Odisha Train Accident: ಒಡಿಶಾ ರೈಲು ದುರಂತ; ಮೂಢನಂಬಿಕೆಗೆ ಧ್ವಂಸವಾಯ್ತು ಮೃತದೇಹಗಳನ್ನು ಇರಿಸಿದ್ದ ಪ್ರೌಢಶಾಲೆ VIDEO
Odisha School Demolition: ರೈಲು ಅಪಘಾತದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಬಹನಾಗಾ ಪ್ರೌಢಶಾಲೆಯಿದೆ. ಹೀಗಾಗಿ ಈ ಹೈಸ್ಕೂಲ್ ಅನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು. ರಕ್ತದಿಂದ ತೊಯ್ದ ಮತ್ತು ಛಿದ್ರಗೊಂಡ ದೇಹಗಳನ್ನು ಗುರುತಿಗಾಗಿ ಶಾಲೆಯ ಮೂರು ಕೊಠಡಿಗಳಲ್ಲಿ ಇರಿಸಲಾಗಿತ್ತು.
ಬಾಲಸೋರ್ (ಒಡಿಶಾ): ಜೂನ್ 2 ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ (Odisha train accident) 280ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಶಾಲೆಯೊಂದರ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿದ್ದು, ಇದೀಗ ಆ ಶಾಲೆಯನ್ನೇ ನೆಲಸಮ ಮಾಡಲಾಗಿದೆ. ಏನಪ್ಪ ವಿಚಾರ ಅಂತೀರ? ಈ ಸುದ್ದಿ ಓದಿ.
ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಸಿಕ್ಕ ಮೃತದೇಹಗಳನ್ನು ಸಮೀಪದ ಶಾಲೆಯೊಂದರಲ್ಲಿ ಇರಿಸಲಾಗಿತ್ತು. ರೈಲು ಅಪಘಾತದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಬಹನಾಗಾ ಪ್ರೌಢಶಾಲೆಯಿದೆ. ಹೀಗಾಗಿ ಈ ಹೈಸ್ಕೂಲ್ ಅನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು. ರಕ್ತದಿಂದ ತೊಯ್ದ ಮತ್ತು ಛಿದ್ರಗೊಂಡ ದೇಹಗಳನ್ನು ಗುರುತಿಗಾಗಿ ಶಾಲೆಯ ಮೂರು ಕೊಠಡಿಗಳಲ್ಲಿ ಇರಿಸಲಾಗಿತ್ತು.
ಕಾರ್ಯಾಚರಣೆ ಬಳಿಕ ಶಾಲೆಯಲ್ಲಿದ್ದ ಮೃತದೇಹಗಳನ್ನೇನೋ ಸಾಗಿಸಿ ಆಗಿದೆ. ಆದರೆ, ವಿದ್ಯಾರ್ಥಿಗಳು ಮಾತ್ರ ಹೆದರಿಕೆಯಿಂದ ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಪೋಷಕರೂ ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಿಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಒಡಿಶಾ ಸರ್ಕಾರದ ಅನುಮತಿ ಮೇರೆಗೆ ಶಾಲೆಯನ್ನೇ ಇಂದು (ಜೂನ್ 9, ಶುಕ್ರವಾರ) ನೆಲಸಮ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಶಾಲಾ ಆಡಳಿತ ಸಮಿತಿ ಸದಸ್ಯ ರಾಜಾರಾಮ್ ಮಹಾಪಾತ್ರ, ಶವಗಳನ್ನು ಇರಿಸಲಾಗಿದ್ದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಇದು ಸಮಾಧಾನವಿಲ್ಲ. ಹೊಸ ಕಟ್ಟಡ ಸಿದ್ಧವಾದ ನಂತರ ಅರ್ಚಕರಿಗೆ ಹೇಳಿ ಸ್ಥಳವನ್ನು ಪವಿತ್ರಗೊಳಿಸಲಾಗುವುದು, ಆಗ ಮಕ್ಕಳು ಭಯಪಡದೆ ಶಾಲೆಗೆ ಬರುತ್ತಾರೆ ಎಂದು ಹೇಳಿದರು.
ಭಯಪಡಲು ಏನೂ ಇಲ್ಲ, ಇಲ್ಲಿ ಯಾವುದೇ ಶಕ್ತಿಗಳಿಲ್ಲ. ಇದು ಕೇವಲ ಮೂಢನಂಬಿಕೆ. ಆದರೂ ಇದನ್ನು ಧ್ವಂಸಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಲೆಯ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ. ಗುರುವಾರ (ಜೂನ್ 8) ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ ಅವರು ಶಾಲೆಗೆ ಭೇಟಿ ನೀಡಿದ್ದು, ಶಾಲಾ ಆಡಳಿತ ಸಮಿತ ಸಲ್ಲಿಸಿದ ನಿರ್ಣಯದ ಮೇರೆಗೆ ನೆಲಸಮಗೊಳಿಸಲಾಗುವುದು ಎಂದು ಹೇಳಿದ್ದರು.
ಮೃತದೇಹಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಅನೇಕರ ಶಿಕ್ಷಕರೂ ಪಾಲ್ಗೊಂಡಿದ್ದರು. ಹೀಗಾಗಿ ಅವರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಆಯೋಜಿಸಲಾಗುವುದು ಎಂದು ಒಡಿಶಾ ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಶ್ವತಿ ಎಸ್ ತಿಳಿಸಿದ್ದಾರೆ. ಒಡಿಶಾದಲ್ಲಿ ಸದ್ಯ ಬೇಸಿಗೆ ರಜೆಯಿದ್ದು, ಜೂನ್ 19 ರಂದು ಶಾಲೆಗಳು ಪುನಾರಂಭವಾಗಲಿದೆ.
ಜೂನ್ 2, ಶುಕ್ರವಾರ ಒಡಿಶಾದ ಬಾಲಾಸೋರ್ನಲ್ಲಿ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಮತ್ತು ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಭೀಕರ ರೈಲು ಅಪಘಾತದಲ್ಲಿ 288 ಜನರು ಬಲಿಯಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೃತರ ಪ್ರತಿ ಕುಟುಂಬಕ್ಕೆ ಕೇಂದ್ರ ರೈಲ್ವೆ ಸಚಿವಾಲಯ 10 ಲಕ್ಷ ರೂಪಾಯಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 5 ಲಕ್ಷ ರೂಪಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಒಟ್ಟು 17 ಲಕ್ಷ ಪರಿಹಾರ ಘೋಷಿಸಿದ್ದಾರೆ.