Rajeev Chandrasekhar: ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆ ಸಾಧ್ಯತೆ; ನಾಳೆ ಅಧಿಕೃತ ಘೋಷಣೆ ನಿರೀಕ್ಷೆ
Rajeev Chandrasekhar: ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ನಾಳೆ (ಮಾರ್ಚ್ 24) ಅಧಿಕೃತ ಘೋಷಣೆ ಮಾಡಲಾಗುವುದು ಎನ್ನಲಾಗುತ್ತಿದೆ.

ಕೇರಳ: ಉದ್ಯಮಿಯಾಗಿದ್ದು, ನಂತರ ರಾಜಕೀಯಕ್ಕೆ ಪ್ರವೇಶಿಸಿದ್ದ ರಾಜೀವ್ ಚಂದ್ರಶೇಖರ್ ಅವರನ್ನು ಕೇರಳದ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಾಮ ನಿರ್ದೇಶನ ಮಾಡಲಾಗಿದೆ. ಕೆ. ಸುರೇಂದ್ರನ್ ಬದಲಿಗೆ ಇವರ ಹೆಸರನ್ನು ಸೂಚಿಸಲಾಗಿದೆ. ಈ ವಿಚಾರವಾಗಿ ಸೋಮವಾರ (ಮಾರ್ಚ್ 24) ದೊಳಗೆ ಔಪಚಾರಿಕ ಘೋಷಣೆಯಾಗುವ ನಿರೀಕ್ಷೆ ಇದೆ.
ಇಂದು (ಮಾರ್ಚ್ 23) ತಿರುವನಂತಪುರಂನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಕೇರಳ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಚಂದ್ರಶೇಖರ್ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕೆ. ಸುರೇಂದ್ರನ್ ರಾಜ್ಯ ಅಧ್ಯಕ್ಷರಾಗಿ ಐದು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರ ಹೆಸರು ಆ ಹುದ್ದೆಗೆ ಸಂಭಾವ್ಯರ ಪಟ್ಟಿಯಲ್ಲಿತ್ತು. ರಾಜ್ಯದ ಹಿರಿಯ ನಾಯಕರಾದ ಶೋಭಾ ಸುರೇಂದ್ರನ್ ಮತ್ತು ಎಂ ಟಿ ರಮೇಶ್ ಹಾಗೂ ಇತರ ಹೆಸರು ಕೂಡ ಮುಂಚೂಣಿಯಲ್ಲಿತ್ತು.
ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ರಮೇಶ್ ಅಥವಾ ಶೋಭಾ ಅವರ ನೇಮಕ ಅಥವಾ ಸುರೇಂದ್ರನ್ ಅವರನ್ನೇ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸುವುದರಿಂದ ಪಕ್ಷದಲ್ಲಿ ಆಂತರಿಕ ಕಲಹ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲು ಪಕ್ಷ ಒಲವು ತೋರುತ್ತಿದೆ ಎನ್ನಲಾಗುತ್ತಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಅವರಿಗೆ ಸಿಕ್ಕ ಅದ್ಭುತ ಜನಬೆಂಬಲ ಹಾಗೂ ಉತ್ತಮ ಪ್ರೊಫೈಲ್ ಚಂದ್ರಶೇಖರ್ ಅವರಿಗೆ ಅನುಕೂಲವಾಗಲಿದೆ. ಇವರು ಸಂಘ ಪರಿವಾರದ ಹಿನ್ನೆಲೆಯಿಲ್ಲದ ಕೇರಳದ ಮೊದಲ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಆ ಕಾರಣದಿಂದ ಇವರನ್ನು ರಾಜಾಧ್ಯಕ್ಷರನ್ನಾಗಿ ಮಾಡುವುದು ಅಭಿವೃದ್ಧಿ ಕಾರ್ಯಸೂಚಿಯನ್ನು ಬಿಂಬಿಸುವುದರ ಜೊತೆಗೆ ಕೇರಳದ ಜಾತ್ಯತೀತ ಮನಸ್ಸಿನ ಮತದಾರರನ್ನು ಸೆಳೆಯಲು ಕೂಡ ಸಹಾಯ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.
ಕೇರಳದಲ್ಲಿ ಮನೆ ಖರೀದಿಸಿದ್ದ ಚಂದ್ರಶೇಖರ್
ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿರುವ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕ್ಷೇತ್ರದ ಮಾಜಿ ರಾಜ್ಯ ಸಚಿವರಾಗಿರುವ ಅರವತ್ತು ವರ್ಷದ ಚಂದ್ರಶೇಖರ್, ತಿರುವನಂತಪುರದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲು ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದರು. ಇತ್ತೀಚೆಗೆ ಅವರು ನಗರದಲ್ಲಿ ಒಂದು ಮನೆಯನ್ನು ಖರೀದಿಸಿದರು. ಅಂದಿನಿಂದ ಅವರು ಬಿಜೆಪಿಯ ಮುಂದಿನ ರಾಜ್ಯ ಅಧ್ಯಕ್ಷರಾಗಬಹುದು ಎಂಬ ಬಲವಾದ ಊಹಾಪೋಹವಿತ್ತು. ಚಂದ್ರಶೇಖರ್ ಅವರು ಆಶಾ ಕಾರ್ಯಕರ್ತರ ಅನಿರ್ದಿಷ್ಟಾವಧಿ ಮುಷ್ಕರ ಸೇರಿದಂತೆ ರಾಜ್ಯದ ಪ್ರಮುಖ ಸಮಸ್ಯೆಗಳಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ.
2024ರ ಚುನಾವಣೆಯಲ್ಲಿ ಶಶಿ ತರೂರ್ ವಿರುದ್ಧ ಸೋಲು
2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂದಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಕೇವಲ 17,077 ಮತಗಳ ಅಂತರದಿಂದ ಸೋತಿರುವ ಇವರು ಮುಂದಿನ ಚುನಾವಣೆಯಲ್ಲಿ ಆ ಸ್ಥಾನವನ್ನು ಗೆಲ್ಲಲು ದೃಢನಿಶ್ಚಯ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಚಂದ್ರಶೇಖರ್ ತಿರುವನಂತಪುರಂನಲ್ಲಿ ಚುನಾವಣಾ ಕಣಕ್ಕೆ ಇಳಿಯುವ ಮುನ್ನ, ಅವರ ಬೆಂಬಲಿಗರು ಅವರ ಪ್ರೊಫೈಲ್, ವಿಶೇಷವಾಗಿ ಬಿಪಿಎಲ್ ಮೊಬೈಲ್ ಬಿಡುಗಡೆ ಮತ್ತು ಅವರ ಕೇರಳ ಮೂಲವನ್ನು ಎತ್ತಿ ತೋರಿಸುವ ಬೃಹತ್ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದ್ದರು. ರಾಜೀವ್ ಚಂದ್ರಶೇಖರ್ ಪೋಷಕರು ಮಲಯಾಳಿಗಳು ಮತ್ತು ಅವರ ಕುಟುಂಬದ ಬೇರುಗಳು ತ್ರಿಶೂರ್‌ನಲ್ಲಿವೆ.
ಚಂದ್ರಶೇಖರ್ ಅವರ ನೇಮಕಾತಿಯು ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿ ಮತ್ತು ರಾಜಕಾರಣಿ ಕೆ. ಅಣ್ಣಾಮಲೈ ಅವರ ಆಯ್ಕೆಯನ್ನು ನೆನಪಿಸುತ್ತದೆ. ಇದು ಕೂಡ ಬಿಜೆಪಿಯ ಅದೇ ರೀತಿಯ ನಡೆಯಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ದಕ್ಷಿಣ ಭಾರತದ ಎರಡೂ ರಾಜ್ಯಗಳಲ್ಲಿ ಬಿಜೆಪಿ ಇನ್ನೂ ಚುನಾವಣಾ ರಾಜಕೀಯದಲ್ಲಿ ಯಾವುದೇ ಪ್ರಮುಖ ಪ್ರಭಾವ ಬೀರಿಲ್ಲ. ಇನ್ನು ಮುಂದೆ ರಾಜೀವ ಚಂದ್ರಶೇಖರ್ ಕೇರಳ ರಾಜ್ಯ ಅಧ್ಯಕ್ಷರಾದರೆ ಕೇರಳದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಕಾದುನೋಡಬೇಕಿದೆ.
