ನೀನೆ ಸಾಕಿದ ಗಿಣಿ: ಅಮ್ಮನನ್ನೇ ಕೊಲ್ಲಿಸಿದ ಅಪ್ರಾಪ್ತ ದತ್ತು ಪುತ್ರಿ; ಒಡಿಶಾದಲ್ಲೊಂದು ಅಮಾನುಷ ಹತ್ಯೆ
ಬೀದಿಯಲ್ಲಿ ಬಿದ್ದಿದ್ದ ಅನಾಥ ಮಗುವನ್ನು ತಂದು ಸಾಕಿದ ಅಮ್ಮನನ್ನು ಒಡಿಶಾದಲ್ಲಿ ಕೊಲೆ ಮಾಡಿರುವ ಘಟನೆಯಿದು. ಈ ಕೊಲೆ ಮಾಡಿಸಿದ್ದು ಆಗ ಅನಾಥಮಗುವಾಗಿ ಈಗ ಅಪ್ರಾಪ್ತೆಯಾಗಿರುವ ಬಾಲಕಿ. ಅದೂ ಸಣ್ಣ ವಯಸ್ಸಿನಲ್ಲಿ ಬದುಕುಕೊಟ್ಟ ಅಮ್ಮನನ್ನೇ ಆಸ್ತಿಗಾಗಿ ಕೊಲೆ ಮಾಡಿಸಲಾಗಿದೆ.

ಭುವನೇಶ್ವರ: ನೀನೆ ಸಾಕಿದ ಗಿಣಿ,ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೊ ಎನ್ನುವ ಕನ್ನಡದ ಹಾಡು ನೆನಪಿರಬಹುದು. ಆ ಹಾಡಿನ ಪ್ರತಿರೂಪ ಎನ್ನುವಂತಹ ಘಟನೆ ಒಡಿಶಾದಲ್ಲಿ ನಡೆದಿದೆ. ಆಕೆ ಮೂರು ವರ್ಷದ ಬಾಲಕಿ. ಅನಾಥೆಯಾಗಿ ರಸ್ತೆಯಲ್ಲಿ ಬಿದ್ದಿದ್ದಳು. ಮಕ್ಕಳಿಲ್ಲದ ದಂಪತಿ ಆ ಮಗುವನ್ನು ದತ್ತು ಪಡೆದು ಪ್ರೀತಿಯಿಂದಲೇ ಬೆಳೆಸಿದರು.ಆದರೆ ಆಕೆಗಿನ್ನೂ 13 ವರ್ಷ. ಈ ವಯಸ್ಸಿನಲ್ಲಿ ಚೆನ್ನಾಗಿ ಓದುತ್ತಿರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಮ್ಮನನ್ನೇ ಕೊಲ್ಲಿಸಿದ್ದಾಳೆ. ಅಲ್ಲದೇ ಮನೆಯಲ್ಲಿ ಹಣ, ಚಿನ್ನಾಭರಣವನ್ನೆಲ್ಲಾ ದೋಚಿದ್ದಾಳೆ. ಅಮ್ಮನಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಹೇಳಿ ನಾಟಕವಾಡಿ ಮೂರು ವಾರದ ನಂತರ ಈಗ ಸಿಕ್ಕಿಬಿದ್ದಿದ್ದಾಳೆ.
ಘಟನೆ ನಡೆದಿರುವುದು ಒಡಿಶಾದ ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿ. ರಾಜಲಕ್ಷ್ಮಿ ಕರ್ ಕೊಲೆಯಾದ ಮಹಿಳೆ. ಪೊಲೀಸರ ಪ್ರಕಾರ, 13 ವರ್ಷದ 8 ನೇ ತರಗತಿಯ ವಿದ್ಯಾರ್ಥಿನಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಏಪ್ರಿಲ್ 29 ರಂದು ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ದತ್ತು ತಾಯಿ 54 ವರ್ಷದ ರಾಜಲಕ್ಷ್ಮಿ ಕರ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು.ರಾಜಲಕ್ಷ್ಮಿ ತನ್ನ ಮಗಳು ಇಬ್ಬರು ಯುವಕರೊಂದಿಗಿನ ಅತಿಯಾಗಿ ಸಲುಗೆ ಬೆಳೆಸಿಕೊಂಡು ಓದಿಗೆ ತೊಂದರೆ ಮಾಡಿಕೊಳ್ಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮತ್ತು ಆಕೆಯ ಆಸ್ತಿಯ ಮೇಲೆ ಹಿಡಿತ ಸಾಧಿಸುವ ಬಯಕೆಯೇ ಈ ಕೃತ್ಯಕ್ಕೆ ಕಾರಣವಾಗಿತ್ತು.
ಹೃದಯಾಘಾತ ಎಂದು ನಂಬಿಸಿದಳು
ಆರೋಪಿ ಬಾಲಕಿಯೊಂದಿಗೆ ಸಮೀಪದ ದೇವಸ್ಥಾನದ ಅರ್ಚಕ ಗಣೇಶ್ ರಥ್ (21) ಮತ್ತು ಅವರ ಸ್ನೇಹಿತ ದಿನೇಶ್ ಸಾಹು (20) ಅವರೊಂದಿಗೆ ತಾಯಿ ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ ದಿಂಬುಗಳಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಮಹಿಳೆಯನ್ನು ಆಸ್ಪತ್ರೆಗೆ ಅವರೇ ಕರೆದೊಯ್ದಿದ್ದರು. ಅಲ್ಲಿ ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಲಾಗಿತ್ತು. ಮರುದಿನ, ಆಕೆಯ ಮೃತದೇಹವನ್ನು ಭುವನೇಶ್ವರದಲ್ಲಿ ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಅಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಾಲಕಿ ನಂಬಿಸಿದ್ದಳು. ಹಿಂದೆ ಒಂದೆರಡು ಬಾರಿ ರಾಜಲಕ್ಷ್ಮಿಗೆ ಲಘು ಹೃದಯಾಘಾತವು ಆಗಿದ್ದರಿಂದ ಮನೆಯವರು ಇದನ್ನು ನಂಬಿದ್ದರು.
ಕೊಲೆ ಬಯಲು ಮಾಡಿದ ಮೊಬೈಲ್
ಭುವನೇಶ್ವರದಲ್ಲಿರುವ ಮನೆಗೆ ಬಂದಾಗ ಬಿಟ್ಟು ಹೋಗಿದ್ದ ಬಾಲಕಿಯ ಮೊಬೈಲ್ ಫೋನ್ ಅನ್ನು ರಾಜಲಕ್ಷ್ಮಿ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರು ಕುತೂಹಕ್ಕೆ ಗಮನಿಸಿದ್ದರು.ಆಗ ಸಹೋದರಿಯದ್ದು ಹೃದಯಾಘಾತವಲ್ಲ.ಕೊಲೆಎನ್ನುವ ಅನುಮಾನ ಮೂಡಿತ್ತು.
ಕಂಡುಕೊಳ್ಳುವವರೆಗೂ ಈ ಪ್ರಕರಣವು ಎರಡು ವಾರಗಳ ಕಾಲ ಗೌಪ್ಯವಾಗಿತ್ತು.ಮೊಬೈಲ್ ಪರಿಶೀಲಿಸಿದಾಗ ಕೊಲೆ ಯೋಜನೆಗೆ ಪೂರಕವಾಗಿ ಇನ್‌ಸ್ಟಾಗ್ರಾಮ್ ಸಂಭಾಷಣೆಗಳು ಕಂಡುಬಂದವು. ಚಾಟ್‌ಗಳಲ್ಲಿ ರಾಜಲಕ್ಷ್ಮಿಯನ್ನು ಕೊಂದು ಅವಳ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದ ನಿರ್ದಿಷ್ಟ ಉಲ್ಲೇಖಗಳಿದ್ದವು.
ದೂರು ನೀಡಿದ ಸಹೋದರ
ಮಾಹಿತಿಯನ್ನೆಲ್ಲಾ ಪಡೆದುಕೊಂಡ ನಂತರ ಮಿಶ್ರಾ ಮೇ 14 ರಂದು ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರದ ತನಿಖೆಯಲ್ಲಿ ಮೂವರು ಆರೋಪಿಗಳಾದ ಹದಿಹರೆಯದ ಹುಡುಗಿ, ದೇವಸ್ಥಾನದ ಅರ್ಚಕ ಗಣೇಶ್ ರಥ್ (21) ಮತ್ತು ಅವರ ಸ್ನೇಹಿತ ದಿನೇಶ್ ಸಾಹು (20) ಅವರನ್ನು ಬಂಧಿಸಲಾಯಿತು.ಬಂಧಿತ ಇಬ್ಬರೂ ಅದೇ ಪಟ್ಟಣದವರು.
ಗಜಪತಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಜತೀಂದ್ರ ಕುಮಾರ್ ಪಾಂಡಾ ಅವರ ಪ್ರಕಾರ, ರಾಜಲಕ್ಷ್ಮಿ ಮತ್ತು ಆಕೆಯ ಪತಿ ಸುಮಾರು 13 ವರ್ಷಗಳ ಹಿಂದೆ ಭುವನೇಶ್ವರದ ರಸ್ತೆಬದಿಯಲ್ಲಿ ಸಿಕ್ಕಿದ್ದ ಶಿಶುವನ್ನು ಕಾನೂನು ಪ್ರಕಾರ ತಾವೇ ಪಡೆದುಕೊಂಡು ಸಾಕಿದ್ದರು. ಮಕ್ಕಳಿಲ್ಲದ ದಂಪತಿಗಳು ಮಗುವನ್ನು ತೆಗೆದುಕೊಂಡು ತಮ್ಮ ಸ್ವಂತ ಮಗುವನ್ನಾಗಿ ಬೆಳೆಸಿದರು.
ರಾಜಲಕ್ಷ್ಮಿಯ ಪತಿ ಕೇವಲ ಒಂದು ವರ್ಷದ ನಂತರ ನಿಧನರಾಗಿದ್ದರು. ಅಂದಿನಿಂದ ರಾಜಲಕ್ಷ್ಮಿ ಒಂಟಿಯಾಗಿ ಆಕೆಯನ್ನು ಬೆಳೆಸಿದರು.ತನ್ನ ಮಗಳು ಕೇಂದ್ರೀಯ ವಿದ್ಯಾಲಯದಲ್ಲಿ ಓದಲು ಸಾಧ್ಯವಾಗುವಂತೆ ಅವರು ಪರಲಖೆಮುಂಡಿಗೆ ತೆರಳಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿಯೇ ಇದ್ದರು. ಬಾಲಕಿ ಸಮೀಪದಲ್ಲಿ ಇರುವ ದೇವಸ್ಥಾನಕ್ಕೆ ಹೋಗುವಾಗ ಗಣೇಶ್ ರಥ್‌ನ ಪರಿಚಯವಾಗಿತ್ತು. ಆತನ ಸ್ನೇಹಿತ ಸಾಹು ಕೂಡ ಜತೆ ಇರುತ್ತಿದ್ದ. ಈ ಇಬ್ಬರೊಂದಿಗೆ ಅತಿಯಾಗಿ ಸಲುಗೆಯಲ್ಲಿದ್ದುದು ಅಮ್ಮನಿಗೆ ಇಷ್ಟವಾಗಿರಲಿಲ್ಲ. ಓದಿಗೆ ಅಡ್ಡಿ ಮಾಡಿಕೊಳ್ಳಬೇಡ.ಅವರಿಂದ ದೂರ ಇರು ಎಂದು ರಾಜಲಕ್ಷ್ಮಿ ಪದೇ ಪದೇ ಹೇಳುತ್ತಿದ್ದರು. ಕೆಲ ದಿನಗಳಿಂದ ಇದು ಅಮ್ಮ ಮಗಳ ನಡುವೆ ಜಗಳಕ್ಕೆ ದಾರಿಯಾಗಿತ್ತು. ಇದನ್ನು ರಥ್ ಮುಂದೆ ಬಾಲಕಿ ಹೇಳಿಕೊಂಡಿದ್ದಳು. ಆತ ಕೊಲೆ ಐಡಿಯಾವನ್ನು ಆಕೆ ತಲೆಗೆ ತುಂಬಿದ್ದ. ಆಕೆಯನ್ನು ಕೊಂದರೆ ಆಸ್ತಿಯೂ ನಮ್ಮದಾಗಲಿದೆ ಎನ್ನುವುದನ್ನು ಆಕೆಗೆ ಹೇಳಿ ಪ್ರಚೋದಿಸಿದ್ದ.
ಚಿನ್ನಾಭರಣ ವಶ
ಯೋಜನೆಯಂತೆಯೇ ಅಮ್ಮನಿಗೆ ಈಕೆಯೇ ನಿದ್ರೆ ಮಾತ್ರೆ ನೀಡಿದ್ದು. ಮೂವರು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಈ ಸಂಬಂಧ ಸಾಕ್ಷ್ಯಗಳನ್ನು ಸಂಗ್ರಹಿಸಿ ಮೂವರನ್ನೂ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದು ಬಯಲಾಗಿದೆ.ಮೂವರೂ ಕೊಲೆ ಮಾಡಿ ಚಿನ್ನಾಭರಣ ದೋಚಿರುವುದು ವಿಚಾರಣೆ ವೇಳೆ ತಿಳಿದಿದ್ದು,ಪೊಲೀಸರು ಆರೋಪಿಯಿಂದ ಸುಮಾರು 30 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು. ಬಾಲಕಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವಿಭಾಗ