Rajouri killings: ರಜೌರಿ ಅವಳಿ ಭಯೋತ್ಪಾದಕ ದಾಳಿಯ ತನಿಖೆ ಎನ್‌ಐಎಗೆ ಹಸ್ತಾಂತರ: ಅಮಿತ್ ಶಾ
ಜನವರಿ ಮೊದಲ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ಪ್ರಕರಣವನ್ನು ಕೇಂದ್ರವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರ: ಜನವರಿ ಮೊದಲ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ಪ್ರಕರಣವನ್ನು ಕೇಂದ್ರವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ದಿನದ ಭೇಟಿಯಲ್ಲಿರುವ ಅಮಿತ್ ಶಾ, ರಜೌರಿ ಭಯೋತ್ಪಾದಕ ದಾಳಿಯಲ್ಲಿ ಮಡಿದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ರಜೌರಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಗೃಹ ಸಚಿವರು ಜಮ್ಮುವಿನಲ್ಲಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಜಮ್ಮುವಿನಲ್ಲಿ ಉನ್ನತ ಮಟ್ಟದ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ನಾನು ಮೃತಪಟ್ಟವರ ಎಲ್ಲಾ ಕುಟುಂಬಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ, ಅವರನ್ನು ಭೇಟಿ ಮಾಡಲು ನಾನೇ ಅಲ್ಲಿಗೆ ಹೋಗುತ್ತಿದ್ದೆ ಆದರೆ ಹವಾಮಾನ ವೈಪರೀತ್ಯದ ಕಾರಣ ಇಂದು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಅವರ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಆಲಿಸಿದ್ದೇನೆ ಮತ್ತು ನಾನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಜೀ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ಭಾರತ ಸರ್ಕಾರವು 2 ದಿನಗಳ ಅವಧಿಯಲ್ಲಿ ನಡೆದ ಎರಡೂ ಘಟನೆಗಳ ತನಿಖೆಯನ್ನು ಎನ್ಐಎಗೆ ನೀಡಿದೆ. ಎನ್ಐಎ ಮತ್ತು ಜಮ್ಮು ಪೊಲೀಸರು ಒಟ್ಟಾಗಿ ತನಿಖೆ ನಡೆಸುತ್ತಾರೆ. ಕಳೆದ ಒಂದೂವರೆ ವರ್ಷಗಳಲ್ಲಿ ನಡೆದ ಎಲ್ಲಾ ಘಟನೆಗಳ ತನಿಖೆ ಕೂಡ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಭದ್ರತೆಯಲ್ಲಿ ತೊಡಗಿರುವ ಭದ್ರತಾ ಸಂಸ್ಥೆಗಳು ಮತ್ತು ಎಲ್ಲಾ ರೀತಿಯ ಏಜೆನ್ಸಿಗಳ ಮಾಹಿತಿ ಪಡೆದು ವಿವರವಾದ ಚರ್ಚೆ ನಡೆಸಲಾಗಿದೆ. ಸಂಪೂರ್ಣ 360 ಭದ್ರತಾ ಚಕ್ರವನ್ನು ರಚಿಸುವ ಬಗ್ಗೆ ಚರ್ಚಿಸಲಾಗಿದೆ.ಮುಂಬರುವ ದಿನಗಳಲ್ಲಿ ಕಣಿವೆ ನಾಡನ್ನು ಅತ್ಯಂತ ಸುರಕ್ಷಿತ ಗ್ರಿಡ್ ಮಾಡಲು ಸಿದ್ಧತೆಗಳನ್ನು ಮಾಡಲಾಗುವುದು. ಇದಕ್ಕಾಗಿ ಬಿಎಸ್ಎಫ್, ಸಿಆರ್‌ಪಿಎಫ್, ಸೇನೆ ಅಥವಾ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಎಲ್ಲರೂ ಇದಕ್ಕೆ ಸಿದ್ಧರಾಗಿದ್ದಾರೆ ಎಂದು ಶಾ ಹೇಳಿದರು.
ಅಮಿತ್ ಶಾ ತಮ್ಮೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಮುಂದಿನ ಭೇಟಿಯ ವೇಳೆ ನಮ್ಮನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ನಮಗೆ ನ್ಯಾಯ ದೊರಕಿಸುವಂತೆ ಮತ್ತು ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಗೃಹ ಸಚಿವರನ್ನು ಒತ್ತಾಯಿಸಿದ್ದೇನೆ ಎಂದು ರಜೌರಿ ಉಗ್ರರ ದಾಳಿಯಲ್ಲಿ ತಮ್ಮ ಇಬ್ಬರು ಪುತ್ರರನ್ನು ಕಳೆದುಕೊಂಡ ತಾಯಿಯೊಬ್ಬರು ಹೇಳಿದರು.
ರಜೌರಿ ಅವಳಿ ಭಯೋತ್ಪಾದಕ ದಾಳಿ
ಜನವರಿ 1 ರಂದು ರಜೌರಿ ಜಿಲ್ಲೆಯ ಹಿಂದೂ ಪ್ರಾಬಲ್ಯದ ಹಳ್ಳಿಯಾದ ಧಂಗ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನನಪ್ಪಿದ್ದರು ಹಾಗೂ ಕೆಲವರು ಗಾಯಗೊಂಡಿದ್ದರು. ಗ್ರಾಮದ ಮೂರು ಮನೆಗಳ ಮೇಲೆ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ್ದರು. ಮೃತರನ್ನು ದೀಪಕ್ ಕುಮಾರ್ (23), ಸತೀಶ್ ಕುಮಾರ್ (45), ಪ್ರೀತಮ್ ಲಾಲ್ (56) ಮತ್ತು ಶಿವಪಾಲ್ (32) ಎಂದು ಗುರುತಿಸಲಾಗಿದೆ.
ಮರುದಿನ ಜನವರಿ 2 ರಂದು ಇದೇ ಗ್ರಾಮದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ನಾಲ್ಕು ವರ್ಷದ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರುಗಾಯಗೊಂಡಿದ್ದರು. ಮೃತರನ್ನು ವಿಹಾನ್ ಶರ್ಮಾ (4) ಮತ್ತು ಸಮೀಕ್ಷಾ ಶರ್ಮಾ (16) ಎಂದು ಗುರುತಿಸಲಾಗಿದೆ.
ಮೃತರ ಕುಟುಂಬಕ್ಕೆ ಪರಿಹಾರ
ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಮನೋಜ್ ಸಿನ್ಹಾ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ. ಭೀಕರ ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬ ನಾಗರಿಕರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಲಾಗುವುದು, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ನೀಡಲಾಗುವುದು, ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ " ಎಂದು ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಉಗ್ರರ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ
ಧಂಗ್ರಿಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಳ್ಳುವವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಉಗ್ರರ ಬಗ್ಗೆ ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಸೈನ್ಯ ನಿಯೋಜಿಸಿದ ಸಿಆರ್‌ಪಿಎಫ್
ರಜೌರಿ ಭಯೋತ್ಪಾದಕ ದಾಳಿಯಲ್ಲಿ ಆರು ನಾಗರಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯು 1800 ಸೈನಿಕರನ್ನೊಳಗೊಂಡ ಹೆಚ್ಚುವರಿ 18 ತುಕಡಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿದೆ.