ನವದೆಹಲಿ: ಸಂಸತ್ ಭವನದ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಯಾರೀತ, ಏನು ಕಳವಳಕಾರಿ ವಿಷಯ
Indian Parliament Building: ಕಳವಳಕಾರಿ ವಿದ್ಯಮಾನ ಒಂದರಲ್ಲಿ, ಸಂಸತ್ ಭವನದ ಎದುರೇ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆತನನ್ನು ಶೇಕಡ 90 ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಏನಿದು ಘಟನೆ, ಯಾರು ಆ ವ್ಯಕ್ತಿ ಎಂಬಿತ್ಯಾದಿ ವಿವರ ಇಲ್ಲಿದೆ.
Indian Parliament Building: ನವದೆಹಲಿಯಲ್ಲಿ ಬುಧವಾರ (ಡಿಸೆಂಬರ್ 25) ವ್ಯಕ್ತಿಯೊಬ್ಬರು ಸಂಸತ್ ಭವನದ ಎದುರು ಹೋಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಕಳವಳಕಾರಿ ಘಟನೆ ಗಮನಸೆಳೆದಿದೆ. ದೆಹಲಿ ಅಗ್ನಿಶಾಮಕ ಸೇವೆ ಮೂಲಗಳ ಪ್ರಕಾರ, ಅಪರಾಹ್ನ 3.30ರ ಸುಮಾರಿಗೆ ಈ ಆತಂಕಕಾರಿ ವಿದ್ಯಮಾನ ನಡೆಯಿತು. ಆ ಹೊತ್ತಿನಲ್ಲಿ ಘಟನಾ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಆ ವ್ಯಕ್ತಿಯನ್ನು ಆಸ್ಪತ್ರೆ ಸಾಗಿಸಲಾಗಿದ್ದು, ಸಂಸತ್ ಭವನದ ಎದುರು ಬಂದೋಬಸ್ತ್ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸತ್ ಭವನದ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಏನಿದು ಘಟನೆ
ನವದೆಹಲಿಯ ಸಂಸತ್ ಭವನದ ಎದುರು ಇರುವ ರೈಲ್ವೆ ಭವನದ ಬಳಿ ಆತ್ಮಾಹುತಿ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ಗಮನಸೆಳೆಯುತ್ತಿದ್ದಂತೆ ಅಗ್ನಿಶಾಮಕ ಸೇವೆಯವರಿಗೆ ಸ್ಥಳೀಯರು ಕರೆ ಮಾಡಿದ್ದು, ಅವರು ಕೂಡಲೇ ಸ್ಥಳಕ್ಕೆ ಬಂದು ವ್ಯಕ್ತಿಯನ್ನು ರಕ್ಷಿಸಿದ್ದಾರೆ. "ಸಂಸತ್ ಕಟ್ಟಡದ ಎದುರಿನ ರೈಲ್ವೆ ಭವನದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಧ್ಯಾಹ್ನ 3.35 ರ ಸುಮಾರಿಗೆ ದೂರವಾಣಿ ಕರೆ ಬಂತು. ಕೂಡಲೇ ಅಗ್ನಿಶಾಮಕ ವಾಹನವನ್ನು ಅಲ್ಲಿ ಸೇವೆ ನಿಯೋಜಿಸಲಾಯಿತು" ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ಧಾಗಿ ಪಿಟಿಐ ವರದಿ ಮಾಡಿದೆ.
ಸಂಸತ್ ಭವನ ರಕ್ಷಣೆಗೆ ನಿಂತಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಬೆಂಕಿ ಹಚ್ಚಿಕೊಂಡ ವ್ಯಕ್ತಿಯನ್ನು ರಕ್ಷಿಸಲು ಮುಂದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಜತೆಗೆ ಕೈ ಜೋಡಿಸಿದ್ದರು. ಬೆಂಕಿ ಹಚ್ಚಿಕೊಂಡ ವ್ಯಕ್ತಿಯನ್ನು ರಕ್ಷಿಸಿ ಕೂಡಲೇ ವೈದ್ಯಕೀಯ ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂಸತ್ ಭವನದ ಎದುರು ಬೆಂಕಿ ಹಚ್ಚಿಕೊಂಡ ವ್ಯಕ್ತಿ ಯಾರು
ಸಂಸತ್ ಭವನದ ಎದುರು ಇರುವಂತಹ ರೈಲ್ವೆ ಭವನದ ಸಮೀಪ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಬಾಗಪತ್ ಮೂಲದ ಜಿತೇಂದರ್ ಎಂದು ಗುರುತಿಸಲಾಗಿದೆ. ಆತ ಸಂಸತ್ತಿನ ಮುಂಭಾಗದ ಉದ್ಯಾನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಮುಖ್ಯ ದ್ವಾರದ ಕಡೆಗೆ ಬಂದಿದ್ದ ಎಂದು ನವದೆಹಲಿಯ ಡಿಸಿಪಿ ದೇವೇಶ್ ಮಹ್ಲಾ ಹೇಳಿದ್ದಾರೆ.
“ಇಂದು ಜಿತೇಂದರ್ ಎಂಬ ವ್ಯಕ್ತಿ ರೈಲ್ ಭವನದ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಬೆಂಕಿ ನಂದಿಸಲಾಯಿತು. ಆತನಿಗೆ ಸುಮಾರು 30-35 ವರ್ಷ ಇರಬಹುದು. ಆತ ಉತ್ತರ ಪ್ರದೇಶದ ಭಾಗಪತ್ ನಿವಾಸಿ. 2021ರಲ್ಲಿ ಭಾಗಪತ್‌ನಲ್ಲಿ ದಾಖಲಾದ ಪ್ರಕರಣದಿಂದಾಗಿ ಸ್ವಲ್ಪ ತೊಂದರೆಯಲ್ಲಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ'' ಎಂದು ಡಿಸಿಪಿ ದೇವೇಶ್ ಮಹ್ಲಾ ಹೇಳಿದರು. ಜಿತೇಂದರ್ ಶೇಕಡ 90 ಗಾಯಗೊಂಡಿದ್ದು, ಸುಟ್ಟ ಗಾಯಗಳಿಗೆ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ ಎಂದು ಪಿಟಿಐ ವರದಿ ವಿವರಿಸಿದೆ.
"ಸ್ಥಳೀಯ ಪೊಲೀಸರು, ರೈಲ್ವೇ ಪೊಲೀಸರು ಮತ್ತು ಕೆಲವು ನಾಗರಿಕರು ತ್ವರಿತವಾಗಿ ಸ್ಪಂದಿಸಿದ ಕಾರಣ, ಆತ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು. ಕೂಡಲೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದು ಕೂಡ ಸಾಧ್ಯವಾಯಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಪ್ರಾಥಮಿಕ ತನಿಖೆ ವೇಳೆ ಈ ಕೃತ್ಯಕ್ಕೆ ವೈಯಕ್ತಿಕ ಕಾರಣ ಇರಬಹುದು. ಬಾಗಪತ್‌ನಲ್ಲಿ ಈ ವ್ಯಕ್ತಿ ವಿರುದ್ಧ ಕೇಸ್ ಇದ್ದು, ಅದರ ವಿವರ ಪಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಅದರ ವಿವರ ಬಂದ ಬಳಿಕ ಆತ ಆ ವಿಪರೀತ ಕೃತ್ಯಕ್ಕೆ ಮುಂದಾಗಿದ್ದೇಕೆ ಎಂಬ ವಿವರ ಸಿಗಬಹುದು ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ತಿಳಿಸಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯದ ಕಡೆಗೆ ಗಮನಕೊಡಿ. ಪೊಲೀಸರ, ಆಪ್ತ ಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.