ಜಮ್ಮು ಕಾಶ್ಮೀರದಲ್ಲಿ ಕಂದಕ್ಕೆ ಉರುಳಿದ ಸೇನಾ ವಾಹನ, ಕರ್ನಾಟಕದ ಮೂವರು ಯೋಧರು ಹುತಾತ್ಮ
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಳಿ ನಡೆದ ದುರಂತವೊಂದರಲ್ಲಿ ರಾಜ್ಯದ 3 ಯೋಧರು ಹುತಾತ್ಮರಾಗಿದ್ದಾರೆ. ಸೇನಾ ವಾಹನವೊಂದು 160 ಅಡಿ ಆಳಕ್ಕೆ ಬಿದ್ದ ಪರಿಣಾಮ 5 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅದರಲ್ಲಿ ಮೂವರು ಕರ್ನಾಟಕದವರು ಇದ್ದರು ಎನ್ನಲಾಗುತ್ತಿದೆ. ಈ ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ.
ನವದೆಹಲಿ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆ ಗಡಿ ನಿಯಂತ್ರಣ ರೇಖೆಯ ಬಳಿ ಸೇನಾ ವಾಹನವೊಂದು 160 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 5 ಮಂದಿ ಯೋಧರು ಹುತಾತ್ಮರಾಗಿದ್ದಾರೆ, ವಾಹನ ಚಾಲಕ ಸೇರಿ 5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಕರ್ನಾಟಕದ ಮೂವರು ಹುತಾತ್ಮರಾಗಿದ್ದಾರೆ. ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರದ ಕೋಟೇಶ್ವರ ಬಳಿಯ ಬಿಜಾಡಿಯ ಅನೂಪ್ (33), ಮಹಾಲಿಂಗಪುರದ ಮಹೇಶ್ ಮರಿಗೊಂಡ (25) ಹುತಾತ್ಮ ಯೋಧರು.
ಜಮ್ಮು ಕಾಶ್ಮೀರದ ಮೆಂಧಾರ್ನ್ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ (ಡಿಸೆಂಬರ್ 24) ಸಂಜೆ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನ ಕಂದಕಕ್ಕೆ ಬಿದಿದ್ದೆ. ಪರಿಣಾಮ ವಾಹನದಲ್ಲಿದ್ದ 5 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಪಾಂತ್ರದಲ್ಲಿ ರಕ್ಷಣಾಕಾರ್ಯಗಳು ನಡೆಯುತ್ತಿದ್ದು, ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ.
ರಸ್ತೆಯ ತಿರುವಿನಲ್ಲಿ ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಜೆ ಸುಮಾರು 5.20ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಪೂಂಚ್‌ನಲ್ಲಿರುವ ಫೀಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಒಂದು 2.5 ಟನ್ ವಾಹನ, ಆರು ವಾಹನಗಳ ಬೆಂಗಾವಲು ವಾಹನವು ಪೂಂಚ್ ಬಳಿಯ ಕಾರ್ಯಾಚರಣೆಯ ಟ್ರ್ಯಾಕ್‌ನಲ್ಲಿ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಆರ್ ಅಶೋಕ್ ಸಂತಾಪ
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿ ಒಟ್ಟು ಐವರು ಯೋಧರು ಮೃತಪಟ್ಟಿರುವ ಸುದ್ದಿ ತೀವ್ರ ನೋವುಂಟು ಮಾಡಿದೆ.
ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33), ಮಹಾಲಿಂಗಪುರದ ಮಹೇಶ್ ಮರಿಗೊಂಡ (25) - ಈ ಮೂವರು ಕರ್ನಾಟಕದ ಯೋಧರು ಹುತಾತ್ಮರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ಈ ದುಃಖವನ್ನ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿದ್ದಾರೆ.
ಅನೂಪ್ ಪೂಜಾರಿ ಅಮರ
ವಿದ್ಯಾರ್ಥಿ ಜೀವನದಲ್ಲೇ ದೇಶ ಸೇವೆಯ ಕನಸು ಕಂಡು ಅದನ್ನ ಕಳೆದ 13 ವರ್ಷಗಳ ಹಿಂದೆ ನನಸು ಮಾಡಿಕೊಂಡು ಮರಾಠ ರೆಜಿಮೆಂಟಿನ ಸೈನಿಕನಾಗಿ ತಾಯಿ ಭಾರತ ಮಾತೆಯ ಸೇವೆಗೆ ತನ್ನನ್ನು ಅರ್ಪಿಸಿಕೊಂಡು ಅನೂಪ್ ಪೂಜಾರಿ ಈಗ ಹುತಾತ್ಮರಾಗಿದ್ದಾರೆ. ಸೈನಿಕನ ಪಾರ್ಥಿವ ಶರೀರದ ಮೆರವಣಿಗೆ ಮತ್ತು ದರ್ಶನದ ವಿವರವನ್ನು ಸೇನಾ ಸಮಯ ತಿಳಿದು ಪ್ರಕಟಿಸಲಾಗುವುದು ಎಂದು ವರದಿಗಳು ತಿಳಿಸಿವೆ.