South Rains: ತಮಿಳುನಾಡು ಕೇರಳದಲ್ಲಿ 2 ದಿನ ಭಾರೀ ಮಳೆ ನಿರೀಕ್ಷೆ: ಹಲವು ಕಡೆ ಆರೆಂಜ್ ಅಲರ್ಟ್ ಘೋಷಣೆ
South Rain updates ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ. ಕೇರಳದಲ್ಲೂ ಮಳೆಯಾಗಲಿದೆ.
ಚೆನ್ನೈ/ ತಿರುವನಂತಪುರಂ: ವಾರದ ಹಿಂದೆಯಷ್ಟೇ ಮಿಚಾಂಗ್ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿನಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ.
ತಮಿಳುನಾಡಿನ ಕೆಲವು ಭಾಗದಲ್ಲಿ ಮಳೆಯಾಗಿದ್ದು, ಮುಂದಿನ ಕೆಲ ದಿನ ಹಲವು ಕಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ತಮಿಳುನಾಡು ಮಾತ್ರವಲ್ಲದೇ ಕೇರಳದ ಹಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ತಮಿಳುನಾಡಲ್ಲೇ ಹೆಚ್ಚು
ಭಾರತೀಯ ಹವಮಾನ ಇಲಾಖೆ ಚೆನ್ನೈ ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತಮಿಳುನಾಡಿನ ಕರಾವಳಿ ಸೇರಿ ಹಲವು ಭಾಗಗಳಲ್ಲಿ ಐದು ದಿನ ಮಳೆಯಾಗಲಿದ್ದು, ಎರಡು ದಿನ ಭಾರೀ ಮಳೆಯಾಗಬಹುದು.
ದಕ್ಷಿಣ ತಮಿಳುನಾಡು, ಉತ್ತರ ಒಳನಾಡಿನಲ್ಲಿ ಮಳೆಯಾದರೆ, ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಪುದುಕೊಟ್ಟೈ,ಶಿವಗಂಗಾ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯಿದೆ. ಮಧುರೈ, ತೆಂಕಾಸಿ, ವಿರುದುನಗರ, ನಾಗರಿಪಟ್ಟಣನ ಕೆಲವು ಭಾಗದಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಭಾನುವಾರವೂ ಕುಡ್ಡಲೂರು, ಮಯಿಲಾಡದುರೈ, ನಾಗರಿಪಟ್ಟಣಂ, ತಂಜಾವೂರ್, ತಿರುವರೂರ್, ಪುದುಕೊಟ್ಟೈ,ಕನ್ಯಾಕುಮಾರಿ ಸಹಿತ ಹಲವು ಕಡೆ ಉತ್ತಮ ಮಳೆಯಾಗುವ ಸೂಚನೆಯಿದೆ. ಡಿಸೆಂಬರ್ 18 ಮತ್ತು 19ರಂದು ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ ಹಾಗೂ ಪುದುಕೊಟ್ಟೈ ಜಿಲ್ಲೆಯ ಕೆಲ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಹಲವು ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಆಳ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಅಲ್ಲದೇ ಆಯಾ ಜಿಲ್ಲಾಡಳಿತಗಳು ಪುನರ್ ವಸತಿ ಸೇರಿದಂತೆ ತುರ್ತು ಕಾರ್ಯಕ್ಕೆ ತಂಡ ಅಣಿಗೊಳಿಸಿವೆ.
ಕಳೆದ ವಾರ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆಯಾಗಿ ಭಾರೀ ಅನಾಹುತಗಳೇ ಆಗಿದ್ದವು. ಈ ಕಾರಣಕ್ಕೆ ಈಗಲೂ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಕೇರಳದಲ್ಲೂ ಮುನ್ನೆಚ್ಚರಿಕೆ
ಕೇರಳದಲ್ಲೂ ಭಾನುವಾರ ಹಾಗೂ ಸೋಮವಾರದಂದು ಕೆಲವು ಭಾಗಗಳಲ್ಲಿ ಮಳೆಯಾಗಬಹುದು ಎಂದು ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮಾಹಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ಡಿಸೆಂಬರ್‌ನಲ್ಲಿ ತಮಿಳುನಾಡು ಹಾಗೂ ಕೇರಳದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯೇ ಆಗಿದೆ. ತಮಿಳುನಾಡಿನಲ್ಲಿ 55 ಮಿ.ಮಿ ಮಳೆಯಾಗಿದ್ದು. ಇದು ವಾಡಿಕೆಗಿಂತ ಶೇ.9 ರಷ್ಟು ಅಧಿಕ. ಇನ್ನು ಕೇರಳದಲ್ಲಿ 54.4 ಮಿ.ಮಿ. ಮಳೆಯಾಗಿದ್ದು. ವಾಡಿಕೆಗಿಂತ ಶೇ.179ರಷ್ಟಿ ಮಳೆ ಸುರಿದಿದೆ. ಈಶಾನ್ಯಮಾನ್ಸೂನ್ ಆರಂಭಗೊಂಡ ಅಕ್ಟೋಬರ್‌ನಲ್ಲಿ ತಮಿಳುನಾಇನಲ್ಲಿ ಶೇ.4 ಮಳೆ ಕೊರತೆ ಕಂಡು ಬಂದರೆ ಹಾಗೂ ಕೇರಳದಲ್ಲಿ ಶೇ. 26ರಷ್ಟು ಮಳೆ ಅಧಿಕವಾಗಿದೆ.