ಒಡಿಶಾದಲ್ಲಿ ಸಿಡಿಲು ಬಡಿದು ಒಂದೇ ದಿನ 15 ಮಂದಿ ಮೃತ್ಯು: 12ಕ್ಕೂ ಅಧಿಕ ಮಂದಿಗೆ ಗಾಯ
ಭೀಕರ ಸಿಡಿಲು ಸಂಬಂಧಿತ ಘಟನೆಗಳಲ್ಲಿ ಒಡಿಶಾದಾದ್ಯಂತ ಶುಕ್ರವಾರ ಒಂದೇ ದಿನ 15 ಜನರು ನಿಧನರಾಗಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭುವನೇಶ್ವರ: ಒಡಿಶಾದ ವಿವಿಧೆಡೆ ಸಂಭವಿಸಿದ ಭೀಕರ ಸಿಡಿಲು ಬಡಿತ ದುರಂತ ಪ್ರಕರಣದಲ್ಲಿ ಶುಕ್ರವಾರ ಒಂದೇ ದಿನ 15 ಮಂದಿ ಮೃತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಾರ, ಕೊರಪುಟ್ ಜಿಲ್ಲೆಯಿಂದ ಅತಿ ಹೆಚ್ಚು ಸಾವು ಸಂಭವಿಸಿದ್ದು, ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಂಜಾಂ ಜಿಲ್ಲೆಯಲ್ಲಿ ಮೂರು ಸಾವುಗಳು ವರದಿಯಾಗಿದ್ದರೆ, ನಬರಂಗ್ಪುರ, ಜಜ್ಪುರ್ ಮತ್ತು ಧೆಂಕನಲ್‌ನಲ್ಲಿ ತಲಾ ಎರಡು ಸಾವುಗಳು ದಾಖಲಾಗಿವೆ. ರಾಯಗಡ, ಕಟಕ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ.
ಸಿಡಿಲು ಬಡಿದು 15 ಜನರು ಮೃತಪಟ್ಟ ಘಟನೆಗೆ ಒಡಿಶಾ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಸಂತಾಪ ಸೂಚಿಸಿದ್ದಾರೆ. ಇದು ನೈಸರ್ಗಿಕ ವಿಪತ್ತು, ಮತ್ತು ದುರದೃಷ್ಟವಶಾತ್ ಅಂತಹ ಘಟನೆಗಳು ಪ್ರಾಣಹಾನಿಗೆ ಕಾರಣವಾಗುತ್ತವೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ಇಲಾಖೆ ನೀಡಲಿದೆ. ನಾವು ಪ್ರತಿ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಭವಿಷ್ಯದಲ್ಲಿ ಮಿಂಚಿನ ಪರಿಣಾಮವನ್ನು ತಗ್ಗಿಸಲು, ನಾವು ಅರಣ್ಯ ಇಲಾಖೆಯೊಂದಿಗೆ ಸಮನ್ವಯದಿಂದ ವ್ಯಾಪಕವಾದ ಮರ ನೆಡುವ ಅಭಿಯಾನಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಒಡಿಶಾದಲ್ಲಿ ಹವಾಮಾನ ಸಂಬಂಧಿತ ಸಾವುಗಳಿಗೆ ಮಿಂಚು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ 200 ರಿಂದ 400 ಸಾವುನೋವುಗಳಿಗೆ ಕಾರಣವಾಗುತ್ತಿದೆ. ಈ ಪೈಕಿ 85% ಘಟನೆಗಳು ಮೇ ಮತ್ತು ಸೆಪ್ಟೆಂಬರ್ ನಡುವೆ ಸಂಭವಿಸುತ್ತವೆ. ಕರಾವಳಿ ರಾಜ್ಯವು ಪ್ರತಿವರ್ಷ ಆರು ಲಕ್ಷಕ್ಕೂ ಹೆಚ್ಚು ಮಿಂಚಿನ ಹೊಡೆತಗಳನ್ನು ದಾಖಲಿಸುತ್ತದೆ ಮತ್ತು 2020 ಮತ್ತು 2025 ರ ನಡುವೆ 1,418 ಮಿಂಚು ಸಂಬಂಧಿತ ಸಾವುಗಳು ವರದಿಯಾಗಿವೆ, ಇದು ಭಾರತದಲ್ಲಿ ಅತಿ ಹೆಚ್ಚು ಸಿಡಿಲು ಪೀಡಿತ ರಾಜ್ಯವಾಗಿದೆ. 2023-24ರಲ್ಲಿ, ಸಿಡಿಲಿನಿಂದ 212 ಜನರು ಸಾವನ್ನಪ್ಪಿದ್ದರೆ, 2022-23ರಲ್ಲಿ 297 ಸಾವುಗಳು ದಾಖಲಾಗಿವೆ.
ಒಡಿಶಾದಲ್ಲಿ ಮಿಂಚಿನ ಹೊಡೆತವನ್ನು ತಗ್ಗಿಸುವ ಕಾರ್ಯತಂತ್ರದ ಭಾಗವಾಗಿ, ರಾಜ್ಯವು 2023 ರಿಂದ 19 ಲಕ್ಷಕ್ಕೂ ಹೆಚ್ಚು ತಾಳೆ ಮರಗಳನ್ನು ನೆಟ್ಟಿದೆ. ಎತ್ತರ ಮತ್ತು ಸಿಡಿಲು ತಡೆ ಹಿಡಿಯುವ ವಾಹಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಈ ಮರಗಳನ್ನು ನೈಸರ್ಗಿಕ ಮಿಂಚಿನ ರಾಡ್‌ಗಳಾಗಿ ಬಳಸಲಾಗುತ್ತಿದೆ. ಆದರೂ ಅವುಗಳ ಪರಿಣಾಮಕಾರಿತ್ವವು ಮೌಲ್ಯಮಾಪನ ಮಾಡಿ ಅರಣ್ಯ ಇಲಾಖೆ ಮತ್ತು ಸರ್ಕಾರ, ಜನರ ಸಾವು ನೋವುಗಳನ್ನು ಕಡಿಮೆ ಮಾಡಲು ಮುಂದಾಗಿದೆ.