Kannada News  /  Nation And-world  /  No Fuel In Delhi Without Puc Certificate
ಪೆಟ್ರೋಲ್‌ ಡೀಸೆಲ್‌ ಬೇಕಿದ್ರೆ ಪ್ರಮಾಣ ಪತ್ರ ಬೇಕು
ಪೆಟ್ರೋಲ್‌ ಡೀಸೆಲ್‌ ಬೇಕಿದ್ರೆ ಪ್ರಮಾಣ ಪತ್ರ ಬೇಕು

PUC Certificate: ಪಿಯುಸಿ ಇಲ್ಲದಿದ್ದರೆ ಪೆಟ್ರೋಲ್‌-ಡೀಸೆಲ್‌ ಸಿಗಲ್ಲ, ಬೇಗ ಈ ಪ್ರಮಾಣಪತ್ರ ಮಾಡಿಸಿ

01 October 2022, 15:42 ISTHT Kannada Desk
01 October 2022, 15:42 IST

ಒಂದು ವೇಳೆ ಮಾನ್ಯವಾದ ಪಿಯುಸಿ ಪ್ರಮಾಣಪತ್ರವಿಲ್ಲದೆ ಸಿಕ್ಕಿಬಿದ್ದರೆ, ವಾಹನ ಮಾಲೀಕರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂಪಾಯಿಯವರೆಗೆ ದಂಡ ವಿಧಿಸಬಹುದು. ಅಥವಾ ಮೋಟಾರು ವಾಹನ ಕಾಯ್ದೆಯ ಪ್ರಕಾರ ಈ ಎರಡೂ ಶಿಕ್ಷೆಯನ್ನು ವಿಧಿಸಬಹುದು.

ನವದೆಹಲಿ: ರಾಷ್ಟ್ರ ರಾಜಧಾನಿ ಪ್ರದೇಶ(national capital region)ದಲ್ಲಿ ವಾಹನ ಮಾಲಿನ್ಯವನ್ನು ತಡೆಗಟ್ಟಲು ಇಲ್ಲಿನ ಆಮ್ ಆದ್ಮಿ ಸರ್ಕಾರ ಎಲ್ಲಾ ರೀತಿ ಸರ್ಕಸ್‌ ಮಾಡುತ್ತಿದೆ. ಇದೇ ಪ್ರಯತ್ನ ಮುಂದುವರೆಸಿರುವ ಸರ್ಕಾರವು, ಪಕ್ಷದ ನೇತೃತ್ವದಲ್ಲಿ ಪಿ.ಯು.ಸಿ ಪ್ರಮಾಣಪತ್ರ ಇಲ್ಲದವರಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ನಿರ್ಬಂಧಿಸಲು ನಿರ್ಧರಿಸಿದೆ.

ಟ್ರೆಂಡಿಂಗ್​ ಸುದ್ದಿ

ಇದೇನಪ್ಪಾ, ಗಾಡಿ ಓಡಿಸೋದಕ್ಕೂ ಪಿಯುಸಿ ಓದಲೇಬೇಕಾ ಅನ್ಕೊಂಡ್ರಾ. ಇಲ್ಲಿ ವಿಷಯ ಇದಲ್ಲ. ರಾಷ್ಟ್ರರಾಜಧಾನಿ ದೆಹಲಿಯ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಭಾರತದ ರಾಜಧಾನಿ ಕುಖ್ಯಾತಿ ಗಳಿಸುತ್ತಿದೆ. ವಾಯು ಗುಣಮಟ್ಟ ಸೂಚ್ಯಾಂಕದ ಪ್ರಕಾರ ಇಲ್ಲಿನ ವಾತಾವರಣ ಕಳಪೆಯಾಗಿದೆ. ಇದನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಆಪ್‌ ಸರ್ಕಾರ ಹೊಸ ಪ್ರಯತ್ನ ಮಾಡುತ್ತಿದೆ.

ಇಲ್ಲಿ ಪಿಯುಸಿ ಅಂದ್ರೆ, ಶೈಕ್ಷಣಿಕ ಅರ್ಹತೆ ಅಲ್ಲ. ಬದಲಾಗಿ ಪೊಲ್ಯೂಷನ್‌ ಅಂಡರ್‌ ಕಂಟ್ರೋಲ್‌(pollution under control). ಅಂದರೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ. ಮುಂದೆ ಈ ಪ್ರಮಾಣ ಪತ್ರ ಇರುವವರಿಗೆ ಮಾತ್ರ ವಾಹನ ಓಡಿಸಲು ಪೆಟ್ರೋಲ್‌ ಅಥವಾ ಡೀಸೆಲ್‌ ಸಿಗಲಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಅಕ್ಟೋಬರ್ 25ರಿಂದ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ತೋರಿಸದೆ ವಾಹನ ಮಾಲೀಕರಿಗೆ ಇಂಧನ ನೀಡಲಾಗುವುದಿಲ್ಲ ಎಂದು ಸಚಿವ ರೈ ಹೇಳಿದ್ದಾರೆ.

ಯೋಜನೆಯ ಅನುಷ್ಠಾನ ಮತ್ತು ವಿಧಾನಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 29ರಂದು ಕರೆದಿದ್ದ ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರ ಅಧಿಸೂಚನೆ ಕೂಡ ಹೊರಡಿಸಲಿದ್ದು, ಒಂದು ವಾರದಲ್ಲಿ ಯೋಜನೆ ವಿಧಿವಿಧಾನಗಳು ಸ್ಪಷ್ಟವಾಗಲಿದೆ.

ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, ಜುಲೈ 2022ರವರೆಗೆ 13 ಲಕ್ಷ ದ್ವಿಚಕ್ರ ವಾಹನಗಳು ಮತ್ತು ಮೂರು ಲಕ್ಷ ಕಾರುಗಳು ಸೇರಿದಂತೆ ಒಟ್ಟು 17 ಲಕ್ಷಕ್ಕೂ ಹೆಚ್ಚು ವಾಹನಗಳು ಪಿಯುಸಿ ಪ್ರಮಾಣಪತ್ರಗಳಿಲ್ಲದೆ ಸಂಚರಿಸುತ್ತಿವೆ. ಈ ದೀಪಾವಳಿಯ ಬಳಿಕ ಇವುಗಳಿಗೆ ಕಡಿವಾಣ ಹಾಕಲಾಗುತ್ತದೆ.

ಒಂದು ವೇಳೆ ಪ್ರಮಾಣಪತ್ರ ಇಲ್ಲದಿದ್ದರೆ?

ಒಂದು ವೇಳೆ ಮಾನ್ಯವಾದ ಪಿಯುಸಿ ಪ್ರಮಾಣಪತ್ರವಿಲ್ಲದೆ ಸಿಕ್ಕಿಬಿದ್ದರೆ, ವಾಹನ ಮಾಲೀಕರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂಪಾಯಿಯವರೆಗೆ ದಂಡ ವಿಧಿಸಬಹುದು. ಅಥವಾ ಮೋಟಾರು ವಾಹನ ಕಾಯ್ದೆಯ ಪ್ರಕಾರ ಈ ಎರಡೂ ಶಿಕ್ಷೆಯನ್ನು ವಿಧಿಸಬಹುದು.

ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ವಾಹನಗಳು ಹೊರಸೂಸುವ ವಿಷಾನಿಲವೇ ಪ್ರಮುಖ ಕಾರಣವಾಗಿದೆ. ಹೀಗಾಗಿ ಮಾಲಿನ್ಯ ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಇದರ ಮೊದಲ ಹಂತವಾಗಿ ವಾಹನಗಳ ಮೇಲೆ ನಿರ್ಬಂಧ ಹೇರಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಅಕ್ಟೋಬರ್ 25 ರಿಂದ ವಾಹನದ ಪಿಯುಸಿ ಪ್ರಮಾಣಪತ್ರವಿಲ್ಲದೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ರೈ ಹೇಳಿಕೆಯನ್ನು ಸುದ್ದಿಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಲಿನ್ಯ ನಿಯಂತ್ರಣ ಸಂಬಂಧ ದೆಹಲಿ ಸರ್ಕಾರವು ಅಕ್ಟೋಬರ್ 3ರಂದು 24x7 ವಾರ್ ರೂಮ್ ಪ್ರಾರಂಭಿಸಲಿದೆ ಎಂದು ಸಚಿವರು ಹೇಳಿದ್ದಾರೆ. ಈ ವಾರ್ ರೂಮ್, ಪಿಯುಸಿ ಸಂಬಂಧಿತ ನಿಯಮಗಳ ಉಲ್ಲಂಘನೆಗಳ ಮೇಲ್ವಿಚಾರಣೆ ಮಾಡುತ್ತದೆ. ಇದರೊಂದಿಗೆ ದೂರುಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ.

ವಿಭಾಗ