Election Result: 2 ದಶಕಗಳ ಪಟ್ನಾಯಕ್‌ ಅಧಿಕಾರ ಅಂತ್ಯ; ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದ ಸಂಘಟಿತ ಪ್ರಯತ್ನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Result: 2 ದಶಕಗಳ ಪಟ್ನಾಯಕ್‌ ಅಧಿಕಾರ ಅಂತ್ಯ; ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದ ಸಂಘಟಿತ ಪ್ರಯತ್ನ

Election Result: 2 ದಶಕಗಳ ಪಟ್ನಾಯಕ್‌ ಅಧಿಕಾರ ಅಂತ್ಯ; ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದ ಸಂಘಟಿತ ಪ್ರಯತ್ನ

ಒಡಿಶಾ ವಿಧಾನಸಭಾ ಚುನಾವಣೆ ಫಲಿತಾಂಶ 2024: ಒಡಿಶಾದಲ್ಲಿ ಈ ಬಾರಿ ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆಯು ನಡೆಯಿತು. ಇಂದು ಪ್ರಕಟವಾದ ಫಲಿತಾಂಶದ ಪ್ರಕಾರ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಈ ಮೂಲಕ ಪ್ರಾದೇಶಿಕ ಪ್ರಾಬಲ್ಯ ಹೊಂದಿರುವ ಬಿಜೆಡಿ ಪಕ್ಷದ ಸುದೀರ್ಘ ಅಧಿಕಾರ ಅಂತ್ಯವಾಗಿದೆ.

2 ದಶಕಗಳ ಪಟ್ನಾಯಕ್‌ ಅಧಿಕಾರ ಅಂತ್ಯ; ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದ ಸಂಘಟಿತ ಪ್ರಯತ್ನ
2 ದಶಕಗಳ ಪಟ್ನಾಯಕ್‌ ಅಧಿಕಾರ ಅಂತ್ಯ; ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದ ಸಂಘಟಿತ ಪ್ರಯತ್ನ

ನವದೆಹಲಿ: ಒಡಿಶಾ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿದ್ದು ಮೇ 13 ರಿಂದ ಜೂನ್‌ 1 ರವರೆಗೆ 4 ಹಂತಗಳಲ್ಲಿ ಮತದಾನ ನಡೆಯಿತು. 147 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಪಕ್ಷ ಬಹುಮತ ಸಾಧಿಸಿದೆ. ಒಡಿಶಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ 78  ಉಮೇದುವಾರರು ಜಯಗಳಿಸಿದ್ದಾರೆ. ಬಿಜೆಡಿ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್‌ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಚುನಾವಣೆ ಕಾವೇರುವ ಮೊದಲು ಒಡಿಶಾದಲ್ಲಿ ಬಿಜೆಪಿಯೊಂದಿಗೆ ಬಿಜೆಡಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಂತರದ ದಿನಗಳಲ್ಲಿ ಮೈತ್ರಿ ಪ್ರಸ್ತಾವದಿಂದ ಎರಡೂ ಪಕ್ಷಗಳು ಹಿಂದೆ ಸರಿದಿದ್ದವು.

ಚುನಾವಣೋತ್ತರ ಸಮೀಕ್ಷೆಯಲ್ಲೂ ಬಿಜೆಡಿಗೆ ಹಿನ್ನಡೆ ಎಂಬ ಅಂಶ ಪ್ರಕಟವಾಗಿತ್ತು. ಅದು ಈಗ ಬಹುತೇಕ ನಿಜವಾದಂತೆ ಆಗಿದೆ. ಒಡಿಶಾದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಸುಮಾರು 5 ದಶಕಗಳ ಕಾಲ ಹಿಡಿದಿದ್ದ ಪಟ್ನಾಯಕ್ ಕುಟುಂಬ ಇದೀಗ ಹಿಂದೆ ಸರಿಯುವಂತಾಗಿದೆ. ಒಡಿಶಾ ಮುಖ್ಯಮಂತ್ರಿ ಬಿಜು ನವೀನ್ ಪಟ್ನಾಯಕ್ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿತವಾಗಿದ್ದ ಐಎಎಸ್ ಅಧಿಕಾರಿ ಪಾಂಡಿಯನ್ ಈ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ಪಾಂಡಿಯನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಆರಂಭದಿಂದಲೂ ಪ್ರಚಾರದಲ್ಲಿ ನಿಯಂತ್ರಣ ಸಾಧಿಸಿದ್ದ ಬಿಜೆಡಿ ನಾಯಕ ಪಾಂಡಿಯನ್ ಎಲ್ಲಿಯೂ ಸಂಯಮ ಮೀರಿ ಮಾತನಾಡಿರಲಿಲ್ಲ. ಈ ಬಾರಿ ಒಡಿಶಾದಲ್ಲಿ ಬಿಜೆಡಿ ಸೋತಿದ್ದರೂ ಪಾಂಡಿಯನ್ ಅವರ ಸಜ್ಜನ ನಡೆ ದೇಶದ ಮನೆಮಾತಾಗಿದ್ದು ಸುಳ್ಳಲ್ಲ. ತಮ್ಮ ವಿರುದ್ಧ ಬಿಜೆಪಿ ನಾಯಕರು ಮಾಡಿದ ಕಟುಟೀಕೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಸ್ತಾಪಿಸಿದಾಗಲೂ ಪಾಂಡಿಯನ್ ನಗುಮೊಗದಿಂದಲೇ ಉತ್ತರಿಸುತ್ತಿದ್ದರು. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಬಗ್ಗೆ ಬಿಜೆಪಿ ನಾಯಕರು ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಫಲಿತಾಂಶಕ್ಕೆ ಕೆಲ ದಿನಗಳು ಬಾಕಿ ಇರುವಾಗ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾಧ್ಯಮಗಳಿಗೆ ವಿಡಿಯೊ ಸಂದರ್ಶನ ನೀಡಿದ್ದರು.

ಒಡಿಶಾದಲ್ಲಿ ಕಳೆದ 2 ದಶಕಗಳಿಂದ ಮುಖ್ಯಮಂತ್ರಿಯಾಗಿರುವ ನವೀನ್‌ ಪಟ್ನಾಯಕ್‌ ತಮ್ಮದೇ ಆದ ಬಿಜೆಡಿ ಪಕ್ಷವನ್ನು ಸ್ವಾತಂತ್ರ ಪ್ರಾದೇಶಿಕ ಪಕ್ಷವಾಗಿ ಕಟ್ಟಿದ್ದಾರೆ. 2000ನೇ ಇಸವಿಯಿಂದ ಹಿಂಜಿಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಪಟ್ನಾಯಕ್‌. ಒಡಿಶಾದಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. 2019ರ ಚುನಾವಣೆಯಲ್ಲಿ ಪಟ್ನಾಯಕ್‌ ನೇತೃತ್ವದ ಬಿಜೆಡಿಯ ಪಕ್ಷವು 146 ಕ್ಷೇತ್ರಗಳಲ್ಲಿ 112 ಸೀಟುಗಳನ್ನು ಗೆದ್ದಿತ್ತು. 2014ರ ಚುನಾವಣೆಯಲ್ಲಿ ಪಟ್ನಾಯಕ್‌ ಪಕ್ಷವು 147 ರಲ್ಲಿ 117 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಜೆಡಿ ಪಕ್ಷವು 2000 ರಿಂದ 2024ರವರೆಗೆ ಒಡಿಶಾದಲ್ಲಿ ಆಳ್ವಿಕೆ ಮಾಡಿದ್ದು ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿತ್ತು. 2019ರಲ್ಲಿ ಬಿಜೆಡಿ ಹಾಗೂ ಬಿಜೆಪಿ ಮತ್ತೆ ಮೈತ್ರಿಯಾಗುವ ಬಗ್ಗೆ ಮಾತುಕತೆಗಳು ನಡೆದಿದ್ದರೂ ಮೈತ್ರಿ ಫಲಪ್ರದವಾಗಿರಲಿಲ್ಲ. ಈ ನಡುವೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೇಗಾದರೂ ಒಡಿಶಾದಲ್ಲಿ ಸ್ಥಾನ ಗಳಿಸಲೇಬೇಕು ಎಂಬ ಪಟ ತೊಟ್ಟಿತ್ತು. ಯುವಜನರನ್ನು ಸೆಳೆಯುವ ಕಾರ್ಯ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಸಾರಿತ್ತು. ಮಹಿಳಾ ಮತದಾರರ ಬೆಂಬಲವಿದ್ದ ಪಟ್ನಾಯಕ್‌ಗೆ ಈ ಬಾರಿ ಅವರೂ ಕೈಕೊಟ್ಟಂತೆ ಕಾಣುತ್ತಿದೆ. ಈ ನಡುವೆ ಕಾಂಗ್ರೆಸ್‌ ಪಕ್ಷವು ಪ್ರಬಲವಾಗಲು ಯತ್ನಿಸಿದ್ದು ಪಟ್ನಾಯಕ್‌ ಅವರ ಬಿಜೆಡಿ ಪಕ್ಷಕ್ಕೆ ಹೊಡೆತ ನೀಡಿತು.

 

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.