Rajnath Singh: ಉಕ್ರೇನ್‌ ವಿರುದ್ಧ ಅಣ್ವಸ್ತ್ರ ಬಳಕೆ ಬೇಡ: ರಷ್ಯಾದ ರಕ್ಷಣಾ ಸಚಿವರಿಗೆ ರಾಜನಾಥ್‌ ಸಿಂಗ್‌ ಸಲಹೆ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajnath Singh: ಉಕ್ರೇನ್‌ ವಿರುದ್ಧ ಅಣ್ವಸ್ತ್ರ ಬಳಕೆ ಬೇಡ: ರಷ್ಯಾದ ರಕ್ಷಣಾ ಸಚಿವರಿಗೆ ರಾಜನಾಥ್‌ ಸಿಂಗ್‌ ಸಲಹೆ!

Rajnath Singh: ಉಕ್ರೇನ್‌ ವಿರುದ್ಧ ಅಣ್ವಸ್ತ್ರ ಬಳಕೆ ಬೇಡ: ರಷ್ಯಾದ ರಕ್ಷಣಾ ಸಚಿವರಿಗೆ ರಾಜನಾಥ್‌ ಸಿಂಗ್‌ ಸಲಹೆ!

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಯಾವುದೇ ಕಾರಣಕ್ಕೂ ರಷ್ಯಾ ಅಣ್ವಸ್ತ್ರಗಳನ್ನು ಬಳಸಬಾರದು ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಷ್ಯಾದ ರಕ್ಷಣಾ ಸಚಿವ ಸೆರ್ಜೈ ಶೊಯಿಗು ಅವರಿಗೆ ಸಲಹೆ ನೀಡಿದ್ದಾರೆ. ಅಣ್ವಸ್ತ್ರ ಅಥವಾ ರೇಡಿಯಾಲಾಜಿಕಲ್ ಆಯುಧಗಳ ಬಳಕೆಯು, ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ರಾಜನಾಥ್‌ ಸಿಂಗ್‌ ಮನವರಿಕೆ ಮಾಡಿಕೊಟ್ಟಿದ್ದಾರೆ.

ರಾಜನಾಥ್‌ ಸಿಂಗ್(ಸಂಗ್ರಹ ಚಿತ್ರ)
ರಾಜನಾಥ್‌ ಸಿಂಗ್(ಸಂಗ್ರಹ ಚಿತ್ರ) (AFP)

ನವದೆಹಲಿ: ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಯಾವುದೇ ಕಾರಣಕ್ಕೂ ರಷ್ಯಾ ಅಣ್ವಸ್ತ್ರಗಳನ್ನು ಬಳಸಬಾರದು ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಷ್ಯಾದ ರಕ್ಷಣಾ ಸಚಿವ ಸೆರ್ಜೈ ಶೊಯಿಗು ಅವರಿಗೆ ಸಲಹೆ ನೀಡಿದ್ದಾರೆ. ರಷ್ಯನ್‌ ರಕ್ಷಣಾ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌, ಪರಮಾಣು ಶಸ್ತ್ರಗಳ ಬಳಕೆ ಜಾಗತಿಕ ಪರಿಣಾಮಗಳನ್ನು ಬೀರಲಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಅಣ್ವಸ್ತ್ರ ಅಥವಾ ರೇಡಿಯಾಲಾಜಿಕಲ್ ಆಯುಧಗಳ ಬಳಕೆಯು, ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಪರಮಾಣು ಅಸ್ತ್ರಗಳನ್ನು ಬಳಸುವ ಆಯ್ಕೆಯನ್ನು ರಷ್ಯಾ ತಿರಸ್ಕರಿಸಬೇಕು. ಶಾಂತಿಯುತ ರಾಜತಾಂತ್ರಿಕ ಮಾತುಕತೆಯ ಮೂಲಕ, ಆದಷ್ಟು ಬೇಗ ಸಂಘರ್ಷವನ್ನು ಅಂತ್ಯಗೊಳಿಸಲು ಎರಡೂ ರಾಷ್ಟ್ರಗಳು ಮುಂದಾಗಬೇಕು ಎಂದು ರಾಜನಾಥ್‌ ಸಿಂಗ್‌ ಸಲಹೆ ನೀಡಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧದ ಕುರಿತು ಭಾರತದ ತಟಸ್ಥ ನಿಲುವನ್ನು ಮತ್ತೊಮ್ಮೆ ಪುನರುಚ್ಛಿಸಿದ ರಾಜನಾಥ್‌ ಸಿಂಗ್‌, ನಾವು ಶಾಂತಿ ಮಾತುಕತೆಗಳ ಮೂಲಕ ಸಂಘರ್ಷ ಕೊನೆಯಾಗಬೇಕು ಎಂದು ಬಯಸುತ್ತೇವೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಜೈ ಶೊಯಿಗು ಅವರಿಗೆ ತಿಳಿಸಿದ್ದಾರೆ. ಅಲ್ಲದೇ ಶಾಂತಿ ಸ್ಥಾಪನೆಗೆ ಭಾರತ ಖಮಡಿತವಾಗಿಯೂ ಸಹಕಾರ ನೀಡಲಿದೆ ಎಂದು ರಾಜಾನಾಥ್‌ ಭರವಸೆ ನೀಡಿದ್ದಾರೆ.

ಇದೇ ವೇಳೆ ರಷ್ಯಾ ವಿರುದ್ಧ ಉಕ್ರೇನ್ 'ಡರ್ಟಿ ಬಾಂಬ್' ಬಳಸಲು ಯೋಜನೆ ರೂಪಿಸುತ್ತಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಜೈ ಶೊಯಿಗು ಗಂಭೀರ ಆರೋಪ ಮಾಡಿದ್ದು, ಈ ಆರೋಪವನ್ನು ಉಕ್ರೇನ್ ಸ್ಪಷ್ಟವಾಗಿ ನಿರಾಕರಿಸಿದೆ.

ರೇಡಿಯೋ ಆಕ್ಟೀವ್ ಡರ್ಟಿ ಬಾಂಬ್ ತಯಾರಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಆದೇಶ ನೀಡಿದ್ದಾರೆ. ಈ ಕುರಿತು ನಮ್ಮ ಗುಪ್ತಚರ ಮೂಲಗಳು ನೀಡಿರುವ ಮಾಹಿತಿ ನಿಜಕ್ಕೂ ಆಘಾತಕಾರಿಯಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಜೈ ಶೊಯಿಗು ಹೇಳಿದ್ದಾರೆ.

ನಾವು ಈಗಾಗಲೇ ನ್ಯಾಟೋ ದೇಶಗಳ ರಕ್ಷಣಾ ಸಚಿವರೊಂದಿಗೆ ಈ ಕುರಿತು ಚರ್ಚೆ ಮಾಡಿದ್ದೇವೆ. ಒಂದು ವೇಳೆ ಉಕ್ರೇನ್‌ 'ಡರ್ಟಿ ಬಾಂಬ್'ಗಳ ಬಳಕೆಗೆ ಮುಂದಾದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಶ್ಚಿಮದ ರಾಷ್ಟ್ರಗಳು ಉಕ್ರೇನ್‌ಗೆ ನೀಡುತ್ತಿರುವ ಮಿಲಿಟರಿ ಸಹಾಯ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ ಎಂದು ಸೆರ್ಜೈ ಶೊಯಿಗು ಅಸಮಾಧಾನ ಹೊರಹಾಕಿದ್ದಾರೆ.

ರಷ್ಯಾದ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ಗುಪ್ತ ಸಮಾಲೋಚನೆಗಳನ್ನು ನಡೆಸಿದ್ದು, ಈ ಕುರಿತು ಉಕ್ರೇನ್‌ ವಾದವನ್ನೂ ಪರಿಗಣನೆಗೆ ತೆಗೆದುಕೊಂಡಿದೆ. ರಷ್ಯಾದ ಆರೋಪವನ್ನು ಉಕ್ರೇನ್ ಹಾಗೂ ಅದರ ಪಶ್ಚಿಮದ ಮಿತ್ರ ದೇಶಗಳು ತಿರಸ್ಕರಿಸಿವೆ.

ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ರಷ್ಯಾ ಸುಳ್ಳು ಹೇಳುತ್ತಿದೆ. ಅಸಲಿಗೆ ರಷ್ಯಾವೇ ಯುದ್ಧದಲ್ಲಿ ಡರ್ಟಿ ಬಾಂಬ್'ಗಳನ್ನು ಬಳಸುವ ಹುನ್ನಾರ ನಡೆಸಿದೆ ಎಂದು ಉಕ್ರೇನ್‌ ಮತ್ತದರ ಮಿತ್ರ ರಾಷ್ಟ್ರಗಳು ಕಿಡಿಕಾರಿವೆ.

ಉಕ್ರೇನ್‌ನ ನಾಲ್ಕು ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆ ಎನೆರ್ಗೋಟಮ್, ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿಕೊಂಡಿರುವ ರಷ್ಯಾ ಪಡೆಗಳು, ಅದರಲ್ಲಿ ಕಳೆದ ವಾರ ರಹಸ್ಯ ನಿರ್ಮಾಣ ಕಾರ್ಯ ನಡೆಸಿದೆ ಎಂದು ಆರೋಪಿಸಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

ರಷ್ಯನ್ನರು ಸ್ಥಾವರಲ್ಲಿ ಸಂಗ್ರಹಿಸಿ ಇರಿಸಿರುವ ಅಣ್ವಸ್ತ್ರ ಸಾಮಗ್ರಿಗಳನ್ನು ಮತ್ತು ರೇಡಿಯೋ ಆಕ್ಟೀವ್ ತ್ಯಾಜ್ಯಗಳನ್ನು ಬಳಸಿ, ಉಕ್ರೇನ್‌ ವಿರುದಧ ಭೀಕರ ಸಮರ ಸಾರುವ ಸಿದ್ಧತೆ ನಡೆಸಿದ್ದಾರೆ ಎಂದು ಎನೆರ್ಗೋಟಮ್ ಗಂಭೀರ ಆರೋಪ ಮಾಡಿದೆ. ಆದರೆ ರಷ್ಯಾ ಈ ಆರೋಪಗಳನ್ನು ನಿರಾಕರಿಸಿದ್ದು, ಜಪೋರಿಝಿಯಾ ಪರಮಾಣು ಸ್ಥಾವರಲ್ಲಿ ಅಂತದ್ದೇನು ನಡೆಯುತ್ತಿಲ್ಲ ಎಂದು ವಾದಿಸಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಯುದ್ಧದಲ್ಲಿ ಪರಮಾಣು ಅಸ್ತ್ರಗಳ ಬಳಕೆ ಬೇಡ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಲಹೆಯನ್ನು ರಷ್ಯಾ ಮತ್ತು ಉಕ್ರೇನ್‌ ಧನಾತ್ಮಕವಾಗಿ ಸ್ವೀಕರಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.