Rajasthan assembly elections 2023 : ರಾಜಸ್ಥಾನದ ವಿಧಾನಸಭೆ ಚುನಾವಣೆ ಕಣದಲ್ಲೊಬ್ಬ ಯೋಗಿ: ಇವರು ಯೋಗಿ ಮಹಾಂತ ಬಾಲಕನಾಥ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajasthan Assembly Elections 2023 : ರಾಜಸ್ಥಾನದ ವಿಧಾನಸಭೆ ಚುನಾವಣೆ ಕಣದಲ್ಲೊಬ್ಬ ಯೋಗಿ: ಇವರು ಯೋಗಿ ಮಹಾಂತ ಬಾಲಕನಾಥ

Rajasthan assembly elections 2023 : ರಾಜಸ್ಥಾನದ ವಿಧಾನಸಭೆ ಚುನಾವಣೆ ಕಣದಲ್ಲೊಬ್ಬ ಯೋಗಿ: ಇವರು ಯೋಗಿ ಮಹಾಂತ ಬಾಲಕನಾಥ

Mahant Balaknath Yogi ರಾಜಸ್ಥಾನದ ವಿಧಾನಸಭೆ ಚುನಾವಣೆಗೆ ಹಾಲಿ ಲೋಕಸಭಾ ಸದಸ್ಯರಾಗಿರುವ ಮಹಾಂತ ಬಾಲಕನಾಥ ಯೋಗಿ ಬಿಜೆಪಿ ಹುರಿಯಾಳು. ಅವರ ಕುರಿತು ವಿಶೇಷ ಮಾಹಿತಿ ಇಲ್ಲಿದೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗಮನ ಸೆಳೆದಿರುವ ಮಹಾಂತ ಬಾಲಕನಾಥ ಯೋಗಿ
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗಮನ ಸೆಳೆದಿರುವ ಮಹಾಂತ ಬಾಲಕನಾಥ ಯೋಗಿ

ಜೈಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌( Yogi Aditya Nath) ನಿಮಗೆ ಗೊತ್ತು. ಐದು ಬಾರಿ ಸಂಸದರಾಗಿ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.

ಈಗ ರಾಜಸ್ಥಾನದಲ್ಲೂ ಮತ್ತೊಬ್ಬ ಯೋಗಿ ವಿಧಾನಸಭೆ ಚುನಾವಣೆ ಕಣದಲ್ಲಿದ್ದು ಮುನ್ನಡೆ ಕಾಯ್ದುಕೊಂಡಿದ್ಧಾರೆ. ಉತ್ತರ ಪ್ರದೇಶದ ಯೋಗಿ ಅವರಂತೆಯೇ ರಾಜಸ್ಥಾನದಲ್ಲಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.

ಇವರ ಪೂರ್ಣ ಹೆಸರು ಮಹಾಂತ ಬಾಲಕನಾಥ ಯೋಗಿ(Mahant Balaknath yogi). ವಯಸ್ಸು 39.

ಇವರ ತಂದೆ ಸುಭಾಷ್‌ ಯಾದವ್‌ ಹಾಗೂ ತಾಯಿ ಊರ್ಮಿಳಾ ದೇವಿ. ರಾಜಸ್ಥಾನ್ ಆಳ್ವಾರ್‌ನಲ್ಲಿ ಜನಿಸಿದ ಮಹಾಂತ್‌ ಅವರು ಆರನೇ ವಯಸ್ಸಿನಲ್ಲಿಯೇ ಧರ್ಮದೀಕ್ಷೆ ಪಡೆದವರು.

ಪೀಠಾಧಿಪತಿ

ನಾಥ ಪಂತದ ಮಹಾಂತ ಬಾಲಕನಾಥಯೋಗಿಯಾಗಿ ಬದಲಾದವರು. ಅಲ್ಲಿಂದ ಶಿಕ್ಷಣ ಪಡೆದು ಧರ್ಮ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಬಂದವರು. ಹರಿಯಾಣದ ರೋಹ್ಟಕ್‌ನಲ್ಲಿರುವ ಬಾಬಾ ಮಸ್ತನಾಥ ಮಠದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಿದ್ದರು. ಎಂಟು ವರ್ಷದ ಹಿಂದೆ ಬಾಬಾ ಮಸ್ತನಾಥ ಮಠದ ಎಂಟನೇ ಪೀಠಾಧಿಪತಿಯಾಗಿ ಬಾಬಾ ರಾಮದೇವ್‌ ಹಾಗೂ ಯೋಗಿ ಆದಿತ್ಯನಾಥ್‌ ಅವರಿಂದಲೇ ಪೀಠ ದೀಕ್ಷೆ ಪಡೆದಿದ್ದರು.

ಮಠದ ಆಡಳಿತ ಹಾಗೂ ಬಾಬಾ ಮಸ್ತನಾಥ್‌ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಮಹಾಂತ ಬಾಲಕನಾಥ್‌ ಯೋಗಿ ಅವರು ಬಿಜೆಪಿ ಸೇರಿದರು.

ಲೋಕಸಭೆಗೆ ಆಯ್ಕೆ

2019ರಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ರಾಜಸ್ಥಾನದಲ್ಲಿ ಇವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಆಳ್ವಾರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭಂವರ್‌ ಜಿತೇಂದ್ರ ಸಿಂಗ್‌ ಅವರನ್ನು ಮಣಿಸಿದರು. ಮೊದಲ ಬಾರಿಗೆ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದು ಲೋಕಸಭೆಯನ್ನೂ ಮಹಾಂತ ಯೋಗಿ ಪ್ರವೇಶಿಸಿದರು.

ವಿಧಾನಸಭೆ ಚುನಾವಣೆಗೆ

ನಾಲ್ಕು ವರ್ಷದಿಂದ ಲೋಕಸಭೆ ಸದಸ್ಯರಾಗಿದ್ದ ಯೋಗಿ ಅವರಿಗೆ ಈ ಬಾರಿ ಬಿಜೆಪಿ ವಿಧಾನಸಭೆ ಚುನಾವಣೆಯ ಹುರಿಯಾಳನ್ನಾಗಿ ಮಾಡಿದೆ.

ತಿಜಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಮ್ರಾನ್‌ ಖಾನ್‌ ವಿರುದ್ದ ಮಹಾಂತ ಯೋಗಿ ಕಣಕ್ಕಿಳಿದಿದ್ದಾರೆ. ಈವರೆಗಿನ ಫಲಿತಾಂಶದ ಪ್ರಕಾರ ಯೋಗಿ ಅವರೇ ಮುನ್ನಡೆಯಲ್ಲಿದ್ದು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್‌ ಆರೋಪ

ಚುನಾವಣೆ ವೇಳೆ ಮಹಾಂತ ಯೋಗಿ ವಿರುದ್ದ ಕಾಂಗ್ರೆಸ್‌ ಗಂಭೀರ ಆರೋಪಗಳನ್ನು ಮಾಡಿತ್ತು. ಮಹಾಂತ್‌ಬಾಲಕನಾಥ್‌ ಯೋಗಿ ಅವರು 52 ಕೋಟಿ ರೂ. ಬೆಲೆ ಬಾಳುವ 32 ಎಕರೆ ಭೂಮಿಯನ್ನು ಲಂಡನ್‌ನ ಕಲ್ಟಸ್‌ ಸರೋವರ(Cultus Lake) ನಲ್ಲಿ ಖರೀದಿಸಿದ್ದಾರೆ ಎಂದು ಆರೋಪಿಸಿತ್ತು. ಇದನ್ನು ಅವರು ನಿರಾಕರಿಸಿದ್ದರು.

ರಾಜಸ್ಥಾನದ ತಿಜಾರ ಕ್ಷೇತ್ರದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ದೊರೆತಿರುವ ಸಾರ್ವಜನಿಕ ಬೆಂಬಲವನ್ನು ನೋಡಿ ಕಾಂಗ್ರೆಸ್‌ ಹತಾಶವಾಗಿದೆ. ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ಆಡಳಿತದ ವಿಚಾರದ ಗಮನವನ್ನು ಬೇರೆಡೆ ಸೆಳೆಯಲು ನನ್ನ ವಿಚಾರ ತಂದಿದೆ. ಇವೆಲ್ಲವೂ ಸುಳ್ಳು ಆರೋಪಗಳು ಎಂದು ಮಹಾಂತ ಬಾಲಕನಾಥ ಯೋಗಿ ಹೇಳಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.