ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Odisha Tragedy:ಲಕ್ಷಗಟ್ಟಲೆ ಪರಿಹಾರ ಪಡೆಯಲು ಒಡಿಶಾ ರೈಲು ದುರಂತದಲ್ಲಿ ತನ್ನ ಗಂಡ ಮೃತಪಟ್ಟಿದ್ದಾನೆಂದು ಸುಳ್ಳು ಹೇಳಿದ ಮಹಿಳೆ; ಮುಂದೇನಾಯ್ತು

Odisha Tragedy:ಲಕ್ಷಗಟ್ಟಲೆ ಪರಿಹಾರ ಪಡೆಯಲು ಒಡಿಶಾ ರೈಲು ದುರಂತದಲ್ಲಿ ತನ್ನ ಗಂಡ ಮೃತಪಟ್ಟಿದ್ದಾನೆಂದು ಸುಳ್ಳು ಹೇಳಿದ ಮಹಿಳೆ; ಮುಂದೇನಾಯ್ತು

Odisha Train Accident: ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ಎಂಬವರು ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ಬಾಲಾಸೋರ್​ನಲ್ಲಿ ನಡೆದ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಮೃತದೇಹಗಳ ಪೈಕಿ ತನ್ನ ಗಂಡನ ಶವವನ್ನು ಗುರುತಿಸಿದ್ದಾಗಿ ಕೂಡ ಸುಳ್ಳು ಹೇಳಿದ್ದರು.

ಅಪಘಾತ ನಡೆದ ಸ್ಥಳದಿಂದ ಮೃತದೇಹಗಳನ್ನು ಸಾಗಿಸುತ್ತಿರುವ ಚಿತ್ರ
ಅಪಘಾತ ನಡೆದ ಸ್ಥಳದಿಂದ ಮೃತದೇಹಗಳನ್ನು ಸಾಗಿಸುತ್ತಿರುವ ಚಿತ್ರ

ಒಡಿಶಾ: ಜೂನ್​ 2 (ಶುಕ್ರವಾರ) ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನರು ಬಲಿಯಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲ್ವೆ ಇಲಾಖೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮೃತರ ಕುಟುಂಬಕ್ಕೆ ಲಕ್ಷ ಲಕ್ಷ ರೂಪಾಯಿ ಪರಿಹಾರ ಘೋಷಿಸಿವೆ. ಆದರೆ ಇದನ್ನು ಮಹಿಳೆಯೊಬ್ಬರು ದುರುಪಯೋಗಪಡಿಸಿಕೊಳ್ಳಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ಎಂಬವರು ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ಬಾಲಾಸೋರ್​ನಲ್ಲಿ ನಡೆದ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಮೃತದೇಹಗಳ ಪೈಕಿ ತನ್ನ ಗಂಡನ ಶವವನ್ನು ಗುರುತಿಸಿದ್ದಾಗಿ ಕೂಡ ಸುಳ್ಳು ಹೇಳಿದ್ದರು.

ಆದರೆ ದಾಖಲೆಗಳ ಪರಿಶೀಲನೆಯ ನಂತರ ಗೀತಾಂಜಲಿ ಹೇಳಿದ್ದು ಸುಳ್ಳು ಎಂಬುದು ಬಯಲಾಗಿದೆ. ಪೊಲೀಸರೇನೋ ಮಹಿಳೆಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದಾರೆ. ಆದರೆ, ಹೆಂಡತಿಯ ನಾಟಕವನ್ನು ತಿಳಿದ ಸ್ವತಃ ಬಿಜಯ್ ದತ್ತಾ ಅವರೇ ಪತ್ನಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಾರ್ವಜನಿಕ ಹಣವನ್ನು ದೋಚಲು ಪ್ರಯತ್ನಿಸಿದ್ದಕ್ಕಾಗಿ ಹಾಗೂ ಗಂಡ ಸತ್ತಿದ್ದಾನೆಂದು ಸುಳ್ಳು ಹೇಳಿದ್ದಕ್ಕಾಗಿ ಪತ್ನಿ ಗೀತಾಂಜಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಮಣಿಬಂಡಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನ್ನನ್ನು ಬಂಧಿಸಬಹುದು ಎಂಬ ಭಯದಿಂಧ ಗೀತಾಂಜಲಿ ತಲೆಮರೆಸಿಕೊಂಡಿದ್ದಾರೆ.

ಗೀತಾಂಜಲಿ ದತ್ತಾ-ಬಿಜಯ್ ದತ್ತಾ ದಂಪತಿ ಕಳೆದ 13 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ ಅವರು ಯಾವುದೋ ಮೃತದೇಹಗಳನ್ನು ತಮ್ಮವರು ಎಂದು ಹೇಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈಲ್ವೆ ಮತ್ತು ಒಡಿಶಾ ಪೊಲೀಸರಿಗೆ ಸೂಚಿಸಿದ್ದಾರೆ.

ಮೃತರ ಪ್ರತಿ ಕುಟುಂಬಕ್ಕೆ ಕೇಂದ್ರ ರೈಲ್ವೆ ಸಚಿವಾಲಯ 10 ಲಕ್ಷ ರೂಪಾಯಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 5 ಲಕ್ಷ ರೂಪಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಒಟ್ಟು 17 ಲಕ್ಷ ಪರಿಹಾರ ಘೋಷಣೆಯಾಗಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದ ಗೀತಾಂಜಲಿ ಪ್ರಯತ್ನ ವಿಫಲವಾಗಿದೆ.

ಜೂನ್​ 2, ಶುಕ್ರವಾರ ಒಡಿಶಾದ ಬಾಲಾಸೋರ್​ನಲ್ಲಿ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಮತ್ತು ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು.

IPL_Entry_Point