Madhya Pradesh CM: ಮಧ್ಯಪ್ರದೇಶ ಸಿಎಂ ಆಯ್ಕೆ ಸಭೆ ನಾಳೆ: ರಾಮ್‌ ರಾಮ್‌ ಎಂದು ಟ್ವೀಟ್‌ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಿಎಂ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Madhya Pradesh Cm: ಮಧ್ಯಪ್ರದೇಶ ಸಿಎಂ ಆಯ್ಕೆ ಸಭೆ ನಾಳೆ: ರಾಮ್‌ ರಾಮ್‌ ಎಂದು ಟ್ವೀಟ್‌ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಿಎಂ

Madhya Pradesh CM: ಮಧ್ಯಪ್ರದೇಶ ಸಿಎಂ ಆಯ್ಕೆ ಸಭೆ ನಾಳೆ: ರಾಮ್‌ ರಾಮ್‌ ಎಂದು ಟ್ವೀಟ್‌ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಿಎಂ

Madhya Pradesh politics ಮಧ್ಯಪ್ರದೇಶದಲ್ಲಿ ಚುನಾವಣೆ( Madhya Pradesh assembly Elections) ಫಲಿತಾಂಶ ಬಂದು ವಾರವೇ ಆಗುತ್ತಿದೆ. ಈವರೆಗೂ ಸಿಎಂ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲ. ಇದಕ್ಕಾಗಿ ಸೋಮವಾರ ವೀಕ್ಷಕರು ಆಗಮಿಸುತ್ತಿದ್ದಾರೆ. ಈ ನಡುವೆ ಸಿಎಂ ಶಿವರಾಜಸಿಂಗ್‌ ಚೌಹಾಣ್‌ ( CM Shivaraj Singh Chauhan) ಅವರ ಎಕ್ಸ್‌ ಪೋಸ್ಟ್‌ ಸದ್ದು ಮಾಡುತ್ತಿದೆ.

ಮಧ್ಯಪ್ರದೇಶ ನೂತನ ಸಿಎಂ ಆಯ್ಕೆ ಶಾಸಕರ ಸಭೆಗೆ ಭೋಪಾಲ್‌ನಲ್ಲಿ ಸಿದ್ದತೆ ನಡೆದಿದೆ.
ಮಧ್ಯಪ್ರದೇಶ ನೂತನ ಸಿಎಂ ಆಯ್ಕೆ ಶಾಸಕರ ಸಭೆಗೆ ಭೋಪಾಲ್‌ನಲ್ಲಿ ಸಿದ್ದತೆ ನಡೆದಿದೆ.

ಭೋಪಾಲ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆ ಸಂಬಂಧ ವೀಕ್ಷಕರು ಭೋಪಾಲ್‌ಗೆ ಸೋಮವಾರ ಆಗಮಿಸಲಿದ್ದಾರೆ. ಮಧ್ಯಪ್ರದೇಶದ ಸಿಎಂ ಸ್ಥಾನವನ್ನು ಹಾಲಿ ಸಿಎಂ ಶಿವರಾಜಸಿಂಗ್‌ ಚೌಹಾಣ್‌ ಉಳಿಸಿಕೊಳ್ಳುವರೇ ಅಥವಾ ಹೊಸಬರಿಗೆ ಅವಕಾಶ ಸಿಗಲಿದೆಯಾ ಎನ್ನುವ ಚರ್ಚೆಗಳು ನಡೆದಿವೆ. ಇದರ ನಡುವೆ ಶಿವರಾಜಸಿಂಗ್‌ ಚೌಹಾಣ್‌ ಮಾಡಿರುವ ಎಲ್ಲರಿಗೂ ರಾಮ್‌ ರಾಮ್‌ ಎನ್ನುವ ಎಕ್ಸ್‌ ಪೋಸ್ಟ್‌ ಸಾಕಷ್ಟು ಸದ್ದು ಮಾಡುತ್ತಿದೆ.

ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿ ಈ ಬಾರಿಯೂ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವ ಶಿವರಾಜ ಸಿಂಗ್‌ ಚೌಹಾಣ್‌ ಮತ್ತೆ ಸಿಎಂ ಆಗುವ ಕುರಿತು ಪಕ್ಷದೊಳಗೆ ಭಿನ್ನ ಚರ್ಚೆಗಳು ನಡೆದಿವೆ. ಹೊಸ ಮುಖವನ್ನು ಸಿಎಂ ಆಗಿ ತರಲು ಪಕ್ಷದ ವರಿಷ್ಠರು ಬಯಸಿದ್ದಾರೆ. ಚೌಹಾಣ್‌ ಅವರಿಗೆ ಕೇಂದ್ರ ರಾಜಕೀಯದಲ್ಲಿ ಸ್ಥಾನ ನೀಡಲಾಗುತ್ತದೆ ಎನ್ನುವ ಅಭಿಪ್ರಾಯಗಳೂ ಇವೆ.

ಈ ನಡುವೆ ಶಿವರಾಜಸಿಂಗ್‌ ಚೌಹಾಣ್‌ ಶನಿವಾರ ಮಾಡಿದ ಪೋಸ್ಟ್‌ ಚರ್ಚೆ ಹುಟ್ಟು ಹಾಕಿತು. ಎಲ್ಲರಿಗೂ ರಾಮ್‌ ರಾಮ್‌ ಎನ್ನುವ ಪೋಸ್ಟ್‌ ತಮ್ಮ ವಿದಾಯದ ಮುನ್ಸೂಚನೆ ಎಂದು ಹಲವರು ಉಲ್ಲೇಖಿಸಿದರೆ, ಪಕ್ಷದ ನಾಯಕರು ಇದು ಸಹಜವಾದ ಅಭಿಪ್ರಾಯವಷ್ಟೇ ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ಮಾತನಾಡಿದ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮ, ಇದು ರಾಮನ ದೇಶ. ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಿವರಾಜಸಿಂಗ್‌ ಚೌಹಾಣ್‌ ಅವರು ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ಬೇರೆ ಅರ್ಥ ಹುಡುಕುವುದು ಬೇಡ. ಏಕೆಂದರೆ ಪ್ರತಿ ದಿನ ಬೆಳಿಗ್ಗೆ ನಾವೆಲ್ಲರೂ ಶುಭ ಕೋರುವುದು ರಾಮ್‌ ರಾಮ್‌ ಎನ್ನುವ ಮಾತಿನಿಂದಲೇ. ಇದು ನಮ್ಮ ಸಂಸ್ಕೃತಿಯೂ ಕೂಡ ಎಂದು ಹೇಳಿದರು.

ಇಂತಹವೇ ಸಿಎಂ ಆಗುತ್ತಾರೆ ಎಂದು ಹೇಳಲಾಗದು. ಆದರೆ ಬಿಜೆಪಿ ಕೇಡರ್‌ ಆಧಾರದ ಪಕ್ಷವಾಗಿರುವುದರಿಂದ ಎಲ್ಲರೂ ಪಕ್ಷದ ಕಾರ್ಯಕರ್ತರೇ. ನಾಯಕರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಒಪ್ಪುವರು. ಮಧ್ಯಪ್ರದೇಶ ಸಿಎಂ ಆಯ್ಕೆ ವಿಚಾರದಲ್ಲೂ ಇದೇ ಆಗಲಿದೆ ಎಂದು ಶರ್ಮ ತಿಳಿಸಿದರು.

ಮಧ್ಯಪ್ರದೇಶ ಸಿಎಂ ಆಯ್ಕೆ ಸಂಬಂಧ ಡಿಸೆಂಬರ್‌ 11ರಂದು ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಪಕ್ಷದ ವೀಕ್ಷಕರಾಗಿರುವ ಹರಿಯಾಣ ಸಿಎಂ ಮನೋಹರ ಲಾಲ್‌ ಖಟ್ಟರ್‌, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್‌, ಕಾರ್ಯದರ್ಶಿ ಆಶಾ ಲಖ್ರಾ ಅವರು ಸಭೆ ನಡೆಸಿ ಅಭಿಪ್ರಾಯ ಆಲಿಸಲಿದ್ದಾರೆ. ಶಾಸಕರು ತಮ್ಮ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ತಿಳಿಸುವರು. ಆನಂತರ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವರು ಎಂದು ಹೇಳಿದರು.

ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ಹಾಲಿ ಸಿಎಂ ಶಿವರಾಜ ಸಿಂಗ್‌, ಕೇಂದ್ರದ ಮಾಜಿ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪ್ರಹ್ಲಾದ್‌ ಪಟೇಲ್‌, ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮ ಸಹಿತ ಹಲವರ ಹೆಸರುಗಳಿವೆ. ಸೋಮವಾರ ಸಂಜೆ ಹೊತ್ತಿಗೆ ನೂತನ ನಾಯಕನ ಪ್ರಕಟಣೆ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.