Lion sea safari: ಸಮುದ್ರ ತೀರದಲ್ಲಿ ಕಂಡ ಗುಜರಾತ್‌ ಜುನಾಗಢದ ಸಿಂಹ: ಫೋಟೋ ವೈರಲ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lion Sea Safari: ಸಮುದ್ರ ತೀರದಲ್ಲಿ ಕಂಡ ಗುಜರಾತ್‌ ಜುನಾಗಢದ ಸಿಂಹ: ಫೋಟೋ ವೈರಲ್‌

Lion sea safari: ಸಮುದ್ರ ತೀರದಲ್ಲಿ ಕಂಡ ಗುಜರಾತ್‌ ಜುನಾಗಢದ ಸಿಂಹ: ಫೋಟೋ ವೈರಲ್‌

Lion in Arabian sea ಸಿಂಹ ಕಾಡಿನಲ್ಲಿರುವುದು ಸಾಮಾನ್ಯ. ಅದೇ ಸಿಂಹ ಸಮುದ್ರಕ್ಕೆ ಬಂದರೆ ಹೇಗಿರಬೇಡ, ಗುಜರಾತ್‌ನಲ್ಲೂ ಹಾಗೆಯೇ ಆಗಿದೆ. ಸಿಂಹವೊಂದು ಕಾಡಿನಿಂದ ಸಮುದ್ರಕ್ಕೆ ಬಂದು ನಿಂತಿರುವ ಫೋಟೋ ವೈರಲ್‌ ಆಗಿದೆ.

ಗುಜರಾತ್‌ನ ಸಮುದ್ರ ತೀರದಲ್ಲಿ ಕಂಡ ಸಿಂಹದ ಚಿತ್ರ ಭಾರೀ ವೈರಲ್‌ ಆಗಿದೆ.
ಗುಜರಾತ್‌ನ ಸಮುದ್ರ ತೀರದಲ್ಲಿ ಕಂಡ ಸಿಂಹದ ಚಿತ್ರ ಭಾರೀ ವೈರಲ್‌ ಆಗಿದೆ.

ಅಹಮದಾಬಾದ್‌: ಸಿಂಹವನ್ನು ನೋಡಬೇಕೆಂದರೆ ನೀವು ಗುಜರಾತ್‌ಗೆ ಹೋಗಬೇಕು ಇಲ್ಲವೇ ಮೃಗಾಲಯಗಳಿಗೆ ತೆರಳಬೇಕು. ಏಕೆಂದರೆ ಕಾಡಿನಲ್ಲಿ ಸಿಂಹ ವೀಕ್ಷಣೆಗೆ ಸಿಗುವುದು ಗುಜರಾತ್‌ನಲ್ಲಿ ಮಾತ್ರ. ಅಂತಹ ಸಿಂಹ ಸಮುದ್ರ ತೀರಕ್ಕೆ ಬಂದರೆ ಹೇಗಿರಬೇಡ.

ಗುಜರಾತ್‌ ರಾಜ್ಯಕ್ಕೆ ಹೊಂದಿಕೊಂಡಂತೆ ಅರಬ್ಬಿಯನ್‌ ಸಮುದ್ರದಲ್ಲಿ ಭಾರೀ ಗಾತ್ರದ ಸಿಂಹವೊಂದು ಕಾಣಿಸಿಕೊಂಡಿದೆ. ಸಿಂಹವು ಸಮುದ್ರದ ನೀರಿನಲ್ಲಿ ಇರುವುದನ್ನು ಗಮನಿಸಿ ಗುಜರಾತ್‌ ಅರಣ್ಯ ಇಲಾಖೆ ಸಿಬ್ಬಂದಿ ಫೋಟೋ ತೆಗೆದಿದ್ದಾರೆ. ಜುನಾಗಢ್‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಈ ಫೋಟೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನೊಬ್ಬ ಹಿರಿಯ ಐಎಫ್‌ಎಸ್‌ ಅಧಿಕಾರಿ ಪರ್ವೀನ್‌ ಕಸ್ವಾನ್‌ ಕೂಡ ಇದೇ ಫೋಟೋ ಹಾಕಿದ್ದು ಭಾರೀ ವೈರಲ್‌ ಆಗಿದೆ. ಅದೂ ಅಕ್ಟೊಬರ್‌ 2ರಿಂದ ವನ್ಯಜೀವಿ ಸಪ್ತಾಹ ಬೇರೆ ಶುರುವಾಗಿರುವುದರಿಂದ ಇದೇ ಅವಧಿಯಲ್ಲಿ ಫೋಟೋ ಆಸಕ್ತರ ಗಮನ ಸೆಳೆಯುತ್ತಿದೆ.

ಜುನಾಗಢದ ಸಿಸಿಎಫ್‌ ಅವರು ಪೋಸ್ಟ್‌ ಹಾಕಿ, ಸಿಂಹವೊಂದು ಅರಬ್ಬಿಯನ್‌ ಸಮುದ್ರದ ದರ್ಯಾ ಕಾಂತಾ ಪ್ರದೇಶದಲ್ಲಿ ಕಂಡು ಬಂದಿದೆ. ನಮ್ಮ ಸಿಬ್ಬಂದಿ ಭದ್ರಾವಾ ಪೂನಮ್‌ ಗಸ್ತು ಪ್ರದೇಶದಲ್ಲಿ ಗಸ್ತಿಗೆಂದು ಹೋದಾಗ ಸಿಂಹ ಗಮನಿಸಿದ್ದಾರೆ ಎಂದು ಹೇಳಿದ್ದಾರೆ.

ಇದಾಗುತ್ತಲೇ ಕೆಲ ಹೊತ್ತಿಗೆ ಇದೇ ಫೋಟೋವನ್ನು ಪೋಸ್ಟ್‌ ಮಾಡಿರುವ ಐಎಫ್‌ಎಸ್‌ ಅಧಿಕಾರಿ ಪರ್ವೀನ್‌ ಕಸ್ವಾನ್‌, ನಾರ್ನಿಯಾ ನಿಜದಂತೆ ಕಂಡಾಗ. ಸಿಂಹವೊಂದು ಅರಬ್ಬಿಯನ್‌ ಸಮುದ್ರ ತೀರದಲ್ಲಿ ಸಂತಸದಲ್ಲಿ ಕಳೆಯುತ್ತಿರುವ ಕ್ಷಣವಿದು ಎಂದು ಒಕ್ಕಣೆ ಬರೆದಿದ್ದರು.

ಇದಲ್ಲದೇ ಮತ್ತೊಂದು ಪೋಸ್ಟ್‌ನಲ್ಲಿ ಕಸ್ವಾನ್‌ ಅವರು ಸಿಂಹಗಳ ಕುರಿತು ಗುಜರಾತ್‌ನಲ್ಲಿ ಕೈಗೊಂಡಿರುವ ಸಂಶೋಧನಾ ವಿವರಗಳನ್ನೂ ಹಾಕಿದ್ದರು.

ಸಿಂಹಗಳ ಕುರಿತು ಮೋಹನ್‌ ರಾಮ್‌ ಮತ್ತಿತರರು ಸಂಶೋಧನೆ ಹಾಗೂ ಕ್ಷೇತ್ರ ಕಾರ್ಯ ಕೈಗೊಂಡಿದ್ದಾರೆ. ಸಿಂಹಗಳು ಸಮುದ್ರ ತೀರದಲ್ಲಿ ಬದುಕುತ್ತಿರುವುದು ಹಾಗೂ ಅವುಗಳ ಆವಾಸಸ್ತಾನದ ವಿಸ್ತರಣೆ ಎನ್ನುವ ಕುರಿತ ಸಂಶೋಧನೆಯಿದು. ಇದರಲ್ಲಿ ಸಿಂಹಗಳು ಗಿರ್‌ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬದುಕು ಕಂಡು ಕೊಂಡಿವೆ. ಕರಾವಳಿ ಪ್ರದೇಶಕ್ಕೂ ಇವುಗಳ ಆವಾಸ ಸ್ಥಾನ ವಿಸ್ತರಣೆಯಾಗಿರುವುದರಿಂದ ಅಲ್ಲಿಯೂ ಕಂಡು ಬರುತ್ತಿವೆ. ಗುಜರಾತ್‌ನ ಕರಾವಳಿ ಭಾಗದ ಸುತ್ರಾಪಾದದಲ್ಲಿ ಸಿಂಹಗಳು ಇರುವುದನ್ನು ತೊಂಬತ್ತರ ದಶಕದಲ್ಲಿಯೇ ಗುರುತಿಸಲಾಗಿತ್ತು. ಆನಂತರವೂ ಕರಾವಳಿಯ ನಾಲ್ಕು ಜಿಲ್ಲೆಗಳಲ್ಲಿ ಅವುಗಳ ಇರುವಿಕೆ ಕಂಡು ಬಂದಿದೆ ಎನ್ನುವುದನ್ನು ಸಂಶೋಧನೆ ಒತ್ತಿ ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ಈ ಚಿತ್ರ ನೋಡಿದ ಪ್ರಾಣಿ ಪ್ರಿಯರು ಖುಷ್‌ ಆಗಿದ್ದಾರೆ. ಹಲವರು ಪ್ರತಿಕ್ರಿಯಿಸಿದ್ದಾರೆ ಕೂಡ. ನಾರ್ನಿಯಾದಲ್ಲಿ ಪ್ರಕೃತಿ ವಿಸ್ಮಯ. ಗುಜರಾತ್‌ನ ಸಮುದ್ರತೀರದಲ್ಲಿ ಸಿಂಹ ಕಂಡು ಖುಷಿಯಾಯಿತು. ಜುನಾಗಢ ಸಿಸಿಎಫ್‌ ಅವರಿಗೆ ಧನ್ಯವಾದ ಒಂದು ಒಬ್ಬರು ಬರೆದಿದ್ದಾರೆ.

ಸಿಂಹ ನಿಂತಿರುವ ಆ ಗಾಂಭಿರ್ಯವನ್ನು ನೋಡುವುದೇ ಚಂದ. ಅದೂ ಅರಬ್ಬಿಯನ್‌ ಸಮುದ್ರದ ಆ ಆಲೆಗಳಿಗೂ ಬೆಚ್ಚದೇ ಗಟ್ಟಿಯಾಗಿ ನಿಂತಿರುವ ಸಿಂಹದ ನೋಟವಂತೂ ನೋಡಲು ಹಿತವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇದೇ ರೀತಿ ಹಲವರು ಪ್ರತಿಕ್ರಿಯೆಗಳನ್ನು ಅಭಿಮಾನದಿಂದಲೇ ಬರೆದಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.