ನೀಟ್ ಯುಜಿ 2025; ಭೌತಶಾಸ್ತ್ರ ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು, ಪರಿಣತರು ಏನು ಹೇಳಿದ್ದಾರೆ
ನೀಟ್ ಯುಜಿ 2025: ಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಂಡರ್‌ಗ್ರಾಜುವೇಟ್ (ನೀಟ್ ಯುಜಿ) ಭಾನುವಾರ (ಮೇ 4) ಭಾರತದ ವಿವಿಧ ಕೇಂದ್ರಗಳಲ್ಲಿ ನಡೆಯಿತು. ನೀಟ್ ಯುಜಿಯ ಫಿಸಿಕ್ಸ್ ಫೇಪರ್ ಹೇಗಿತ್ತು,ವಿದ್ಯಾರ್ಥಿಗಳು, ಪರಿಣತರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ನೀಟ್ 2025: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಭಾನುವಾರ (ಮೇ 4) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಂಡರ್‌ಗ್ರಾಜುವೇಟ್ (ನೀಟ್ ಯುಜಿ)ಯನ್ನು ನಡೆಸಿತು. ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುತ್ತಿರುವ ಭಾರತದ 22.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆ ಬರೆದವರು ಹಾಗೂ ಕ್ಷೇತ್ರದ ಪರಿಣತರು ಈ ಪರೀಕ್ಷೆಗಳು ಹೇಗಿದ್ದವು ಎಂಬ ನೋಟವನ್ನು ಒದಗಿಸಿದ್ದಾರೆ. ನೀಟ್ ಯುಜಿ 2025ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವ ಶಾಸ್ತ್ರದ ಪೇಪರ್‌ಗಳಿದ್ದು, ಹಿಂದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಸು ಕಷ್ಟವಿತ್ತು ಎಂದು ಪರೀಕ್ಷೆ ಬರೆದವರ ಪೈಕಿ ಅನೇಕರು ಹೇಳಿಕೊಂಡಿದ್ದಾರೆ.
ನೀಟ್ ಯುಜಿ 2025; ಭೌತಶಾಸ್ತ್ರ ಪೇಪರ್ ಹೇಗಿತ್ತು
ನೀಟ್ ಯುಜಿ 2025ರ ಫಿಸಿಕ್ಸ್ ಅಥವಾ ಭೌತಶಾಸ್ತ್ರ ಪೇಪರ್ ಮೂರು ವಿಷಯಗಳಿಗೆ ಹೋಲಿಸಿದರೆ ಬಹಳ ಕಷ್ಟವಿತ್ತು ಎಂದು ಪರೀಕ್ಷಾರ್ಥಿಗಳು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಹೆಚ್ಚಿನ ಪರಿಕಲ್ಪನಾ ತಿಳಿವಳಿಕೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಅಗತ್ಯ ಕಂಡುಬಂತು. ಸೂತ್ರ ಆಧಾರಿತವಾದ ಪ್ರಶ್ನೆಗಳಿದ್ದರೂ ಅವುಗಳು ಅನೇಕ ಹಂತಗಳನ್ನು ಒಳಗೊಂಡಿದ್ದವು. ಬರೆಯುವುದಕ್ಕೆ ಬಹಳ ಸಮಯ ತೆಗೆದುಕೊಂಡ ಕಾರಣ ಕಷ್ಟವಾಯಿತು. ಸಮಯಕ್ಕೆ ಸರಿಯಾದ ಉತ್ತರ ಬರೆದು ಮುಗಿಸುವುದೇ ದೊಡ್ಡ ಸವಾಲಾಗಿತ್ತು. ಬಹುತೇಕ ಪ್ರಶ್ನೆಗಳಿಗೆ ಪರಿಕಲ್ಪನೆಗಳನ್ನು ಅನ್ವಯಿಸಿ ಬರೆಯಬೇಕಾಯಿತು. ಇದು ಕಷ್ಟದ ಪ್ರಮಾಣವನ್ನು ಹೆಚ್ಚಿಸಿತು ಎಂದು ಅನೇಕರು ಅಭಿಪ್ರಾಯಪಟ್ಟರು.
ಮೋಷನ್ ಎಜುಕೇಶನ್ ಸಿಇಒ ನಿತಿನ್ ವಿಜಯ್ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಜತೆಗೆ ಈ ವಿಚಾರವಾಗಿ ಮಾತನಾಡಿದ್ದು, ಭೌತಶಾಸ್ತ್ರದ ಸಮಸ್ಯೆಗಳ ಸಂಕೀರ್ಣ ಸ್ವರೂಪದಿಂದಾಗಿ ವಿಶೇಷವಾಗಿ ವಿಶೇಷವಾಗಿ ಆಧುನಿಕ ಭೌತಶಾಸ್ತ್ರ, ಎಲೆಕ್ಟ್ರೋಡೈನಾಮಿಕ್ಸ್ ಮತ್ತು ಥರ್ಮೋಡೈನಾಮಿಕ್ಸ್‌ನಂತಹ ವಿಷಯಗಳಲ್ಲಿ ಸಮಯ ನಿರ್ವಹಣೆ ದೊಡ್ಡ ಸವಾಲಾಯಿತು ಎಂದು ಅನೇಕ ವಿದ್ಯಾರ್ಥಿಗಳು ಹೇಳಿದ್ದಾಗಿ ತಿಳಿಸಿದ್ದಾರೆ.
ಹಿಂದಿನ ನೀಟ್‌ಗಿಂತ ನೀಟ್ 2025 ಡಿಫರೆಂಟ್
ನೀಟ್ 2025ರ ಪೇಪರ್ ಹಿಂದಿನ ನೀಟ್‌ಗಿಂತ ಭಿನ್ನವಾಗಿತ್ತು. ಸಾಮಾನ್ಯವಾಗಿ 24 ಪೇಪರ್ ಸೆಟ್‌ಗಳ ಬದಲು ಈ ಬಾರಿ ನಾಲ್ಕೇ ನಾಲ್ಕು ಪೇಪರ್ ಸೆಟ್‌ಗಳೊಂದಿಗೆ ನೀಟ್ ಪರೀಕ್ಷೆ ನಡೆಯಿತು. ಇವೆಲ್ಲವೂ ಹೆಚ್ಚು ಕಷ್ಟಕರ ಸ್ವರೂಪದ್ದಾಗಿದ್ದವು. ವಿಶ್ಲೇಷಣಾತ್ಮಕ ಮತ್ತು ಅಪ್ಲಿಕೇಶನ್-ಆಧಾರಿತ ಕಲಿಕೆಯ ಮೇಲೆ ಹೆಚ್ಚು ಒತ್ತು ನೀಡಿದ್ದವು ಎಂಬುದರ ಕಡೆಗೆ ನಿತಿನ್ ವಿಜಯ್ ಗಮನಸೆಳದರು.
ಭೌತಶಾಸ್ತ್ರ ವಿಭಾಗವು 11 ನೇ ತರಗತಿಗೆ ಒತ್ತು ನೀಡಿದ್ದ ಕಾರಣ ಹೆಚ್ಚು ಸವಾಲಾಗಿತ್ತು. ಈ ವರ್ಷ ಪ್ರಾಯೋಗಿಕ ಕೌಶಲದಿಂದ ಒಂದು ಪ್ರಶ್ನೆ ಬಂದಿದ್ದು, ಮೆಕಾನಿಕ್ಸ್‌ನಿಂದ 15, ಥರ್ಮಲ್ ಫಿಸಿಕ್ಸ್‌ನಿಂದ 4, ಎಸ್‌ಎಚ್‌ಎಂ ವೇವ್ಸ್‌ನಿಂದ 3, ಎಲೆಕ್ಟ್ರೋಡೈನಾಮಿಕ್ಸ್‌ನಿಂದ 13, ಆಪ್ಟಿಕ್ಸ್‌ನಿಂದ 4, ಮಾಡರ್ನ್ ಫಿಸಿಕ್ಸ್ ಆಂಡ್ ಎಲೆಕ್ಟ್ರಾನಿಕ್ಸ್‌ನಿಂದ 6 ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ಪ್ರಶ್ನೆಗಳಿಗೆ ವ್ಯಾಪಕವಾದ ಲೆಕ್ಕಾಚಾರಗಳು ಬೇಕಾಗುತ್ತವೆ. ಯಾವುದೇ ಹೇಳಿಕೆ ಆಧಾರಿತ, ಪ್ರತಿಪಾದನೆ, ಅಥವಾ ಹೊಂದಾಣಿಕೆ-ಕಾಲಮ್ ಪ್ರಶ್ನೆಗಳನ್ನು ಸೇರಿಸಲಾಗಿಲ್ಲ ಮತ್ತು ಹೆಚ್ಚಿನ ಗಮನವನ್ನು ಮೆಕಾನಿಕ್ಸ್‌ನಿಂದ ಕೇಳಲಾಯಿತು ಎಂಬುದನ್ನು ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‌ನ ನ್ಯಾಷನಲ್ ಅಕಾಡೆಮಿಕ್ ಡೈರೆಕ್ಟರ್ ನಬಿನ್ ಕರ್ಕಿ ತಿಳಿಸಿದ್ದಾಗಿ ವರದಿ ಹೇಳಿದೆ.
ಬಹುತೇಕ ಪರೀಕ್ಷಾರ್ಥಿಗಳಿಗೆ ಭೌತಶಾಸ್ತ್ರ ಪೇಪರ್ ಹೆಚ್ಚು ಸಮಯ ತೆಗೆದಕೊಂಡ ಅನುಭವವಾಗಿದೆ. ಕೋವಿಡ್ ಪೂರ್ವದ ಪ್ಯಾಟರ್ನ್‌ಗೆ ಹೋಲಿಸಿದರೆ ಈ ಬಾರಿ ಸಂಕೀರ್ಣತೆ ಹೆಚ್ಚಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ, ಹೆಚ್ಚಿನ ಅಂಕಗಳನ್ನು ಗಳಿಸುವುದು ಕಷ್ಟವಾಗಲಿದೆ. ಅಲೆನ್ ಲೈಫ್ ಸೈನ್ಸ್ ಸಂಸ್ಥೆಯ ನಿರ್ದೇಶಕ ಡಾ. ಬ್ರಜೇಶ್ ಮಹೇಶ್ವರಿ ಅವರ ಪ್ರಕಾರ, ಈ ವರ್ಷದ ಕಷ್ಟದ ಮಟ್ಟವು ಅತಿ ಹೆಚ್ಚು ಸ್ಕೋರರ್‌ಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುಬಹುದು ಎಂದು ವರದಿ ವಿವರಿಸಿದೆ.