ಕನ್ನಡ ಸುದ್ದಿ  /  Nation And-world  /  Nia Says Karachi Outfit Was In Touch With Udaipur Murder Accused

NIA on Udaipur murder case: 'ಉದಯಪುರ ಟೈಲರ್‌ ಹತ್ಯೆ ಆರೋಪಿಗಳೊಂದಿಗೆ ಪಾಕ್ ಸಂಘಟನೆ ಸಂಪರ್ಕದಲ್ಲಿತ್ತು'

ಕರಾಚಿ ಮೂಲದ ಸಂಘಟನೆಯಾದ ದಾವತ್-ಎ-ಇಸ್ಲಾಮಿ ಸದಸ್ಯ ಸಲ್ಮಾನ್, ಹತ್ಯೆ ಆರೋಪಿ ಮೊಹಮ್ಮದ್ ಗೌಸ್‌ನನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದ್ದಾನೆ. ಪ್ರವಾದಿ ಮೊಹಮ್ಮದ್‌ಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿಗಳು ಕ್ರೂರ ದಾಳಿಯನ್ನು ಯೋಜಿಸಲು ಪ್ರೇರೇಪಿಸಿದರು ಎಂದು ಈ ವಿಚಾರದ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.

ಜೂನ್ 28 ರಂದು ಉದಯಪುರದ ಅವರ ಅಂಗಡಿಯಲ್ಲಿ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.
ಜೂನ್ 28 ರಂದು ಉದಯಪುರದ ಅವರ ಅಂಗಡಿಯಲ್ಲಿ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಮೂಲಗಳಿಂದ ಅಚ್ಚರಿಯ ಅಂಶವೊಂದು ಬಹಿರಂಗವಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಚಾರ್ಜ್ ಶೀಟ್‌ ಸಲ್ಲಿಸಿರುವ ಎನ್‌ಐಎ, ಈ ಘಟನೆ ಪಾಕಿಸ್ತಾನಕ್ಕೂ ನಂಟಿರುವ ಬಗ್ಗೆ ತಿಳಿಸಿದೆ.

ಕರಾಚಿ ಮೂಲದ ಸಂಘಟನೆಯಾದ ದಾವತ್-ಎ-ಇಸ್ಲಾಮಿ ಸದಸ್ಯ ಸಲ್ಮಾನ್, ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳ ಬಳಿಕ, ಹತ್ಯೆ ಆರೋಪಿ ಮೊಹಮ್ಮದ್ ಗೌಸ್‌ನನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದ್ದಾನೆ. ಪ್ರವಾದಿ ಮೊಹಮ್ಮದ್‌ಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿಗಳು ಕ್ರೂರ ದಾಳಿಯನ್ನು ಯೋಜಿಸಲು ಪ್ರೇರೇಪಿಸಿದರು ಎಂದು ಈ ವಿಚಾರದ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.

ಸಲ್ಮಾನ್ ಮತ್ತು ಕರಾಚಿ ಮೂಲದ ದಾವತ್-ಎ-ಇಸ್ಲಾಮಿಯ ಮತ್ತೊಬ್ಬ ಸದಸ್ಯ ಅಬು ಇಬ್ರಾಹಿಂ ಹೆಸರನ್ನು, ಗುರುವಾರ ಜೈಪುರ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಹೆಸರಿಸಿದೆ. ದಾವತ್ಎ ಇಸ್ಲಾಮಿಯನ್ನು ಕೂಡಾ ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾಗಿದೆ. ಆದರೆ ಈ ಹೆಸರನ್ನು ಆರೋಪಿ ಕಾಲಂನಲ್ಲಿ ಹೆಸರಿಸಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 2014ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಲ್ಮಾನ್‌ನನ್ನು ಮೊದಲ ಬಾರಿಗೆ ಗೌಸ್ ಭೇಟಿಯಾಗಿದ್ದಾನೆ. ಅಂದಿನಿಂದ ಅವರಿಬ್ಬರೂ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಸದ್ಯ ಬಿಜೆಪಿಯಿಂದ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಅವರು, ಮೇ ತಿಂಗಳಲ್ಲಿ ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಲಾಹಲ ಎದ್ದಿತ್ತು. ಮುಸ್ಲಿಂ ದೇಶಗಳು ಹೇಳಿಕೆಯನ್ನು ಖಂಡಿಸಿ ಮತ್ತು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದವು. ಆ ಬಳಿಕ ನೂಪುರ್‌ ಅವರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಲ್ಮಾನ್ ಗೌಸ್ ಮತ್ತು ರಿಯಾಜ್ ಅತ್ರಿ (ಇಬ್ಬರು ದಾಳಿಕೋರರು) ಕರಾಚಿ ಮೂಲದ ಆರೋಪಿಯನ್ನು ಸಂಪರ್ಕಿಸಿದ್ದರು.

“ಅವರು ವಾಟ್ಸಾಪ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಪ್ರವಾದಿಗೆ ಅವಮಾನಿಸಿದ ಸೇಡು ತೀರಿಸಿಕೊಳ್ಳಲು ಗೌಸ್ ಮತ್ತು ರಿಯಾಜ್ ಅಟ್ರಿಯನ್ನು ಸಲ್ಮಾನ್ ಹೇಳಿದ್ದಾನೆ. ಈ ಬಳಿಕ ದಾಳಿಕೋರರು ಹತ್ಯೆಯನ್ನು ಯೋಜಿಸಿದ್ದಾರೆ,” ಎಂದು ಅಧಿಕಾರಿ ಹೇಳಿದ್ದಾರೆ.

ಜೂನ್ 28ರಂದು ಉದಯಪುರದ ಅಂಗಡಿಯಲ್ಲಿ ಲಾಲ್ ಅವರ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು. ನಂತರ ಇಬ್ಬರು ಆರೋಪಿಗಳು ಭೀಕರ ಹತ್ಯೆಯ ವಿಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಗೂ ಕೊಲೆ ಬೆದರಿಕೆ ಹಾಕಿದ್ದರು. ಆ ಬಳಿಕ ದೇಶದಲ್ಲಿ ಕೆಲ ದಿನಗಳ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮೌಲಾನಾ ಇಲ್ಯಾಸ್ ಅತ್ರಿ ಎಂಬವರು ಕರಾಚಿಯಲ್ಲಿ ಸ್ಥಾಪಿಸಿದ ದಾವತ್ ಎ ಇಸ್ಲಾಮಿ, ದತ್ತಿ ಕಾರ್ಯಗಳನ್ನು ನಡೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಿಂಸಾತ್ಮಕ ಕೃತ್ಯಗಳನ್ನು ಪ್ರಚೋದಿಸುವಲ್ಲಿಯೂ ಅದರ ಹೆಸರು ಕಾಣಿಸಿಕೊಂಡಿದೆ. ಇದು ಜಾಗತಿಕ ರಾಜಕೀಯೇತರ ಇಸ್ಲಾಮಿಕ್ ಸಂಘಟನೆಯಾಗಿದ್ದು, ಜಗತ್ತಿನಾದ್ಯಂತ ಕುರಾನ್ ಮತ್ತು ಸುನ್ನತ್‌ನ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. ಇದನ್ನು 1981ರಲ್ಲಿ ಸ್ಥಾಪಿಸಲಾಯಿತು ಎಂದು ಅದರ ವೆಬ್‌ಸೈಟ್ ಹೇಳುತ್ತದೆ.

ಪ್ರಕರಣದಲ್ಲಿ ದಾವತ್ ಎ ಇಸ್ಲಾಮಿ ಮತ್ತು ಇತರರ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.

IPL_Entry_Point