ಕನ್ನಡ ಸುದ್ದಿ  /  Nation And-world  /  Nomination Of Kn Tripathi Rejected For Congress Chief Poll

AICC President Election: ತ್ರಿಪಾಠಿ ನಾಮಪತ್ರ ತಿರಸ್ಕೃತ, ಖರ್ಗೆ-ತರೂರ್‌ ನಡುವೆ ಯಾರಿಗೆ ಬಹುಮತ?

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಕೊನೆಯ ದಿನವಾದ ನಿನ್ನೆ ತ್ರಿಪಾಠಿ, ಖರ್ಗೆ ಮತ್ತು ತರೂರ್ ನಾಮಪತ್ರ ಸಲ್ಲಿಸಿದರು. ಇಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಅದರನ್ನು ಒಂದು ನಾಮಪತ್ರ ತಿರಸ್ಕಾರವಾಗುವುದರ ಮೂಲಕ, ಅಂತಿಮವಾಗಿ ಇಬ್ಬರು ಮಾತ್ರ ಕಣದಲ್ಲಿದ್ದಾರೆ.

ಖರ್ಗೆ-ತರೂರ್‌ ನಡುವೆ ಅಂತಿಮ ಸ್ಪರ್ಧೆ
ಖರ್ಗೆ-ತರೂರ್‌ ನಡುವೆ ಅಂತಿಮ ಸ್ಪರ್ಧೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಜಾರ್ಖಂಡ್ ಮಾಜಿ ಸಚಿವ ಕೆ ಎನ್ ತ್ರಿಪಾಠಿ ಅವರ ನಾಮಪತ್ರ ತಿರಸ್ಕಾರಗೊಂಡಿದೆ. ಈ ಬಗ್ಗೆ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಘೋಷಿಸಿದ್ದಾರೆ. ಸದ್ಯ ಖರ್ಗೆ ಮತ್ತು ತರೂರ್‌ ನಡುವೆ ಅಂತಿಮ ಸ್ಪರ್ಧೆ ಏರ್ಪಟ್ಟಿದೆ.

ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರದಲ್ಲಿ ಒಬ್ಬರ ಸಹಿ ಹೊಂದಿಕೆಯಾಗಿಲ್ಲ. ಮತ್ತೊಂದೆಡೆ ಹೆಸರು ಪ್ರಸ್ತಾಪಿಸಿದ್ದ ಮತ್ತೊಬ್ಬರ ಸಹಿ ಪುನರಾವರ್ತನೆಯಾಗಿದೆ. ಹೀಗಾಗಿ ಈ ನಾಮಪತ್ರವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಮಿಸ್ತ್ರಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಆಂತರಿಕ ಚುನಾವಣೆಯ ಕಣದಲ್ಲಿ ಅಂತಿಮವಾಗಿ ಈಗ ಇಬ್ಬರು ಮಾತ್ರ ಉಳಿದುಕೊಂಡಿದ್ದಾರೆ. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಅಂತಿಮ ಸ್ಪರ್ಧೆ ಏರ್ಪಟ್ಟಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಕೊನೆಯ ದಿನವಾದ ನಿನ್ನೆ ತ್ರಿಪಾಠಿ, ಖರ್ಗೆ ಮತ್ತು ತರೂರ್ ನಾಮಪತ್ರ ಸಲ್ಲಿಸಿದರು. ಇಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಅದರನ್ನು ಒಂದು ನಾಮಪತ್ರ ತಿರಸ್ಕಾರವಾಗುವುದರ ಮೂಲಕ, ಅಂತಿಮವಾಗಿ ಇಬ್ಬರು ಮಾತ್ರ ಕಣದಲ್ಲಿದ್ದಾರೆ.

ಈ ಬಗ್ಗೆ ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಸ್ತ್ರಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಟ್ಟು 20 ನಮೂನೆಗಳು ಬಂದಿದ್ದವು. ಅವುಗಳಲ್ಲಿ ನಾಲ್ಕು ತಿರಸ್ಕೃತವಾಗಿವೆ. ಖರ್ಗೆ 14 ನಮೂನೆಗಳನ್ನು ಸಲ್ಲಿಸಿದರೆ, ತರೂರ್ ಐದು ಮತ್ತು ತ್ರಿಪಾಠಿ ಒಂದು ಅರ್ಜಿಯನ್ನು ಸಲ್ಲಿಸಿದ್ದರು.

“ಒಟ್ಟು 20 ನಮೂನೆಗಳನ್ನು ಸಲ್ಲಿಸಲಾಗಿದೆ. ಆ ಪೈಕಿ ನಾಲ್ಕು ನಮೂನೆಗಳನ್ನು ಸಹಿ ಸಮಸ್ಯೆಯಿಂದಾಗಿ ಪರಿಶೀಲನಾ ಸಮಿತಿ ತಿರಸ್ಕರಿಸಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8ರವರೆಗೆ ಕಾಲಾವಕಾಶವಿದೆ. ಆ ಬಳಿಕ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಸಿಗಲಿದೆ. ಯಾರೂ ಹಿಂತೆಗೆದುಕೊಳ್ಳದಿದ್ದರೆ, ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ” ಎಂದು ಮಿಸ್ತ್ರಿ ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ‌ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೇ, ಅವರಿಗೆ ತಮ್ಮ ಬೆಂಬಲ ಸೂಚಿಸುವುದಾಗಿ ದಿಗ್ವಿಜಯ್‌ ಸಿಂಗ್‌ ಘೋಷಿಸಿದ್ದಾರೆ. ಅದಕ್ಕೂ ಮುನ್ನ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಪ್ರಮುಖ ಅಭ್ಯರ್ಥಿಯಾಗಿ ಕಂಡಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌. ಆದ್ರೆ ಕಾಂಗ್ರೆಸ್‌ನ ʼಒಬ್ಬ ವ್ಯಕ್ತಿ ಒಂದು ಹುದ್ದೆʼ ತತ್ವದಿಂದಾಗಿ ಅವರು ಸ್ಪರ್ಧಿಸಲು ಸಾಧ್ಯವಾಗಿಲ್ಲ.

ಅಕ್ಟೋಬರ್ 17 ರಂದು ಚುನಾವಣೆಗೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮವನ್ನು ಪಾಲಿಸಿದ್ದಾರೆ.

ಇದು ಯುದ್ಧವಲ್ಲ ಎಂದ ತರೂರ್‌

ಮುಂದಿನ ಎರಡು ವಾರಗಳಲ್ಲಿ ನಡೆಯಲಿರುವ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಹಿರಿಯ ಸಹೋದ್ಯೋಗಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧದ ಸ್ಪರ್ಧೆಯು “ಯುದ್ಧವಲ್ಲ” ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

“ಇದು ಯುದ್ಧವಲ್ಲ. ನಾವು ವಿಭಿನ್ನ ಆಲೋಚನೆಗಳನ್ನು ಹೊಂದಿರಬಹುದು. ಯಾರು ಆಯ್ಕೆಯಾಗಬೇಕೆಂಬುದನ್ನು ಪಕ್ಷದ ಸದಸ್ಯರು ನಿರ್ಧರಿಸಲಿ” ಎಂದು ತರೂರ್ ಹೇಳಿದ್ದಾರೆ. “ನಾನು ಸದಸ್ಯರಿಗೆ ಹೇಳುವುದೊಂದೇ. ನಿಮಗೆ ಪಕ್ಷದ ಕಾರ್ಯಚಟುವಟಿಕೆಯಿಂದ ತೃಪ್ತಿಯಿದ್ದರೆ, ದಯವಿಟ್ಟು ಖರ್ಗೆ ಸಾಹೇಬರಿಗೆ ಮತ ನೀಡಿ. ಆದರೆ ನಿಮಗೆ ಬದಲಾವಣೆ ಬೇಕಿದ್ದರೆ ನನ್ನನ್ನು ಆಯ್ಕೆ ಮಾಡಿ” ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ಕೆಲ ಬದಲಾವಣೆ ತರುವ ಉದ್ದೇಶದಿಂದ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತರೂರ್‌ ಹೇಳಿಕೊಂಡಿದ್ದಾರೆ.

ವಿಭಾಗ