ಲೆಗಳು, 6 ಮಂದಿ ಸಾವಿನ ಶಂಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tamilnadu Rains: ತಮಿಳುನಾಡಿನಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ: ದಾಖಲೆ ಮಳೆಗೆ ತತ್ತರಿಸಿದ ದಕ್ಷಿಣದ ಜಿಲ್ಲೆಗಳು, 6 ಮಂದಿ ಸಾವಿನ ಶಂಕೆ

Tamilnadu Rains: ತಮಿಳುನಾಡಿನಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ: ದಾಖಲೆ ಮಳೆಗೆ ತತ್ತರಿಸಿದ ದಕ್ಷಿಣದ ಜಿಲ್ಲೆಗಳು, 6 ಮಂದಿ ಸಾವಿನ ಶಂಕೆ

TN rains update ತಮಿಳುನಾಡು ದಕ್ಷಿಣ ಭಾಗದಲ್ಲಿ( tamilnadu) ಎರಡು ದಿನ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಸಾಕಷ್ಟು ಹಾನಿಯಾಗಿದೆ. ಮಂಗಳವಾರವೂ ನಾಲ್ಕೈದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.

ಭಾರೀ ಮಳೆಯಿಂದ ದಕ್ಷಿಣ ತಮಿಳುನಾಡಿನ ಹಲವು ಕಡೆ ಇಂತಹ ಸನ್ನಿವೇಶ ಎದುರಾಗಿದೆ.
ಭಾರೀ ಮಳೆಯಿಂದ ದಕ್ಷಿಣ ತಮಿಳುನಾಡಿನ ಹಲವು ಕಡೆ ಇಂತಹ ಸನ್ನಿವೇಶ ಎದುರಾಗಿದೆ.

ಚೆನ್ನೈ: ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜನಜೀವನ ತತ್ತರಗೊಂಡಿದೆ. ಮಳೆಗೆ ಆರು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ತೊಂದರೆಗೆ ಸಿಲುಕಿದ್ದಾರೆ.

ಈಗಾಗಲೇ ಮಳೆ ಅನಾಹುತಕ್ಕೆ ಮೂವರು ಮೃತಪಟ್ಟಿರುವುದನ್ನು ಖಚಿತಪಡಿಸಲಾಗಿದ್ದು. ಇನ್ನೂ ಮೂವರು ನಾಪತ್ತೆಯಾಗಿರುವ ದೂರು ದಾಖಲಾಗಿವೆ. ಮಳೆಯ ಪ್ರಮಾಣ ನೋಡಿದರೆ ಇನ್ನಷ್ಟು ಜೀವ ಹಾನಿಯಾಗಿರುವ ಆತಂಕಗಳು ಎದುರಾಗಿವೆ.

ಮಂಗಳವಾರವೂ ದಕ್ಷಿಣ ತಮಿಳುನಾಡು ಭಾಗದ ತೂತ್ತುಕುಡಿ, ಕನ್ಯಾಕುಮಾರಿ, ತಿರುನೆಲ್ವೇಲಿ, ಟುಟಿಕಾರನ್‌, ತೆಂಕಾಸಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಈ ಭಾಗದಲ್ಲಿ ಯಲ್ಲೋ ಅಲರ್ಟ್‌ ಕೂಡ ಘೋಷಿಸಲಾಗಿದೆ. ಇದರಿಂದ ತಮಿಳು ನಾಡು ಸರ್ಕಾರವೂ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ನಾಲ್ಕೈದು ಜಿಲ್ಲೆಗಳ ಶಾಲಾ ಕಾಲೇಜು ಹಾಗೂ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.

́ತೂತ್ತುಕುಡಿಯಲ್ಲಿ ಭಾರೀ ಹಾನಿ

ತೂತ್ತುಕುಡಿ, ಟುಟಿಕಾರನ್‌ ಜಿಲ್ಲೆಗಳ ಹಲವು ಭಾಗಗಳು ಮಳೆ ನೀರಿನಿಂದಾಗಿ ಜಲಾವೃತಗೊಂಡಿವೆ. ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ನೀರು ಹರಿದು ಸಂಚಾರವೂ ದುಸ್ತರವಾಗಿದೆ.

ಮನೆಗಳು, ಬಡಾವಣೆಗಳಿಗೆ ನೀರು ನುಗ್ಗಿದೆ. ರಸ್ತೆಗಳೂ ಕುಸಿದು ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದ ಜಲಾಶಯಗಳು ಭರ್ತಿಯಾಗಿ ನೀರು ಹೊರ ಹರಿಬಿಡಲಾಗುತ್ತಿದೆ. ಹಲವೆಡೆ ಕೆರೆಗಳು ಒಡೆದ ಪರಿಣಾಮ ಊರುಗಳೂ ಹೊಳೆಗಳಾಗಿ ಮಾರ್ಪಟ್ಟಿವೆ. ಕೆಲವು ಕಡೆಯಂತೂ ಕಳೆದ ವಾರ ಚೆನ್ನೈನಲ್ಲಿ ಸುರಿದ ಮಳೆಗಿಂತ ದಾಖಲೆ ಮಳೆಯಾಗಿದೆ. ಒಂದೇ ದಿನದಲ್ಲಿ ತೂತ್ತುಕುಡಿ, ಟುಟಿಕಾರನ್‌ ಜಿಲ್ಲೆಯ ಹಲವೆಡೆ ದಾಖಲೆ ಮಳೆ ಸುರಿದ ವರದಿಯಾಗಿದೆ.

ರಕ್ಷಣೆಗೆ ಧಾವಿಸಿದ ಸೇನೆ

ಈಗಾಗಲೇ ತಮಿಳುನಾಡು ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಜತೆಗೆ ಭಾರತೀಯ ಸೇನೆಯೂ ರಕ್ಷಣಾ ಕಾರ್ಯಕ್ಕೆ ಇಳಿದಿದೆ. ತೂತ್ತುಕುಡಿ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿರುವವನ್ನು ಸೇನಾ ಸಿಬ್ಬಂದಿ ಹೆಲಿಕಾಪ್ಟರ್‌ ಬಳಸಿ ರಕ್ಷಣೆ ಮಾಡುತ್ತಿದ್ದಾರೆ. ಇದಲ್ಲದೇ ನೌಕಾಪಡೆ, ವಾಯುಪಡೆಯ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲು ಯೋಜಿಸಲಾಗುತ್ತಿದೆ.

ಈವರೆಗೂ 7,500 ಕ್ಕೂ ಅಧಿಕ ಜನರನ್ನು ರಕ್ಷಿಸಿ ಅವರನ್ನು 84 ಪುನರ್‌ ವಸತಿ ಕೇಂದ್ರಗಳಲ್ಲಿ ಇರಿಸಲಾಗಿದೆ. 62 ಲಕ್ಷ ಮಂದಿ ಮೊಬೈಲ್‌ಗಳಿಗೆ ಮುನ್ನೆಚ್ಚರಿಕೆ ಸಂದೇಶವನ್ನೂ ರವಾನಿಸಲಾಗಿದೆ.

ರೈಲಲ್ಲಿ ಸಿಲುಕಿದ ಪ್ರಯಾಣಿಕರು

ತಿರುಚೆಂಡೂರಿನಿಂದ ಚೆನ್ನೈಗೆ ಹೊರಟಿದ್ದ 800 ಪ್ರಯಾಣಿಕರಿದ್ದ ರೈಲು ಮಳೆಯಿಂದಾಗಿ ತೂತುಕುಡಿ ಜಿಲ್ಲೆ ಶ್ರೀವೈಕುಂಠಂನಲ್ಲಿ ನಿಂತಿತ್ತು. ಮಳೆಯ ಕಾರಣದಿಂದಾಗಿ ರೈಲು ಸಂಚಾರವಾಗದೇ ಪ್ರಯಾಣಿಕರು ಬಹುತೇಕ ಒಂದು ದಿನ ರೈಲು ನಿಲ್ದಾಣದಲ್ಲೇ ಕಳೆಯಬೇಕಾಯಿತು. ಕೆಲವರನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಭಾರೀ ಮಳೆಯ ಕಾರಣದಿಂದ ತೂತ್ತು ಕುಡಿ ಜಿಲ್ಲೆಯ ಹಲವಾರು ರೈಲುಗಳ ಸಂಚಾರವೂ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಪ್ರಧಾನಿ ಭೇಟಿಯಾಗುವ ಸ್ಟಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಈಗಾಗಲೇ ಹಿರಿಯ ಸಚಿವರು ಹಾಗೂ ಅಧಿಕಾರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದು, ಹಲವರು ಅಲ್ಲಿಯೇ ಬೀಡುಬಿಟ್ಟು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಳೆ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೂ ನಿಯಮಿತವಾಗಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಎಂ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ಹಾಗೂ ನೆರವಿಗೆ ಕೇಂದ್ರ ಧಾವಿಸುವಂತೆ ಕೋರುವ ನಿರೀಕ್ಷೆಯಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮಾತನಾಡಿ ಮಳೆ ಅನಾಹುತ ವಿವರವನ್ನು ಒದಗಿಸಿದ್ದಾರೆ.

ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ಕೂಡ ಪ್ರವಾಹದ ಮಾಹಿತಿಯನ್ನು ನಿಯಮಿತವಾಗಿ ಪಡೆಯುತ್ತಿದ್ದಾರೆ. ಮಂಗಳವಾರ ಹಿರಿಯ ಅಧಿಕಾರಿಗಳ ಸಭಯನ್ನೂ ರಾಜ್ಯಪಾಲರು ಕರೆದಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.