ಕನ್ನಡ ಸುದ್ದಿ  /  Nation And-world  /  Niti Aayog Governing Council Meeting Begins 8 Opposition Chief Ministers To Skip Niti Aayog Meeting Today Politics Uks

NITI Aayog: ನೀತಿ ಆಯೋಗ ಆಡಳಿತ ಮಂಡಳಿಯ 8ನೇ ಸಭೆ ಶುರು, ಕೆಲವು ಮುಖ್ಯಮಂತ್ರಿಗಳು ಗೈರು; ವಿವರ ವರದಿ ಇಲ್ಲಿದೆ

NITI Aayog: ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಹೊಸ ಕನ್ವೆನ್ಶನ್‌ ಸೆಂಟರ್‌ನಲ್ಲಿ ತಿ ಆಯೋಗದ ಆಡಳಿತ ಮಂಡಳಿಯ ಮಹತ್ವದ ಎಂಟನೇ ಸಭೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದು, ವಿಪಕ್ಷ ಆಳ್ವಿಕೆಯ ರಾಜ್ಯಗಳ 8 ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.

ನೀತಿ ಆಯೋಗದ ಆಡಳಿತ ಮಂಡಳಿಯ 8ನೇ ಸಭೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆಯುತ್ತಿದೆ. (ಕಡತ ಚಿತ್ರ)
ನೀತಿ ಆಯೋಗದ ಆಡಳಿತ ಮಂಡಳಿಯ 8ನೇ ಸಭೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆಯುತ್ತಿದೆ. (ಕಡತ ಚಿತ್ರ) (HT File Photo)

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ಮಹತ್ವದ ಎಂಟನೇ ಸಭೆ ನವದೆಹಲಿಯಲ್ಲಿ ಇಂದು (ಮೇ 27) ಶುರುವಾಗಿದೆ. ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಹೊಸ ಕನ್ವೆನ್ಶನ್‌ ಸೆಂಟರ್‌ನಲ್ಲಿ ಸಭೆ ನಡೆಯುತ್ತಿದೆ.

ʻವಿಕಾಸ್‌ ಭಾರತ್‌ @ 2047: ರೋಲ್‌ ಆಫ್‌ ಟೀಮ್‌ ಇಂಡಿಯಾʼ ಎಂಬುದು ಸಭೆಯ ಥೀಮ್‌. ಭಾರತವನ್ನು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವಾರು ವಿಷಯಗಳು ಸಭೆಯ ಕಾರ್ಯಸೂಚಿಯಲ್ಲಿದೆ.

ನೀತಿ ಆಯೋಗದ ಆಡಳಿತ ಮಂಡಳಿಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವಾರು ಕೇಂದ್ರ ಮಂತ್ರಿಗಳು ಸದಸ್ಯರು. ಪ್ರಧಾನ ಮಂತ್ರಿ ಆಯೋಗದ ಅಧ್ಯಕ್ಷರು.

ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಮತ್ತು ಉತ್ತರ ಪ್ರದೇಶ, ಅಸ್ಸಾಂ, ಜಾರ್ಖಂಡ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.‌

ಸಾಮಾನ್ಯವಾಗಿ, ಪ್ರತಿ ವರ್ಷ ಪೂರ್ಣ ಕೌನ್ಸಿಲ್ ಸಭೆ ನಡೆಯುತ್ತದೆ. ಕಳೆದ ವರ್ಷ, ಆಗಸ್ಟ್ 7 ರಂದು ಮೋದಿಯವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ 2020 ರಲ್ಲಿ ಕೌನ್ಸಿಲ್ ಸಭೆ ನಡೆದಿಲ್ಲ. ನೀತಿ ಆಯೋಗದ ಆಡಳಿತ ಮಂಡಳಿಯ ಮೊದಲ ಸಭೆ 2015ರ ಫೆ.8ರಂದು ನಡೆಯಿತು.

ಈ ಸಲದ ಸಭೆಗೆ ದೆಹಲಿಯ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಪಂಜಾಬ್‌ನ ಭಗವಂತ್ ಮಾನ್, ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ಕೆ ಚಂದ್ರಶೇಖರ್ ರಾವ್, ತಮಿಳುನಾಡಿನ ಎಂಕೆ ಸ್ಟಾಲಿನ್, ಅಶೋಕ್ ಗೆಹ್ಲೋಟ್ ರಜತನ್ ಮತ್ತು ಕೇರಳದ ಪಿಣರಾಯಿ ವಿಜಯನ್ ಹಾಜರಾಗಿಲ್ಲ.

ನೀತಿ ಆಯೋಗದ ಸಭೆಗೆ ಗೈರಾಗಲು ಕಾರಣ ಏನು?

ಅರವಿಂದ ಕೇಜ್ರಿವಾಲ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅರವಿಂದ ಕೇಜ್ರಿವಾಲ್‌, ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಾಂವಿಧಾನಿಕವಾಗಿ ಮೇ 19ರಂದು ಜಾರಿಗೊಳಿಸಿದ ಸುಗ್ರೀವಾಜ್ಞೆ ವಿರೋಧಿಸಿ ನೀತಿ ಆಯೋಗದ ಆಡಳಿತ ಮಂಡಳಿ ಸಭೆ ಬಹಿಷ್ಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ಮೇಲಿನ ನಿಯಂತ್ರಣವನ್ನು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮರುಸ್ಥಾಪಿಸಿದ್ದು, ಸುಪ್ರೀಂ ಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿದೆ. ಪೊಲೀಸ್‌, ಸಾರ್ವಜನಿಕ ಸುವ್ಯವಸ್ಥೆ, ಭೂಮಿ ಹೊರತುಪಡಿಸಿದ ಸೇವೆಗಳ ನಿಯಂತ್ರಣ ಚುನಾಯಿತ ಸರ್ಕಾರಕ್ಕೆ ಹಸ್ತಾಂತರಿಸಿದ ಆದೇಶ ಅದಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ: ರಾಜ್ಯ ಹಣಕಾಸು ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯನ್ನು ಕಳುಹಿಸಲು ಟಿಎಂಸಿ ಸರ್ಕಾರದ ಮನವಿಯನ್ನು ಕೇಂದ್ರವು "ತಿರಸ್ಕರಿಸಿದ" ಕಾರಣ ನೀತಿ ಆಯೋಗದ ಸಭೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಯಾವುದೇ ಪ್ರತಿನಿಧಿ ಭಾಗವಹಿಸುತ್ತಿಲ್ಲ.

ನಿತೀಶ್ ಕುಮಾರ್: ಬಿಹಾರ ಕ್ಯಾಬಿನೆಟ್‌ನ ಹಿರಿಯ ಸದಸ್ಯ ನಿತೀಶ್ ಕುಮಾರ್ ಅವರು "ಪೂರ್ವ ನಿಗದಿತ ಕಾರ್ಯಕ್ರಮ"ಗಳ ಕಾರಣ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಅವರ ಪ್ರತಿನಿಧಿಯಾಗಿ ಬೇರೆ ಯಾರೂ ಭಾಗವಹಿಸುತ್ತಿಲ್ಲ.

ಇತರೆ ಮುಖ್ಯಮಂತ್ರಿಗಳು: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ಹೈದರಾಬಾದ್‌ನಲ್ಲಿ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜತೆಗೆ ಸಭೆ ನಡೆಸುತ್ತಿರುವ ಕಾರಣ, ಅವರೂ ನೀತಿ ಆಯೋಗದ ಸಭೆಗೆ ಗೈರಾಗಿದ್ದಾರೆ.

ಇದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸಿಂಗಾಪುರ ಪ್ರವಾಸದಲ್ಲಿರುವ ಕಾರಣ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅನಾರೋಗ್ಯ ಕಾರಣ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೇರಳ ಸಿಎಂ ಪಿರಣರಾಯಿ ವಿಜಯನ್‌ ಸಭೆಯಲ್ಲಿ ಭಾಗವಹಿಸದೇ ಇರುವುದಕ್ಕೆ ಕಾರಣ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

IPL_Entry_Point