Nagpur Violence: ಔರಂಗಜೇಬ್ ಸಮಾಧಿ ವಿವಾದ; ನಾಗ್ಪುರದಲ್ಲಿ ಹಿಂಸಾಚಾರ, ಹಲವರಿಗೆ ಗಾಯ, ನಿಷೇಧಾಜ್ಞೆ ಜಾರಿ; ಈವರೆಗೆ ಏನೇನಾಯ್ತು
Nagpur Violence: ಔರಂಗಜೇಬ್ ಸಮಾಧಿ ವಿವಾದ ಹಿನ್ನೆಲೆ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲಿದ್ದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಘಟನೆ ಹೇಗಾಯ್ತು ಎಂಬ ವಿವರ ಇಲ್ಲಿದೆ.

Nagpur Violence: ಔರಂಗಜೇಬ್ ಸಮಾಧಿ ವಿವಾದವು ನಾಗ್ಪುರ್‌ದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳಗಳಂತಹ ಹಿಂದೂ ಸಂಘಟನೆಗಳು ಸಮಾಧಿ ತೆರವುಗೊಳಿಸುವ ಬಗ್ಗೆ ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದವು. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಈ ಸಂಘಟನೆಗಳು ಸೋಮವಾರ (ಮಾರ್ಚ್ 17) ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಸಿದವು. ಪ್ರತಿಭಟನೆಯ ಸಂದರ್ಭ ಔರಂಗಜೇಬ್ ಪ್ರತಿಮೆಯನ್ನು ಸಾಂಕೇತಿಕವಾಗಿ ಸುಟ್ಟು ಹಾಕಲಾಗಿತ್ತು. ನಂತರ ಇಲ್ಲಿ ಹಿಂಸಾಚಾರ ಆರಂಭಗೊಂಡಿತು. ಕೆಲವೆಡೆ ಬೆಂಕಿ ಹಚ್ಚಲಾಯಿತು. ಈ ಹಿಂಸಾಚಾರದಲ್ಲಿ ಪ್ರತಿಭಟನಾಕಾರರು ಸೇರಿದಂತೆ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ವಾಹನಗಳು ಹಾಗೂ ಅಂಗಡಿ ಮಳಿಗೆಗಳಿಗೆ ಬೆಂಕಿ ಹಚ್ಚಲಾಗಿದೆ.
ಘಟನೆಗೆ ಕಾರಣವಾದ ಅಂಶ
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಔರಂಗಜೇಬನ ಸಮಾಧಿಯನ್ನು ಸಾಂಕೇತಿಕವಾಗಿ ಸುಡುವ ಸಮಯದಲ್ಲಿ ಬಳಸಿದ್ದ ಹಾಳೆಗಳು ವಿವಾದ ಸೃಷ್ಟಿಸಿದವು. ಯಾಕೆಂದರೆ ಮುಸ್ಲಿಂ ಸಮುದಾಯಗಳು ಈ ಹಾಳೆಗಳಲ್ಲಿ ತಮ್ಮ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಬರೆಯಲಾಗಿತ್ತು, ಅದು ನಮ್ಮ ಭಾವನೆಗಳಿಂದ ನೋವುಂಟು ಮಾಡಿದೆ ಎಂದು ಹೇಳಿವೆ. ಈ ಸಂದರ್ಭ ಕುರಾನ್ ಸುಟ್ಟು ಹಾಕಲಾಗಿದೆ ಎಂಬ ಸುದ್ದಿ ಕೂಡ ಹರಡಿತ್ತು. ಇದು ಅನೇಕ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು, ಬೆಂಕಿ ಹಚ್ಚುವಿಕೆ ಮತ್ತು ಕಲ್ಲು ತೂರಾಟದ ಘಟನೆಗಳಿಗೆ ಕಾರಣವಾಯಿತು.
ಈ ಘಟನೆಯಲ್ಲಿ ಕನಿಷ್ಠ ಆರು ನಾಗರಿಕರು ಮತ್ತು ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ಲಿಂಗ್ ಮತ್ತು ಲಾಠಿ ಪ್ರಹಾರ ನಡೆಸಿವೆ. ನಾಗ್ಪುರ ಮಾತ್ರವಲ್ಲದೇ ಮುಂಬೈನಲ್ಲೂ ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿವೆ.
ಸ್ಮಾರಕ ಕೆಡವುವ ಬೆದರಿಕೆ ಹಿನ್ನೆಲೆ ಔರಂಗಜೇಬ್ ಸಮಾಧಿಯ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ. ಸದ್ಯ ಔರಂಗಜೇಬ್ ಸಮಾಧಿ ಸ್ಥಳ ಸ್ಥಳಕ್ಕೆ ಪ್ರವೇಶಿಸುವ ಮೊದಲು ಸಂದರ್ಶಕರು ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಗುರುತಿನ ಚೀಟಿಯನ್ನು ಒದಗಿಸಬೇಕು. ರಾಜ್ಯ ಮೀಸಲು ಪೊಲೀಸ್ ಪಡೆ, ಸ್ಥಳೀಯ ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಆರಂಭದಲ್ಲಿ ನಾಗ್ಪರ್‌ದ ಮಹಲ್ ಬಳಿ ಮಾತ್ರ ನಡೆಯುತ್ತಿದ್ದ ಹಿಂಸಾಚಾರವು ಸಂಜೆ ಹೊತ್ತಿಗೆ ಕೊತ್ವಾಲಿ ಮತ್ತು ಗಣೇಶಪೇಟೆಗೆ ಹರಡಿತು, ಗಲಭೆಕೋರರು ವಾಹನಗಳಿಗೆ ಬೆಂಕಿ ಹಚ್ಚಿ ವಸತಿ ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಚಿಟ್ನಿಸ್ ಪಾರ್ಕ್-ಶುಕ್ರವರಿ ತಲಾವ್ ರಸ್ತೆಯಲ್ಲಿ ಅತ್ಯಂತ ತೀವ್ರವಾದ ಗಲಭೆಗಳು ಸಂಭವಿಸಿದವು, ಅಲ್ಲಿ ಹಲವಾರು ನಾಲ್ಕು ಚಕ್ರದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಲಾಗಿತ್ತು.
ನಾಗ್ಪುರದಲ್ಲಿ 15 ಜನರ ಬಂಧನ
ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಭದ್ರತಾ ಪಡೆಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದವು ಮತ್ತು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು, ಈ ಸಂದರ್ಭ 15 ಜನರನ್ನು ಬಂಧಿಸಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ ಉಪ ಪೊಲೀಸ್ ಆಯುಕ್ತ ನಿಕೇತನ್ ಕದಮ್‌ಗೆ ಗಂಭೀರ ಗಾಯವಾಗಿದ್ದರೆ, ಇತರ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ರಾತ್ರಿ ನಂತರ ಹಿಂಸಾಚಾರವು ಹಳೆಯ ಭಂಡಾರ ರಸ್ತೆಯ ಬಳಿಯ ಹಂಸಪುರಿಗೂ ವಿಸ್ತರಿಸಿತು. ರಾತ್ರಿ 10:30 ರಿಂದ 11:30 ರ ನಡುವೆ, ಕೋಪಗೊಂಡ ಗುಂಪೊಂದು ಮನೆಗಳು, ಅಂಡಗಿ ಮಳಿಗೆಗಳು ಮತ್ತು ಕ್ಲಿನಿಕ್ ಅನ್ನು ಧ್ವಂಸಗೊಳಿಸಿತು. ಜೊತೆಗೆ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿತು.
ರಾಮ ನವಮಿ ಮೆರವಣಿಗೆಗಾಗಿ ಅಲಂಕಾರಗಳನ್ನು ಸಿದ್ಧಪಡಿಸುತ್ತಿದ್ದ ಮತ್ತೊಬ್ಬ ನಿವಾಸಿ, ಗಲಭೆಕೋರರು ತಮ್ಮ ವಸ್ತುಗಳನ್ನು ಸುಟ್ಟುಹಾಕಿದರು ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ಕರ್ಫ್ಯೂ ವಿಧಿಸಲಾಗಿದೆ
ನಗರದಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿಲಾಗಿದೆ. ತ್ವರಿತ ಪ್ರತಿಕ್ರಿಯೆ ತಂಡ, ಗಲಭೆ ನಿಯಂತ್ರಣ ಪೊಲೀಸ್ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಯಿಂದ ಹೆಚ್ಚುವರಿ ಪಡೆಗಳನ್ನು ಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಿಎಂ ಮನವಿ
ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಾಗರಿಕರು ಶಾಂತವಾಗಿರಲು ಮತ್ತು ವದಂತಿಗಳಿಂದ ದಾರಿ ತಪ್ಪದಂತೆ ಮನವಿ ಮಾಡಿದ್ದಾರೆ.
‘ಪೊಲೀಸರು ಪರಿಸ್ಥಿತಿಯನ್ನು ಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ನಿವಾಸಿಗಳು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಾನೂನು ಸುವವಸ್ಥೆ ಕಾಪಾಡಿಕೊಳ್ಳಲು ಸಹಕರಿಬೇಕು ಎಂದು ನಾನು ಮನವಿ ಮಾಡುತ್ತೇನೆ‘ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಮತ್ತು ನಾಗ್ಪುರ ಸಂಸದ ನಿತಿನ್ ಗಡ್ಕರಿ ಶಾಂತಿ ಕಾಪಾಡುವಂತೆ ಆಗ್ರಹಿಸಿದ್ದಾರೆ, ಅಲ್ಲದೇ ನಾಗಪುರದ ಕೋಮು ಸೌಹಾರ್ದತೆಯ ಇತಿಹಾಸವನ್ನು ಜನರಿಗೆ ನೆನಪಿಸಿದ್ದಾರೆ.
ವಿರೋಧ ಪಕ್ಷಗಳ ಟೀಕೆ
ಈ ಘಟನೆ ಈಗ ರಾಜಕೀಯ ಭಿನ್ನಾಭಿಪ್ರಾಯಕ್ಕೂ ಮೂಲವಾಗಿದೆ. ವಿರೋಧ ಪಕ್ಷಗಳು ಈ ಬಗ್ಗೆ ತೀವ್ರ ಟೀಕೆ ನಡೆಸಿದವು. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್, ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು, ಸಚಿವರ ಪ್ರಚೋದನಕಾರಿ ಮಾತುಗಳು ಹಿಂಸಾಚಾರಕ್ಕೆ ಕಾರಣವಾಗಿವೆ ಎಂದು ಆರೋಪಿಸಿದರು.
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಈ ಪರಿಸ್ಥಿತಿಯನ್ನು ಆಡಳಿತದ ಮಹಾ ವೈಫಲ್ಯ ಎಂದು ಕರೆದಿದ್ದಾರೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು, ಐತಿಹಾಸಿಕ ಕುಂದುಕೊರತೆಗಳನ್ನು ಬಳಸಿಕೊಳ್ಳುವ ಇತ್ತೀಚಿನ ಪ್ರಯತ್ನಗಳು ಕೋಮು ವೈಷಮ್ಯಕ್ಕೆ ಕಾರಣವಾಗಿದ್ದು, ಗಲಭೆಗಳು ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.

ವಿಭಾಗ