ಸಂಸತ್ತಿನಲ್ಲಿ ಮೋದಿ ಭಾಷಣ: ಸಂವಿಧಾನದ ಹೆಸರಲ್ಲಿ ವಿಷ ಬೀಜ ಬಿತ್ತುವುದು ನಿಂತಿಲ್ಲ, ಸಂವಿಧಾನ ಮೊದಲು ಬದಲಿಸಿದ್ದೇ ನೆಹರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಸತ್ತಿನಲ್ಲಿ ಮೋದಿ ಭಾಷಣ: ಸಂವಿಧಾನದ ಹೆಸರಲ್ಲಿ ವಿಷ ಬೀಜ ಬಿತ್ತುವುದು ನಿಂತಿಲ್ಲ, ಸಂವಿಧಾನ ಮೊದಲು ಬದಲಿಸಿದ್ದೇ ನೆಹರು

ಸಂಸತ್ತಿನಲ್ಲಿ ಮೋದಿ ಭಾಷಣ: ಸಂವಿಧಾನದ ಹೆಸರಲ್ಲಿ ವಿಷ ಬೀಜ ಬಿತ್ತುವುದು ನಿಂತಿಲ್ಲ, ಸಂವಿಧಾನ ಮೊದಲು ಬದಲಿಸಿದ್ದೇ ನೆಹರು

ಸಂವಿಧಾನ ಬದಲಿಸಿದ್ದು, ಅದಕ್ಕೆ ಅಗೌರವ ತೋರಿದ್ದು ಕಾಂಗ್ರೆಸ್‌, ನೆಹರು ಅವರೇ ಹಿರಿಯರ ಮಾತನ್ನು ವಿರೋಧಿಸಿ ಸಂವಿಧಾನ ಬದಲಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ಈಗಲೂ ವಿಷ ಬೀಜ ಬಿತ್ತುವ ಕೆಲಸ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗಿಯಾದರು.
ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗಿಯಾದರು.

ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಕಳೆದರೂ ಈಗಲೂ ಅದರ ಮಹತ್ವವನ್ನು ಜನರಿಗೆ ತಿಳಿಸುವ ಭರದಲ್ಲಿ ಕೆಲವರು ಸಂವಿಧಾನದ ಮೂಲಕ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುವ ಕೆಲಸ ಮುಂದುವರೆಸಿದ್ದಾರೆ. ಹಿಂದೆ ವಿಷ ಬೀಜ ಬಿತ್ತಿದಂತೆ ಈಗಲೂ ಅದು ನಡೆದಿದೆ. ಸಂವಿಧಾನ ಬದಲಿಸಿದ್ದು, ಅದಕ್ಕೆ ಅಗೌರವ ತೋರಿದ್ದು ಕಾಂಗ್ರೆಸ್‌, ನೆಹರು ಅವರೇ ಹಿರಿಯರ ಮಾತನ್ನು ವಿರೋಧಿಸಿ ಸಂವಿಧಾನ ಬದಲಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ಕಾಂಗ್ರೆಸ್‌ ಇತಿಹಾಸದಿಂದ ಎಂದಿಗೂ ಪಾಠ ಕಲಿಯುವುದಿಲ್ಲ. ತುರ್ತು ಪರಿಸ್ಥಿತಿಯನ್ನು ಕಾಂಗ್ರೆಸ್‌ ಸೃಷ್ಟಿಸಿ ಕಳಂಕವನ್ನು ಐದು ದಶಕದ ಹಿಂದೆ ಹೊತ್ತು ಕೊಂಡಿತು. ಆ ಕಳಂಕವನ್ನು ತೊಳೆದುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವೇ ಇಲ್ಲ ಎನ್ನುವುದೂ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ. ಮತ್ತದೇ ರೀತಿಯಲ್ಲಿ ನಡೆದುಕೊಂಡರೆ ಭಾರತದ ಜನ ನಿಮ್ಮನ್ನು ಎಂದಿಗೂ ಒಪ್ಪುವುದಿಲ್ಲ.

ಇದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಶನಿವಾರ ನೀಡಿದ ಮಾತಿನೇಟು .ಸಂವಿಧಾನದ ಅಂಗೀಕಾರದ 75 ವರ್ಷಗಳ ಸ್ಮರಣಾರ್ಥ ಲೋಕಸಭೆಯಲ್ಲಿ ರೂಪಿಸಲಾಗಿದ್ದ ಚರ್ಚೆಗೆ ಸುದೀರ್ಘವಾಗಿಯೇ ಮೋದಿ ಉತ್ತರ ನೀಡಿದರು.

1948 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದ ಪ್ರಯಾಣವು "ಅಸಾಧಾರಣ" ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದ ಪಿಎಂ ಮೋದಿ, ದೇಶವು ಪ್ರಜಾಪ್ರಭುತ್ವದಲ್ಲಿ ಆಳವಾದ ಬೇರುಗಳನ್ನು ಹೊಂದಿದೆ, ಅದು ಜಗತ್ತಿಗೆ ಸ್ಫೂರ್ತಿಯಾಗಿದೆ. ಸಂವಿಧಾನದ ನಿರ್ಮಾಪಕರು ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಪ್ರತಿಪಾದಿಸಿದರೆ, ಕೆಲವರು ಅದನ್ನು ಆಚರಿಸದಿರಲು ನಿರ್ಧರಿಸಿದರು ಮತ್ತು ಬದಲಿಗೆ ವಿಷದ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರು. ಅದು ಈಗಲೂ ಹಲವು ರೂಪದಲ್ಲಿ ಮುಂದುವರಿದೇ ಇದೆ ಎಂದು ಹೇಳಿದರು.

ಸಂವಿಧಾನವನ್ನು ಮೊದಲೇ ಬದಲಿಸಲು ಮುಂದಾದವರು ನೆಹರು. ಹಿರಿಯರಾಗಿದ್ದ ಕೃಪಲಾನಿ, ಜಯಪ್ರಕಾಶ್‌ ನಾರಾಯಣ್‌ ಅವರ ಮಾತಿಗೂ ಗೌರವ ಕೊಡದೇ ನೆಹರು ತಮ್ಮ ಕುಟುಂಬದ ರೀತಿಯಲ್ಲಿ ಸಂವಿಧಾನ ಬದಲಿಸಿದರು. ಅದನ್ನು ಹೇಳದವರು ಈಗ ಏನನ್ನೋ ಮಾತನಾಡಿ ನಮ್ಮನ್ನು ಟೀಕಿಸುತ್ತಾರೆ.ಇದನ್ನು ಜನರು ಒಪ್ಪುವುದಿಲ್ಲ ಎಂದು ಮೋದಿ ಹೇಳಿದರು.

ಸಂವಿಧಾನವನ್ನು ನಾವು ಗೌರವಿಸಿದ್ದೇವೆ. ಸಂಶೋಧನೆ ಮಾಡಿ ಅದನ್ನು ಜನರ ಒಳಿತಿಗಾಗಿ ಬಳಸುತ್ತಿದ್ದೇವೆ. ಆದರೆ ಸಂವಿಧಾನಬದ್ದವಾಗಿ ಎಂದೂ ಆಡಳಿತ ನಡೆಸದ ಕಾಂಗ್ರೆಸ್‌ ಒಂದೇ ಕುಟುಂಬದ ಸಂವಿಧಾನದ ಅಡಿ ಸಿಲುಕಿ ಹೋಗಿದೆ ಎಂದು ಟೀಕಿಸಿದರು.

ಬಡತನ ಎನ್ನುವುದು ಕಾಂಗ್ರೆಸ್‌ ನಾಯಕರಿಗೆ ಎಂದಿಗೂ ಗೊತ್ತಿಲ್ಲ. ಆದರೆ ಬಡತನ ನಿರ್ಮೂಲನೆ ಹೇಳಿಕೆ ನೀಡುತ್ತಲೇ ದಶಕಗಳ ಕಾಲ ಆಡಳಿತ ನಡೆಸಿದರು. ಇದರಿಂದಲೇ ಬೆಳಕು ಹರಿಯುವ ಮುನ್ನ ಹಾಗೂ ಸಂಜೆ ನಂತರ ಬೀದಿ ಬದಿ ಶೌಚಾಲಯಕ್ಕೆ ಹೋಗುತ್ತಿರುವುದು ಕಾಂಗ್ರೆಸ್‌ಗೆ ತಿಳಿಯಲೆ ಇಲ್ಲ ಎಂದು ವ್ಯಂಗ್ಯವಾಡಿದರು.

ಸಂವಿಧಾನದ 75ನೇ ವರ್ಷವನ್ನು ಆಚರಿಸುವ ಸಮಯ ಬಂದಿದೆ. ಸಂಸತ್ತು ಕೂಡ ಅದರ ಭಾಗವಾಗಿರುವುದು ನನಗೆ ಖುಷಿ ತಂದಿದೆ. ನಮಗೆಲ್ಲರಿಗೂ, ಎಲ್ಲಾ ನಾಗರಿಕರಿಗೆ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಪ್ರಜಾಪ್ರಭುತ್ವವನ್ನು ಪ್ರೀತಿಸುವ ನಾಗರಿಕರಿಗೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಭಾರತದ ಪ್ರಜಾಪ್ರಭುತ್ವ ಜಗತ್ತಿಗೆ ಸ್ಪೂರ್ತಿದಾಯಕವಾಗಿದೆ, ಅದಕ್ಕಾಗಿಯೇ ನಾವು ಪ್ರಜಾಪ್ರಭುತ್ವದ ತಾಯಿ. ನಮ್ಮ ಸಂವಿಧಾನ ಸಭೆಯಲ್ಲಿ, 15 ಮಹಿಳೆಯರಿದ್ದರು, ಮತ್ತು ಚರ್ಚೆಯ ಮೂಲಕ ಅವರು ಚರ್ಚೆಗಳಿಗೆ ಅಧಿಕಾರ ನೀಡಿದರು, ಅವರ ಒಳನೋಟಗಳು ಪ್ರಭಾವಶಾಲಿಯಾಗಿದ್ದವು. ಇದು ನಮಗೆ ಹೆಮ್ಮೆಯ ವಿಷಯ. ಅನೇಕ ದೇಶಗಳು ಪ್ರಜಾಪ್ರಭುತ್ವವಾದವು ಆದರೆ ಮಹಿಳೆಯರಿಗೆ ಹಕ್ಕುಗಳನ್ನು ನೀಡಲಾಗಿಲ್ಲ. ನಮ್ಮ ರಾಷ್ಟ್ರವು ಮೊದಲಿನಿಂದಲೂ ಅವರಿಗೆ ನೀಡಿದೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಕೇಂದ್ರಬಿಂದುವಾಗಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಸ್ವಾತಂತ್ರ್ಯದ ನಂತರ ಏಕತೆಯ ಮೂಲ ಮೌಲ್ಯಗಳ ಮೇಲೆ ದಾಳಿ ನಡೆದಿರುವುದು ಬೇಸರದ ಸಂಗತಿ. ವೈವಿಧ್ಯತೆಯನ್ನು ಆಚರಿಸುವ ಬದಲು, ಕೆಲವರು ವಿಷದ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರು. ಒಬ್ಬ ಮಹಿಳೆ ಮತ್ತು ಬುಡಕಟ್ಟು ಸಮುದಾಯದ ರಾಷ್ಟ್ರಪತಿಯನ್ನು ನೋಡುವುದೇ ಹೆಮ್ಮೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುತ್ತಾರೆ ಮತ್ತು ಅವರ ಕೊಡುಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬ ಭಾರತೀಯನು ಅವರ ಕೊಡುಗೆಯನ್ನು ಪ್ರಶಂಸಿಸುತ್ತಾನೆ ಮತ್ತು ಸ್ಫೂರ್ತಿ ನಮ್ಮ ಸಂವಿಧಾನವಾಗಿದೆ ಎಂದು ಹೇಳಿದರು.

ಸಂವಿಧಾನದ ನಿರ್ಮಾತೃಗಳು ಭಾರತದ ಏಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಮತ್ತು ಅದರ ಬಗ್ಗೆ ತಿಳಿದಿದ್ದರು. ಬಿಆರ್ ಅಂಬೇಡ್ಕರ್ ಅವರು, 'ಭಾರತದ ವೈವಿಧ್ಯಮಯ ಜನಸಂಖ್ಯೆಯನ್ನು ಹೇಗೆ ಒಗ್ಗೂಡಿಸುವುದು ಮತ್ತು ಒಗ್ಗಟ್ಟಿನಿಂದ ನಿರ್ಧಾರ ತೆಗೆದುಕೊಳ್ಳಲು ಅವರನ್ನು ಒಟ್ಟುಗೂಡಿಸುವುದು ಹೇಗೆ ಎಂಬುದೇ ಸಮಸ್ಯೆಯಾಗಿದೆ' ಎಂದು ಹೇಳಿದ್ದರು. ಕಳೆದ 10 ವರ್ಷಗಳಲ್ಲಿ ನಮ್ಮ ನೀತಿಗಳನ್ನು ನೀವು ನೋಡಿದರೆ, 370 ನೇ ವಿಧಿಯು ಭಾರತದ ಏಕತೆಗೆ ಅಡ್ಡಿಯಾಗಿದೆ ಮತ್ತು ಅದನ್ನು ತೆಗೆದುಹಾಕುವುದು ನಮ್ಮ ಆದ್ಯತೆಯಾಗಿದೆ. ಏಕತೆ ನಮ್ಮ ಆದ್ಯತೆಯಾಗಿತ್ತು. ನಾವು ಮುಂದುವರಿಯಬೇಕಾದರೆ ಆರ್ಥಿಕತೆಗೆ ನಾವು ಅನುಕೂಲಕರ ವಾತಾವರಣವನ್ನು ಒದಗಿಸಬೇಕು. ಜಿಎಸ್‌ಟಿ ಆರ್ಥಿಕ ಏಕತೆಯನ್ನು ಒದಗಿಸಿತು ಮತ್ತು ಹಿಂದಿನ ಸರ್ಕಾರವೂ ಇದಕ್ಕೆ ಕೊಡುಗೆ ನೀಡಿದೆ. ಒಂದು ರಾಷ್ಟ್ರ ಒಂದು ತೆರಿಗೆ ನಮ್ಮ ಗುರಿ ಎಂದರು ಮೋದಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.