Interesting News: ಬಿಹಾರದಲ್ಲಿ ಅತ್ತೆಯನ್ನೇ ವರಿಸಿದ ಅಳಿಯ, ಪ್ರೀತಿಯಿಂದಲೇ ಮದುವೆ ಮಾಡಿಕೊಟ್ಟ ಮಾವ
ಇದೊಂದು ವಿಚಿತ್ರ ಪ್ರೇಮ ಕಥೆ.ಅತ್ತೆಯನ್ನೇ ವರಿಸಿದ ಅಳಿಯ ವಿಚಿತ್ರ ಕಥೆ. ಬಿಹಾರದಲ್ಲಿ ಇಂತಹದೊಂದು ಘಟನೆ ನಡೆದಿದೆ.
ಪಾಟ್ನಾ: ಇದೊಂದು ವಿಚಿತ್ರ ಪ್ರೇಮ ಕಥೆ. ಅಳಿಯನೇ ಅತ್ತೆಯನ್ನು ವರಿಸಿದ ನಿಜ ಕಥೆ. ಅಳಿಯ ಹಾಗೂ ಪತ್ನಿಯ ಪ್ರೇಮ ಸಲ್ಲಾಪವನ್ನು ಪತ್ತೆ ಮಾಡಿದ ವ್ಯಕ್ತಿಯೇ ಗ್ರಾಮಸ್ಥರ ಸಮ್ಮುಖದಲ್ಲಿಯೇ ಅಳಿಯ ಅತ್ತೆಗೆ ಮದುವೆ ಮಾಡಿಸಿದ ವಿಲಕ್ಷಣ ಕಥೆಯೂ ಹೌದು. ಅಜ್ಜಿಯನ್ನೇ ಅಮ್ಮನಾಗಿ ಸ್ವೀಕರಿಸಿದ ಎರಡು ಮಕ್ಕಳ ರೋಚಕ ಕಥಾನಕ ಕೂಡ. ಒಮ್ಮೆಲ್ಲ ಇದನ್ನು ಕೇಳಿದರೆ ಯಾವುದೇ ಸಿನೆಮಾ ಇರಬೇಕು ಎನ್ನಿಸದೇ ಇರದು. ಆದರೆ ಭಾರತದಲ್ಲಿಯೇ ನಡೆದಿರುವ ನಿಜ ಘಟನೆ. ಇದು ನಡೆದಿರುವುದು ಬಿಹಾರ ರಾಜ್ಯದಲ್ಲಿ. ಬಿಹಾರದ ಬಂಕ್ ಜಿಲ್ಲೆಯ ಹೀರಾ ಮೋತಿ ಗ್ರಾಮದಲ್ಲಿ. ಗ್ರಾಮಸ್ಥರು ಪ್ರೀತಿಸಿದ ಈ ಜೋಡಿಯ ಮದುವೆಯಲ್ಲಿ ಭಾಗಿಯಾಗಿ ಸಂಭ್ರಮವನ್ನೂ ವ್ಯಕ್ತಪಡಿಸಿದ್ದಾರೆ.
ಆಗಿದ್ದಾದರೂ ಏನು
ಆತನ ಹೆಸರು ಸಿಕಂದರ್ ಯಾದವ್. ವಯಸ್ಸು 45. ಖಾಸಗಿ ಸಂಸ್ಥೆಯಲ್ಲಿ ಕೆಲಸಗಾರ. ಮದುವೆಯಾಗಿ 15 ವರ್ಷಗಳಾಗಿ ಇಬ್ಬರು ಮಕ್ಕಳಿದ್ದಾರೆ. ಆತ ಮದುವೆಯಾದ ಪತ್ನಿಯ ತಾಯಿ ಗೀತಾದೇವಿ ವಯಸ್ಸು 55 ವರ್ಷ. ಸಿಕಂದರ್ ಸಾಮಾನ್ಯವಾಗಿ ಆಗಾಗ ಅತ್ತೆ ಮನೆಗೆ ಬಂದು ಹೋಗುತ್ತಿದ್ದ. ಆಗ ಇಬ್ಬರೂ ಎಂದಿನಿಂತಯೇ ಇದ್ದರು. ಕಳೆದ ವರ್ಷ ಪತ್ನಿ ತೀರಿಕೊಂಡಳು. ಇಂತ ವೇಳೆ ಪತ್ನಿ ತೀರಿಕೊಂಡ ಮೇಲೆ ಸಹಜವಾಗಿ ಅತ್ತೆ ಮನೆಯ ಒಡನಾಟ ಕೊಂಚ ಕಡಿಮೆಯೇ ಆಗುತ್ತದೆ. ಆದರೆ ಇಲ್ಲಿ ಆಗಿದ್ದೇ ಬೇರೆ. ಸಿಕಂದರ್ ಯಾದವ್ ತನ್ನಿಬ್ಬರು ಮಕ್ಕಳನ್ನು ಅತ್ತೆ ಮನೆಯಲ್ಲಿಯೇ ಇರಿಸಿದ. ನಿಧಾನವಾಗಿ ತಾನೂ ಅಲ್ಲಿಗೆ ಸ್ಥಳಾಂತರಗೊಂಡ.
ಪತ್ತೆ ಮಾಡಿದ ಪತಿ
ಅತ್ತೆ ಮನೆಯಲ್ಲಿ ಇದ್ದ ಸಿಕಂದರ್ ಯಾದವ್‌ಗೆ ಗೀತಾ ದೇವಿ ಮೇಲೆಯೇ ಪ್ರೇಮಾಂಕುರವಾಗಿದೆ. ಇಬ್ಬರೂ ಚೆನ್ನಾಗಿ ಮಾತನಾಡುವುದು, ಖುಷಿಯಾಗಿ ಇರುವುದು, ಕೆಲವು ಅಸಹಜ ನಡವಳಿಕೆಗಳ ಬಗ್ಗೆ ಆಕೆಯ ಪತಿ ದಿಲೇಶ್ವರ್ ದರ್ವೆಗೂ ಅನುಮಾನ ಶುರುವಾಗಿತ್ತು. ಅಳಿಯ ಅತ್ತೆಯೊಂದಿಗೆ ಚಕ್ಕಂದವಾಡುತ್ತಿರುವುದನ್ನು ಹಲವರು ಬಾರಿ ಗಮನಿಸಿಯೂ ಇದ್ದ. ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದೇ ತೀರಬೇಕು ಎಂದು ಕಾಯುತ್ತಿದ್ದ. ಸೋಮವಾರ ಇಬ್ಬರು ಇದ್ದುದನ್ನು ಗಮನಿಸಿ ದರ್ವೆ ಹಿಡಿದೂ ಬಿಟ್ಟ. ಈ ರೀತಿ ನಡೆದುಕೊಳ್ಳುವುದು ಸರಿಯೇ ಎಂದೂ ಇಬ್ಬರನ್ನೂ ಪ್ರಶ್ನಿಸಿದ. ಪತ್ನಿ ಮೌನಕ್ಕೆ ಶರಣಾದರೆ ಅಳಿಯ ಮಾತ್ರ ಹೊಸ ವರಸೆ ತೆಗೆದ. ನಾನು ಅತ್ತೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿಯೇ ಬಿಟ್ಟ.
ಪಂಚಾಯಿತಿಯಲ್ಲೇ ಕಲ್ಯಾಣ
ಇದರಿಂದ ಕುಪಿತಗೊಂಡ ದರ್ವೆ ಊರಲ್ಲಿ ಪಂಚಾಯಿತಿ ಸೇರಿಸಿದ. ತನ್ನ ಪತ್ನಿಯು ಅಳಿಯನ ಜತೆ ಸೇರಿಕೊಂಡು ನಡೆಸುತ್ತಿರುವ ಚಟುವಟಿಕೆಗೆ ವಿರಾಮ ಹಾಕುವುದು ಆತನ ಉದ್ದೇಶವು ಆಗಿತ್ತು. ಹೀರಾ ಮೋತಿ ಊರಿನ ಹಿರಿಯರು ಪಂಚಾಯಿತಿ ಸೇರಿದರು. ಅಲ್ಲಿಯೂ ಸಿಕಂದರ್ ಯಾದವ್ ತನ್ನ ಅತ್ತೆಯನ್ನೇ ಮದುವೆಯಾಗುತ್ತೇನೆ ಎನ್ನುವ ಘೋಷಣೆಯನ್ನೂ ಮಾಡಿದ. ಗೀತಾದೇವಿಯ ಅಭಿಪ್ರಾಯವನ್ನು ಹಿರಿಯರು ಕೇಳಿದರು. ಆಕೆಯೂ ಕೂಡ ಸಮ್ಮತಿ ಸೂಚಿಸಿದಳು. ಪತಿ ದರ್ವೆ ಮಾತ್ರ ಅಸಹಾಯಕನೂ ಆದ. ಆದರೆ ವಿರೋಧ ವ್ಯಕ್ತಪಡಿಸಿದರೆ ಇನ್ನು ನನ್ನ ಬದುಕು ಕಷ್ಟ ಎಂದು ಆತನೂ ಮದುವೆ ಸಮ್ಮಿತಿಸಿದ. ಅದೇ ಪಂಚಾಯಿತಿಯಲ್ಲಿ ಸಿಕಂದರ್ ಅತ್ತೆ ಗೀತಾದೇವಿ ಹಣೆಗೆ ತಿಲಕವಿರಿಸಿ ಮದುವೆಯಾಗಿರುವುದಾಗಿ ಘೋಷಿಸಿದ. ಊರವರು ಖುಷಿ ವ್ಯಕ್ತಪಡಿಸಿವುದು, ಸಂಭ್ರಮ ಆಚರಿಸುವ ವಿಡಿಯೋ ಕೂಡ ಈಗ ವೈರಲ್ ಆಗಿದೆ.
ಮಾವ ಅಳಿಯ ಒಂದೇ ಕಡೆ
ದರ್ವೆ ಊರವರ ಸಮ್ಮುಖದಲ್ಲಿ ತನ್ನ ಪತ್ನಿಯನ್ನು ಅಳಿಯನಿಗೆ ಮದುವೆ ಮಾಡಿಕೊಟ್ಟ. ಕಾನೂನು ರೀತಿಯಲ್ಲೂ ಬೇಕಾದ ನೆರವನ್ನು ನೀಡಿದ್ದಾನೆ. ಈಗ ತಮ್ಮಿಬ್ಬರ ಬಯಕೆ, ದರ್ವೆ ಸಹಕಾರ ಹಾಗೂ ಊರಿನವರ ಬೆಂಬಲದೊಂದಿಗೆ ಮದುವೆಯಾದ ಸಿಕಂದರ್ ಹಾಗೂ ಗೀತಾದೇವಿ ಸತಿ ಪತಿಗಳಂತೆಯೇ ಬದುಕುತ್ತಿದ್ದಾರೆ. ಇದಕ್ಕೆ ಕೈ ಜೋಡಿಸಿದ ದರ್ವೆ ಕೂಡ ಅದೇ ಮನೆಯ ನಿವಾಸಿಯೇ. ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ಗ್ರಾಮಸ್ಥರು ಸಂತೋಷದಿಂದಲೇ ಹೇಳುತ್ತಾರೆ.
ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ