ಕನ್ನಡ ಸುದ್ದಿ  /  Nation And-world  /  Odisha Tragedy Eye Witnessed Passenger In Coromandel Express Narrates The Situation Of Accident Place In Twitter Kub

Odisha Tragedy: ಎಲ್ಲೆಲ್ಲೂ ರಕ್ತದ ರಾಶಿ, ಗಾಯಗೊಂಡವರ ನರಳಾಟ; ಒಡಿಶಾ ರೈಲು ದುರಂತ ಕಣ್ಣಾರೆ ಕಂಡ ಪ್ರಯಾಣಿಕನ ಅನುಭವ

ಶಾಲಿಮಾರ್‌-ಚೆನ್ನೈ ನಡುವಿನ ಕೋರಮಂಡಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅನುಭವ್‌ ದಾಸ್‌ ಎನ್ನುವವರು ಟ್ವಿಟ್ಟರ್‌ನಲ್ಲಿ ತಮ್ಮ ಅನುಭವ ದಾಖಲಿಸಿದ್ದಾರೆ.

ಒಡಿಸ್ಸಾದಲ್ಲಿ ಸಂಭವಿಸಿದ ರೈಲು ದುರಂತ ಕಂಡ ಪ್ರಯಾಣಿಕ ಅನುಭವ್ ದಾಸ್‌
ಒಡಿಸ್ಸಾದಲ್ಲಿ ಸಂಭವಿಸಿದ ರೈಲು ದುರಂತ ಕಂಡ ಪ್ರಯಾಣಿಕ ಅನುಭವ್ ದಾಸ್‌

ಭುವನೇಶ್ವರ: ರೈಲುಗಳಲ್ಲಿ ಎಲ್ಲಿ ನೋಡಿದರೂ ರಕ್ತ. ಪ್ರಯಾಣಿಕರಿಂದ ತುಂಬಿದ್ದ ಎರಡು ರೈಲುಗಳಲ್ಲಂತೂ ಗಾಯಗೊಂಡವರ ನರಳಾಟ, ಸಂಬಂಧಿಕರನ್ನು ಕಳೆದುಕೊಂಡವರ ಚೀರಾಟ. ನಾನು ಬದುಕಿ ಬಂದಿದ್ದು ಆ ದೇವರ ದಯೆಯಿಂದಲೇ..

ಶಾಲಿಮಾರ್‌-ಚೆನ್ನೈ ನಡುವಿನ ಕೋರಮಂಡಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅನುಭವ್‌ ದಾಸ್‌ ಎನ್ನುವವರು ಟ್ವಿಟ್ಟರ್‌ನಲ್ಲಿ ತಮ್ಮ ಅನುಭವ ದಾಖಲಿಸಿದ್ದಾರೆ.

ಚೆನ್ನೈ ಕಡೆ ಹೊರಟಿದ್ದ ಕೋರಮಂಡಲ್‌ ರೈಲಿನ ಬೋಗಿಗಳು ಬಹನಾಗಾದಲ್ಲಿ ಹಳಿ ತಪ್ಪಿದ್ದವು. ಈ ವೇಳೆ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಕೋರಮಂಡಲ್‌ ರೈಲು ಡಿಕ್ಕಿಯಾಗಿದ್ದರಿಂದ ಅಪಘಾತ ಸಂಭವಿಸಿತು. ಅದೇ ಮಾರ್ಗದಲ್ಲಿ ಯಶವಂತಪುರದಿಂದ ಹೌರಾ ಕಡೆ ಬರುತಿದ್ದ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆಯಿತು.

ಸಂಚರಿಸುತ್ತಿದ್ದ ರೈಲಿನ ಡಿಕ್ಕಿ ಹೊಡೆದಿದ್ದರಿಂದ ಪ್ರಯಾಣಿಕರಿಂದ ತುಂಬಿದ್ದ ಕೋರಮಂಡಲ್‌ ರೈಲಿನ ಹತ್ತಕ್ಕೂ ಹೆಚ್ಚು ಬೋಗಿಗಳು ಅಪ್ಪಚ್ಚಿಯಾದವು. ಯಶವಂತಪುರ ರೈಲಿನ ಮೂರ್ನಾಲ್ಕು ಬೋಗಿಗಳೂ ನಜ್ಜು ಗುಜ್ಜಾದವು. ಕೋರಮಂಡಲ್‌ ರೈಲಿನ ಎಸಿ ಬೋಗಿಗಳಿಗೆ ಯಶವಂತಪುರ ರೈಲು ಡಿಕ್ಕಿಯಾಗಿದ್ದರಿಂದ ಹೆಚ್ಚಿನ ಪ್ರಯಾಣಿಕರು ಅಲ್ಲಿಯೇ ಮೃತಪಟ್ಟಿದ್ದಾರೆ. ನಾನು ಇನ್ನೊಂದು ಬೋಗಿಯಲ್ಲಿದ್ದುದರಿಂದ ಅಪಘಾತ ಆದ ತೀವ್ರತೆ ಕಂಡು ಹೌಹಾರಿದೆ. ಕೆಳಕ್ಕೆ ಇಳಿದು ನೋಡಿದರೆ ರೈಲು ಬೋಗಿಗಳಲೆಲ್ಲ ರಕ್ತದ ರಾಶಿ. ಗಾಯಗೊಂಡವರ ಆಕ್ರಂದನ. ರೈಲಿನಲ್ಲಿ ಕುಳಿದ್ದವರು ಅಲ್ಲಿಯೇ ಮೃತಪಟ್ಟಿದ್ದನ್ನು ಕಂಡು ದಂಗಾಗಿ ಹೋದೆ.

ನಾನು ಕಂಡಂತೆ ಇದೊಂದು ಅತಿ ದೊಡ್ಡ ರೈಲು ದುರಂತ. ಇಷ್ಟು ಭೀಕರವಾಗಿ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿ ಹಲವರು ಜೀವ ಬಿಟ್ಟು ಬಹುಪಾಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೆಲವರು ಕೈ, ಕಾಲು ಕಳೆದುಕೊಂಡು ನಿಂತಿದ್ದಾರೆ. ವಿಷಯ ತಿಳಿದ ತಕ್ಷಣವೇ ವೈದ್ಯರು, ಪೊಲೀಸರು, ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಜತೆಗಿದ್ದವರು ಮೃತಪಟ್ಟಿದ್ದರಿಂದ ಕಣ್ಣೀರಿಡುತ್ತಿರುವವರನ್ನು ನೋಡಿದರೆ ಬೇಸರವಾಗುತ್ತದೆ. ಇದನ್ನು ಜೀವನದಲ್ಲಿ ಎಂದು ಮರೆಯಲಾರೆ. ಅಷ್ಟರ ಮಟ್ಟಿಗೆ ಈ ಭೀಕರ ದುರಂತ ನನ್ನ ಮನಸಿನ ಮೇಲೆ ಪರಿಣಾಮ ಬೀರಿದೆ.

ಆ ಭಗವಂತನ ದಯೆಯಿಂದ ಬದುಕಿ ಬಂದೆ. ಈಗಾಗಲೇ ನಾನು ಮನೆಗೆ ವಾಪಾಸಾಗಿದ್ದೇನೆ, ಗಾಯಗೊಂಡವರು ಬೇಗನೇ ಗುಣಮುಖರಾಗಿ ಬರಲಿ ಎಂದಷ್ಟೇ ಪ್ರಾರ್ಥಿಸುವೆ.

ವಿಭಾಗ