ತಮಿಳುನಾಡು ಬಜೆಟ್ ವಿವಾದ, ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದ ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ
Rupee symbol: ಭಾರತದ ಅಧಿಕೃತ ರೂಪಾಯಿ ಸಂಕೇತ ವಿನ್ಯಾಸಕಾರ ಉದಯಕುಮಾರ್ ಧರ್ಮಲಿಂಗಂ, ತಮಿಳುನಾಡು ಬಜೆಟ್ ವಿಚಾರದಲ್ಲಿ ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಅವರು ಡಿಎಂಕೆ ನಾಯಕ ಎನ್ ಧರ್ಮಲಿಂಗಂ ಅವರ ಪುತ್ರ. ಈ ವಿದ್ಯಮಾನದ ಬಗ್ಗೆ ಅವರೇನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

Rupee symbol: ತಮಿಳುನಾಡು ಬಜೆಟ್ ಪುಸ್ತಕದ ಲಾಂಛನದಲ್ಲಿ ರೂಪಾಯಿ ಸಂಕೇತ ತಮಿಳಿಗೆ ಬದಲಾಯಿಸಿದ ಅಲ್ಲಿನ ಸರ್ಕಾರದ ಕ್ರಮ ಟೀಕೆಗೆ ಗುರಿಯಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ವಿರುದ್ಧ ದ್ವಿಭಾಷಾ ಸೂತ್ರವನ್ನೇ ಪ್ರತಿಪಾದಿಸುತ್ತಿರುವ ತಮಿಳುನಾಡು ಸರ್ಕಾರ ಈ ಸಲದ ಬಜೆಟ್‌ನಲ್ಲಿ ದೇವನಾಗರಿ ಲಿಪಿಯ ರೂಪಾಯಿ ಸಂಕೇತವನ್ನು ತಮಿಳು ಭಾಷೆಯ ರು ಅಕ್ಷರಕ್ಕೆ ಬದಲಾಯಿಸಿದ್ದು ಈಗ ವಿವಾದಕ್ಕೀಡಾಗಿದೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ರೂಪಾಯಿ ಸಂಕೇತ ವಿನ್ಯಾಸಕಾರ, ತಮಿಳುನಾಡಿನವರೇ ಆದ ಉದಯ ಕುಮಾರ್ ಧರ್ಮಲಿಂಗಂ, 'ವರ್ಷಗಳ ಬಳಿಕ ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಉದಯ ಕುಮಾರ್ ಧರ್ಮಲಿಂಗಂ ಗುವಾಹಟಿ ಐಐಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಧಿಕೃತ ರೂಪಾಯಿ ಸಂಕೇತ ವಿನ್ಯಾಸಕಾರ ಡಿಎಂಕೆ ನಾಯಕನ ಪುತ್ರ
ಈಗಾಗಲೇ ಚಾಲ್ತಿಯಲ್ಲಿರುವ ಅಧಿಕೃತ ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ ಕೂಡ ತಮಿಳುನಾಡಿನವರೇ ಆಗಿದ್ದು, ಸದ್ಯ ಗುವಾಹಟಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2010ರಲ್ಲಿ ಉದಯ ಕುಮಾರ್ ಧರ್ಮಲಿಂಗಂ ರಚಿಸಿದ ಭಾರತದ ರೂಪಾಯಿ ಸಂಕೇತವನ್ನು ಭಾರತ ಸರ್ಕಾರ ಆಯ್ಕೆ ಮಾಡಿ ಚಲಾವಣೆಗೆ ತಂದಿದೆ. ಅಧಿಕೃತ ರೂಪಾಯಿ ಸಂಕೇತವು ದೇವನಾಗರಿ ಅಕ್ಷರ ರ ಹಾಗೂ ರೋಮನ್ ಅಕ್ಷರ ಆರ್ ಅನ್ನು ಸಂಕೇತಿಸುವಂತೆ ಇದೆ. ಇದು ಈಗ ಭಾರತದ ಕರೆನ್ಸಿಯ ಅಧಿಕೃತ ಗುರುತಾಗಿ ದಾಖಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಎಕ್ಸ್ ಖಾತೆಯಲ್ಲಿ ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಡಿಯೋ ಪೋಸ್ಟ್ ಮಾಡಿದ ಬಳಿಕ ವಿವಾದ ಗರಿಗೆದರಿದೆ. ತಮಿಳುನಾಡು ಸರ್ಕಾರ ಈ ವರೆಗೂ ತಮಿಳುನಾಡು ಬಜೆಟ್ ಪುಸ್ತಕದ ಲಾಂಛನದ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ತಮಿಳುನಾಡು ಬಜೆಟ್ 2025-26ರ ಲೋಗೋದಲ್ಲಿ ಭಾರತೀಯ ಕರೆನ್ಸಿ ಸಂಕೇತ ರೂಪಾಯಿಯನ್ನು ತಮಿಳು ಭಾಷೆಯ ‘ರು’ ಅಕ್ಷರಕ್ಕೆ ಬದಲಾಯಿಸಲಾಗಿದೆ. ಈ ನಡುವೆ, ರಾಜ್ಯ ಯೋಜನಾ ಆಯೋಗ ಈ ನಡೆಯನ್ನು ಸಮರ್ಥಿಸಿಕೊಂಡಿದೆ. ದೇವನಾಗರಿ ಲಿಪಿಯಲ್ಲಿದ್ದ ಕಾರಣ ಅದನ್ನು ಬದಲಾಯಿಸಲಾಗಿದೆ ಎಂದು ಹೇಳಿಕೊಂಡಿದೆ.
ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದ ರೂಪಾಯಿ ಸಂಕೇತ ವಿನ್ಯಾಸಕಾರ
ತಮಿಳುನಾಡು ಬಜೆಟ್ ಪುಸ್ತಕದಲ್ಲಿ ರೂಪಾಯಿ ಸಂಕೇತವನ್ನು ತಮಿಳಿಗೆ ಬದಲಾಯಿಸಿದ ವಿದ್ಯಮಾನದ ಪೂರ್ತಿ ಮಾಹತಿ ಉದಯಕುಮಾರ್ ಧರ್ಮಲಿಂಗಂ ಅವರಿಗೆ ಇಲ್ಲ. ಆದಾಗ್ಯೂ, ಎಎನ್‌ಐ ಸುದ್ದಿ ಸಂಸ್ಥೆ ಪ್ರತಿನಿಧಿ ಜತೆಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರಕ್ಕೆ ರೂಪಾಯಿ ಸಂಕೇತ ಬದಲಾವಣೆ ಮಾಡುವುದಕ್ಕೆ ಬಹುಶಃ ಅವರದ್ದೇ ಆದ ಕಾರಣಗಳು, ದೃಷ್ಟಿಕೋನಗಳು ಇರಬಹುದು. ಕೇಂದ್ರ ಸರ್ಕಾರ ರೂಪಾಯಿ ಸಂಕೇತ ವಿನ್ಯಾಸಗೊಳಿಸುವ ಸ್ಪರ್ಧೆಯನ್ನು 15 ವರ್ಷ ಹಿಂದೆ ಏರ್ಪಡಿಸಿದ್ದಾಗ ಅದರಲ್ಲಿ ಪಾಲ್ಗೊಂಡಿದ್ದೆ. ವಿಜೇತನಾದೆ ಕೂಡ. ಅದನ್ನು ಸರ್ಕಾರ ಅಂಗೀಕರಿಸಿದ್ದು, ವ್ಯಾಪಕವಾಗಿ ಬಳಕೆಯಲ್ಲಿದೆ. ರೂಪಾಯಿ ಸಂಕೇತದ ವಿನ್ಯಾಸಕಾರ ಎಂಬ ಹೆಮ್ಮೆ, ಖುಷಿ ನನಗಿದೆ. ಆದರೆ ವರ್ಷಗಳ ನಂತರ ಇಂಥದ್ದೊಂದು ಸನ್ನಿವೇಶ, ಚರ್ಚೆಗೆ ಇದು ಗ್ರಾಸವಾಗಬಹುದು ಎಂಬ ನಿರೀಕ್ಷೆ ನನಗೆ ಇರಲಿಲ್ಲ ಎಂದು ಹೇಳಿದ್ದಾರೆ. ಉದಯಕುಮಾರ್ ಧರ್ಮಲಿಂಗಂ ಅವರು ತಮಿಳುನಾಡಿನ ರಿಶಿವಾಂಡಿಯಮ್ ಕ್ಷೇತ್ರದ ಮಾಜಿ ಶಾಸಕ, ಡಿಎಂಕೆ ನಾಯಕ ಎನ್ ಧರ್ಮಲಿಂಗಂ ಅವರ ಪುತ್ರ.
ಬಿಜೆಪಿ ನಾಯಕ ಕೆ ಅಣ್ಣಾಮಲೈ ಮತ್ತು ಇತರೆ ನಾಯಕರು ಡಿಎಂಕೆ ಸರ್ಕಾರದ ನಡೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ. ಅಣ್ಣಾಮಲೈ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಜಾರಿ ನಿರ್ದೇಶನಾಲಯ ತಮಿಳುನಾಡಿನಾದ್ಯಂತ ದಾಳಿ ನಡೆಸಿ ಟಿಎಎಸ್‌ಎಂಎಸಿಯಲ್ಲಿ ಕಿಕ್‌ಬ್ಯಾಕ್ ಆಗಿ ಇರಿಸಿದ್ದ 1000 ಕೋಟಿ ರೂಪಾಯಿಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದೆ. ಈ ಮಹತ್ವದ ದಾಳಿಯ ಮೇಲಿನ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ತಮಿಳುನಾಡು ಬಜೆಟ್ ಮೇಲಿನ ರೂಪಾಯಿ ಸಂಕೇತ ಬದಲಾಯಿಸಿದ್ದಾರೆ ಎಂದು ಟೀಕಿಸಿದ್ದಾರೆ.
