ಡಾ ಮನಮೋಹನ್ ಸಿಂಗ್: ಟೆಕ್ನೋಕ್ರಾಟ್ ಆಗಿದ್ದವರು ಭಾರತದ ಆಕ್ಸಿಡೆಂಟಲ್ ಪಿಎಂ ಆದರು, ಮಾಜಿ ಪ್ರಧಾನಿ ಜೀವನದ ಕಡೆಗೊಂದು ನೋಟ
Manmohan Singh Profile: ಪುಸ್ತಕದ ಹುಳುವಾಗಿದ್ದ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದು ಅವರ ತಂದೆ ಹೇಳ್ತಾ ಇದ್ದರಂತೆ. ಸರ್ಕಾರಿ ಸೇವೆಯಲ್ಲಿದ್ದುಕೊಂಡು ಟೆಕ್ನೋಕಾರ್ಟ್ ಆಗಿದ್ದವರು ಭಾರತದ ಆಕ್ಸಿಡೆಂಟಲ್ ಪಿಎಂ ಆದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜಕೀಯ ಜೀವನದ ಕಡೆಗೊಂದು ನೋಟ ಇಲ್ಲಿದೆ.
Manmohan Singh Profile: ಪುಸ್ತಕದ ಹುಳುವಾಗಿದ್ದ ತನ್ನ ಮಗ ಮುಂದೊಂದು ದಿನ ಭಾರತವನ್ನು ಪ್ರಧಾನ ಮಂತ್ರಿಯಾಗಿ ಮುನ್ನಡೆಸಬಲ್ಲ ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ತಂದೆ ನಂಬಿದ್ದರು. ನೀಲಿ ಬಣ್ಣದ ಟರ್ಬನ್ ಅವರ ಲಾಂಛನವಾಗಿತ್ತು. ಟೆಕ್ನೋಕಾರ್ಟ್ ಆಗಿದ್ದವರು ಆಕಸ್ಮಿಕವಾಗಿ ಪ್ರಧಾನಿ (Accidental PM) ಯಾದರು. ಪ್ರಧಾನ ಮಂತ್ರಿಯಾಗುವ ಕನಸನ್ನೂ ಅವರು ಕಂಡಿರಲಿಲ್ಲ ಎಂಬುದು ವಾಸ್ತವ. 2004ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಅಂದು ಆಡಳಿತ ನಡೆಸಿದ್ದ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸೋನಿಯಾ ಗಾಂಧಿ ಪ್ರಧಾನಿಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಗ ಸೋನಿಯಾ ಗಾಂಧಿ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ದಂಗುಬಡಿಸಿತ್ತು. ಪ್ರಧಾನಿಯಾಗಿ ಡಾ ಮನಮೋಹನ್ ಸಿಂಗ್ ಅವರನ್ನು ನಿಯೋಜಿಸುವ ಘೋಷಣೆ ಮಾಡಿದ್ದರು. ಅದಕ್ಕೂ ಮೊದಲು ಅವರು ಪಿವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ವಿತ್ತ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಎಲ್ಲದಕ್ಕೂ ಮಿಗಿಲಾಗಿ ನೆಹರು- ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕಾರಣ, ಪ್ರಧಾನಿ ಹುದ್ದೆ ಅವರಿಗೆ ಒಲಿಯಿತು.
ಮಿಸ್ಟರ್ ಕ್ಲೀನ್ ಇಮೇಜ್ ಹೊಂದಿದ್ದ ಡಾ ಮನಮೋಹನ್ ಸಿಂಗ್
ಕೇಂದ್ರ ವಿತ್ತ ಸಚಿವರಾಗಿ 1991- 96ರ ಅವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯನ್ನು ಜಾಗತೀಕರಣ, ಉದಾರೀಕರಣ ನೀತಿಗಳಿಗೆ ತೆರೆದುಬಿಟ್ಟ ಡಾ. ಮನಮೋಹನ್ ಸಿಂಗ್ ಅವರು 2004ರಲ್ಲಿ ಪ್ರಧಾನ ಮಂತ್ರಿಯಾಗಿ ಯುಪಿಎ ಸರ್ಕಾರವನ್ನು ಮುನ್ನಡೆಸಲು ಆರಂಭಿಸಿದರು. ಆಗ ಅವರು ತಮ್ಮ ಮೊದಲ ಅವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯನ್ನು ಏಷ್ಯಾದ ನಾಲ್ಕನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಮುನ್ನಡೆಸುವಲ್ಲಿ ಯಶಸ್ವಿಯಾದರು. ಮಿಸ್ಟರ್ ಕ್ಲೀನ್ ಎಂಬ ಇಮೇಜ್ ಹೊಂದಿದ್ದ ಡಾ. ಸಿಂಗ್ ಅವರಿಗೆ ಯುಪಿಎ ಎರಡನೆ ಅವಧಿ ಮುಳುವಾಯಿತು. ಅನೇಕ ಭ್ರಷ್ಟಾಚಾರ ಪ್ರಕರಣಗಳು ಹೊರಬಂದವು. ಅವರ ಮೌನವು ಕೂಡ ಟೀಕೆಗೆ ಒಳಗಾಯಿತು.
1990 ರ ದಶಕದ ಆರಂಭದಲ್ಲಿ ಹಣಕಾಸು ಮಂತ್ರಿಯಾಗಿ, ಅವರು ಭಾರತದ ಅಂತರ್ಮುಖಿ ಆರ್ಥಿಕತೆಯನ್ನು ಜಗತ್ತಿಗೆ ತೆರೆಯುವ ಬಿಗ್ ಬ್ಯಾಂಗ್ ಸುಧಾರಣೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ದೇಶ ಮತ್ತು ವಿದೇಶಗಳಲ್ಲಿ ಪ್ರಶಂಸಿಸಲ್ಪಟ್ಟರು. ಬಡತನವನ್ನು ನಿರ್ಮೂಲನೆ ಮಾಡುವ ಮಾರ್ಗವನ್ನು ಕಂಡುಕೊಳ್ಳಲು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ರಾಜ್ಯಸಭಾ ಸದಸ್ಯರಾಗಿದ್ದುಕೊಂಡೇ ಹಣಕಾಸು ಸಚಿವರಾಗಿದ್ದರು. ಪ್ರಧಾನ ಮಂತ್ರಿಯೂ ಆಗಿ ಸೇವೆ ಸಲ್ಲಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಆಡಳಿತ ನಡೆಸ್ತಾ ಇದ್ದದ್ದು ಸೋನಿಯಾ ಗಾಂಧಿ ಎಂಬ ಮಾತು ವ್ಯಾಪಕವಾಗಿತ್ತು. ಮನಮೋಹನ್ ಸಿಂಗ್ ಮೌನವೇ ಅದಕ್ಕೆ ಕಾರಣ.
ಬೀದಿ ದೀಪದ ಕೆಳಗೆ ಓದಿದ್ದ ಮನಮೋಹನ್ ಸಿಂಗ್ ಪ್ರಧಾನಿಯಾದರು
ಈಗಿನ ಪಾಕಿಸ್ತಾನದಲ್ಲಿರುವ ಗಾಹ್ ಎಂಬ ಹಿಂದುಳಿದ ಹಳ್ಳಿಯಲ್ಲಿ 1932 ರಲ್ಲಿ ಜನಿಸಿದ ಮನಮೋಹನ್ ಸಿಂಗ್, ಬ್ರಿಟಿಷರ ಆಳ್ವಿಕೆಯ ಕೊನೆಯಲ್ಲಿ ದೇಶ ವಿಭಜನೆಯಾದಾಗ ಅಮೃತಸರಕ್ಕೆ ಬಂದರು. ಅವರ ತಂದೆ ಅಲ್ಲಿ ಹಣ್ಣುಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸಿಂಗ್ ಅವರಿಗೆ 9 ಸಹೋದರರು ಮತ್ತು ಸಹೋದರಿಯರು. ಶಿಕ್ಷಣದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಮನಮೋಹನ್ ಸಿಂಗ್ ಅವರು ರಾತ್ರಿ ವೇಳೆ ಬೀದಿ ದೀಪದ ಕೆಳಗೆ ಕುಳಿತು ಓದಿದ್ದರು ಎಂದು ಅವರ ಸಹೋದರ ಸುರ್ಜಿತ್ ಸಿಂಗ್ ಎಎಫ್‌ಗೆ ಹೇಳಿದ್ದಾಗಿ 2004ರಲ್ಲಿ ವರದಿ ಮಾಡಿತ್ತು.
10 ಮಕ್ಕಳ ನಡುವೆ ಮನಮೋಹನ್ ಅವರು ಭಾರತದ ಪ್ರಧಾನಿಯಾಗುತ್ತಾರೆ ಎಂದು ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು. ಮನಮೋಹನ್ ಸಿಂಗ್ ಯಾವಾಗಲೂ ಪುಸ್ತಕದ ಹುಳುವಾಗಿದ್ದ. ಸದಾ ಪುಸ್ತಕ ಓದುವುದರಲ್ಲೇ ತಲ್ಲೀನನಾಗಿರುತ್ತಿದ್ದ ಎಂದು ಸುರ್ಜಿತ್ ಸಿಂಗ್ ಹೇಳಿದ್ದರು.
ಸಿಂಗ್ ಅವರು ಅರ್ಥಶಾಸ್ತ್ರದಲ್ಲಿ ಪ್ರಥಮ ಪದವಿ ಪಡೆದ ಕೇಂಬ್ರಿಡ್ಜ್ ಮತ್ತು ಆಕ್ಸ್‌ಫರ್ಡ್ ಎರಡಕ್ಕೂ ಹಾಜರಾಗಲು ವಿದ್ಯಾರ್ಥಿವೇತನವನ್ನು ಪಡೆದರು. ಅಲ್ಲಿ ಅವರು ತಮ್ಮ ಪಿಎಚ್‌ಡಿಯನ್ನು ಪೂರ್ಣಗೊಳಿಸಿದರು. ಅವರು ವಿವಿಧ ವಿಭಾಗಗಳಲ್ಲಿ ಹಿರಿಯ ನಾಗರಿಕ ಹುದ್ದೆಗಳಲ್ಲಿ ಕೆಲಸ ಮಾಡಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು. ಜಾಗತಿಕ ಏಜೆನ್ಸಿಗಳೊಂದಿಗೆ ವಿವಿಧ ಹೊಣೆಗಾರಿಕೆಗಳನ್ನೂ ನಿರ್ವಹಿಸಿದ್ದರು. ವಿಶ್ವಸಂಸ್ಥೆಯಲ್ಲೂ ಕೆಲಸ ಮಾಡಿದರು.
ಇತಿಹಾಸಕಾರರು ದಯೆ ತೋರಿಯಾರು ಎಂದಿದ್ದ ಮನಮೋಹನ್ ಸಿಂಗ್
ಡಾ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಮೊಲದ ಅವಧಿಯಲ್ಲಿ ಭಾರತದ ಆರ್ಥಿಕತೆಯನ್ನು ಶೇಕಡ 9 ಬೆಳವಣಿಗೆಯೊಂದಿಗೆ ಮುನ್ನಡೆಸಿ ಗಮನಸೆಳೆದಿದ್ದರು. ದೇಶವು ದೀರ್ಘಕಾಲದಿಂದ ಬಯಸಿದ ಅಂತರರಾಷ್ಟ್ರೀಯ ಪ್ರಭಾವವನ್ನು ಸೃಷ್ಟಿಸಿದರು. ಭಾರತವು ತನ್ನ ಬೆಳೆಯುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು ಸಹಾಯವಾದೀತು ಎಂದು ಅವರು ಯುಎಸ್ ಜೊತೆಗಿನ ಹೆಗ್ಗುರುತು ಪರಮಾಣು ಒಪ್ಪಂದಕ್ಕೂ ಮೊಹರು ಹಾಕಿದರು.
ಆದರೆ 2008 ರ ಹೊತ್ತಿಗೆ ಆಡಳಿತಾರೂಢ ಮೈತ್ರಿಕೂಟದ ಎಡ-ಒಲವುಳ್ಳ ಪಕ್ಷಗಳಲ್ಲಿ ಒಪ್ಪಂದದ ಬಗ್ಗೆ ಅಸಮಾಧಾನವು ಬೆಳೆಯಿತು. ಆದರೆ ಹೆಚ್ಚಿನ ಹಣದುಬ್ಬರ ವಿಶೇಷವಾಗಿ ಆಹಾರ ಮತ್ತು ಇಂಧನ ಬೆಲೆಗಳು ಭಾರತದ ಬಡವರನ್ನು ತೀವ್ರವಾಗಿ ಕಾಡಿದವು. ಆದರೂ, ಮತದಾರರು ಡಾ ಮನಮೋಹನ್ ಸಿಂಗ್ ಅವರ ಶಾಂತ, ಪ್ರಾಯೋಗಿಕ ವ್ಯಕ್ತಿತ್ವಕ್ಕೆ ಆಕರ್ಷಿತರಾದರು. ಈ ಆಕರ್ಷಣೆಯ ಕಾರಣವೇ 2009ರ ಚುನಾವಣೆಯಲ್ಲೂ ಕಾಂಗ್ರೆಸ್ ತನ್ನ ಮೈತ್ರಿ ಸರ್ಕಾರವನ್ನು ಎರಡನೇ ಅವಧಿಗೆ ಮುನ್ನಡೆಸಿತು. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಹಣಕಾಸು ಸುಧಾರಣೆಗಳನ್ನು ಹೆಚ್ಚಿಸುವುದಾಗಿ ಸಿಂಗ್ ಪ್ರತಿಜ್ಞೆ ಮಾಡಿದರು. ಆದರೆ, ಅವರಿಂದ ಭ್ರಷ್ಟಾಚಾರ, ಹಗರಣಗಳನ್ನು ತಡೆಯುವುದು ಸಾಧ್ಯವಾಗಲಿಲ್ಲ ಎಂಬ ಟೀಕೆಗೆ ಗುರಿಯಾದರು.
ಮುಂದೆ 2014ರ ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಮೊದಲು, ಚುನಾವಣೆ ಮುಗಿದ ಕೂಡಲೇ ತಾನು ನಿವೃತ್ತನಾಗುವುದಾಗಿ ಡಾ ಸಿಂಗ್ ಘೋಷಿಸಿದರು. ಈ ನಡುವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರೇ ಪ್ರಧಾನಿ ಎಂದು ಸೋನಿಯಾ, ರಾಹುಲ್ ಗಾಂಧಿ ಪ್ರಕಟಿಸಿದರು. ದುರದೃಷ್ಟವಶಾತ್ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತು. ಇತ್ತೀಚೆಗೆ ಡಾ. ಮನಮೋಹನ್ ಸಿಂಗ್ ಅವರನ್ನು ದ ಆಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್ ಎಂದು ಬಿಂಬಿಸುವ ಪುಸ್ತಕ ಪ್ರಕಟವಾಯಿತು. ಆಗ ಡಾ ಸಿಂಗ್ ಅವರು- ಸಮಕಾಲೀನ ರಾಜಕೀಯ ವಿರೋಧಿಗಳಿಗಿಂತ ಇತಿಹಾಸಕಾರರು ದಯೆ ತೋರಬಲ್ಲರು ಎಂದು ಹೇಳಿದ್ದರು. ಅವರು ರಾಜ್ಯಸಭೆ ಸದಸ್ಯರಾಗಿದ್ದಷ್ಟೂ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಕಠಿಣ ಟೀಕಾಕಾರಾಗಿದ್ದರು.ಇನ್ನು ಅವೆಲ್ಲವೂ ಒಂದು ನೆನಪು ಅಷ್ಟೆ.
ವಿಭಾಗ